ಸಿದ್ದರಾಮಯ್ಯ ಬೇಷರತ್‌ ಕ್ಷಮೆಯಾಚಿಸಲಿ

7

ಸಿದ್ದರಾಮಯ್ಯ ಬೇಷರತ್‌ ಕ್ಷಮೆಯಾಚಿಸಲಿ

Published:
Updated:

ಮಂಗಳೂರು: ದೇಶ ಕಟ್ಟುವ ಕಾಯಕದಲ್ಲಿ ಅಹರ್ಶಿನಿ ದುಡಿಯು ತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಬಗ್ಗೆ ಸಿದ್ದರಾಮಯ್ಯ ಕೀಳಾಗಿ ಮಾತನಾಡಿರುವುದು ಖಂಡನೀಯ. ತಕ್ಷಣ ಮುಖ್ಯಮಂತ್ರಿ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು, ಇಲ್ಲವೇ ಬೇಷರತ್‌ ಕ್ಷಮೆಯಾಚಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಪ್ರಾಂತ ಅಧ್ಯಕ್ಷ ಎಂ.ಬಿ. ಪುರಾಣಿಕ್‌ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಬಹುದೆಂಬ ಭೀತಿ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಹೀಗಾಗಿ, ಹತಾಶ ಮಾನೋ ಭಾವದಿಂದ ಬುದ್ಧಿಭ್ರಮಣೆಯಾದ ವ್ಯಕ್ತಿಯ ಹಾಗೆ ವರ್ತಿಸುತ್ತಿದ್ದಾರೆ. ಅಹಿಂದದ ಹೆಸರು ಹೇಳುತ್ತಿದ್ದ ಅವರು, ಈಗ ‘ನಾನೊಬ್ಬ ಹಿಂದೂ’ ಎನ್ನುತ್ತಿದ್ದಾರೆ. ಇವರ ಒಡೆದು ಆಳುವ ನೀತಿಯಿಂದಾಗಿ ರಾಜ್ಯದಲ್ಲಿ ಬಹುಸಂಖ್ಯಾತರಾದ ಹಿಂದೂಗಳೇ ಅಲ್ಪಸಂಖ್ಯಾತರಾಗಿದ್ದೇವೆ’ ಎಂದು ದೂರಿದರು.

‘ಸಿದ್ದರಾಮಯ್ಯ ನೈಜ ಹಿಂದೂ ವಾಗಿದ್ದರೆ, ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಪರಿಷ್ಕೃತ ಗೋ ಮಸೂದೆಯನ್ನು ರದ್ದು ಪಡಿಸಿದ್ದೇಕೆ? ಗೋವುಗಳನ್ನು ಅನೈತಿಕವಾಗಿ ಕಡಿದು ತಿನ್ನುವವರಿಗೆ ಬೆಂಬಲ ಸೂಚಿಸಿ, ಗೋಮಾಂಸ ಭಕ್ಷಣೆ ಮಾಡಿದ ತಮಗೆ ತನ್ನನ್ನು ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆಯಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಅವರು ಹಿಂದೂ ಆಗಿದ್ದರೆ ಉಡುಪಿಗೆ ಬಂದಾಗ ಕೃಷ್ಣಮಠಕ್ಕೆ ಸಂದರ್ಶಿಸಬೇಕಿತ್ತು. ಇಲ್ಲವೇ ಪೇಜಾವರ ಸ್ವಾಮೀಜಿ ಅವರನ್ನು ಭೇಟಿ ಮಾಡಬೇಕಿತ್ತು. ಅದನ್ನು ಬಿಟ್ಟು ಕನಕದಾಸರಿಗೆ ಅಲ್ಲಿ ಅವಮಾನ ಮಾಡಲಾಗಿದೆ ಎಂದು ಬಾಲಿಶ ಹೇಳಿಕೆ ನೀಡುವುದು ಸರಿಯಲ್ಲ. ಕನಕದಾಸರಿಗೆ ಉಡುಪಿಯಲ್ಲಿ ಉನ್ನತ ಸ್ಥಾನಮಾನ ನೀಡಲಾಗಿದೆ. ಹಿಂದೂಗಳ ಅತ್ಯಂತ ಪವಿತ್ರ ಸ್ಥಳವಾದ ಧರ್ಮಸ್ಥಳಕ್ಕೆ ಮಾಂಸಾಹಾರ ಸೇವನೆ ಮಾಡಿ ತೆರಳಿದ ನೀವು ಹಿಂದೂವೇ? ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಅತ್ಯಂತ ಕೀಳು ಮಟ್ಟದ ಶಬ್ದದಿಂದ ಟೀಕಿಸಿರುವುದು ಹಿಂದೂ ಸಂಸ್ಕೃತಿಗೆ ಮಾಡಿರುವ ಅವಮಾನ’ ಎಂದು ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರದ ಸಾಧನಾ ಸಮಾವೇಶದಲ್ಲಿ ತಮ್ಮ ಸಾಧನೆಗಳನ್ನು ಹೇಳುವುದು ವಾಡಿಕೆ. ಆದರೆ, ಮೂಡುಬಿದಿರೆಯಲ್ಲಿ ನಡೆದ ಸಮಾವೇಶದಲ್ಲಿ ಸಿದ್ದರಾಮಯ್ಯ ತಮ್ಮ ಭಾಷಣವನ್ನು ಬಿಜೆಪಿ ಮತ್ತು ಹಿಂದೂ ಸಂಘಟನೆಗಳನ್ನು ಟೀಕೆ ಮಾಡಲು ಮೀಸಲಿಟ್ಟರು. ಉಡುಪಿಯಲ್ಲಿ ನಡೆದ ಧರ್ಮ ಸಂಸತ್‌ಗೆ ಕೊಲ್ಲೂರು ದೇವಳದಿಂದ ಊಟ ಸರಬರಾಜು ಮಾಡಲು ಅವಕಾಶ ನೀಡಿಲ್ಲ. ಹೀಗಿರು ವಾಗ ಬೈಂದೂರಿನಲ್ಲಿ ನಡೆದ ಸಾಧನಾ ಸಮಾವೇಶಕ್ಕೆ ಹೇಗೆ ಸರಬರಾಜು ಮಾಡಿದರು’ ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಬಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕ ಶರಣ್‌ ಪಂಪ್‌ವೆಲ್‌, ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಜಗದೀಶ್‌ ಕೆ. ಶೇಣವ, ಜಿಲ್ಲಾ ಕಾರ್ಯದರ್ಶಿ ಗೋಪಾಲ್‌ ಕುತ್ತಾರ್, ಭುಜಂಗ ಕುಲಾಲ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry