ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಪ್ರಮುಖ ಹುದ್ದೆಗಳಲ್ಲಿ ಪ್ರಭಾರ ಅಧಿಕಾರಿಗಳು!

‘ಹೆಚ್ಚುವರಿ ಹೊಣೆ’ಯಿಂದ ಬಡವಾಗಿದೆ ಬಿಡಿಎ
Last Updated 12 ಜನವರಿ 2018, 19:58 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮೂರು ಪ್ರಮುಖ ಹುದ್ದೆಗಳಲ್ಲಿ ಪ್ರಭಾರ ಅಧಿಕಾರಿಗಳದ್ದೇ ಕಾರುಬಾರು.

2031ರ ಪರಿಷ್ಕೃತ ನಗರ ಮಹಾಯೋಜನೆ ಸಿದ್ಧಪಡಿಸುವುದು, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆ, ವಸತಿ ಸಮುಚ್ಚಯ ನಿರ್ಮಾಣದಂತಹ ಮಹತ್ತರ ಯೋಜನೆಗಳು ಅನುಷ್ಠಾನಗೊಳ್ಳುತ್ತಿರುವಾಗಲೇ ಆಯಕಟ್ಟಿನ ಹುದ್ದೆಗಳಲ್ಲಿ ಪೂರ್ಣಕಾಲಿಕ ಅಧಿಕಾರಿಗಳು ಇಲ್ಲ.

ಆಯುಕ್ತ ರಾಕೇಶ್‌ ಸಿಂಗ್‌ ಅವರು ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯ (ಕೆಎಂಎಫ್‌) ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದಾರೆ. ಶ್ರವಣಬೆಳಗೊಳದ ಮಹಾಮಸ್ತಕಾಭೀಷೇಕ ಮಹೋತ್ಸವ ಸಮಿತಿಯ ವಿಶೇಷಾಧಿಕಾರಿಯಾಗಿಯೂ ಅವರನ್ನು ಇತ್ತೀಚೆಗೆ ನಿಯೋಜಿಸಲಾಗಿದೆ.

ಎಂಜಿನಿಯರಿಂಗ್‌ ಸದಸ್ಯರಾಗಿದ್ದ ಪಿ.ಎನ್‌.ನಾಯಕ್‌ 2017ರ ಡಿಸೆಂಬರ್‌ನಲ್ಲಿ ನಿವೃತ್ತರಾಗಿದ್ದಾರೆ. ಎಂಜಿನಿಯರಿಂಗ್‌ ಅಧಿಕಾರಿ ರವೀಂದ್ರಬಾಬು ಅವರಿಗೇ ಈ ಹುದ್ದೆಯ ಹೆಚ್ಚುವರಿ ಹೊಣೆಯನ್ನು ವಹಿಸಲಾಗಿದೆ.

ನಗರ ಯೋಜನಾ ಸದಸ್ಯರಾಗಿರುವ ಎನ್.ಕೆ.ತಿಪ್ಪೇಸ್ವಾಮಿ ಅವರು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಬಿಎಂಆರ್‌ಡಿಎ) ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕ ಹೊಣೆಯನ್ನೂ ನಿಭಾಯಿಸಬೇಕಾಗಿದೆ.

‘ರಾಕೇಶ್‌ ಸಿಂಗ್‌ ಅವರು ದಕ್ಷ ಅಧಿಕಾರಿ ಇರಬಹುದು. ಆದರೆ, ಪ್ರಾಧಿಕಾರದಲ್ಲಿ ಸಮಸ್ಯೆಗಳ ಸಾಗರವೇ ಇದೆ. ಕೆಲಸದ ಒತ್ತಡ ಹೆಚ್ಚು ಇರುವಾಗ ಅಧಿಕಾರಿಗಳು ಕೆಲಸವನ್ನು ಸಮರ್ಥವಾಗಿ ನಿಭಾಯಿಸುವುದಾದರೂ ಹೇಗೆ’ ಎಂದು ಪ್ರಶ್ನಿಸುತ್ತಾರೆ ಅರ್ಕಾವತಿ ಬಡಾವಣೆ ನಿವೇಶನದಾರರ ಸಂಘದ ಅಧ್ಯಕ್ಷ ಜಿ.ಶಿವಪ್ರಕಾಶ್‌.

ಅರ್ಕಾವತಿ ಬಡಾವಣೆಯ ಸಮಸ್ಯೆಗಳನ್ನು ಪೂರ್ಣಾವಧಿ ಆಯುಕ್ತರು ಇದ್ದಾಗಲೂ ಬಗೆಹರಿಸಲು ಸಾಧ್ಯವಾಗಿಲ್ಲ. ಈಗಲೂ ಸಮಸ್ಯೆಗಳು ಹಾಗೆಯೇ ಮುಂದುವರಿಯುತ್ತಿದೆ. ಬಿಡಿಎಗೆ ಆದಷ್ಟು ಬೇಗ ಪೂರ್ಣಕಾಲಿಕ ಆಯುಕ್ತರನ್ನು ನೇಮಿಸಬೇಕು. ಅಥವಾ ಈಗಿನ ಆಯುಕ್ತರನ್ನು ಅನ್ಯ ಇಲಾಖೆಗಳ ಹೊಣೆಯಿಂದ ಮುಕ್ತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. 

‘ಬಿಡಿಎ ಕಚೇರಿಗೆ ಹೋದಾಗ ಆಯುಕ್ತರು ಸಿಗುವುದಿಲ್ಲ. ಅವರನ್ನು ಕಾಣಲೇಬೇಕಿದ್ದರೆ ವಿಕಾಸಸೌಧಕ್ಕೆ ಹೋಗುವಂತೆ ಕಚೇರಿ ಸಿಬ್ಬಂದಿ ತಿಳಿಸುತ್ತಾರೆ. ಇದರಿಂದ ನಮಗೆ ಸಮಸ್ಯೆಯಾಗುತ್ತಿದೆ’ ಎಂದು ಅರ್ಕಾವತಿ ಬಡಾವಣೆಯ ಹೆಸರು ಹೇಳಲು ಇಚ್ಛಿಸದ ಸಂತ್ರಸ್ತರೊಬ್ಬರು ದೂರಿದರು.

ಬಿಡಿಎ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ದಶಕಗಳ ಬಳಿಕ ಬಿಡಿಎ ಕೆಂಪೇಗೌಡ ಬಡಾವಣೆಯನ್ನು ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡುತ್ತಿದೆ. ಅರ್ಕಾವತಿ ಬಡಾವಣೆ ನಿವೇಶನ ಹಂಚಿಕೆ ವೇಳೆ ಸೃಷ್ಟಿಯಾಗಿರುವ ಅವಾಂತರಗಳು ಬಹಳಷ್ಟಿವೆ. ಇಂತಹ ಸಂದರ್ಭದಲ್ಲಿ ಬಿಡಿಎಗೆ ಪೂರ್ಣಾವಧಿ ಆಯುಕ್ತರ ಅವಶ್ಯಕತೆ ಇದೆ ಎನ್ನುತ್ತಾರೆ ಮಾಹಿತಿ ಹಕ್ಕು ಕಾರ್ಯಕರ್ತ ಸಾಯಿದತ್ತ.

ಆಯುಕ್ತರು ಆಪ್ತ ಅಧಿಕಾರಿಗಳ ಸಲಹೆಗಳನ್ನು ಆಧರಿಸಿ ಕ್ರಮಕೈಗೊಳ್ಳಬೇಕಾದ ಪರಿಸ್ಥಿತಿ ಇದೆ. ಎಲ್ಲ ಕಡತಗಳನ್ನು ಸಮಗ್ರವಾಗಿ ಅಧ್ಯಯನ ನಡೆಸುವಷ್ಟು ಪುರುಸೊತ್ತು ಅವರಿಗೆ ಇರುವುದಿಲ್ಲ. ಕೆಲವು ಅಧಿಕಾರಿಗಳು ಇಂತಹ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಪ್ರಾಧಿಕಾರದಲ್ಲಿ ಈ ಹಿಂದೆ ನಡೆದಿರುವ ಹಗರಣಗಳಿಂದಲಾದರೂ ಸರ್ಕಾರ ಪಾಠ ಕಲಿಯಬೇಕು ಎಂದು ಅವರು ಹೇಳಿದರು.

ಎಂಜಿನಿಯರಿಂಗ್‌ ಸದಸ್ಯ ಹುದ್ದೆಯೂ ಪ್ರಮುಖವಾದುದು. ಮೂಲಸೌಕರ್ಯ ಕಾಮಗಾರಿಗಳ ಅನುಷ್ಠಾನದ ನಿರ್ಧಾರ ತಳೆಯುವ ಹುದ್ದೆ ಇದು. ಎಂಜಿನಿಯರಿಂಗ್‌ ಅಧಿಕಾರಿಯೊಬ್ಬರಿಗೆ ಈ ಹೆಚ್ಚುವರಿ ಹೊಣೆಯನ್ನು ವಹಿಸುವುದು ಸಮಂಜಸ ಅಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕೆಂಪೇಗೌಡ ನಿವೇಶನದಲ್ಲಿ ಮೂಲಸೌಕರ್ಯವನ್ನು ಇನ್ನೂ ಅಭಿವೃದ್ಧಿಪಡಿಸಿಲ್ಲ. 10 ವರ್ಷ ಹಿಂದೆ ನಿವೇಶನ ಹಂಚಿಕೆ ಮಾಡಿರುವ ಅರ್ಕಾವತಿ ಬಡಾವಣೆಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಪ್ರಕ್ರಿಯೆ ಇತ್ತೀಚೆಗಷ್ಟೇ ಆರಂಭವಾಗಿದೆ. ನಗರದ ಕೆಲವು ಕಡೆ ಮೇಲ್ಸೇತುವೆ ಹಾಗೂ ಗ್ರೇಡ್‌ ಸಪರೇಟರ್‌ಗಳನ್ನು ಬಿಡಿಎ ನಿರ್ಮಿಸುತ್ತಿದೆ. ಈ ಕಾಮಗಾರಿಗಳೂ ಆಮೆಗತಿಯಲ್ಲಿ ಸಾಗುತ್ತಿವೆ. ಇವುಗಳು ಚುರುಕುಗೊಳ್ಳಬೇಕಾದರೆ ಪೂರ್ಣಕಾಲಿಕ ಎಂಜಿನಿಯರಿಂಗ್‌ ಸದಸ್ಯರ ಅಗತ್ಯವಿದೆ ಎಂದು ಅವರು ಹೇಳಿದರು.

’ನಗರ ಮಹಾಯೋಜನೆ ತಯಾರಿಗೆ ಹಿನ್ನಡೆ’
2031ರ ಪರಿಷ್ಕೃತ ನಗರ ಮಹಾಯೋಜನೆ ಸಿದ್ಧಪಡಿಸಲು ಬಿಡಿಎ ಅಧಿಕಾರಿಗಳ ವಿಶೇಷ ತಂಡವನ್ನೇ ರಚಿಸಬೇಕಾದ ಅಗತ್ಯ ಇದೆ. ಆದರೆ, ಬಿಡಿಎಗೆ ಪೂರ್ಣಕಾಲಿಕ ನಗರ ಯೋಜನಾ ಸದಸ್ಯರೇ ಇಲ್ಲ. ಆಯುಕ್ತರಿಗೂ ಬೇರೆ ಬೇರೆ ಹೊಣೆಗಳನ್ನು ವಹಿಸಿದ್ದಾರೆ. ಇದರಿಂದ ಈ ಯೋಜನೆಗೆ ಹಿನ್ನಡೆ ಉಂಟಾಗುತ್ತದೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾದ ಆರ್‌ಎಂಪಿ ಬಗ್ಗೆ ಸರ್ಕಾರ ಎಷ್ಟರಮಟ್ಟಿನ ಮಹತ್ವ ನೀಡುತ್ತಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಸಿಟಿಜನ್ಸ್‌ ಆ್ಯಕ್ಷನ್‌ ಫೋರಂನ ಸಂಸ್ಥಾಪಕ ಅಧ್ಯಕ್ಷ ಎನ್‌.ಎಸ್‌.ಮುಕುಂದ್‌ ಬೇಸರ ವ್ಯಕ್ತಪಡಿಸಿದರು.

‘ಆರ್‌ಎಂಪಿ ಬಗ್ಗೆ ಜನರಲ್ಲಿ ಅನೇಕ ಸಂದೇಹಗಳಿವೆ. ಬನಶಂಕರಿಯಲ್ಲಿರುವ ಬಿಡಿಎ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಬಿಡಿಎ ಹೇಳಿದೆ. ಈ ಯೋಜನೆ ರೂಪಿಸುವಲ್ಲಿ ಗುರುತರ ಹೊಣೆ ಹೊತ್ತ ಅಧಿಕಾರಿಗಳು ಯಾರೂ ಅಲ್ಲಿಲ್ಲ. ಯೋಜನೆ ಕುರಿತ ಸಂದೇಹಗಳ ಬಗ್ಗೆ ಅಲ್ಲಿನ ಸಿಬ್ಬಂದಿ ಬಳಿ ಕೇಳಿದರೆ, ಹಾರಿಕೆಯ ಉತ್ತರ ಮಾತ್ರ ಸಿಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ನೀವು ಮೊದಲು ಆಕ್ಷೇಪಣೆ ಸಲ್ಲಿಸಿ. ಆಮೇಲೆ ನೋಡುವ ಎನ್ನುತ್ತಾರೆ’ ಎಂದು ಅವರು ದೂರಿದರು.

ಭೂಬಳಕೆ: ನ್ಯೂನತೆ ಒಪ್ಪಿಕೊಂಡ ಬಿಡಿಎ

ಬೆಂಗಳೂರು: ಪರಿಷ್ಕೃತ ನಗರ ಮಹಾಯೋಜನೆ 2031ರ ಕರಡಿನಲ್ಲಿ ಕೆಲವು ನ್ಯೂನತೆಗಳಿರುವುದನ್ನು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಒಪ್ಪಿಕೊಂಡಿದೆ.

ಕರಡಿನಲ್ಲಿರುವ ಭೂಬಳಕೆ ವಿವರಗಳಲ್ಲಿ ಕಣ್ತಪ್ಪಿನಿಂದ ಲೋಪಗಳು ನುಸುಳಿವೆ. ಸರ್ಕಾರದಿಂದ ಅಥವಾ ಇತರ ಪ್ರಾಧಿಕಾರಗಳಿಂದ ಈಗಾಗಲೇ ಅನುಮೋದನೆಗೊಂಡಿರುವ ಭೂಬಳಕೆ ಬದಲಾವಣೆ ಪ್ರಕರಣಗಳು, ಕಟ್ಟಡ ನಕ್ಷೆ ಮಂಜೂರಾತಿ, ವಸತಿ ಮತ್ತು ವಸತಿಯೇತರ ಅಭಿವೃದ್ಧಿ ಯೋಜನೆಗಳ ಪೈಕಿ ಕೆಲವು ಕರಡಿನಲ್ಲಿ ಉಲ್ಲೇಖವಾಗಿಲ್ಲ. ಇವುಗಳ ಸ್ಥಳದಲ್ಲಿ ಇತರೆ ಭೂಬಳಕೆ ನಿಗದಿಪಡಿಸಲಾಗಿದೆ ಎಂದು ಬಿಡಿಎ ತಿಳಿಸಿದೆ.

ಆಕ್ಷೇಪಣೆ ಸಲ್ಲಿಸಲು 23ರವರೆಗೆ ಅವಕಾಶ

ನ್ಯೂನತೆಗಳ ಬಗ್ಗೆ ಇದೇ 23ರ ಒಳಗೆ ಪ್ರಾಧಿಕಾರದ ಗಮನಕ್ಕೆ ತರಬಹುದು ಎಂದು ಬಿಡಿಎ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಲಹೆ ಹಾಗೂ ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಅಥವಾ ಬನಶಂಕರಿಯ ಕಚೇರಿಯಲ್ಲಿ ಮಾತ್ರ ಸಲ್ಲಿಸಬಹುದು ಎಂದು ಪ್ರಾಧಿಕಾರ ಈ ಹಿಂದೆ ತಿಳಿಸಿತ್ತು. ಇದಕ್ಕೂ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು.  ಬಳಿಕ ಬಿಡಿಎ ಎಚ್ಚೆತ್ತುಕೊಂಡಿರುವ ಬಿಡಿಎ, ಚೌಡಯ್ಯ ರಸ್ತೆಯಲ್ಲಿರುವ ಕೇಂದ್ರ ಕಚೇರಿಯಲ್ಲೂ ಆಕ್ಷೇಪಣೆಗಳನ್ನು ಸ್ವೀಕರಿಸಲು ನಿರ್ಧರಿಸಿದೆ.

ಕರಡನ್ನು ಬಿಡಿಎ ವೆಬ್‌ಸೈಟ್‌ನಿಂದಲೂ (www.bdabangalore.org) ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT