ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿದೆ ಕಸ, ಕೊಚ್ಚೆ– ಸುರಕ್ಷತೆ ಮರೀಚಿಕೆ

ಸುರಂಗ ಮಾರ್ಗಗಳ ನಿರ್ವಹಣೆ ಕೊರತೆ l ಬಿಬಿಎಂಪಿಯಿಂದಲೇ ಬೀಗ
Last Updated 12 ಜನವರಿ 2018, 20:04 IST
ಅಕ್ಷರ ಗಾತ್ರ

ಬೆಂಗಳೂರು: ಜನ ಸುರಕ್ಷಿತವಾಗಿ ರಸ್ತೆ ದಾಟಲು ಹಾಗೂ ಅಪಘಾತಗಳನ್ನು ತಪ್ಪಿಸಲು ನಗರದ ಹಲವೆಡೆ ನಿರ್ಮಿಸಿರುವ ಪಾದಚಾರಿ ಸುರಂಗ ಮಾರ್ಗಗಳು ನಿರ್ವಹಣೆ ಕೊರತೆಯಿಂದಾಗಿ ಬಳಕೆಯೇ ಆಗುತ್ತಿಲ್ಲ.

ಕೆಲವೆಡೆ ಇವುಗಳಿಗೆ ಬಿಬಿಎಂಪಿಯೇ ಬೀಗ ಹಾಕಿದೆ. ಇನ್ನು ಕೆಲವೆಡೆ ಕಸದ ರಾಶಿ, ಕೊಚ್ಚೆ ನೀರು ತುಂಬಿ ಗಬ್ಬು ವಾಸನೆ ಬೀರುತ್ತಿವೆ.

ಕೆ.ಆರ್‌.ವೃತ್ತ, ಕೆ.ಆರ್.ಮಾರುಕಟ್ಟೆ, ಕಬ್ಬನ್‌ ಉದ್ಯಾನ, ಪುರಭವನ, ವಿಜಯನಗರ, ಗಂಗಾನಗರ, ಶಿವಾಜಿನಗರ, ಹೆಬ್ಬಾಳ ಸೇರಿದಂತೆ ಬಹುತೇಕ ಸುರಂಗ ಮಾರ್ಗಗಳಿಗೆ ಬೀಗ ಹಾಕಿಲ್ಲ. ಆದರೆ, ಇವು ಪಾದಚಾರಿಗಳ ಪಾಲಿಗೆ ಮುಚ್ಚಿವೆ. ನೃಪತುಂಗ ರಸ್ತೆ ಹಾಗೂ ಬಹುಮಹಡಿ ಕಟ್ಟಡ, ಚಾಲುಕ್ಯ ವೃತ್ತದ ಬಳಿ ರಾಜಭವನ ರಸ್ತೆಯಲ್ಲಿರುವ ಮಾರ್ಗಗಳಿಗೆ ಬೀಗ ಹಾಕಲಾಗಿದೆ. ಯುವಿಸಿಇ ಬಳಿಯ ಹಾಗೂ ಪಾಲಿಟೆಕ್ನಿಕ್‌ ಬಳಿಯ ಸುರಂಗಗಳ ಒಳಗೆ ಕೊಚ್ಚೆ ನೀರು ಹಾಗೂ ತ್ಯಾಜ್ಯ ತುಂಬಿಕೊಂಡಿದೆ. ಈ ಮಾರ್ಗಗಳು ಪಾಳು ಬಿದ್ದಂತಿವೆ. ಇವುಗಳಲ್ಲಿ ಸ್ವಚ್ಛತೆ– ಸುರಕ್ಷತೆಗಳೆರಡೂ ಮರೀಚಿಕೆಯಾಗಿದೆ.

‘ಹೊತ್ತು ಮುಳುಗಿದ ಬಳಿಕ ಮೆಜೆಸ್ಟಿಕ್ ಬಳಿಯ ಸುರಂಗದಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ. ಅನೇಕ  ಮಾರ್ಗದ ಹತ್ತಿರ ಸುಳಿಯಲೂ ಆಗುವು
ದಿಲ್ಲ. ಅವು ಭೂತ ಬಂಗಲೆಯ ಹಾಗೆ ಇವೆ. ಹಾವು, ಹೆಗ್ಗಣ ಸೇರಿಕೊಂಡಿವೆ. ಒಳಚರಂಡಿ ನೀರು ಇದರಲ್ಲೇ ಹರಿದಿರುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಇವು ಅಸುರಕ್ಷಿತ. ಹಾಗಾಗಿ ಇವುಗಳನ್ನು ಬಳಸಲು ಹಿಂಜರಿಯುತ್ತೇನೆ’ ಎನ್ನುತ್ತಾರೆ ವಿಜಯ್‌.

‘ಮೆಜೆಸ್ಟಿಕ್‌ ಬಳಿಯ ಮಾರ್ಗಗಳು ಕೆಟ್ಟ ಸ್ಥಿತಿಯಲ್ಲಿ ಇವೆ. ನೂರಾರು ಅಂಗಡಿಗಳು ಇದರದೊಳಗೇ ಇರುವುದರಿಂದ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ’ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ (ನಾಗರಿಕ) ಟಿ.ಎಸ್‌.ದಕ್ಷಿಣಾಮೂರ್ತಿ.

‘ಕೆ.ಆರ್‌.ವೃತ್ತದಲ್ಲಿ ಯುವಿಸಿಇ ಪಾರಂಪರಿಕ ಕಟ್ಟಡದಿಂದ ಎಂಜಿನಿಯರಿಂಗ್‌ ಕಾಲೇಜು ಕಟ್ಟಡಕ್ಕೆ ಹೋಗಿ ಬರಲು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿತ್ತು. ಆಗ ಈ ರಸ್ತೆಯಲ್ಲಿ ಏಕಮುಖ ಸಂಚಾರವಿತ್ತು. ರಸ್ತೆ ದಾಟುವುದು ಅಷ್ಟು ಸುಲಭವಿರಲಿಲ್ಲ. ಎರಡೂ ಕಟ್ಟಡಗಳ ನಡುವೆ ಪಾದಚಾರಿ ಸುರಂಗ ಮಾಡುವಂತೆ ಎಂಜಿನಿಯರ್‌ಗಳ ಗಮನಕ್ಕೆ ತಂದೆವು. ಸುರಂಗ ಮಾರ್ಗ ಕಟ್ಟಿದ ಕೆಲವೇ ಸಮಯದಲ್ಲಿ ಆ ರಸ್ತೆಯ ಎರಡೂ ಬದಿಯಿಂದ (2ವೇ) ವಾಹನ ಸಂಚಾರಕ್ಕೆ ಅನುಮತಿ ದೊರೆಯಿತು. ಸಂಚಾರ ದಟ್ಟಣೆ ಕಡಿಮೆಯಾಗಿ ನಿಧಾನವಾಗಿ ಸುರಂಗ ಮಾರ್ಗ ಬಳಕೆ ತಪ್ಪಿತು’ ಎಂದು ಕಾಲೇಜಿನ ಹೆಸರು ಹೇಳಲು ಇಚ್ಛಿಸದ ಪ್ರಾಧ್ಯಾಪಕರೊಬ್ಬರು ತಿಳಿಸಿದರು. 

‘ಸಾರ್ವಜನಿಕರ ಹಣದಿಂದ ಸರ್ಕಾರ ಮೂಲ ಸೌಕರ್ಯ ಒದಗಿಸುತ್ತದೆ. ಅವುಗಳನ್ನು ಬಳಸಿಕೊಳ್ಳಬೇಕು ಎಂಬ ಪ್ರಜ್ಞೆ ನಾಗರಿಕರಿಗೂ ಇರಬೇಕು. ಕೆಲವು ಮಾರ್ಗಗಳು ಅಕ್ರಮ ಚಟುವಟಿಕೆಗಳ ಅಡ್ಡಗಳಾಗಿವೆ’ ಎನ್ನುತ್ತಾರೆ ಹಿರಿಯ ನಾಗರಿಕ ಚಂದ್ರಣ್ಣ.

‘ಜತೆಗೆ ಅಪಘಾತಗಳು ಸಂಭವಿಸಿದಾಗ ಸ್ಕೈವಾಕ್‌, ಪಾದಚಾರಿ ಮಾರ್ಗ ಬೇಕು ಎನ್ನುತ್ತೇವೆ. ಆದರೆ, ಅವುಗಳನ್ನು ಒದಗಿಸಿದಾಗ ಬಳಸುವುದೇ ಇಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.


ಕೆ.ಆರ್.ವೃತ್ತದ ಬಳಿಯ ಪಾದಚಾರಿ ಮಾರ್ಗದಲ್ಲಿ ಕಸ ತುಂಬಿಕೊಂಡಿರುವುದು

‘ಜನರಿಗೆ ತಾಳ್ಮೆಯೇ ಇಲ್ಲ. ಒಂದೇ ಕ್ಷಣಕ್ಕೆ ರಸ್ತೆ ದಾಟುವ ಧಾವಂತದಲ್ಲಿರುತ್ತಾರೆ. ಸರ್ಕಾರವನ್ನು ಬೈದರೆ ಯಾವ ಪ್ರಯೋಜನವೂ ಇಲ್ಲ. ಸಾರ್ವಜನಿಕರ ಹಣ, ಜಾಗ ಎರಡೂ ವ್ಯರ್ಥ’ ಎನ್ನುತ್ತಾರೆ ವಿಜಯನಗರ ನಿವಾಸಿ ಸುವನಾ. ‘ವಯಸ್ಸಾದವರಿಗೆ ಸುರಂಗ ಮಾರ್ಗಗಳ ಮೆಟ್ಟಿಲು ಹತ್ತಿ ಇಳಿಯುವಷ್ಟು ತ್ರಾಣ ಇರುವುದಿಲ್ಲ. ಇವುಗಳಿಂದ ಹಿರಿಯ ನಾಗರಿಕರಿಗೆ ಹೆಚ್ಚೇನು ಅನುಕೂಲ ಆಗುವುದಿಲ್ಲ’ ಎನ್ನುತ್ತಾರೆ ಉಷಾ.

ಬಿಬಿಎಂಪಿ ಪೂ‌ರ್ವ ವಲಯದ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್, ‘ಅಗ್ಲಿ ಇಂಡಿಯನ್ಸ್‌ ಎಂಬ ಸಂಘಟನೆಯವರು ಪೂರ್ವ ವಲಯದ ಮಾರ್ಗಗಳನ್ನು ನಿರ್ವಹಣೆ ಮಾಡುತ್ತಿದ್ದರು. ಕೆಲವು ದಿನಗಳಿಂದ ನಿರ್ವಹಣೆ ನಿಲ್ಲಿಸಿದ್ದಾರೆ. ಸದ್ಯ ಗ್ಯಾಂಗ್‌ಮನ್‌ಗಳು ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಇವುಗಳನ್ನು ತೆರೆದಿರುತ್ತಾರೆ. ರಾತ್ರಿ ವೇಳೆ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂಬ ದೂರುಗಳು ಬಂದಿವೆ’ ಎಂದು ಪ್ರತಿಕ್ರಿಯಿಸಿದರು.

‘ಇವುಗಳ ನಿರ್ವಹಣೆಗೆ ವಾರದ ಹಿಂದೆ ಟೆಂಡರ್‌ ಕರೆಯಲಾಗಿದೆ’ ಎಂದು ಅವರು ತಿಳಿಸಿದರು.
***
ಮೆಜೆಸ್ಟಿಕ್‌ನ ಸುರಂಗ ಮಾರ್ಗದಲ್ಲಿ ದುರ್ನಾತ ಮೂಗಿಗೆ ಹೊಡೆಯುತ್ತದೆ
ಟಿ.ಎಸ್‌.ದಕ್ಷಿಣಾಮೂರ್ತಿ
**

ಸುರಂಗ ನಿರ್ಮಿಸದೇ ಹೋಗಿದ್ದರೆ ಆ ಜಾಗದಲ್ಲಿ ನಾಲ್ಕು ಮರಗಳಾದರೂ ಇರುತ್ತಿದ್ದವು, ಈಗ ಅವುಗಳನ್ನು ಬಳಸುವವರೇ ಇಲ್ಲ. ಸುವನಾ,ವಿಜಯನಗರ ನಿವಾಸಿ
***
ಸುರಂಗ ಬಳಸಿ ರಸ್ತೆ ದಾಟುವುದು ಸುರಕ್ಷಿತ ಅಲ್ಲ. ಒಳಗೆ ಬೆಳಕಿನ ವ್ಯವಸ್ಥೆ ಇರುವುದಿಲ್ಲ. ಕೆಲವರು ಮಲ–ಮೂತ್ರ ವಿಸರ್ಜನೆಗೆ ಇದನ್ನು ಬಳಸಿಕೊಳ್ಳುತ್ತಾರೆ ಭವ್ಯಾ, ವಿದ್ಯಾರ್ಥಿನಿ
***

ಇಂತಹ ಯೋಜನೆಗಳು ಕೆಲವೇ ಕೆಲವರು ದುಡ್ಡು ಮಾಡಿಕೊಳ್ಳಲು ನಡೆಸುವ ದಂಧೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ.
ಚಂದ್ರಣ್ಣ, ಹಿರಿಯ ನಾಗರಿಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT