ಆನೇಕಲ್‌ ಅಭಿವೃದ್ಧಿಗೆ ₹652 ಕೋಟಿ

7

ಆನೇಕಲ್‌ ಅಭಿವೃದ್ಧಿಗೆ ₹652 ಕೋಟಿ

Published:
Updated:

ಆನೇಕಲ್‌: ತಾಲ್ಲೂಕಿನ ಎಲ್ಲಾ ಮುಖ್ಯ ರಸ್ತೆಗಳನ್ನು ದ್ವಿಪಥದ ರಸ್ತೆಗಳನ್ನಾಗಿ ಮಾಡಿ ಮೇಲ್ದರ್ಜೆಗೇರಿಸಲಾಗಿದೆ. ಸರ್ಕಾರ ಬಜೆಟ್‌ನಲ್ಲಿ ಆನೇಕಲ್‌ ತಾಲ್ಲೂಕಿಗೆ ₹652ಕೋಟಿ ಅನುದಾನ ಮಂಜೂರು ಮಾಡಿದೆ. ನಿರಂತರ ವಿದ್ಯುತ್‌ ಜ್ಯೋತಿ ಕಾರ್ಯಕ್ರಮಕ್ಕಾಗಿ ತಾಲ್ಲೂಕಿಗೆ ₹241ಕೋಟಿ ಮಂಜೂರು ಮಾಡುವ ಮೂಲಕ 24ಗಂಟೆ ವಿದ್ಯುತ್‌ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ಅವರು ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ‘ಶಾಸಕರ ನಡಿಗೆ ಹಳ್ಳಿಗಳ ಕಡೆಗೆ’ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು. ಆನೇಕಲ್ ತಾಲ್ಲೂಕಿನ ವ್ಯಾಪ್ತಿಯಲ್ಲಿ 57ಕಿ.ಮೀ. ದ್ವಿಪಥ ರಸ್ತೆ ನಿರ್ಮಿಸಲಾಗಿದೆ. ತಾಲ್ಲೂಕಿನ ಶೇ75ರಷ್ಟು ರಸ್ತೆಗಳು ಡಾಂಬರೀಕರಣವಾಗಿದ್ದು ಈ ಮೂಲಕ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.

ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ ಇಲಾಖೆಗಳು ಒಗ್ಗೂಡಿ ಕಾರ್ಯಕ್ರಮ ರೂಪಿಸುವ ಮೂಲಕ ರೈತರಿಗೆ ಒಂದೆಡೆ ಸೌಲಭ್ಯ ಮಾಹಿತಿ ದೊರೆಯುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ನಾಲ್ಕು ಇಲಾಖೆಗಳು ಕ್ರಿಯಾ ಯೋಜನೆ ತಯಾರಿಸಿ ಸಮನ್ವಯ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

94ಸಿ ಅಡಿಯಲ್ಲಿ ಅರ್ಹ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಸರ್ಕಾರಿ ಜಾಗಗಳಲ್ಲಿ ಹಲವಾರು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ಯಾವುದೇ ಆಧಾರವಿಲ್ಲದೆ ಇದ್ದ ಕುಟುಂಬಗಳಿಗೆ ಸರ್ಕಾರ ಹಕ್ಕುಪತ್ರ ನೀಡುವ ಮೂಲಕ ಆಧಾರ ಕಲ್ಪಿಸಿದೆ ಎಂದರು.

ಬಗರ್‌ಹುಕುಂ ಸಾಗುವಳಿ ಮಂಜೂರಾತಿ ಸಮಿತಿ ಸದಸ್ಯ ವಿ.ಮುನಿವೀರಪ್ಪ ಮಾತನಾಡಿ, ಹಳ್ಳಿಗಳಲ್ಲಿನ ಸಮಸ್ಯೆ ಪರಿಹರಿಸಲು ಹಾಗೂ ಗ್ರಾಮಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಗಳಿಗಾಗಿ ಪ್ರತಿ ಗ್ರಾಮಕ್ಕೆ ಶಾಸಕರು ಭೇಟಿ ನೀಡುತ್ತಿರುವುದರಿಂದ ಹಲವಾರು ಸಮಸ್ಯೆಗಳು ಪರಿಹಾರವಾಗುತ್ತಿವೆ. ಅಲ್ಲದೆ, ಅಧಿಕಾರಿಗಳು ಒಂದೆಡೆ ಲಭ್ಯವಿರುತ್ತಾರೆ. ಜನರ ಅಹವಾಲು ತಿಳಿಸಲು ಉತ್ತಮ ವೇದಿಕೆಯಾಗಿದೆ ಎಂದರು.

ಬಳ್ಳೂರು ಗ್ರಾಮ ರಾಜ್ಯದ ಗಡಿ ಗ್ರಾಮವಾಗಿದೆ. ನೆರೆಯ ತಮಿಳುನಾಡಿನ ಕೊತ್ತಗಂಡನಹಳ್ಳಿ, ಬೊಮ್ಮಂಡಹಳ್ಳಿ ಗ್ರಾಮಗಳಲ್ಲಿ ತಮಿಳುನಾಡು ಸರ್ಕಾರ ಕಾವೇರಿ ನೀರು ಪೂರೈಕೆ ಮಾಡುತ್ತಿದೆ. ಹಾಗಾಗಿ ಬಳ್ಳೂರು ಗ್ರಾಮಕ್ಕೆ ಕಾವೇರಿ ನೀರು ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮುನಿರತ್ನಮ್ಮ ನಾರಾಯಣ್, ಸದಸ್ಯ ಎನ್.ಮಂಜುನಾಥ್‌ರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷ ಸತೀಶ್‌ರೆಡ್ಡಿ, ಸದಸ್ಯರಾದ ತ್ರಿಪುರಸುಂದರಿ, ಶ್ವೇತಾವಸಂತ್, ಮಧು, ಕಲಾ, ಶ್ರೀನಿವಾಸ್, ಮೀನಾ ಲಕ್ಷ್ಮೀನಾರಾಯಣ್, ಸಿ.ನಾಗರಾಜು, ಸೋಮಯ್ಯ, ಮುಖಂಡರಾದ ಬಳ್ಳೂರು ನಾರಾಯಣಸ್ವಾಮಿ, ನಾರಾಯಣರೆಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry