ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ನಿಷ್ಠರು– ವಲಸಿಗರ ಭಿನ್ನಾಭಿಪ್ರಾಯ ಚರ್ಚೆ?

ರಾಹುಲ್‌ ನೇತೃತ್ವದಲ್ಲಿ ದೆಹಲಿಯಲ್ಲಿ ಕಾಂಗ್ರೆಸ್‌ ರಾಜ್ಯ ನಾಯಕರ ಸಭೆ ಇಂದು
Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ (13ರಂದು) ದೆಹಲಿಯಲ್ಲಿ ಆಯೋಜಿಸಿರುವ ಪಕ್ಷದ ರಾಜ್ಯ ನಾಯಕರ ಸಭೆಯಲ್ಲಿ ಪಕ್ಷ ನಿಷ್ಠರು ಮತ್ತು ವಲಸಿಗರ ನಡುವಿನ ಭಿನ್ನಾಭಿಪ್ರಾಯ ಪ್ರಮುಖ ವಿಷಯವಾಗಿ ಚರ್ಚೆಗೆ ಬರುವ ಸಾಧ್ಯತೆ ಇದೆ.

ಮುಂದಿನ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ರಾಹುಲ್‌ ಈ ಸಭೆ ನಡೆಸುತ್ತಿದ್ದು, ಆಂತರಿಕ ಅಸಮಾಧಾನ ಹೋಗಲಾಡಿಸಿ, ಒಗ್ಗಟ್ಟು ಮೂಡಿಸುವ ಯತ್ನ ನಡೆಸುವ ಸಂಭವ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾ ಪರಿವಾರದಿಂದ ಬಂದವರು. ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಲು ಹೈಕಮಾಂಡ್ ನಿರ್ಧರಿಸಿರುವುದರಿಂದಾಗಿ ದಶಕಗಳಿಂದ ಪಕ್ಷಕ್ಕಾಗಿ ದುಡಿದವರು ಆತಂಕಕ್ಕೆ ಒಳಗಾಗಿದ್ದಾರೆ. ಪಕ್ಷಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಸಿದ್ದರಾಮಯ್ಯ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳುತ್ತಿಲ್ಲ ಎಂಬ ಆಕ್ರೋಶ ಮೂಲ ಕಾಂಗ್ರೆಸ್ಸಿಗರದ್ದು. ಈ ಅತೃಪ್ತಿ ನಿವಾರಿಸಲು ನಡೆಸಿದ ಯತ್ನಗಳು ಸಫಲವಾಗಿಲ್ಲ ಎಂದೂ ಮೂಲಗಳು ಹೇಳಿವೆ.

ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದ ಬಳಿಕ ಸಿದ್ದರಾಮಯ್ಯ, ಪಕ್ಷದಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ. ಪರಿಣಾಮಕಾರಿ ಕಾರ್ಯತಂತ್ರಗಳ ಮೂಲಕ ಬಿಜೆಪಿ ಸವಾಲು ಎದುರಿಸುವಲ್ಲಿ ಸಫಲರಾಗಿರುವ ಅವರು, ರಾಹುಲ್‌ ಗಾಂಧಿಗೂ ಹತ್ತಿರವಾಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಯಾರ ಮಾತೂ ಕೇಳುತ್ತಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಆಕ್ಷೇಪಿಸಿದರು.

ಪಕ್ಷ ನಿಷ್ಠರು ಮತ್ತು ವಲಸಿಗರ ಮಧ್ಯೆ ಅಭಿಪ್ರಾಯ ವ್ಯತ್ಯಾಸವನ್ನು ಹೈಕಮಾಂಡ್‌ ನಿರ್ಲಕ್ಷಿಸುತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದು, ಈ ಭಿನ್ನಮತ ಮುಂಚೂಣಿಗೆ ಬರುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಕೈಗೊಂಡಿರುವ ರಾಜ್ಯ ಪ್ರವಾಸದಿಂದ ಇದೇ ಕಾರಣಕ್ಕೆ ಹಲವು  ನಾಯಕರು ದೂರ ಸರಿದಿದ್ದಾರೆ ಎಂದೂ ಅವರು ತಿಳಿಸಿದರು.

‘ಪಕ್ಷದಲ್ಲಿನ ಒಳಬೇಗುದಿಯನ್ನು  ಹೈಕಮಾಂಡ್‌ ಗಮನಕ್ಕೆ ತರಲು ಯಾರೊಬ್ಬರೂ ಮುಂದಾಗುತ್ತಿಲ್ಲ. ಹೈಕಮಾಂಡ್‌ ಈ ವಿಷಯವನ್ನು ನಿರ್ಲಕ್ಷಿಸುತ್ತಲೇ ಹೋದರೆ, ಮುಂದಿನ ಚುನಾವಣೆಯಲ್ಲಿ ಪರಿಣಾಮ ಉಂಟಾಗಲಿದೆ. ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಈ ಭಿನ್ನಮತ ಸ್ಫೋಟಗೊಳ್ಳುವುದು ಖಚಿತ’ ಎಂದರು.

‘ಸಿದ್ದರಾಮಯ್ಯ ಈಗಾಗಲೇ ಕೆಲವರಿಗೆ ಟಿಕೆಟ್‌ ನೀಡುವ ಭರವಸೆ ನೀಡಿದ್ದಾರೆ. ಇದು ಅಸಮಾಧಾನಕ್ಕೂ ಕಾರಣವಾಗಿದೆ. ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗಲು ಸಿದ್ದರಾಮಯ್ಯ ಅಥವಾ ಪರಮೇಶ್ವರ ಪ್ರಯತ್ನ ನಡೆಸಿಲ್ಲ’ ಎಂದೂ ಅವರು ದೂರಿದರು.

13ರ ಸಭೆಯಲ್ಲಿ ಬೂತ್‌ ಸಮಿತಿಗಳ ಚಟುವಟಿಕೆ, ಮಹದಾಯಿ ವಿವಾದ, ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ, ಕರಾವಳಿಯಲ್ಲಿ ನಡೆದ ಕೋಮು ಗಲಭೆ ಮತ್ತಿತರ ವಿಷಯಗಳೂ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT