ಬೆಳೆ ದೃಢೀಕರಣ ಪತ್ರ ಸರಳಗೊಳಿಸಿ

7

ಬೆಳೆ ದೃಢೀಕರಣ ಪತ್ರ ಸರಳಗೊಳಿಸಿ

Published:
Updated:
ಬೆಳೆ ದೃಢೀಕರಣ ಪತ್ರ ಸರಳಗೊಳಿಸಿ

ಯಾದಗಿರಿ: ‘ತೊಗರಿ ಬೆಳೆಗಾರರು ಸೇರಿದಂತೆ ಇತರೆ ರೈತರು ಬೆಳೆ ದೃಢೀಕರಣ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯಬಾರದು. ಈ ನಿಟ್ಟಿನಲ್ಲಿ ಅವರಿಗೆ ಸುಲಭವಾಗಿ ಬೆಳೆ ದೃಢೀಕರಣ ಪತ್ರ ಸಿಗುವಂತಾಗಬೇಕು’ ಎಂದು ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸೂಚಿಸಿದರು.

ಜಿಲ್ಲೆಯ ವಿವಿಧ ಕಚೇರಿಗಳು, ಅಂಗನವಾಡಿ ಕೇಂದ್ರಗಳು ಮುಂತಾದ ಕಡೆಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದ ನಂತರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

‘ತೊಗರಿ ಬೆಳೆ ದೃಢೀಕರಣ ಪಡೆಯಲು ರೈತರು ನೋಟರಿ, ಗ್ರಾಮಲೆಕ್ಕಿಗರು ಮುಂತಾದ ಕಚೇರಿಗಳಿಗೆ ಅಲೆಯಬೇಕಾಗಿದೆ.ಅದರ ಬದಲು ರೈತರ ಮೊಬೈಲ್ಆ್ಯಪ್ ಮೂಲಕ ಬೆಳೆ ಫೋಟೊ ತೆಗೆದು ಅಪ್‌ಲೋಡ್ ಮಾಡುವ ಮೂಲಕ ಬೆಳೆ ದೃಢೀಕರಣ ಪತ್ರವನ್ನು ಸುಲಭವಾಗಿ ನೀಡಬಹುದು’ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಕಾಲದ ಅರ್ಜಿ ಸಲ್ಲಿಕೆಯೂ ಪಾರ ದರ್ಶಕವಾಗಿರಬೇಕು. ಅರ್ಜಿಯನ್ನು ತಕ್ಷಣ ದಾಖಲಿಸಿಕೊಂಡು ಸ್ವೀಕೃತಿ ನೀಡಬೇಕು. ಈ ಸಂದರ್ಭದಲ್ಲಿ ಅರ್ಜಿದಾರರ ಸರಿಯಾದ ಮೊಬೈಲ್ ನಂಬರ್‌ ದಾಖಲಿಸಬೇಕು’ ಎಂದ ಅವರು, ‘ಕೆಲವು ಕಡೆ ನೂರಕ್ಕೂ ಹೆಚ್ಚು ಅರ್ಜಿಗಳಿಗೆ ಒಂದೇ ಮೊಬೈಲ್ ಸಂಖ್ಯೆ ನೀಡಲಾಗಿದೆ. ಕೆಲವೊಂದು ಮೊಬೈಲ್ ನಂಬರ್‌ಗಳಿಗೆ ಸಂದೇಶವೇ ಹೋಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಶಹಾಪುರ ತಾಲ್ಲೂಕಿನಲ್ಲಿ ಪಡಿತರ ಚೀಟಿಗಳ ಬಗ್ಗೆ ಬಹಳಷ್ಟು ದೂರುಗಳ ಬಂದಿವೆ. ಪಿಒಎಸ್ (ಪಾಯಿಂಟ್ ಆಫ್ ಸೇಲ್) ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಿಸುತ್ತಿದ್ದು, ಕೆಲವು ದೋಷಗಳಿಂದ ಸುಮಾರು 14,756 ಕಾರ್ಡ್‌ದಾರರಿಗೆ ಪಡಿತರ ದೊರೆತಿಲ್ಲ ಎಂಬುದು ನಾನು ಭೇಟಿ ನೀಡಿದಾಗ ದೂರು ಬಂದಿದೆ’ ಎಂದರು.

‘ಗ್ರಾಮವೊಂದರಲ್ಲಿ 97 ಬಿಪಿಎಲ್ ಕುಟುಂಬಗಳು ಪಡಿತರ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದರೆ, ಬದಲಾಗಿ ಅಲ್ಲಿ ಪೂರ್ಣ 97 ಕುಟುಂಬಗಳಿಗೂ ಎಪಿಎಲ್ ಕಾರ್ಡ್‌ಗಳು ನೀಡಲಾಗಿದೆ. ಈ ಸಮಸ್ಯೆ ಹೇಗಾಯಿತು ಎಂದು ಪರಿಶೀಲಿಸಿ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ನೀಡಲು ಕ್ರಮಕೈಗೊಳ್ಳಬೇಕು’ ಎಂದು ಆಹಾರ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

‘ಕೆಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದಾಗ ಮಕ್ಕಳಿಗೆ ಮೊಟ್ಟೆ ನೀಡುತ್ತಿರುವ ಅಂಶ ಸಮಾಧಾನ ತಂದಿದೆ’ ಎಂದು ತಿಳಿಸಿದ ಅವರು, ‘ಕೆಲವು ಕಡೆಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸರಿಯಾಗಿ ಗ್ಯಾಸ್ ಸಿಲೆಂಡರ್ ವಿತರಣೆಯಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹೊಸಕೇರಾ ಅಂಗನವಾಡಿ ನಂ.1ರಲ್ಲಿ ಅಡುಗೆ ಅನಿಲ ಮುಗಿದಿದ್ದು, ಅಡುಗೆ ಮಾಡಲು ಅಂಗನವಾಡಿ ಸಿಬ್ಬಂದಿ ತಮ್ಮ ಮನೆಯಿಂದ ಸಿಲಿಂಡರ್ ತಂದಿರುವುದು ಬೆಳಕಿಗೆ ಬಂದಿದೆ. ಪ್ರತಿ ಅಂಗನವಾಡಿ ಕೇಂದ್ರದಲ್ಲಿ ತಲಾ ಎರಡು ಗ್ಯಾಸ್ ಸಿಲಿಂಡರ್ ನೀಡಬೇಕು ಎಂದು ಸರ್ಕಾರದ ಆದೇಶ ಇದೆ. ಆದರೆ, ಇಲ್ಲಿ ಮಾತ್ರ ಕೇವಲ ಒಂದು ಅಡುಗೆ ಸಿಲಿಂಡರ್ ವಿತರಿಸಿರುವುದು ಕಂಡು ಬಂದಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ತಲಾ ಎರಡು ಸಿಲಿಂಡರ್ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗೆ ಸೂಚಿಸಿದರು.

‘ಅಂಗನವಾಡಿ ಕೇಂದ್ರಗಳಿಗೆ ತರಕಾರಿ, ಶೇಂಗಾ ಉಂಡೆ, ಹಾಲು, ಮೊಟ್ಟೆಯನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು’ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಜೆ.ಮಂಜುನಾಥ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಅವಿನಾಶ ಮೆನನ್ ರಾಜೇಂದ್ರನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ ನಾಯ್ಕ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

* * 

ಕೆಲವು ದೋಷಗಳಿಂದ ಸುಮಾರು 14,756 ಕಾರ್ಡ್‌ದಾರರಿಗೆ ಪಡಿತರ ದೊರೆತಿಲ್ಲ ಎಂಬುದು ನಾನು ಭೇಟಿ ನೀಡಿದಾಗ ದೂರು ಬಂದಿದೆ.

ಟಿ.ಎಂ.ವಿಜಯ ಭಾಸ್ಕರ್ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry