ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭ

Last Updated 13 ಜನವರಿ 2018, 5:41 IST
ಅಕ್ಷರ ಗಾತ್ರ

ಮಳವಳ್ಳಿ: ‘ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ.‌ ಕುಡಿಯುವ ನೀರು, ಅನ್ನ, ವಸತಿ, ಆರೋಗ್ಯ, ಶಿಕ್ಷಣ, ವಿದ್ಯುತ್‌ಗೆ ಆದ್ಯತೆ ನೀಡಿದ್ದು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಟ್ಟಣದ ಕನಕದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಸರ್ಕಾರದ ಕೊನೆಯ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಚುನಾವಣೆ ಸಮಯದಲ್ಲಿ ನೀಡಿದ್ದ ಎಲ್ಲಾ ಭರವಸೆ ಈಡೇರಿಸಿದ್ದೇವೆ. ಪ್ರಣಾಳಿಕೆಯಲ್ಲಿ ಇಲ್ಲದ ಕಾರ್ಯಕ್ರಮಗಳನ್ನೂ ಜಾರಿಗೊಳಿಸಿದ್ದೇವೆ. ಸಾಲ ಮನ್ನಾ, ಅನಿಲ ಭಾಗ್ಯ, ಶೂಭಾಗ್ಯ, ಪಶುಭಾಗ್ಯ, ಆರೋಗ್ಯ ಭಾಗ್ಯ, ಇಂದಿರಾ ಕ್ಯಾಂಟೀನ್‌ ಮುಂತಾದ ಯೋಜನೆಗಳು ಪ್ರಣಾಳಿಕೆಯಲ್ಲಿ ಇರಲಿಲ್ಲ. ಆದರೆ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಜಾರಿಗೊಳಿಸಲಾಗಿದೆ. ರಾಜ್ಯವನ್ನು ಹಸಿವು, ಬರ, ಗುಡಿಸಲು, ಬಯಲು ಶೌಚ, ಅಪೌಷ್ಟಿಕತೆಯಿಂದ ಮುಕ್ತಗೊಳಿಸುವುದೇ ಸರ್ಕಾರದ ಉದ್ದೇಶವಾಗಿದೆ. ಸಾಮಾಜಿಕ ನ್ಯಾಯ, ಜಾತ್ಯತೀತ ತತ್ವಗಳ ಮೇಲೆ ಸರ್ಕಾರ ನಡೆಯುತ್ತಿದ್ದು ಸರ್ವರಿಗೂ ಅನ್ವಯವಾಗುವ ಯೋಜನೆ ರೂಪಿಸಿದ್ದೇವೆ’ ಎಂದು ಹೇಳಿದರು.

‘ಸಹಕಾರಿ ಸಂಘಗಳಲ್ಲಿ ಇದ್ದ ರೈತರ ₹ 8,156 ಕೋಟಿ ಸಾಲ ಮನ್ನಾ ಮಾಡಿದ್ದೇವೆ. ಮಂಡ್ಯ ಜಿಲ್ಲೆಯಲ್ಲಿ ₹ 428 ಕೋಟಿ ಸಾಲ ಮನ್ನಾವಾಗಿದೆ. ಆದರೆ ಬಿಜೆಪಿ ಮುಖಂಡರು ತಮ್ಮದೇ ಪಕ್ಷದ ಪ್ರಧಾನಿಗಳ ಮನವೊಲಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಿಸಲು ಧೈರ್ಯವಿಲ್ಲ. 2010ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಪಕ್ಷದ ಮುಖಂಡ ಉಗ್ರಪ್ಪ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದ್ದರು. ಆದರೆ ಯಡಿಯೂರಪ್ಪ ಸಾಲ ಮನ್ನಾ ಮಾಡಲು ನಮ್ಮ ಬಳಿ ನೋಟು ಮುದ್ರಿಸುವ ಯಂತ್ರ ಇಲ್ಲ ಎಂದು ಹೇಳಿದ್ದರು. ಆದರೆ ಈಗ ಬಿಜೆಪಿ ಸರ್ಕಾರ ಬಂದ 24 ಗಂಟೆಯೊಳಗೆ ಸಾಲ ಮನ್ನಾ ಮಾಡುವುದಾಗಿ ಸುಳ್ಳು ಹೇಳುತ್ತಿದ್ದಾರೆ’ ಎಂದು ದೂರಿದರು.

ಬಿಜೆಪಿ ಮುಖಂಡರಿಗೆ ಇತಿಹಾಸದ ಅರಿವಿಲ್ಲ: ‘ನಾವು ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಮಾಡಿದೆವು. ಇದನ್ನು ವಿರೋಧಿಸಿದ ಬಿ.ಎಸ್‌.ಯಡಿಯೂರಪ್ಪ ಅವರು ಟಿಪ್ಪು ಒಬ್ಬ ದೇಶದ್ರೋಹಿ ಎಂದರು. ಆದರೆ ಅವರು ಕೆಜೆಪಿ ಕಟ್ಟಿದ್ದಾಗ ಕಿರೀಟ ಧರಿಸಿ, ಖಡ್ಗ ಹಿಡಿದು ಟಿಪ್ಪು ಸುಲ್ತಾನ್‌ ಒಬ್ಬ ದೇಶ ಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ಎಂದು ಭಾಷಣ ಮಾಡಿದ್ದರು. ಪಕ್ಕದಲ್ಲಿ ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ್‌ ಕೂಡ ಇದ್ದರು. ಬಿಜೆಪಿಯವರಿಗೆ ಇತಿಹಾಸದ ಅರಿವಿಲ್ಲ. ಟಿಪ್ಪು ನಾಲ್ಕು ಆಂಗ್ಲೊ–ಮೈಸೂರು ಯುದ್ಧ ಮಾಡಿದ್ದಾನೆ. ಎರಡು ಯುದ್ಧದಲ್ಲಿ ಜಯಗಳಿಸಿದ್ದ ಟಿಪ್ಪು ಮೂರನೇ ಯುದ್ಧದಲ್ಲಿ ಸೋತು ರಾಜ್ಯಕ್ಕಾಗಿ ತನ್ನೆರಡು ಮಕ್ಕಳನ್ನು ಒತ್ತೆ ಇಟ್ಟ ದೇಶಪ್ರೇಮಿ’ ಎಂದು ಹೇಳಿದರು.

‘ಪರಿಶಿಷ್ಟ ಜಾತಿ, ಪಂಗಡಗಳ ಜನರ ಪ್ರಗತಿಗಾಗಿ ಸರ್ಕಾರ ಬಜೆಟ್‌ನಲ್ಲಿ ಪ್ರತ್ಯೇಕ ಹಣ ಮೀಸಲಿಟ್ಟಿದೆ. ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಡುವ ಬಗ್ಗೆ ಕಾನೂನು ಮಾಡಲಾಗಿದೆ. ಇಂತಹ ಕಾನೂನು ರಾಜ್ಯದಲ್ಲಿ ಮಾತ್ರ ಜಾರಿಯಲ್ಲಿದೆ. ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಅಡಿ ಅಪಾರ ಹಣ ಮೀಸಲಿಡಲಾಗಿದೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಆಶಯದಂತೆ ದಲಿತರು, ಹಿಂದುಳಿದ ವರ್ಗಗಳ ಜನರಿಗೆ ಸಾಮಾಜಿಕ ನ್ಯಾಯ ನೀಡಲಾಗುತ್ತಿದೆ’ ಎಂದು ಹೇಳಿದರು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ ‘ಸಾಮಾಜಿಕ ನ್ಯಾಯದ ಪರ ಸೇವೆ ಮಾಡುತ್ತಿರುವ ಪುಣ್ಯಾತ್ಮ ಸಿದ್ದರಾಮಯ್ಯ. ತಾಲ್ಲೂಕಿನಲ್ಲಿ ₹ 2 ಸಾವಿರ ಕೋಟಿ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಕಳೆದ ಬಾರಿ ಮಾಡಲಾಗದ ಕೆಲಸಗಳನ್ನು ಈ ಅವಧಿಯಲ್ಲಿ ಪೂರೈಸಿದ್ದೇನೆ. ಭೀಮಾ ಜಲಾಶಯವೊಂದನ್ನು ಬಿಟ್ಟು ಎಲ್ಲ ಕೆರೆ, ಬ್ಯಾರೇಜ್‌ಗಳನ್ನು ತುಂಬಿಸಲಾಗಿದೆ. ಇನ್ನು 15 ದಿನಗಳಲ್ಲಿ ಭೀಮಾ ಜಲಾಶಯವೂ ತುಂಬಲಿದೆ’ ಎಂದು ಹೇಳಿದರು. ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹಾದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ನಾಗಮಂಗಲ ಶಾಸಕ ಎನ್‌.ಚಲುವರಾಯಸ್ವಾಮಿ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಡಾ.ಬಿ.ಎಸ್‌.ಶಿವಣ್ಣ, ಮುಖಂಡರಾದ ಮಧು ಮಾದೇಗೌಡ, ಎಂ.ಡಿ.ಕೃಷ್ಣಮೂರ್ತಿ, ಆರ್‌.ಎಂ.ವಿಶ್ವಾಸ್‌, ರಿಯಾಜಿನ್‌, ಡಿ.ಸಿ ಎನ್‌.ಮಂಜುಶ್ರೀ ಹಾಜರಿದ್ದರು.

ಮತ ಯಾಚಿಸಿದ ಮುಖ್ಯಮಂತ್ರಿ

ಸರ್ಕಾರಿ ಕಾರ್ಯಕ್ರಮವನ್ನು ಚುನಾವಣಾ ಪ್ರಚಾರ ಸಭೆಯಂತೆ ಭಾಷಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಪರ ಮತಯಾಚನೆ ಮಾಡಿದರು.

‘ಕ್ಷೇತ್ರದಲ್ಲಿ ನರೇಂದ್ರಸ್ವಾಮಿ ಅವರು ₹ 2 ಸಾವಿರ ಕೋಟಿಗೂ ಹೆಚ್ಚು ಕೆಲಸ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲೇ ಇಷ್ಟ ಕೆಲಸ ಮಾಡಲು ಸಾಧ್ಯವಾಗಿಲ್ಲ. ವರುಣಾ, ತಿ.ನರಸೀಪುರ ಸೇರಿ ₹ 2 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಆದರೆ ನರೇಂದ್ರಸ್ವಾಮಿ ಅವರು ಒಂದೇ ಕ್ಷೇತ್ರದಲ್ಲೇ ಇಷ್ಟೊಂದು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಜನಪರ ಕಾಳಜಿ ಇರುವ ಇವರನ್ನು ಮತ್ತೆ ಶಾಸಕರನ್ನಾಗಿ ಮಾಡಬೇಕು’ ಎಂದು ಹೇಳಿದರು.

‘ಮುಂದಿನ ಚುನಾವಣೆಯಲ್ಲಿ ನರೇಂದ್ರಸ್ವಾಮಿ ಅವರನ್ನು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಕೆಲಸ ಮಾಡುವ ಎತ್ತಿಗೆ ಹುಲ್ಲು ಹಾಕಬೇಕು. ಕಳ್ಳ ಎತ್ತಿಗೆ ಹುಲ್ಲು ಹಾಕಬಾರದು. ಕೆಲಸ ಮಾಡುವವರಿಗೆ ಮಾತ್ರ ಕೂಲಿ ಕೊಡಬೇಕು’ ಎಂದು ಮನವಿ ಮಾಡಿದರು.

ನರೇಂದ್ರಸ್ವಾಮಿ ಶಿವಣ್ಣ ಒಂದಾಗಲಿ

‘ಮಳವಳ್ಳಿ ಕ್ಷೇತ್ರದಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಬಿ.ಎಸ್‌.ಶಿವಣ್ಣ ಅವರ ನಡುವೆ ಸ್ವಲ್ಪ ಒಡಕು ಉಂಟಾಗಿದೆ. ಶಿವಣ್ಣ ಅವರು 1983ರಿಂದಲೂ ರಾಜಕಾರಣದಲ್ಲಿ ಇದ್ದಾರೆ. ಇಬ್ಬರೂ ನಾಯಕರು ಭಿನ್ನಮತ ಮರೆತು ಒಂದಾಗಬೇಕು. ಮುಂಬರುವ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT