ಕದ್ದ ಚಿನ್ನ ವಿಲೇವಾರಿಗೆ ಕಾಲ್ಗೆಜ್ಜೆ ಉಡುಗೊರೆ!

7
ಪೊಲೀಸ್ ಬಲೆಗೆ ಬಿದ್ದ ಚಾಲಾಕಿ ಚೋರ

ಕದ್ದ ಚಿನ್ನ ವಿಲೇವಾರಿಗೆ ಕಾಲ್ಗೆಜ್ಜೆ ಉಡುಗೊರೆ!

Published:
Updated:
ಕದ್ದ ಚಿನ್ನ ವಿಲೇವಾರಿಗೆ ಕಾಲ್ಗೆಜ್ಜೆ ಉಡುಗೊರೆ!

ಬೆಂಗಳೂರು: ಮಾರಾಟ ಪ್ರತಿನಿಧಿಯ ಸೋಗಿನಲ್ಲಿ ಮನೆಗಳಲ್ಲಿ ಚಿನ್ನಾಭರಣ ದೋಚುವ ಈ ಚಾಲಾಕಿ, ಅವುಗಳನ್ನು ವೇಶ್ಯೆಯರ ಮೂಲಕ ವಿಲೇವಾರಿ ಮಾಡಿಸುತ್ತಾನೆ. ಆಭರಣ ಮಾರಿ ಬರುವ ಪ್ರತಿ ಮಹಿಳೆಗೂ ಒಂದು ಜೊತೆ ಕಾಲ್ಗೆಜ್ಜೆ ಹಾಗೂ ಕಿವಿ ಓಲೆಯನ್ನು ಉಡುಗೊರೆಯಾಗಿ ನೀಡುತ್ತಾನೆ!

ಬೆಂಗಳೂರು, ತುಮಕೂರು, ಮಂಡ್ಯ ಹಾಗೂ ಮೈಸೂರಿನ 80 ಮನೆಗಳಲ್ಲಿ ಕಳ್ಳತನ ಮಾಡಿದ್ದ ಸೈಯದ್ ಅಹಮದ್ ಅಲಿಯಾಸ್ ಅರ್ಮಾನ್‌ನ (32) ಕೃತ್ಯದ ಶೈಲಿ ಇದು. ಈ ಚೋರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಬಸವನಗುಡಿ ಪೊಲೀಸರು, ₹ 24 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಹೀಗೆ ಕಾರ್ಯಾಚರಣೆ: ತುಮಕೂರಿನ ಹೊಸ ಮಂಡಿಪೇಟೆ ನಿವಾಸಿ ಅಹಮದ್, 2011ರಲ್ಲಿ ಕಳ್ಳತನ ಪ್ರಾರಂಭಿಸಿದ. ಸೂಟು–ಬೂಟು ಧರಿಸಿ ಮಾರಾಟ ಪ್ರತಿನಿಧಿಯಂತೆ, ಬೈಕ್‌ನಲ್ಲಿ ಪ್ರತಿಷ್ಠಿತ ರಸ್ತೆಗಳನ್ನು ಸುತ್ತುವ ಈತ, ಕಳವು ಮಾಡಬೇಕಾದ ಮನೆ ಗುರುತಿಸಿಕೊಳ್ಳುತ್ತಾನೆ.

ಸ್ವಲ್ಪ ಸಮಯ ಅಲ್ಲೇ ಕಾದು ನಂತರ ಆ ಮನೆಯ ಕಾಲಿಂಗ್ ಬೆಲ್ ಒತ್ತುತ್ತಾನೆ. ಮನೆಯವರು ಬಾಗಿಲು ತೆರೆದರೆ, ‘ನಾನು ಸೇಲ್ಸ್‌ಮನ್. ವಿದೇಶಿ ಕಂಪನಿಯ ಪೌಡರ್, ಸುಗಂಧ ದ್ರವ್ಯಗಳನ್ನು ಮಾರಲು ಬಂದಿದ್ದೇನೆ’ ಎನ್ನುತ್ತಾನೆ. ಅವರು ಬೇಡ ಎಂದರೆ ಅಲ್ಲಿಂದ ಹೊರಡುತ್ತಾನೆ.

ಐದಾರು ಬಾರಿ ಬೆಲ್ ಮಾಡಿದರೂ ಬಾಗಿಲು ತೆರೆಯದಿದ್ದರೆ, ಬೈಕ್‌ನಲ್ಲಿ ತಾನು ಸಿಕ್ಕಿಸಿರುತ್ತಿದ್ದ ರಾಡ್‌ ತೆಗೆದುಕೊಂಡು ಹೋಗಿ ಬೀಗ ಒಡೆಯುತ್ತಾನೆ. ಬಳಿಕ ನಗ–ನಾಣ್ಯ ದೋಚಿ, ಸಿ.ಸಿ ಟಿ.ವಿ ಕ್ಯಾಮೆರಾಗಳು ಕಂಡರೆ ಅವುಗಳನ್ನೂ ಜಖಂಗೊಳಿಸಿ ಹೋಗುತ್ತಾನೆ.

ವೇಶ್ಯೆಯರ ಸಂಪರ್ಕ: ಹೀಗೆ, ಐದಾರು ಮನೆಗಳಲ್ಲಿ ಒಡವೆ ದೋಚಿದ ಬಳಿಕ ಅವುಗಳನ್ನು ವಿಲೇವಾರಿ ಮಾಡಲು ವೇಶ್ಯೆಯರನ್ನು ಸಂಪರ್ಕಿಸುತ್ತಾನೆ. ‘ನನ್ನ ಜತೆ ಬಂದರೆ ₹ 5 ಸಾವಿರ ಕೊಡುತ್ತೇನೆ. ಅಷ್ಟೆ ಅಲ್ಲದೆ, ಬೆಳ್ಳಿ ಕಾಲ್ಗೆಜ್ಜೆ ಹಾಗೂ ಚಿನ್ನದ ಓಲೆಗಳನ್ನು ಉಡುಗೊರೆ ನೀಡುತ್ತೇನೆ. ನನ್ನ ಹೆಂಡತಿಯಂತೆ ನಟನೆ ಮಾಡಬೇಕು ಹಾಗೂ ಈ ವಿಚಾರವನ್ನು ಗೋಪ್ಯವಾಗಿ ಇಡಬೇಕು’ ಎಂಬ ಷರತ್ತು ವಿಧಿಸುತ್ತಾನೆ. ಅದಕ್ಕೆ ಒಪ್ಪುವ ಮಹಿಳೆಗೆ ಬುರ್ಖಾ ಹಾಕಿಸಿ, ಬಾಡಿಗೆ ಕಾರಿನಲ್ಲಿ ಪ್ರವಾಸದ ನೆಪದಲ್ಲಿ ವಿವಿಧ ಊರುಗಳಿಗೆ ಕರೆದುಕೊಂಡು ಹೋಗುತ್ತಾನೆ.

ಮಾರ್ಗಮಧ್ಯೆ ಆಭರಣ ಮಳಿಗೆಗೆ ಆಕೆಯನ್ನು ಕರೆದುಕೊಂಡು ಹೋಗುವ ಅಹಮದ್, ‘ಇವಳು ನನ್ನ ಹೆಂಡತಿ. ಕಷ್ಟದಲ್ಲಿದ್ದೇವೆ. ಈ ಚಿನ್ನಾಭರಣ ಇಟ್ಟುಕೊಂಡು ಹಣ ಕೊಡಿ’ ಎನ್ನುತ್ತಾನೆ. ಕಡಿಮೆ ಬೆಲೆಗೆ ಒಡವೆ ಸಿಗುತ್ತವೆ ಎಂಬ ಆಸೆಗೆ ಬೀಳುವ ಆಭರಣ ವ್ಯಾಪಾರಿಗಳು, ಬಿಲ್ ಇಲ್ಲದಿದ್ದರೂ ಖರೀದಿಸಿ ಹಣ ಕೊಟ್ಟು ಕಳುಹಿಸುತ್ತಾರೆ.

ಒಡವೆ ವಿಲೇವಾರಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಆ ಮಹಿಳೆಯನ್ನು ಎಲ್ಲಿಂದ ಕರೆದುಕೊಂಡು ಹೋಗಿದ್ದನೋ ಅಲ್ಲಿಗೇ ಬಿಟ್ಟು ಹೋಗುತ್ತಾನೆ. ತನ್ನ ಯಾವುದೇ ವೈಯಕ್ತಿಕ ಮಾಹಿತಿಯನ್ನೂ ಆಕೆಗೆ ನೀಡದ ಆತ, ಮುಂದಿನ ಬಾರಿ ವಿಲೇವಾರಿಗೆ ಬೇರೊಬ್ಬ ಮಹಿಳೆಯನ್ನು ಬಳಸಿಕೊಳ್ಳುತ್ತಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ವಾರದ ಅಂತರದಲ್ಲಿ ಬಸವನಗುಡಿಯ ಎರಡು ಮನೆಗಳಲ್ಲಿ ಒಂದೇ ಶೈಲಿಯಲ್ಲಿ ಕಳ್ಳತನ ನಡೆದಿದ್ದವು. ಹಳೇ ಆರೋಪಿಗಳ ವಿವರ ಹಾಗೂ ಇತ್ತೀಚೆಗೆ ಜೈಲಿನಿಂದ

ಬಿಡುಗಡೆಯಾದವರ ಪಟ್ಟಿ ಪರಿಶೀಲಿಸಿದಾಗ ಅಹಮದ್‌ನ ಮೇಲೆ ಅನುಮಾನ ವ್ಯಕ್ತವಾಯಿತು. ಮಂಡ್ಯದ ಮಂಡಿಪೇಟೆಯಲ್ಲಿದ್ದ ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಚಾಳಿ ಬಿಡದ ಆರೋಪಿ

‘ಕಳ್ಳತನ ಪ್ರಕರಣವೊಂದರಲ್ಲಿ ಗಿರಿನಗರ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ ಅಹಮದ್, 2017ರ ಜೂನ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆ ನಂತರ ಬಸವನಗುಡಿ, ಕೆಂಗೇರಿ, ಬ್ಯಾಟರಾಯನಪುರ, ಜಯನಗರ ಹಾಗೂ ಜೆ.ಪಿ.ನಗರ ಠಾಣೆ ವ್ಯಾಪ್ತಿಯ ಆರು ಮನೆಗಳಲ್ಲಿ ಕಳ್ಳತನ ಮಾಡಿದ್ದ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry