ದೀಪಕ್‌, ಬಶೀರ್‌ ಕುಟುಂಬಗಳಿಗೆ ಗೃಹ ಸಚಿವರ ಸಾಂತ್ವನ

7

ದೀಪಕ್‌, ಬಶೀರ್‌ ಕುಟುಂಬಗಳಿಗೆ ಗೃಹ ಸಚಿವರ ಸಾಂತ್ವನ

Published:
Updated:
ದೀಪಕ್‌, ಬಶೀರ್‌ ಕುಟುಂಬಗಳಿಗೆ ಗೃಹ ಸಚಿವರ ಸಾಂತ್ವನ

ಮಂಗಳೂರು: ಜನವರಿ 3ರಂದು ಕೊಲೆಯಾದ ಕಾಟಿಪಳ್ಳದ ದೀಪಕ್‌ ರಾವ್‌ ಮತ್ತು ಆಕಾಶಭವನದ ಅಬ್ದುಲ್‌ ಬಶೀರ್‌ ಅವರ ಮನೆಗಳಿಗೆ ಶುಕ್ರವಾರ ಭೇಟಿನೀಡಿ ಎರಡೂ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಕೊಲೆಯಲ್ಲಿ ಭಾಗಿಯಾದ ಎಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಭರವಸೆ ನೀಡಿದರು.

ಉಡುಪಿ ಜಿಲ್ಲೆಗೆ ತೆರಳಿದ್ದ ಗೃಹ ಸಚಿವರು ಮಧ್ಯಾಹ್ನ ವಾಪಸು ಬರುವಾಗ ಕಾಟಿಪಳ್ಳಕ್ಕೆ ತೆರಳಿದರು. ಅಲ್ಲಿ ದೀಪಕ್ ರಾವ್‌ ಅವರ ತಾಯಿ ಪ್ರೇಮಲತಾ ಮತ್ತು ತಮ್ಮ ಸತೀಶ್ ರಾವ್‌ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಶಾಸಕ ಬಿ.ಎ.ಮೊಯಿದ್ದೀನ್ ಬಾವ ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್‌.ಸುರೇಶ್ ಜೊತೆಗಿದ್ದರು.

‘ದೀಪಕ್‌ ಅವರನ್ನು ಮರಳಿ ತರಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಜೊತೆ ಸರ್ಕಾರವಿದೆ. ಯಾವ ಸಂದರ್ಭದಲ್ಲೂ ಧೈರ್ಯಗೆಡಬೇಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ವೇಳೆ ನೀಡಿದ ಭರವಸೆಯಂತೆ ಸತೀಶ್‌ ರಾವ್‌ಗೆ ಆದಷ್ಟು ಬೇಗ ಉದ್ಯೋಗದ ವ್ಯವಸ್ಥೆ ಮಾಡಲಾಗುವುದು. ಕೊಲೆಯಲ್ಲಿ ಭಾಗಿಯಾದ ಎಲ್ಲರಿಗೂ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ಎಚ್ಚರಿಕೆ ವಹಿಸಲಿದೆ’ ಎಂದು ದೀಪಕ್‌ ಕುಟುಂಬದವರಿಗೆ ಭರವಸೆ ನೀಡಿದರು.

ಕ್ರಮಕ್ಕೆ ಒತ್ತಾಯ: ಕಾಟಿಪಳ್ಳದಿಂದ ನೇರವಾಗಿ ಆಕಾಶಭವನಕ್ಕೆ ಬಂದ ಗೃಹ ಸಚಿವರು ಬಶೀರ್‌ ಕುಟುಂಬದವರನ್ನು ಭೇಟಿಮಾಡಿ ಸಾಂತ್ವನ ಹೇಳಿದರು. ರಾಜ್ಯ ಸರ್ಕಾರ ನೀಡಿರುವ ಪರಿಹಾರದ ಹೊರತಾಗಿ ಏನೂ ಬೇಡ ಎಂದ ಕುಟುಂಬದ ಸದಸ್ಯರು, ‘ಕೊಲೆಯಲ್ಲಿ ಭಾಗಿಯಾದ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸಿ’ ಎಂದು ಕೈಮುಗಿದು ಮನವಿ ಮಾಡಿದರು.

‘ನಗರದಲ್ಲಿ ಮತ್ತೆಂದೂ ಹೀಗೆ ಆಗದಿರಲಿ. ಯಾವುದೋ ಕಾರಣಕ್ಕೆ ಅಮಾಯಕರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಬಾರದಿರಲಿ. ಈ ರೀತಿಯ ಕೃತ್ಯ ಎಸಗುವವರ ನಿಯಂತ್ರಣಕ್ಕೆ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಿ’ ಎಂದು ಒತ್ತಾಯಿಸಿದರು.

‘ಕೊಲೆಯಲ್ಲಿ ಭಾಗಿಯಾದ ಯಾವ ವ್ಯಕ್ತಿಯೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಬಿಡುವುದಿಲ್ಲ. ಅದಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತೇವೆ’ ಎಂದು ಸಚಿವರು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry