ಗಡಿ ಗ್ರಾಮದ ರಸ್ತೆ ಅಭಿವೃದ್ಧಿ ಪೂರ್ಣ: ಶಾಸಕ ಮಧು ಬಂಗಾರಪ್ಪ

7

ಗಡಿ ಗ್ರಾಮದ ರಸ್ತೆ ಅಭಿವೃದ್ಧಿ ಪೂರ್ಣ: ಶಾಸಕ ಮಧು ಬಂಗಾರಪ್ಪ

Published:
Updated:
ಗಡಿ ಗ್ರಾಮದ ರಸ್ತೆ ಅಭಿವೃದ್ಧಿ ಪೂರ್ಣ: ಶಾಸಕ ಮಧು ಬಂಗಾರಪ್ಪ

ಸೊರಬ: ಬಹು ವರ್ಷಗಳಿಂದ ರಸ್ತೆ ಅಭಿವೃದ್ಧಿಯಾಗದ ತಾಲ್ಲೂಕಿನ ಗಡಿ ಗ್ರಾಮಗಳಾದ ಸಾಂಬಾರ, ಚಿಟ್ಟೂರು ಗ್ರಾಮದ ಸಂಪರ್ಕ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ ಎಂದು ಶಾಸಕ ಮಧು ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ಚಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಂಡಿಹಳ್ಳಿ ಗ್ರಾಮದ ನಮ್ಮ ಗ್ರಾಮ ನಮ್ಮ ರಸ್ತೆ ಡಾಂಬರೀಕರಣ ಹಾಗೂ ಶ್ಯಾಡಲಕೊಪ್ಪ ಗ್ರಾಮದಲ್ಲಿ ಶುಕ್ರವಾರ ನೂತನ ಅಂಗನವಾಡಿ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಚಿಟ್ಟೂರು, ಮಳಲಿಕೊಪ್ಪ ಹಾಗೂ ಉಡುಗಣಿ ಮಾರ್ಗವಾಗಿ ಶಿಕಾರಿಪುರ ಸಂಪರ್ಕ ರಸ್ತೆಯ 4 ಕಿ.ಮೀ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಗಡಿಭಾಗಗಳ ಗ್ರಾಮದ ರಸ್ತೆ ಅಭಿವೃದ್ಧಿ ಸೇರಿದಂತೆ ಕ್ಷೇತ್ರದಲ್ಲಿನ 500 ಗ್ರಾಮಗಳಿಗೂ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕಾತವಳ್ಳಿ, ಜೇಡಗೇರಿ ಮತ್ತು ಶ್ಯಾಡಲಕೊಪ್ಪ ಗ್ರಾಮದ ರಸ್ತೆ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಜನಸಂಖ್ಯೆ ಆಧಾರದ ಮೇಲೆ ಯೋಜನೆ ಮಂಜೂರಾತಿ ಮಾಡುವುದರಿಂದ ಸಣ್ಣ ಗ್ರಾಮವಾಗಿರುವ ಶ್ಯಾಡಲಕೊಪ್ಪಕ್ಕೆ ಶೀಘ್ರದಲ್ಲಿ ವಿಶೇಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ನಾಲ್ಕೂವರೆ ವರ್ಷದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಒಳಪಡುವ ರಸ್ತೆಗಳನ್ನು ಸುಮಾರು ₹ 200 ಕೋಟಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸಲಾಗುತ್ತಿದ್ದು, ಉಳಿದಿರುವ ಸಣ್ಣಪುಟ್ಟ ರಸ್ತೆಗಳಿಗೆ ಹೆಚ್ಚುವರಿ ಅನುದಾನ ತಂದು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು. ಈ ನಿಟ್ಟಿನಲ್ಲಿ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಕೋರಿದರು.

ಗ್ರಾಮ ಪಂಚಾಯ್ತಿ ಸದಸ್ಯೆ ಭಾಗ್ಯಶ್ರೀ, ತಾಲ್ಲೂಕು ಕೇಂದ್ರದಿಂದ ದೂರವಿರುವ ಶ್ಯಾಡಲಕೊಪ್ಪ ಗ್ರಾಮ ಮೂಲಭೂತ ಸವಲತ್ತುಗಳಿಂದ ವಂಚಿತವಾಗಿದೆ. ಶಾಲಾ ಮಕ್ಕಳು ಮಳೆಗಾಲದಲ್ಲಿ ಪಕ್ಕದ ಹೆಸರಿ ಶಾಲೆಗೆ ಮೊಣಕಾಲುದ್ದ ಕೆಸರಿನಲ್ಲಿ ಹೋಗಬೇಕಾದ ಸ್ಥಿತಿ ಎದುರಾಗಿದೆ. ಅನೇಕ ಮಕ್ಕಳು ಅರ್ಧಕ್ಕೆ ಶಾಲೆ ಬಿಟ್ಟ ಉದಾಹರಣೆಗಳಿವೆ. ಗ್ರಾಮಕ್ಕೆ ಸಂಪರ್ಕ ರಸ್ತೆ ಇಲ್ಲದಿರುವುದರಿಂದ ಅಂಗನವಾಡಿಗೆ ಬರುವ ಆಹಾರವನ್ನು ಹೆಸರಿ ಗ್ರಾಮಕ್ಕೆ ಹೋಗಿ ತರಬೇಕಾದ ಸ್ಥಿತಿ ಇದ್ದು, ಗ್ರಾಮದ ಪರವಾಗಿ ಯಾವುದೇ ಬೇಡಿಕೆ ಇಡದೇ ರಸ್ತೆ ಮಾತ್ರ ಮಾಡಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಚಿಟ್ಟೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಲ್ಲಮ್ಮ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಮಹೇಶ್, ಮಂಜಪ್ಪ, ರಾಜಣ್ಣ, ಭಾರತಿ,ಗೌರಮ್ಮ, ವಸಂತಕುಮಾರಿ, ವಿರೇಶಗೌಡ್ರು, ಜಿಲ್ಲಾ ಪಂಚಾಯ್ತಿ ಸದಸ್ಯೆ ತಾರಾ ಶಿವಾನಂದಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ನಾಗರಾಜ್ ಚಿಕ್ಕಸವಿ, ನಾಗರಾಜ್ ಚಂದ್ರಗುತ್ತಿ, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಗಿರಿಯಪ್ಪ, ಸಿಡಿಪಿಒ ದಿವಾಕರ್, ಪಿಡಿಒ ಶ್ರೀರಾಮ, ಎಚ್.ಗಣಪತಿ, ಎಂ.ಡಿ. ಶೇಖರ್, ಪ್ರವೀಣ್, ಪ್ರಭಾಕರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry