ಸಾಧನೆ ಮೈಲಿಗಲ್ಲು ನಿರ್ಮಿಸಲು ಕಿವಿಮಾತು

7

ಸಾಧನೆ ಮೈಲಿಗಲ್ಲು ನಿರ್ಮಿಸಲು ಕಿವಿಮಾತು

Published:
Updated:
ಸಾಧನೆ ಮೈಲಿಗಲ್ಲು ನಿರ್ಮಿಸಲು ಕಿವಿಮಾತು

ಕನಕಪುರ: ‘ಹಣದ ಹಿಂದೆ ಯಾರು ಹೋಗಬೇಡಿ, ಉನ್ನತ ವಿದ್ಯಾಭ್ಯಾಸ ಮತ್ತು ಉತ್ತಮ ಸಂಸ್ಕೃತಿ ಮೈಗೂಡಿಸಿಕೊಳ್ಳಿ, ಎಲ್ಲವೂ ನಿಮ್ಮ ಹಿಂದೆ ಬರುತ್ತದೆ’ ಎಂದು ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ನಾರಾಯಣಮೂರ್ತಿ ಕಿವಿಮಾತು ಹೇಳಿದರು.

ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜಿಲ್ಲಾಮಟ್ಟದ ಕನಕೋತ್ಸವ –2018ರ ಮೂರನೇ ದಿನ ಕಾರ್ಯಕ್ರಮವಾದ ಪ್ರತಿಭಾ ಪುರಸ್ಕಾರದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.

ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ವ್ಯಕ್ತಿತ್ವ ಇಲ್ಲದಿದ್ದರೆ ಯಾರೂ ಅವರನ್ನು ಗುರುತಿಸುವುದಿಲ್ಲ. ಸಮಾಜದಲ್ಲಿ ಗುರುತಿಸುವಂತ ಕೆಲಸ ಮಾಡಬೇಕು. ಜೀನದಲ್ಲಿ ಸಾಧನೆಯ ಮೈಲಿಗಲ್ಲು ನಿರ್ಮಿಸಬೇಕೆಂದು ಸಲಹೆ ನೀಡಿದರು.

ಉತ್ತಮ ಸಮಾಜ ನಿರ್ಮಾಣವಾಗಲು ಉತ್ತಮ ಪ್ರಜೆಗಳು ನಿರ್ಮಾಣವಾಗಬೇಕು. ದೇಶ ಅಭಿವೃದ್ಧಿಯಾಗಬೇಕಾದರೆ ಮೊದಲು ಎಲ್ಲರಿಗೂ ಶಿಕ್ಷಣ ಸಿಗಬೇಕು. ಮೊದಲು ಶಿಕ್ಷಣಕ್ಕೆ ಒತ್ತು ಕೊಡಬೇಕು. ಎಲ್ಲದಕ್ಕಿಂತ ಶಿಕ್ಷಣವೇ ಪ್ರಮುಖವಾದುದು ಎಂದು ಹೇಳುವ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ, ಸಮಾಜ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದ್ದು ಪ್ರತಿಯೊಂದು ಕ್ಷೇತ್ರದಲ್ಲೂ ಹೆಚ್ಚಿನ ಪೈಪೋಟಿ ಇದೆ. ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರದಲ್ಲೂ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದ‌ರು.

ಬೆಂಗಳೂರಿನಲ್ಲಿ ಅತ್ಯಂತ ಪ್ರತಿಭಾವಂತರು ಬುದ್ಧಿವಂತರಿದ್ದಾರೆ. ಮಾಹಿತಿ ತಂತ್ರಜ್ಞಾನದಲ್ಲಿ ದೇಶ ಪ್ರಪಂಚದಲ್ಲೇ ಮುಂಚೂಣಿಯಲ್ಲಿದೆ. ಸುಧಾ ನಾರಾಯಣಮೂರ್ತಿ ದಂಪತಿ ಅತ್ಯಂತ ದೊಡ್ಡ ಸ್ಥಾನದಲ್ಲಿದ್ದರೂ ಸರಳ ಜೀವನ ನಡೆಸಿ ಮಾದರಿಯಾಗಿದ್ದಾರೆ. ಅವರ ಜೀವನ ವಿಧಾನ ಅನುಸರಿಸಲು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನಕೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಮೊದಲಿಗೆ 200 ವಿದ್ಯಾರ್ಥಿಗಳಿಗೆ ಮಾತ್ರ ಪ್ರತಿಭಾ ಪುರಸ್ಕಾರ ನೀಡಲಾಗಿತ್ತು. ಈ ಸಲ ಎಸ್ಸೆಸ್ಸೆಲ್ಸಿ ಮತ್ತು ಪಿ.ಯು 3 ಸಾವಿರ ವಿದ್ಯಾರ್ಥಿ–ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಗುತ್ತಿದೆ. ಈ ಸಂಖ್ಯೆ ಇದೇ ರೀತಿ ದೊಡ್ಡದಾಗಬೇಕು. ಪ್ರತಿಯೊಬ್ಬರು ಪ್ರತಿಭಾನ್ವಿತರಾಗಲು ಶ್ರಮಸಿಸಬೇಕು ಸಲಹೆ ನೀಡಿದರು.

ಪುರಸ್ಕಾರ: ತಾಲ್ಲೂಕಿನಲ್ಲಿ 2016–17 ಸಾಲಿನ ಎಸ್ಸೆಎಸ್ಸೆಲ್ಸಿ ಮತ್ತು ಪಿ.ಯು ಪರೀಕ್ಷೆಯಲ್ಲಿ ಶೇಕಡ 60ಕ್ಕಿಂತ ಹೆಚ್ಚು ಅಂಕಗಳಿಸಿದ 3,000 ವಿದ್ಯಾರ್ಥಿ–ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು.

ಕೇಶ ವಿನ್ಯಾಸ: ಮಹಿಳೆಯರಿಗೆ ವಿಶೇಷವಾಗಿ ಕೇಶ ವಿನ್ಯಾಸದ ಸ್ಪರ್ಧೆ ಏರ್ಪಡಿಸಲಾಗಿತ್ತು. 10 ವರ್ಷದ ಮೇಲ್ಪಟ್ಟವರಿಗೆ ಸ್ಪರ್ಧೆಗೆ ಅವಕಾಶ ನೀಡಲಾಗಿತ್ತು. ತಾಲ್ಲೂಕಿನಿಂದ ಒಟ್ಟು 3,000 ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಕೇಶ ವಿನ್ಯಾಸ ಪ್ರದರ್ಶಿಸಿದರು.

ಸೋಪಾನೆ ಪದ: ಗ್ರಾಮೀಣ ಭಾಗದಲ್ಲಿನ ನಾಡಿನ ಸಾಂಪ್ರದಾಯಿಕ ಸೋಬಾನೆ ಪದ ಹಾಡುವ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ತಾಲ್ಲೂಕಿನಿಂದ 350 ತಂಡಗಳು ಪಾಲ್ಗೊಂಡಿದ್ದವು. ಚನ್ನಪಟ್ಟಣ ಕೃಷ್ಣೇಗೌಡ, ವೆಂಕಟೇಶ್‌, ಮಾಗಡಿ ಜೆ.ವಿ.ರವೀಶ್‌, ಬಿ.ಆರ್‌.ಕೃಷ್ಣಪ್ಪ, ಎಂ.ಗೌರಮ್ಮ ತೀರ್ಪುಗಾರರಾಗಿ ಸ್ಪರ್ಧೆ ನಡೆಸಿಕೊಟ್ಟರು.

ಕುಸ್ತಿ: ರಾಜ್ಯ ಮಟ್ಟದ ಮಹಿಳಾ ಮತ್ತು ಪುರುಷ ವಿಭಾಗದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಿತು. ರಾಜ್ಯದಿಂದ 12 ಮಹಿಳಾ ಜೋಡಿಗಳು ಬಂದಿದ್ದವು.  ಮಹಿಳಾ ಕುಸ್ತಿಪಟುಗಳು ಅತ್ಯಂತ ರೋಚಕ ಸ್ಪರ್ಧೆ ನಡೆಸಿ ಗೆಲುವಿಗಾಗಿ ಸೆಣಸಾಟ ನಡೆಸಿದರು. 48 ಜೋಡಿ ಪುರುಷ ಕುಸ್ತಿಪಟುಗಳು ರೋಚಕ ಸೆಣಸಾಟ ನಡೆಸಿದವು.

ರಂಗಗೀತೆ: ಹವ್ಯಾಸಿ ಕಲಾವಿದರಿಗಾಗಿ ನಡೆದ ಜಿಲ್ಲಾ ಮಟ್ಟದ ರಂಗ ಗೀತೆ ಸ್ಪರ್ಧೆಗೆ ಕುಣಿಗಲ್‌ ಸೇರಿದಂತೆ ರಾಮನಗರ ಜಿಲ್ಲೆಯಿಂದ 25 ಮಂದಿ ಬಂದಿದ್ದು ಅವರಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಸಲಾಯಿತು.

ಜನಸ್ತೋಮ: ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡಂತೆ ಸ್ಪರ್ಧೆ ನಡೆಯುತ್ತಿರುವುದರಿಂದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಬರುತ್ತಿರುವ ಎಲ್ಲಾ ಜನರಿಗೂ ಶಿಕ್ಷಕರ ಭವನದ ಹಿಂಭಾಗದಲ್ಲಿ ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ.

ಜನರಿಗೆ ಮನರಂಜನೆ

ಎರಡು ದಿನಗಳಿಂದ ನಡೆಯುತ್ತಿರುವ ಜಿಲ್ಲಾ ಮಟ್ಟದ ಕನಕೋತ್ಸವದಲ್ಲಿ ಸಂಗೀತ, ನೃತ್ಯ, ಅಭಿನಯ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯುತ್ತಿರುವುದರಿಂದ ಜನರಿಗೆ ಉತ್ತಮ ಮನರಂಜನೆ ಸಿಗುತ್ತಿದೆ. ತಾಲ್ಲೂಕಿನ ಜನರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಕಳೆ ತಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry