ಕಳ್ಳರನ್ನು ಹಿಡಿಯಲು ಆಟೊ ಚಾಲಕರಾದ ಪೊಲೀಸರು!

7
ಪೊಲೀಸ್ ಬಲೆಗೆ ನೇಪಾಳದ ಭದ್ರತಾ ಸಿಬ್ಬಂದಿ

ಕಳ್ಳರನ್ನು ಹಿಡಿಯಲು ಆಟೊ ಚಾಲಕರಾದ ಪೊಲೀಸರು!

Published:
Updated:
ಕಳ್ಳರನ್ನು ಹಿಡಿಯಲು ಆಟೊ ಚಾಲಕರಾದ ಪೊಲೀಸರು!

ಬೆಂಗಳೂರು: ಬನಶಂಕರಿ 2ನೇ ಹಂತದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ನೇಪಾಳದ ನಾಲ್ವರು ಭದ್ರತಾ ಸಿಬ್ಬಂದಿಯನ್ನು ಬನಶಂಕರಿ ಪೊಲೀಸರು ಆಟೊ ಚಾಲಕರ ವೇಷದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

‘ಭೀಮ್ ಬಹದ್ದೂರ್ ತಾಪಾ (31), ಜಯರಾಜ್ ಬಹದ್ದೂರ್ (25), ಧರ್ಮರಾಜ್ ಬಹದ್ದೂರ್ ಬಹೋರಾ (40) ಹಾಗೂ ಗಣೇಶ್ ಬಹದ್ದೂರ್ ಅಲಿಯಾಸ್ ಗಗನ್ (34) ಎಂಬುವರನ್ನು ಬಂಧಿಸಿದ್ದೇವೆ. ಆರೋಪಿಗಳು ಡಿ.13ರ ರಾತ್ರಿ ಶೈಲಜಾ ಎಂಬುವವರ ಮನೆಯ ಹಿಂಬಾಗಿಲು ಮುರಿದು ಕಳ್ಳತನ ಮಾಡಿದ್ದರು. ಬಂಧಿತರಿಂದ 425 ಗ್ರಾಂ ಚಿನ್ನ ಹಾಗೂ 5 ಕೆ.ಜಿ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪಕ್ಕದ ಮನೆ ಕಾವಲುಗಾರ: ಒಂದೂವರೆ ವರ್ಷದ ಹಿಂದೆ ನಗರಕ್ಕೆ ಬಂದಿದ್ದ ಭೀಮ್, ಬನಶಂಕರಿ 2ನೇ ಹಂತದ ಮನೆಯೊಂದರಲ್ಲಿ ಸೆಕ್ಯುರಿಟಿ ಆಗಿ ಕೆಲಸಕ್ಕೆ ಸೇರಿದ್ದ. ಕಟ್ಟಡದ ಕಾರಿನ ಶೆಡ್‌ನಲ್ಲೇ ಪತ್ನಿ ಜತೆ ವಾಸವಿದ್ದ. ಆ ಮನೆ ಪಕ್ಕದಲ್ಲೇ ಶೈಲಜಾ ಕುಟುಂಬ ನೆಲೆಸಿದೆ. ಕಾರು ಸ್ವಚ್ಛಗೊಳಿಸಲು ಆಗಾಗ್ಗೆ ಅವರ ಮನೆಗೂ ಹೋಗಿ ಬರುತ್ತಿದ್ದ ಆರೋಪಿಗೆ, ಕುಟುಂಬದ ವಿಶ್ವಾಸ ಸಿಕ್ಕಿತ್ತು.

ಡಿ.13ರ ಬೆಳಿಗ್ಗೆ ಕುಟುಂಬ ಸಮೇತ ತಿರುಪತಿಗೆ ಹೊರಟ ಶೈಲಜಾ, ಭೀಮ್‌ನನ್ನು ಕರೆದು ‘ಮನೆ ಕಡೆ ಸ್ವಲ್ಪ ನೋಡಿಕೊ’ ಎಂದು ಹೇಳಿ ಹೋಗಿದ್ದರು. ಆದರೆ, ಅವರು ವಾಪಸ್ ಬರುವಷ್ಟರಲ್ಲಿ ಕಳ್ಳತನ ಮಾಡಬೇಕೆಂದು ನಿರ್ಧರಿಸಿದ ಆತ, ಕೋರಮಂಗಲದಲ್ಲಿ ಕೆಲಸ ಮಾಡುತ್ತಿದ್ದ ಜಯರಾಜ್ ಹಾಗೂ ಧರ್ಮರಾಜ್ ಅವರನ್ನು ಕರೆಸಿಕೊಂಡಿದ್ದ. ಸಮೀಪದ ಬಾರ್‌ನಲ್ಲಿ ಪಾನಮತ್ತರಾದ ಮೂವರೂ, ಬಳಿಕ ಶೆಡ್‌ಗೆ ವಾಪಸಾಗಿ ರಾತ್ರಿ 12 ಗಂಟೆವರೆಗೂ ಸಂಚಿನ ಬಗ್ಗೆ ಚರ್ಚೆ ನಡೆಸಿದ್ದರು.

ಕೈ ಹಿಡಿದ ಯುಪಿಎಸ್‌: 12.30ರ ಸುಮಾರಿಗೆ ಶೈಲಜಾ ಅವರ ಮನೆ ಹತ್ತಿರ ಬಂದ ಆರೋಪಿಗಳು, ವಿದ್ಯುತ್ ಇದ್ದರೆ ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ತಮ್ಮ ಚಹರೆ ಸೆರೆಯಾಗುತ್ತದೆ ಎಂದು ಮೊದಲು ವಿದ್ಯುತ್‌ ಮೀಟರ್‌ನ ವೈರ್ ಕತ್ತರಿಸಿದ್ದರು. ಬಳಿಕ ಯುಪಿಎಸ್‌ ಕಾರ್ಯಾರಂಭ ಮಾಡಿತ್ತು. ಇದನ್ನು ಅರಿಯದ ಅವರು, ಹಿಂಬಾಗಿಲು ಮುರಿದು ಒಳನುಗ್ಗಿ, ಆಭರಣ ಕಳವು ಮಾಡಿದ್ದರು. ನಂತರ ಶೆಡ್‌ಗೆ ಹೋಗಿ ಕದ್ದ ಮಾಲನ್ನು ಹಂಚಿಕೊಂಡು ಪರಾರಿಯಾಗಿದ್ದರು.

ಮರುದಿನ ಬೆಳಿಗ್ಗೆ 8 ಗಂಟೆ ಸುಮಾರಿಗೆ ಕೆಲಸದ ಮಹಿಳೆ ಮನೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ ಅವರು ಪಕ್ಕದ ರಸ್ತೆಯಲ್ಲಿ ನೆಲೆಸಿರುವ ಶೈಲಜಾ ತಂಗಿ ಸಹನಾ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅವರು ಬನಶಂಕರಿ ಠಾಣೆಗೆ ದೂರು ಕೊಟ್ಟಿದ್ದರು.

ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಭೀಮ್‌ನ ಚಹರೆ ಸೆರೆಯಾಗಿತ್ತು. ಆತ ಶೆಡ್‌ನಲ್ಲೂ ಇರಲಿಲ್ಲ. ಪತ್ನಿಯನ್ನು ವಿಚಾರಿಸಿದಾಗ, ‘ಪತಿ ನೆಂಟರ ಮನೆಗೆ ಹೋಗಿದ್ದಾರೆ. ಅವರಿಗೆ ಏನೂ ಗೊತ್ತಿಲ್ಲ. ಸಂಜೆಯೊಳಗೆ ಬರುತ್ತಾರೆ’ ಎಂದು ಹೇಳಿದರು. ಇಡೀ ದಿನ ಕಾದರೂ ಆತ ಬರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಆಟೊ ಚಾಲಕರಾದ ಪೊಲೀಸರು: ‘ಭೀಮ್‌ ಮನೆಗೆ ಬರಬಹುದೆಂದು ಸಿಬ್ಬಂದಿ ಆಟೊ ಚಾಲಕರ ವೇಷದಲ್ಲಿ ಆತನ ಮನೆ ಹತ್ತಿರವೇ ಕಾಯುತ್ತ ನಿಂತಿದ್ದರು. ಡಿ.17ರಂದು ಲಗೇಜ್ ಸಮೇತ ಶೆಡ್‌ನಿಂದ ಹೊರಬಂದ ಆತನ ಪತ್ನಿ, ಯಾವುದೋ ಆಟೊ ಏರಿ ಹೊರಟರು. ಅವರನ್ನು ಆಟೊದಲ್ಲಿ ಹಿಂಬಾಲಿಸಿದ ಸಿಬ್ಬಂದಿ, ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ಅಡ್ಡಗಟ್ಟಿದರು. ಪತ್ನಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ‘ಪತಿ ಸೋನಿ ವರ್ಲ್ಡ್‌ ಜಂಕ್ಷನ್‌ ಬಳಿ ಕಾಯುತ್ತಿದ್ದಾರೆ. ಊರು ಬಿಟ್ಟು ಹೋಗಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು. ಅಲ್ಲಿಗೆ ತೆರಳಿ ಭೀಮ್‌ನನ್ನು ವಶಕ್ಕೆ ಪಡೆಯಲಾಯಿತು’ ಎಂದು ಪೊಲೀಸರು ವಿವರಿಸಿದರು.

‘ಆತ ತನ್ನ ಪಾಲಿನ ಒಡವೆಗಳನ್ನು ಯಲಚೇನಹಳ್ಳಿಯಲ್ಲಿದ್ದ ಗೆಳೆಯ ಗಣೇಶ್ ತಾಪಾನ ಮನೆಯಲ್ಲಿಟ್ಟಿದ್ದ. ಆತನನ್ನೂ ವಶಕ್ಕೆ ಪಡೆದು ಒಡವೆ ಜಪ್ತಿ ಮಾಡಿದೆವು. ಇನ್ನಿಬ್ಬರೂ ಆರೋಪಿಗಳು ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು. ವಾರದ ಬಳಿಕ ಧರ್ಮರಾಜ್‌ನ ಮೊಬೈಲ್ ಚಾಲೂ ಆಯಿತು. ಭೀಮ್‌ನಿಂದಲೇ ಆತನಿಗೆ ಕರೆ ಮಾಡಿಸಿ, ಯಲಚೇನಹಳ್ಳಿ ಬಸ್ ನಿಲ್ದಾಣದ ಬಳಿ ಬರುವಂತೆ ಹೇಳಿಸಿದೆವು. ಅವರಿಬ್ಬರೂ ಬರುತ್ತಿದ್ದಂತೆಯೇ ಸುತ್ತುವರಿದು ವಶಕ್ಕೆ ಪಡೆದೆವು’ ಎಂದು ಮಾಹಿತಿ ನೀಡಿದರು.

***

1995ರಲ್ಲೇ ಬಂಧಿತನಾಗಿದ್ದ

25 ವರ್ಷಗಳಿಂದ ನಗರದಲ್ಲಿರುವ ಧರ್ಮರಾಜ್, 1995ರಲ್ಲಿ ಜೆ.ಪಿ.ನಗರದ ಮನೆಯೊಂದರಲ್ಲಿ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. 2013ರಲ್ಲಿ ಇನ್ನೊಂದು ಮನೆಯಲ್ಲಿ ಕಳವು ಮಾಡಿ ಪುನಃ ಜೈಲು ಸೇರಿದ್ದ. ಎಲ್ಲರೂ ಬೇರೆ ಹೆಸರುಗಳು, ನಕಲಿ ದಾಖಲೆ ಕೊಟ್ಟು ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

***

ನಿಯಮ ಪಾಲಿಸಲು ಪೊಲೀಸರ ಸೂಚನೆ

* ಸೆಕ್ಯುರಿಟಿಗಳನ್ನು ನೇಮಿಸಿಕೊಳ್ಳುವಾಗ ಅವರ ಪೂರ್ವಾಪರ ತಿಳಿದುಕೊಳ್ಳಿ

* ಅಪರಾಧ ಹಿನ್ನೆಲೆಯುಳ್ಳವರೇ ಎಂಬ ಬಗ್ಗೆ ಪೊಲೀಸರಿಂದ ಪರಿಶೀಲನಾ ಪತ್ರ ಪಡೆದುಕೊಳ್ಳಿ

* ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಕೊಟ್ಟಿರುವ ಎಲ್ಲ ದಾಖಲೆಗಳು ಅಸಲಿಯೇ ಎಂಬುದನ್ನು ಪರಿಶೀಲಿಸಿ

* ಆತನ ಸಂಬಂಧಿಕರು ಹಾಗೂ ಸ್ನೇಹಿತರ ಸಂಪರ್ಕ ಸಂಖ್ಯೆಗಳನ್ನೂ ಪಡೆದುಕೊಳ್ಳಿ

* ಬೇರೆಡೆ ಕೆಲಸ ಮಾಡಿ ಬಿಟ್ಟು ಬಂದಿದ್ದಲ್ಲಿ, ಅಲ್ಲಿಗೂ ಕರೆ ಮಾಡಿ ಆತನ ನಡವಳಿಕೆ ಹಾಗೂ ಕರ್ತವ್ಯ ಪಾಲನೆ ಬಗ್ಗೆ ವಿಚಾರಿಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry