ಇಂದಿರಾ ಕ್ಯಾಂಟೀನ್‌ಗೆ ಮುಖ್ಯಮಂತ್ರಿ ಚಾಲನೆ

7

ಇಂದಿರಾ ಕ್ಯಾಂಟೀನ್‌ಗೆ ಮುಖ್ಯಮಂತ್ರಿ ಚಾಲನೆ

Published:
Updated:
ಇಂದಿರಾ ಕ್ಯಾಂಟೀನ್‌ಗೆ ಮುಖ್ಯಮಂತ್ರಿ ಚಾಲನೆ

ಮೈಸೂರು: ಬಡವರಿಗೆ ರಿಯಾಯಿತಿ ದರದಲ್ಲಿ ಊಟ ಮತ್ತು ಉಪಾಹಾರ ಒದಗಿಸಲು ಬೆಂಗಳೂರಿನ ಮಾದರಿಯಲ್ಲಿ ಮೈಸೂರು ನಗರದಲ್ಲೂ ನಿರ್ಮಿಸಿರುವ ‘ಇಂದಿರಾ ಕ್ಯಾಂಟೀನ್‌’ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕಾಡಾ) ಕಚೇರಿ ಆವರಣದಲ್ಲಿ ನಿರ್ಮಿಸಿರುವ ಕ್ಯಾಂಟೀನ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಅವರು ಉಪ್ಪಿಟ್ಟು, ಕೇಸರಿಬಾತ್‌ ಸವಿದರು. ಅವರ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಇದ್ದರು. ಒಟ್ಟು 11 ಕಡೆ ಕ್ಯಾಟೀನ್‌ ನಿರ್ಮಿಸಲಾಗಿದೆ. ಮೊದಲ ದಿನವೇ ನೂಕುನುಗ್ಗಲು ಕಂಡುಬಂತು.

ಬೆಳಗಿನ ಉಪಾಹಾರ ₹ 5, ಮಧ್ಯಾಹ್ನ, ರಾತ್ರಿ ಊಟ ₹ 10ಕ್ಕೆ ದೊರೆಯಲಿದೆ. ಮೈಸೂರು ಜಿಲ್ಲೆಯ ಪ್ರತಿ ತಾಲ್ಲೂಕು ಕೇಂದ್ರದಲ್ಲೂ ಒಂದು ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗುತ್ತಿದೆ.

ಪ್ರತಿ ಕ್ಯಾಂಟೀನ್‌ನಲ್ಲಿ ಪ್ರತಿ ಬಾರಿ 500 ಜನರಿಗೆ ಬಡಿಸಲಾಗುತ್ತದೆ. ಕುಂಬಾರಕೊಪ್ಪಲು ಮುಖ್ಯರಸ್ತೆ ಹಾಗೂ ಆಲನಹಳ್ಳಿ ವೃತ್ತದಲ್ಲಿರುವ ಮುಖ್ಯ ಕ್ಯಾಂಟೀನ್‌ಗಳಲ್ಲಿ ಅಡುಗೆ ಕೋಣೆ ನಿರ್ಮಿಸಿದ್ದು, ಉಳಿದ ಕ್ಯಾಂಟೀನ್‌ಗಳಿಗೆ ಇಲ್ಲಿಂದ ಆಹಾರ ಸರಬರಾಜು ಮಾಡಲಾಗುತ್ತದೆ. 11 ಕ್ಯಾಂಟೀನ್‌ಗಳಲ್ಲಿ ಒಟ್ಟು 100 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್‌ ಅವರು ಸ್ವಚ್ಛತೆ ಬಗ್ಗೆ ನಿಗಾ ಇಡಲಿದ್ದಾರೆ. ಅಲ್ಲದೆ, ಆರು ತಿಂಗಳಿಗೊಮ್ಮೆ ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಆಹಾರವನ್ನು ಸ್ಟೀಲ್‌ ತಟ್ಟೆಗಳಲ್ಲಿ ಬಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ₹ 40 ಲಕ್ಷ ವೆಚ್ಚದಲ್ಲಿ ಪ್ರತಿ ಕ್ಯಾಂಟೀನ್‌ ನಿರ್ಮಿಸಲಾಗಿದ್ದು, ಪಾಲಿಕೆ ವತಿಯಿಂದ ನೀರು ಹಾಗೂ ವಿದ್ಯುತ್‌ ಸೌಲಭ್ಯ ಒದಗಿಸಲಾಗಿದೆ.

ಶಾಸಕ ಎಂ.ಕೆ.ಸೋಮಶೇಖರ್‌ ಮಾತನಾಡಿ, ‘₹ 225 ಕೋಟಿ ಬಂಡವಾಳ ಹೂಡಿ ಎಲ್ಲೆಡೆ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗಿದೆ. ನಿರ್ವಹಣೆಗೆಂದೇ ₹ 100 ಕೋಟಿ ವೆಚ್ಚ ಮಾಡಲಾಗುತ್ತಿದೆ. ನಮ್ಮದು ಅಭಿವೃದ್ಧಿ ಪರ ಸರ್ಕಾರ. ಆದರೆ, ವಿರೋಧ ಪಕ್ಷದವರು ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿದ್ದಾರೆ’ ಎಂದು ಟೀಕಿಸಿದರು.

ಶಾಸಕ ವಾಸು, ಮೇಯರ್‌ ಎಂ.ಜೆ.ರವಿಕುಮಾರ್‌, ಮೃಗಾಲಯ ಪ್ರಾಧಿಕಾರ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ಜಿಲ್ಲಾಧಿಕಾರಿ ಡಿ.ರಂದೀಪ್‌, ಪಾಲಿಕೆ ಆಯುಕ್ತ ಜಿ.ಜಗದೀಶ್‌, ಉಪವಿಭಾಗಾಧಿಕಾರಿ ಶಿವೇಗೌಡ ಇದ್ದರು.

ಎಲ್ಲೆಲ್ಲಿ ಇಂದಿರಾ ಕ್ಯಾಂಟೀನ್‌?

* ಕಾಡಾ ಕಚೇರಿ ಆವರಣ

* ಕುಂಬಾರಕೊಪ್ಪಲು ಮುಖ್ಯರಸ್ತೆ (ಜಯದೇವ ಆಸ್ಪತ್ರೆ ಎದುರು)

* ಸಿಲ್ಕ್‌ ಫ್ಯಾಕ್ಟರಿ ವೃತ್ತ (ವಾಟರ್‌ ಟ್ಯಾಂಕ್‌ ಆವರಣ)

* ಸೂಯೆಜ್‌ ಫಾರಂ (ವಿದ್ಯಾರಣ್ಯಪುರಂ)

* ಶಾರದಾದೇವಿನಗರ (ನೀರು ಸಂಗ್ರಹಾಲಯದ ಕಾಂಪೌಂಡ್‌ ಒಳಗೆ)

* ಕೆ.ಆರ್‌.ಆಸ್ಪತ್ರೆ ಆವರಣ

* ಆಲನಹಳ್ಳಿ ವೃತ್ತ

* ತ್ರಿವೇಣಿ ವೃತ್ತ

* ಅಜೀಜ್‌ ಸೇಠ್‌ ಜೋಡಿರಸ್ತೆ (ಸೆಂಟ್ರಲ್‌ ಆಸ್ಪತ್ರೆ ಎದುರು)

* ಗ್ರಾಮಾಂತರ ಬಸ್‌ ನಿಲ್ದಾಣ ಬಳಿ (ಬಾಲಕಿಯರ ಪದವಿಪೂರ್ವ ಕಾಲೇಜು)

* ಜೋಡಿ ತೆಂಗಿನ ಮರದ ರಸ್ತೆ

********ಇಂದಿರಾ ಕ್ಯಾಂಟೀನ್‌ನ ಊಟ, ಉಪಾಹಾರ ಮಾಹಿತಿ

ದಿನ ಉಪಾಹಾರ ಊಟ

ಸೋಮವಾರ ಇಡ್ಲಿ, ಪುಳಿಯೊಗರೆ ಅನ್ನ–ಸಾಂಬಾರ್‌, ಮೊಸರನ್ನ ಅಥವಾ ಟೊಮೆಟೊ ಬಾತ್‌, ಮೊಸರನ್ನ

ಮಂಗಳವಾರ ಇಡ್ಲಿ, ಖಾರಾಬಾತ್‌ ಅನ್ನ–ಸಾಂಬಾರ್‌, ಮೊಸರನ್ನ ಅಥವಾ ಚಿತ್ರಾನ್ನ ಮೊಸರನ್ನ

ಬುಧವಾರ ಇಡ್ಲಿ, ಪೊಂಗಲ್‌ ಅನ್ನ–ಸಾಂಬಾರ್‌, ಮೊಸರನ್ನ ಅಥವಾ ವಾಂಗಿಬಾತ್‌, ಮೊಸರನ್ನ

ಗುರುವಾರ ಇಡ್ಲಿ, ರವಾ ಕಿಚಡಿ ಅನ್ನ–ಸಾಂಬಾರ್‌, ಮೊಸರನ್ನ ಅಥವಾ ಬಿಸಿಬೇಳೆ ಬಾತ್‌, ಮೊಸರನ್ನ

ಶುಕ್ರವಾರ ಇಡ್ಲಿ, ಚಿತ್ರಾನ್ನ ಅನ್ನ–ಸಾಂಬಾರ್‌, ಮೊಸರನ್ನ ಅಥವಾ ಮೆಂತ್ಯ ಪಲಾವ್‌, ಮೊಸರನ್ನ

ಶನಿವಾರ ಇಡ್ಲಿ, ವಾಂಗಿಬಾತ್‌ ಅನ್ನ–ಸಾಂಬಾರ್‌, ಮೊಸರನ್ನ ಅಥವಾ ಪುಳಿಯೊಗರೆ, ಮೊಸರನ್ನ

ಭಾನುವಾರ ಇಡ್ಲಿ, ಖಾರಾಬಾತ್‌, ಕೇಸರಿಬಾತ್‌ ಅನ್ನ–ಸಾಂಬಾರ್‌, ಮೊಸರನ್ನ ಅಥವಾ ಪಲಾವ್‌, ಮೊಸರನ್ನ

* ಸಮಯ: ಉಪಾಹಾರ: ಬೆಳಿಗ್ಗೆ 7.30ರಿಂದ 10 ಗಂಟೆ. ಊಟ: ಮಧ್ಯಾಹ್ನ 1 ರಿಂದ 3.30. ಊಟ: ರಾತ್ರಿ 7.30ರಿಂದ 9.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry