ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪ್ರೇಮಿ ಬಸವರಾಜ ಪೂಜಾರಿ

Last Updated 13 ಜನವರಿ 2018, 5:50 IST
ಅಕ್ಷರ ಗಾತ್ರ

ಸಿರವಾರ: ಗಿಡ-ಮರಗಳ ಮಾರಣಹೋಮ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ತನ್ನ ದೈನಂದಿನ ಕೆಲಸದ ಒತ್ತಡದ ನಡುವೆಯೂ ಇಲ್ಲೊಬ್ಬರು ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಪಟ್ಟಣದ ಬಸವರಾಜ ಪೂಜಾರಿ ಪರಿಸರ ಸಂರಕ್ಷಣೆ ಕಾರ್ಯದ ಮೂಲಕ ಎಲ್ಲರಿಗೂ ಮಾದರಿಯಾದವರು.

ಪರಿಸರ ಇಂದಿನ ದಿನದಲ್ಲಿ ಬಹಳ ಉಪಯುಕ್ತವಾದ ನೈಸರ್ಗಿಕ ಸಂಪನ್ಮೂಲ. ವಾಯು ಪರಿಸರವನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅಲ್ಪ ಪ್ರಮಾಣದ ಕೊಡುಗೆ ಕೊಟ್ಟರೂ ಸಾಕು ಪರಿಸರ ಮಾನವನ ಉಸಿರಿಗೆ, ಬದುಕಿಗೆ ಅತ್ಯಮೂಲ್ಯ ಕೊಡುಗೆ ನೀಡುತ್ತದೆ.

ಇಂತಹ ಅತ್ಯಮೂಲ್ಯ ಸಂಪತ್ತನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವ ಬಸವರಾಜ ಅವರ ಕಾರ್ಯ ಮೆಚ್ಚುಗೆಯ ಸಂಗತಿ. ಬಿ.ಇಡಿ ಪದವೀಧರನಾಗಿ ಖಾಸಗಿ ಶಾಲೆಯೊಂದರ ಕಚೇರಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ, ಮೊದಲು ಶಾಲೆಯ ಮುಖ್ಯಸ್ಥರ ಸಹಕಾರದೊಂದಿಗೆ ಶಾಲೆಯ ಇಡೀ ಆವರಣವನ್ನು ಉದ್ಯಾನವನ ಮಾಡಿದ್ದಾರೆ. ಪತ್ರಿಕೆ ಹಂಚಿಕೆದಾರನಾಗಿರುವ ಬಸವರಾಜ ಪ್ರತಿದಿನ ದಿನಪತ್ರಿಕೆಯನ್ನು ಹಂಚುತ್ತಾ, ಮನೆ-ಮನೆಗೂ ಪರಿಸರ ಕಾಳಜಿ ಮೂಡಿಸಿದ್ದಾನೆ.

ಸ್ಥಳಾವಕಾಶವಿರುವ ಮನೆಗಳ ಮುಂದೆ ಮಾಲೀಕರ ಅನುಮತಿಯೊಂದಿಗೆ ಗಿಡಗಳನ್ನು ಬೆಳಸಿ ಅವುಗಳ ಸಂರಕ್ಷಣೆಗೂ ಕೈಜೋಡಿಸಿದ್ದಾನೆ. ಇದಕ್ಕೆಲ್ಲ ಯಾರ ಸಹಾಯವು ಪಡಯದೆ ತನ್ನ ಪತ್ರಿಕೆ ಹಂಚಿಕೆ, ಶಾಲೆ, ಕುಟುಂಬದ ಜೀವನದ ನಡುವೆಯು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಆಸೆಯಿಂದ ಪರಿಸರದ ಸಂರಕ್ಷಣೆಯಲ್ಲಿ ತೊಡಗಿದ್ದಾನೆ.

ಸರ್ಕಾರಿ ಹುದ್ದೆಯಾಗಿಲಿ, ಅರೆಕಾಲಿಕ ಹುದ್ದೆಯಾಗಲಿ ಕೆಲಸ ಮುಗಿದರೆ ಸಾಕು ಮನೆ ಸೇರಬೇಕು ಎಂಬ ಈ ದಿನಗಳಲ್ಲಿ ಈತನ ಕಾರ್ಯ ಎಲ್ಲರಿಗೂ ಮಾದರಿ.
ಸಣ್ಣ ಸಹಾಯ ಮಾಡಿದರೂ ದುಡ್ಡಿಗೆ ಕೈಚಾಚುವ ದಿನಮಾನಗಳಲ್ಲಿ ಒಂದು ಪೈಸೆಯನ್ನು ಆಪೇಕ್ಷಿಸದೇ ಕಳೆದ 12 ವರ್ಷಗಳಿಂದ ಸಸಿಗಳನ್ನು ಪೋಷಿಸಿ ನಂತರ ಅವುಗಳಿಗೆ ದಿನನಿತ್ಯ ನೀರನ್ನು ಎರೆದು ಅವುಗಳನ್ನು ಉಳಿಸುವಂತೆ ಗಿಡಗಳ ಮಾಲೀಕರನ್ನು ಜಾಗೃತಗೊಳಿಸಿದ್ದಾನೆ.

ಕೇವಲ ಮನೆಗಳಿಗೆ ಮಾತ್ರ ಈ ಕಾರ್ಯವನ್ನು ಸೀಮಿತಗೊಳಿಸದೇ ದೇವಸ್ಥಾನ, ಸರ್ಕಾರಿ ಶಾಲಾ-ಕಾಲೇಜು, ಪೆಟ್ರೋಲ್ ಬಂಕ್, ಹೋಟೆಲ್‌ಗಳ ಆವರಣ ಸೇರಿ ಸಾರ್ವಜನಿಕ ಸ್ಥಳದಲ್ಲಿ ಯಾರ ಸಹಾಯವನ್ನು ಕೇಳದೆ ಸ್ವತಃ ತನ್ನ ಖರ್ಚಿನಲ್ಲಿ ವಿವಿಧ ರೀತಿಯ ಸಸಿಗಳನ್ನು ಹಾಕಿ ತನ್ನ ಪರಿಸರ ಸಂರಕ್ಷಣೆ ಪಾಠದ ಜೊತೆಗೆ ಸ್ವಚ್ಛತೆಗೂ ಆದ್ಯತೆ ನೀಡುತ್ತಿದ್ದಾರೆ.

ಬಸವರಾಜನ ಪರಿಸರ ಪ್ರೇಮವು ಪಟ್ಟಣಕ್ಕೆ ಸೀಮಿತವಾದೆ 15 ಕಿ.ಮೀ ದೂರದ ಹರವಿ ಕ್ಯಾಂಪಿನ ಪೆಟ್ರೋಲ್ ಬಂಕ್ ಆವರಣ ಮತ್ತು ಸುತ್ತಲಿನ ಹಳ್ಳಿಗಳಿಗೂ ವಿಸ್ತರಿಸಿದೆ. ಬಸವರಾಜನ ಈ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿ ಸುತ್ತ-ಮುತ್ತಲಿನ ಪರಿಸರವನ್ನು ಉಳಿಸಿ ಅವರಿಗೆ ಸೂಕ್ತ ಪ್ರೋತ್ಸಾಹವನ್ನು ನೀಡಬೇಕು ಎಂಬುವುದು ಸ್ಥಳೀಯರ ಆಸೆಯಾಗಿದೆ.

‘ಮನೆ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಖಾಲಿ ಸ್ಥಳವನ್ನು ನೋಡಿ ಸಸಿಗಳನ್ನು ನಡುವ ಕುರಿತು ನಮಗೆ ಮಾಹಿತಿ ನೀಡಿ ಉತ್ತಮ ವಾತಾವರಣ ನಿರ್ಮಾಣ ಮಾಡಲು ಅನುಕೂಲ ಮಾಡಿದ್ದಾನೆ. ಪ್ರತಿ ಭಾನುವಾರವು ನಮಗಿಂತಲೂ ಬಸವರಾಜನೇ ಮರಗಳ ಬಗ್ಗೆ ಕಾಳಜಿ ವಹಿಸುತ್ತಾನೆ’ ಎಂದು ಮನೆಯೊಂದರ ಮಾಲೀಕ ಬಸವರಾಜಗೌಡ ಜಂಬಲದಿನ್ನಿ ತಿಳಿಸಿದರು.

* * 

ಪರಿಸರ ಸಂರಕ್ಷಣೆ ಕುರಿತು ಮಾತಿನಲ್ಲಿ ಹೇಳುವವರೇ ಹೆಚ್ಚು. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಬಯಸುವ ಮಂದಿ ವಿರಳ. ಪರಿಸರ ಸಂರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿ. ಈ ಕೆಲಸ ನೆಮ್ಮದಿ, ಸಂತೋಷ ನೀಡಿದೆ.
–ಬಸವರಾಜ ಪೂಜಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT