ಭಾರತೀ ಕಾಲೇಜಿನಲ್ಲಿ ‘ ಸಂಕ್ರಾಂತಿ ಸಂಭ್ರಮ’ ನಾಳೆ

7

ಭಾರತೀ ಕಾಲೇಜಿನಲ್ಲಿ ‘ ಸಂಕ್ರಾಂತಿ ಸಂಭ್ರಮ’ ನಾಳೆ

Published:
Updated:

ಭಾರತೀನಗರ: ಇಲ್ಲಿನ ಭಾರತೀ ಕಾಲೇಜಿನಲ್ಲಿ ಜ. 13ರಂದು ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ಭಾರತೀ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಟಿ.ರಾಮಚಂದ್ರೇಗೌಡ ತಿಳಿಸಿದರು.

ಗುರುವಾರ ಕಾಲೇಜು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾಲೇಜಿನ ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಿಬ್ಬಂದಿ ಎಲ್ಲರೂ ದೇಸಿ ಉಡುಗೆಯಲ್ಲಿ ಬರಲಿದ್ದಾರೆ’ ಎಂದರು.

‘ಅಲಂಕೃತಗೊಂಡ ಎತ್ತಿನ ಗಾಡಿಗಳಲ್ಲಿ, ಭಾರತೀನಗರದ ಮುಖ್ಯ ರಸ್ತೆಗಳಲ್ಲಿ ತಮಟೆ, ನಗಾರಿ, ವಾದ್ಯ ಸಮೇತ ಪೂಜಾ ಕುಣಿತ, ಕೋಲಾಟ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ. ವಿದ್ಯಾರ್ಥಿಗಳು ಮನೆಗಳಿಂದ ಮಾಡಿ ತಂದ ಚಕ್ಕುಲಿ, ನಿಪ್ಪಟ್ಟು, ರವೆ ಉಂಡೆ, ಕಡ್ಲೆಕಾಯಿ, ಸೌತೆಕಾಯಿ, ಬೇಯಿಸದ ಹಸಿರು ಕಾಳುಗಳು, ತರಕಾರಿ, ಪಾನಕ, ಮಜ್ಜಿಗೆ ಮೊದಲಾದ ತಿಂಡಿ ಪದಾರ್ಥಗಳ ಮಾರಾಟ ಮಾಡಲಿದ್ದಾರೆ. ಭತ್ತ, ರಾಗಿ, ಧಾನ್ಯಗಳ ರಾಶಿ ಪೂಜೆಯೊಡನೆ ಕಾರ್ಯಕ್ರಮ ಉದ್ಘಾಟಿಸಲಾಗುತ್ತದೆ’ ಎಂದರು.

‘ವಿದ್ಯಾರ್ಥಿಗಳಿಂದ ಜಾನಪದ ಹಾಡು, ನೃತ್ಯ, ಗ್ರಾಮೀಣ ಸೊಗಡಿನ ಹಾಸ್ಯ, ಜನಪದರು ಕಟ್ಟಿದ ಗಾದೆ, ಒಗಟು ಹೇಳುವುದು, ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.

ದೇಸಿ ವೇಷ–ಭೂಷಣ ತೊಟ್ಟು ಬಂದ ವಿದ್ಯಾರ್ಥಿಗಳಲ್ಲಿ ಮೂವರಿಗೆ ‘ದೇಸಿ ಚಲುವ’, ಮೂವರು ವಿದ್ಯಾರ್ಥಿನಿಯರಿಗೆ ‘ದೇಸಿ ಚಲುವೆ’ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು ಬಹುಮಾನ ಒಳಗೊಂಡಿರುತ್ತದೆ ಎಂದರು.

ಮಾಜಿ ಸಂಸದ ಡಾ.ಜಿ.ಮಾದೇಗೌಡ ಉದ್ಘಾಟಿಸುವರು. ಕಾರ್ಯನಿರ್ವಾಹಕ ಟ್ರಸ್ಟಿ ಮಧು ಜಿ. ಮಾದೇಗೌಡ ಅವರು ರಾಶಿ ಪೂಜೆ ನೆರವೇರಿಸುವರು. ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮೆರವಣಿಗೆ ಉದ್ಘಾಟಿಸುವರು. ಜಾನಪದ ವಿದ್ವಾಂಸ ವ.ನಂ.ಶಿವರಾಮು, ಪತ್ರಕರ್ತ ಸಿ.ಕೆ.ಮಹೇಂದ್ರ ಅತಿಥಿಗಳಾಗಿ ಪಾಲ್ಗೊಳ್ಳುವರು.

ಕಾರ್ಯಕ್ರಮದ ಸಂಚಾಲಕರಾದ ಪ್ರೊ.ಬಿಎಸ್. ಬೋರೇಗೌಡ, ಪ್ರೊ.ಮ. ರಾಮಕೃಷ್ಣ, ಪ್ರೊ.ಪಿ.ನಾಗೇಂದ್ರ, ಪ್ರೊ.ಎನ್.ಶಿವಣ್ಣ, ಪ್ರೊ.ಸುಬ್ಬೇಗೌಡ, ಪ್ರೊ.ಚಂದ್ರಶೇಖರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry