ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿ

Last Updated 13 ಜನವರಿ 2018, 6:30 IST
ಅಕ್ಷರ ಗಾತ್ರ

ಬಾಗಲಕೋಟೆ: ‘ದೇಶ ಕಂಡ ಶ್ರೇಷ್ಠ ಚಿಂತಕ ಸ್ವಾಮಿ ವಿವೇಕಾನಂದರ ತತ್ವಗಳನ್ನು ಅನುಸರಿಸುವುದರ ಮೂಲಕ ಬಲಿಷ್ಠ ರಾಷ್ಟ್ರ ಕಟ್ಟಲು ಇಂದಿನ ಯುವ ಜನಾಂಗ ಮುಂದಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾ ನಂದರ 155ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿವೇಕಾನಂದರ ಚಿಂತನೆ ಗಳು ಯುವಕರಿಗೆ ಸದಾ ಆದರ್ಶಪ್ರಾಯವಾಗಿವೆ. ತಂದೆ-–ತಾಯಿ, ಕಲಿಸಿದ ಗುರುಗಳು ಹಾಗೂ ನಾಡಿಗೆ ಕೀರ್ತಿ ತರುವ ಕೆಲಸವಾಗುವ ನಿಟ್ಟಿನಲ್ಲಿ ವಿವೇಕಾನಂದರ ಜನ್ಮ ದಿನಾಚರಣೆ ಆಚರಿಸಲಾಗುತ್ತಿದೆ. ಸಹೋದರ, ಸಹೋದರಿಯರೇ ಎಂಬ ಮಾತಿನಿಂದ ಇಡೀ ವಿಶ್ವವೇ ವಿವೇಕಾನಂದರತ್ತ ತಿರುಗಿ ನೋಡುವಂತಾಯಿತು’ ಎಂದರು.

‘ಪಾಲಕರು ನಿಮ್ಮ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿರುತ್ತಾರೆ. ನಮ್ಮ ಮಕ್ಕಳು ಮುಂದೆ ಸಮಾಜಕ್ಕೆ ಏನಾದರೂ ಉತ್ತಮ ಕೊಡುಗೆ ನೀಡುತ್ತಾರೆ ಎಂಬ ಭರವಸೆ ಹೊಂದಿರುತ್ತಾರೆ. ಅವರ ಆಸೆಗಳನ್ನು ಹುಸಿಗೊಳಿಸಬೇಡಿ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘ಹಳ್ಳಿಗಾಡಿನಲ್ಲಿ ಕೊಕ್ಕೋ, ಕಬಡ್ಡಿ, ಚಿನ್ನಿದಾಂಡು ಆಟವಾಡಿ ಓದಿದವರು ಉತ್ತಮ ರಾಜಕಾರಣಿ ಹಾಗೂ ಯಶಸ್ವಿ ಅಧಿಕಾರಿಗಳಾಗಿದ್ದಾರೆ. ಯುವಕರು ಒಳ್ಳೆಯ ನಾಗರಿಕರಾಬೇಕು. ದೇಶದ ಗ್ರಾಮೀಣ ಭಾಗದ ಪ್ರತಿಯೊಂದು ಜಾತಿ, ಧರ್ಮಗಳಲ್ಲಿನ ನೋವುಗಳನ್ನು ಅರ್ಥೈಸಿಕೊಂಡು ಅದಕ್ಕೆ ಸ್ಪಂದಿಸುವ ಕೆಲಸವನ್ನು ಮಾಡುವ ಸಂಕಲ್ಪ ತೊಡಬೇಕು’ ಎಂದರು.

ಶಾಸಕ ಎಚ್.ವೈ.ಮೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಅದಮ್ಯ ಶಕ್ತಿಯ ಪ್ರತೀಕವಾಗಿರುವ ವಿವೇಕಾನಂದರ ಆದರ್ಶ ಹಾಗೂ ಚಿಂತನೆಗಳನ್ನು ಇಂದಿನ ಯುವ ಜನಾಂಗ ಸ್ವಲ್ಪ ಮಟ್ಟಿಗಾದರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿ ಡಾ.ಗುರುಪಾದ ಮರೆಗುದ್ದಿ ಮಾತನಾಡಿದರು. ಬಿಟಿಡಿಎ ಅಧ್ಯಕ್ಷ ಎ.ಡಿ.ಮೊಕಾಶಿ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಹನಮವ್ವ ಕೆರಿಹೊಳ್ಳಿ ಉಪಸ್ಥಿತರಿದ್ದರು.

ಸಿ.ಬಿ.ನಂದನ ಸ್ವಾಗತಿಸಿದರು. ಎಂ.ಬಿ.ಗುಡೂರ ವಂದಿಸಿದರು. ಸುಮಾ ಮುಚಖಂಡಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಯುವ ಸಬಲೀಕಣ ಮತ್ತು ಕ್ರೀಡಾ ಇಲಾಖೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT