ಅಥಣಿಯ ಹೋರಿಗೆ ₹ 4 ಲಕ್ಷ...!

7

ಅಥಣಿಯ ಹೋರಿಗೆ ₹ 4 ಲಕ್ಷ...!

Published:
Updated:
ಅಥಣಿಯ ಹೋರಿಗೆ ₹ 4 ಲಕ್ಷ...!

ವಿಜಯಪುರ: ಎತ್ತ ನೋಡಿದರೂ ಜಾನುವಾರು ಸಮೂಹ. ಒಂದಕ್ಕಿಂತ ಒಂದು ಚೆಂದ. ಸದೃಢ ಮೈಕಟ್ಟು, ದಷ್ಟಪುಷ್ಟ ದೇಹ ಹೊಂದಿದ ರಾಸುಗಳೇ ಕಣ್ಣಿಗೆ ಗೋಚರಿಸಿದವು. ಹಾಲುಹಲ್ಲಿನ ಹೋರಿಗಳು ಇದ್ದವು.

ಕಿಲಾರಿ ತಳಿಯ ದೇಸಿ ರಾಸುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದವು. ವಿಜಯಪುರ ಎಪಿಎಂಸಿಯ 110 ಎಕರೆ ಪ್ರದೇಶ ಸಾಲದೆ, ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಜಾಗದಲ್ಲೂ ಮೇಳೈಸಿದ್ದವು. ಸಹಸ್ರ, ಸಹಸ್ರ ಸಂಖ್ಯೆಯ ದನಗಳು ವಿಶ್ವವಿದ್ಯಾಲಯ ಆವರಣದೊಳಗೆ ಆಸರೆ ಪಡೆದಿವೆ.

ಭಾರಿ ಮುಖಬೆಲೆಯ ನೋಟು ರದ್ದತಿಯಿಂದ ಹಿಂದಿನ ವರ್ಷದ ಜಾತ್ರಾ ವಹಿವಾಟು ಸಂಪೂರ್ಣ ಕುಸಿದಿತ್ತು. ಜಾತ್ರೆಯುದ್ದಕ್ಕೂ ನೋಟು ರದ್ದತಿಯ ಛಾಯೆ ದಟ್ಟೈಸಿತ್ತು. ಆದರೆ ಈ ಬಾರಿ ಜಾತ್ರೆ ರಂಗೇರಿತ್ತು. ದೃಷ್ಟಿ ಹಾಯಿಸಿದೆಡೆಯೆಲ್ಲ ಮಾರಾಟಗಾರರು–ಖರೀದಿದಾರರ ಕೈಯಲ್ಲಿ  ₹ 2000 ಮೌಲ್ಯದ ನೋಟುಗಳೇ ರಾರಾಜಿಸಿ ದವು.

ಕಾರಿಗಿಂತ ದುಬಾರಿ ಈ ಆಕಳು..!

ನೆರೆಯ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಗಿರಿಮಲ್ಲಪ್ಪ ಚನ್ನಬಸಪ್ಪ ಹುಕ್ಕೇರಿ ಜಾನುವಾರು ಜಾತ್ರೆಗೆ ‘ತಾಯಿ–ಮಗಳು’ ಆಕಳನ್ನು ಮಾರಾಟಕ್ಕಾಗಿ ತಂದಿದ್ದಾರೆ. ‘ಐದು ವರ್ಷ ಪ್ರಾಯದ ನಿತ್ಯ ಎರಡೂ ಸಮಯ 5 ಲೀ. ಹಾಲು ನೀಡುವ ಕಿಲಾರಿ ತಳಿಯ ಆಕಳಿನ ಬೆಲೆಯನ್ನು ₹ 5 ಲಕ್ಷ ಹೇಳಿದರೆ, 15 ತಿಂಗಳ ಕರುವಿನ ಬೆಲೆ ₹ 3 ಲಕ್ಷ ನಿಗದಿ ಪಡಿಸಿದ್ದಾರೆ.

ಸುಂದರ ಆಕಳನ್ನು ಕೊಲ್ಹಾಪುರದ ಕನ್ಹೇರಿ ಮಠದವರು ₹ 3 ಲಕ್ಷಕ್ಕೆ ಕೇಳಿದ್ದು ಮಾರಾಟ ಮಾಡಿಲ್ಲ. ಮನೆಯಲ್ಲಿ ಇದೇ ತಳಿಯ ಒಟ್ಟು 10 ಆಕಳು ಇವೆ. ನಮ್ಮ ಆಕಳನ್ನು ನೋಡಿದ ಪಶು ಸಂಗೋಪನಾ ಇಲಾಖೆಯವರು ಈಚೆಗೆ ಹಾಸನ ಜಿಲ್ಲೆಯಲ್ಲಿ ನಡೆದ ಕೃಷಿ ಮೇಳಕ್ಕೆ ಪ್ರದರ್ಶನಕ್ಕಾಗಿ ಕರೆದೊಯ್ದಿದ್ದರು. ಸಚಿವ ಎ.ಮಂಜು ನಮ್ಮ ಆಕಳು ನೋಡಿ ತುಂಬಾ ಖುಷಿಪಟ್ಟು, ನನ್ನನ್ನು ಸನ್ಮಾನಿಸಿದರು’ ಎಂದು ಗಿರಿಮಲ್ಲಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಕಳು ಈಗಾಗಲೇ ಎರಡು ಕರು ಹಾಕಿದೆ. ನಾವು ₹ 5 ಲಕ್ಷ ಹೇಳಿದ್ದೇವೆ. ಖರೀದಿದಾರರು ₹ 4 ಲಕ್ಷ ಆಸುಪಾಸು ಕೇಳಿದರೆ ಮಾರುತ್ತೇವೆ. ರಾತ್ರಿ ಚಳಿಯಾಗಬಾರದು, ಹುಳ ಕಚ್ಚಬಾರದು ಎಂದು ಗೋಣಿಚೀಲದ ಜೂಲಾ ಹೊದಿಸಿದ್ದೇವೆ. ನಿತ್ಯವೂ ಆಕಳ ಆರೈಕೆ ಮಾಡುವುದರಲ್ಲೇ ನಮಗೆ ಸಂತಸವಿದೆ’ ಎಂದು ಗಿರಿಮಲ್ಲಪ್ಪ ಪುತ್ರ ಭಾವುರಾಜ ಹೇಳಿದರು.

ಬೀಜದೋರಿಗೆ ಬೇಡಿಕೆ

ಮೂರುವರೆ ವರ್ಷ ಪ್ರಾಯದ ಬೀಜದೋರಿ, ಎರಡೂವರೆ ವರ್ಷ ಪ್ರಾಯದ ಎರಡು ಆಕಳನ್ನು ಮಾರಾಟಕ್ಕಾಗಿ ಅಥಣಿಯ ಸಂಜು ವಿಷ್ಣು ಶಿಂಧೆ ಜಾನುವಾರು ಜಾತ್ರೆಗೆ ತಂದಿದ್ದು, ಇಲ್ಲಿಯೇ ಬೀಡು ಬಿಟ್ಟಿದ್ದಾರೆ.

‘ಬೀಜದೋರಿಗೆ ₹ 4 ಲಕ್ಷ ನಿಗದಿ ಪಡಿಸಿರುವೆ. ಪುಣೆಯ ರೈತರೊಬ್ಬರು ₹ 3.75 ಲಕ್ಷಕ್ಕೆ ಖರೀದಿಗೆ ಕೇಳಿದರೂ ನೀಡಿಲ್ಲ. ಚೌಕಾಶಿಯಿಲ್ಲ. ನನ್ನ ದರಕ್ಕೆ ಕೊಂಡರೆ ಕೊಡುವೆ. ಇಲ್ಲದಿದ್ದರೆ ಮನೆಗೆ ಹೊಡೆದುಕೊಂಡು ಹೋಗಿ ನಿತ್ಯ ದಂಧಾ ಮಾಡುವೆ. ನನಗೇನು ನಷ್ಟವಿಲ್ಲ’ ಎಂದು ಸಂಜು ಪ್ರತಿಕ್ರಿಯಿಸಿದರು.

‘ಇಪ್ಪತ್ತು ವರ್ಷದಿಂದ ಬೀಜದೋರಿ ಸಾಕುತ್ತಿದ್ದೇವೆ. ಮನೆಯಲ್ಲಿ ಮೂರು ಹೋರಿಗಳಿವೆ. ನಿತ್ಯ ನಾಲ್ಕೈದು ಆಕಳು ಬರುತ್ತವೆ. ಕಿಲಾರಿ ತಳಿಯ ಆಕಳು ಮನೆಯಲ್ಲಿವೆ. ದೇಸಿ ತಳಿಯಾಗಿದ್ದರಿಂದ ವಿಪರೀತ ಬೇಡಿಕೆ. ಇವುಗಳ ಜತೆಗಿನ ಒಡನಾಟ ಮನಸ್ಸಿಗೆ ಸಂತಸ ನೀಡುತ್ತದೆ.

ಜಾತ್ರೆಗೆ ಬೀಜದೋರಿ ಜತೆ ತಲಾ ₹ 2.5 ಲಕ್ಷ ಕಿಮ್ಮತ್ತಿನ ಆಕಳುಗಳನ್ನು ತಂದಿರುವೆ. ಖರೀದಿದಾರರು ಬಂದು ಕೇಳಲಾರಂಭಿಸಿದ್ದಾರೆ. ಮಹಾರಾಷ್ಟ್ರ ಭಾಗದ ರೈತರು ಶನಿವಾರದಿಂದ ಜಾತ್ರಾ ಬೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ. ನಮ್ಮ ಜವಾರಿ ತಳಿಯ ಆಕಳನ್ನು ಆಯ್ಕೆ ಮಾಡಿ ಖರೀದಿಸಿಕೊಂಡು ಹೋಗಲಿದ್ದಾರೆ’ ಎಂಬ ವಿಶ್ವಾಸವನ್ನು ಶಿಂಧೆ ವ್ಯಕ್ತಪಡಿಸಿದ

* * 

ನಮ್ಮ ಆಕಳಿಗೆ ಎಲ್ಲೆಡೆ ಬೇಡಿಕೆಯಿದೆ. ನೋಡಿದವರೂ ಖುಷಿ ಪಟ್ಟು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಆಕಳನ್ನು ಸಾಕುವುದು ಒಂದು ಕಲೆ

ಗಿರಿಮಲ್ಲಪ್ಪ ಚನ್ನಬಸಪ್ಪ ಹುಕ್ಕೇರಿ ಹಿಪ್ಪರಗಿಯ ರೈತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry