‘ಸ್ವಂತ ಖರ್ಚಿನಲ್ಲಿ 101 ಜೋಡಿ ವಿವಾಹ ಸಮಾರಂಭ’

7

‘ಸ್ವಂತ ಖರ್ಚಿನಲ್ಲಿ 101 ಜೋಡಿ ವಿವಾಹ ಸಮಾರಂಭ’

Published:
Updated:

ಸಿಂದಗಿ: ‘ದುಂದುವೆಚ್ಚದ ವಿವಾಹಕ್ಕೆ ಕಡಿವಾಣ ಹಾಕಿ ಸರಳ ವಿವಾಹ ಮಾಡಿಕೊಂಡಿರುವುದಕ್ಕೆ ನಾನೇ ಸಾಕ್ಷಿ. ಹೀಗಾಗಿ ಸರಳ ವಿವಾಹಗಳು ಹೆಚ್ಚೆಚ್ಚು ನಡೆಯಲಿ ಎಂಬ ಸಂದೇಶ ಪ್ರಸಾರ ಮಾಡುವ ಉದ್ದೇಶದಿಂದ ಸ್ವಂತ ಖರ್ಚಿನಲ್ಲಿ 101 ಜೋಡಿಗಳ ಉಚಿತ ಸಾಮೂಹಿಕ ವಿವಾಹವನ್ನುಪಟ್ಟಣದಲ್ಲಿ ಫೆಬ್ರುವರಿಯಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಮಂಜುಳಾ ಗೋವರ್ಧನಮೂರ್ತಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರಳ ವಿವಾಹಗಳು ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂಬ ಕಾರಣಕ್ಕಾಗಿ ನಾನು ಈಚೆಗಷ್ಟೇ ಸರಳ ವಿವಾಹ ಮಾಡಿಕೊಂಡಿರುವೆ’ ಎಂದರು. ‘ಶೌಚಾಲಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಳ್ಳಿಗಳಲ್ಲಿ ಸ್ವಂತ ಖರ್ಚಿನಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು, ಈ ಉದ್ದೇಶಕ್ಕಾಗಿ ಸುಂಗಠಾಣ, ಬೋರಗಿ ಗ್ರಾಮಗಳನ್ನು ಆಯ್ಕೆ ಮಾಡಿದ್ದು. ಇತರ ಹಳ್ಳಿಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು’ ಎಂದರು.

‘ಕಳೆದ ಎರಡು ವರ್ಷಗಳಿಂದ ನಾನು ಸಿಂದಗಿ ಮತಕ್ಷೇತ್ರದ ಸಂಪರ್ಕ ಹೊಂದಿ ಇಲ್ಲಿ ಸಾಮಾಜಿಕ ಸೇವಾ ಕಾರ್ಯ ಮಾಡುತ್ತ ಬಂದಿರುವೆ. ಸಮಾಜ ಸೇವೆ ಮಾಡಬೇಕಾದರೆ ಅಧಿಕಾರ ಕೂಡ ಅಷ್ಟೇ ಮುಖ್ಯ ಹೀಗಾಗಿ ಸಮಾಜಸೇವೆಗಾಗಿ ರಾಜಕಾರಣ ಪ್ರವೇಶ ಅನಿವಾರ್ಯವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿ ನಾನು ಸಿಂದಗಿ ಮತಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿರುವೆ. ಪಕ್ಷದ ಹೈಕಮಾಂಡ್‌ಗೆ ನನ್ನ ಹೆಸರು ಸಹ ರವಾನೆಯಾಗಿದೆ’ ಎಂದರು.

‘ನಾನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಅನುಭವ ಹೊಂದಿರುವೆ’ ಎಂದು ತಿಳಿಸಿದ ಅವರು, ‘ಸಿಂದಗಿ ಮತಕ್ಷೇತ್ರದ ಬಳಗಾನೂರ, ಗೋಲಗೇರಿ, ಗುಬ್ಬೇವಾಡ, ಕೊಕಟನೂರ, ಬಂದಾಳ, ಮೋರಟಗಿ, ತಾಂಬಾ, ರಾಂಪೂರ ಪಿ.ಎ, ಕೋರಳ್ಳಿ, ಯಂಕಂಚಿ, ಹೊನ್ನಳ್ಳಿ, ಬೆಕಿನಾಳ ಈ 12 ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳಪಡುವಂತೆ ಬಸವ ವಸತಿ ಯೋಜನೆ ಅಡಿ 550 ಮನೆಗಳನ್ನು ಮಂಜೂರು ಮಾಡಿಸಿದ್ದೇನೆ’ ಎಂದರು.

‘ಕುರಿ ಮಂಡಳಿ ಸದಸ್ಯರಿಗೆ 125 ವಿಶೇಷ ಮನೆಗಳು, 25 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ₹ 25 ಲಕ್ಷ ಮೊತ್ತದ ಸ್ಮಾರ್ಟ್ ಬೋರ್ಡ್, ಲ್ಯಾಪ್ ಟ್ಯಾಪ್ ಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರುಗೊಂಡಿವೆ. ಬೆನಕೊಟಗಿ, ಗಣಿಹಾರ, ಕರವಿನಾಳ, ರಾಂಪೂರ, ನಾಗಾಂವಿ ಲಂಬಾಣಿ ತಾಂಡಾಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅಲ್ಪಸಂಖ್ಯಾತರಿಗಾಗಿ ಐದು ಹಳ್ಳಿಗಳಲ್ಲಿ ಶಾದಿ ಮಹಲ್ ನಿರ್ಮಾಣ ಕಾರ್ಯ ಪ್ರಾರಂಭಗೊಳ್ಳಲಿದೆ’ ಎಂದು ಅಭಿವೃದ್ಧಿ ಕಾಮಗಾರಿ ವಿವರಿಸಿದರು. ಮಲ್ಲೂ ಸಾವಳಸಂಗ, ರಂಗನ ಗೌಡ, ಇರ್ಫಾನ್ ಬಾಗವಾನ, ಪ್ರವೀಣ ಸುಲ್ಪಿ, ಮೈಬೂಬ ಸಿಂದಗಿಕರ, ಆಳಂದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry