‘ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ಮನೆ ಬಿಟ್ಟ ಬಸವಣ್ಣ’

7

‘ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ಮನೆ ಬಿಟ್ಟ ಬಸವಣ್ಣ’

Published:
Updated:

ಕೂಡಲಸಂಗಮ: ‘ಬಸವಣ್ಣನವರು ಮನೆ ಬಿಟ್ಟಿದ್ದೇ ಹೆಣ್ಣು ಮಕ್ಕಳಿಗೆ ಧಾರ್ಮಿಕ ಸ್ವಾತಂತ್ರ್ಯ ಕಲ್ಪಿಸಿಕೊಡಲು ಎಂಬುದನ್ನು ನಾವೆಲ್ಲರೂ ತಿಳಿದು ಕೊಳ್ಳಬೇಕು’ ಎಂದು ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.

ಕೂಡಲಸಂಗಮದಲ್ಲಿ ನಡೆದ 31ನೇ ಶರಣ ಮೇಳದ ಮೊದಲ ದಿನ ಗುರುವಾರ ರಾತ್ರಿ ನಡೆದ ‘ಆಧುನಿಕ ಜೀವನದಲ್ಲಿ ಮಹಿಳೆಯರ ಸಬಲೀಕರಣ’ ವಿಷಯದ ಮಹಿಳಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

‘ಪ್ರಾಚೀನ ಕಾಲದಿಂದಲೂ ಮಹಿಳೆಯನ್ನು ಶೋಷಿಸುತ್ತ ಬಂದ ಸಂಪ್ರದಾಯವಾದಿಗಳಿಗೆ 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಮಹಿಳೆಯರಿಗೆ ಧಾರ್ಮಿಕ, ಸಾಮಾಜಿಕ ಸ್ವಾತಂತ್ರ್ಯವನ್ನು ಬಸವಣ್ಣ ಕೊಟ್ಟರು. ನಂತರ ಮಹಿಳೆಯನ್ನು ಗುರುವಿನ ಸ್ಥಾನಕ್ಕೆ ತರುವ ಕಾರ್ಯವನ್ನು ಯಾರು ಮಾಡಲಿಲ್ಲ. 800 ವರ್ಷಗಳ ನಂತರ ಈ ಕಾರ್ಯವನ್ನು ಲಿಂಗಾನಂದ ಸ್ವಾಮೀಜಿ ಮಾಡಿದರು’ ಎಂದರು.

ಕಲಬುರ್ಗಿ ಕಾಲೇಜು ಶಿಕ್ಷಣ ಇಲಾಖೆ ವಿಶೇಷ ಅಧಿಕಾರಿ ಡಾ. ಇಂದುಮತಿ ದಿವಾಕರ ಮಾತನಾಡಿ ‘ಬುದ್ಧನಿಂದ ಬೆಳಕು ಕಂಡ ಭಾರತ, ಬಸವಣ್ಣನವರಿಂದ ಸಬಲೀಕರಣ ಗೊಂಡ ಸಮಾಜ, ಅಂಬೇಡ್ಕರ್‌ರಿಂದ ಮಹಿಳಾ ಮೀಸಲಾತಿ ಹಕ್ಕು, ತನ್ನ ಹೆಂಡತಿಗೆ ಶಿಕ್ಷಣ ಕೊಟ್ಟು ಸಹಕರಿಸಿದ ಜ್ಯೋತಿಬಾ ಫುಲೆ  ಇಂತಹ ಮಹಾತ್ಮರು ದಾರಿ ದೀಪ. ಸಬಲೀಕರಣದ ಬಗ್ಗೆ ಯಾರು ಮಾತನಾಡುತ್ತಾರೋ ಅವರೇ ಅಬಲೆಯಾಗಿರುವುದು ದುರಂತ. ಇದಕ್ಕೆ ಕಾರಣ ನಮ್ಮೊಳಗಿನ ಆಂತರಿಕ ವ್ಯವಸ್ಥೆ, ಮನು ಸಂಸ್ಕೃತಿಯ ಪ್ರಭಾವ’ ಎಂದರು.

ಸಾನ್ನಿಧ್ಯ ವಹಿಸಿದ ಉಳವಿ–ಬೆಂಗಳೂರು ಚನ್ನಬಸವ ಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ‘ಒಂದೇ ಜನಾಂಗದವರು ಮಾತ್ರ ಮಠಾಧೀಶರಾಗಬೇಕು ಎಂಬ ನಿಯಮವನ್ನು ಸಂಪ್ರದಾಯವಾದಿಗಳು ಬಿತ್ತಿದರು. ಮಹಿಳೆಯನ್ನು ಮಠಾಧೀಶರ ನ್ನಾಗಿ ಮಾಡುವ ಕಾರ್ಯವನ್ನು ಯಾವ ಮಠಗಳು ಮಾಡಲಿಲ್ಲ. ಈ ಕಾರ್ಯವನ್ನು ಲಿಂಗಾನಂದ ಸ್ವಾಮೀಜಿ ಮಾಡಿದರು’ ಎಂದರು.

ಬೀದರ್ ಬಸವ ಮಂಟಪದ ಮಾತೆ ಸತ್ಯಾದೇವಿ, ಬೆಂಗಳೂರು ರಾಷ್ಟ್ರೀಯ ಬಸವ ದಳದ ಲೀಲಾವತಿ ಕರಡಿ, ಚಿತ್ರದುರ್ಗ ಬಸವ ಮಂಟಪದ ಮಾತೆ ದಾನೇಶ್ವರಿ, ಧಾರವಾಡ ರಾಷ್ಟ್ರೀಯ ಬಸವ ದಳದ ಚಂದ್ರಮ್ಮ ಸದಾನಂದಸ್ವಾಮಿ, ಬಸವ ಕಲ್ಯಾಣದ ಬಸವಪ್ರಭು ಸ್ವಾಮೀಜಿ, ಹೈದ್ರಾಬಾದ್‌ ಬಸವ ಮಂಟಪದ ಪ್ರಭುಲಿಂಗ ಸ್ವಾಮೀಜಿ ಇದ್ದರು.

ಶರಣಮೇಳದಲ್ಲಿ ಇಂದು

ಕೂಡಲಸಂಗಮದಲ್ಲಿ ನಡೆದ 31ನೇ ಶರಣ ಮೇಳದ ಮೂರನೇ ದಿನವಾದ ಶನಿವಾರ ಬೆಳಿಗ್ಗೆ 10:30ಕ್ಕೆ ಶರಣ ಮೇಳದ ಉದ್ಘಾಟನೆಯನ್ನು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾಡುವರು. ಬಸವ ಧ್ವಜಾರೋಹಣವನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಮಾಡುವರು. ಮುಖ್ಯ ಅತಿಥಿಗಳಾಗಿ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ, ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಭಾಗವಹಿಸುವರು.

ಸಂಜೆ 5:30ಕ್ಕೆ ಬಸವ ಧರ್ಮ ಪೀಠದ 26ನೇ ಪೀಠಾರೋಹಣ ಸಮಾರಂಭದ ಉದ್ಘಾಟನೆಯನ್ನು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಾಡುವರು. ಮುಖ್ಯ ಅತಿಥಿಗಳಾಗಿ ಹಾವೇರಿ ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ರಾಜಣ್ಣ ವೈದ್ಯ, ಮಹಾರಾಷ್ಟ್ರದ ಕೃಷ್ಣಪ್ಪ ಮಸಳೆ, ಬೆಂಗಳೂರು ವಿಶ್ವವಿದ್ಯಾಲಯದ ಬಿ.ಕೆ.ರವಿ, ಬಿ.ಶಿವಣ್ಣ ಭಾಗವಹಿಸುವರು.

* * 

ಬಸವಣ್ಣ ಮಹಿಳೆಯರಿಗೆ ಧಾರ್ಮಿಕ, ಸಾಮಾಜಿಕ ಸ್ವಾತಂತ್ರ್ಯ ಕಲ್ಪಿಸಿದರೆ. ಧರ್ಮ ಜಾಗೃತಿ ಮೂಡಿಸಿದ್ದು ಲಿಂಗಾನಂದ ಸ್ವಾಮೀಜಿ,

ಮಾತೆಮಹಾದೇವಿ

ಚನ್ನಬಸವಾನಂದ ಸ್ವಾಮೀಜಿ ಚನ್ನಬಸವ ಜ್ಞಾನ ಪೀಠ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry