ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ದಟ್ಟಣೆ, ಅಪರಾಧ ತಡೆಗೆ ಸಹಕಾರ

Last Updated 13 ಜನವರಿ 2018, 6:37 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣೆ ಹಾಗೂ ಅಪರಾಧ ಕೃತ್ಯ ತಡೆಗಟ್ಟುವಲ್ಲಿ ನಗರಸಭೆ ಸಹಕಾರ ಅಗತ್ಯವಾಗಿದ್ದು, ಪೊಲೀಸ್ ಸಿಬ್ಬಂದಿಯೊಂದಿಗೆಜೊತೆಗೂಡಿ ಜಂಟಿ ಕಾರ್ಯಾಚರಣೆ ನಡೆಸಲು ನಗರಸಭೆಯಿಂದ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಬೇಕಿದೆ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಜಿ.ಸಿದ್ದರಾಜು ಹೇಳಿದರು.

ನಗರಸಭೆಯ ಕಾರ್ಯಾಲಯದಲ್ಲಿ ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣ ಹಾಗೂ ಅಪರಾಧ ಕೃತ್ ತಡೆಗಟ್ಟುವ ಕುರಿತಾಗಿ ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಎಲ್ಲಂದರಲ್ಲಿ ವಾಹನಗಳನ್ನು ನಿಲ್ಲಿಸುವುದು ಸಾಮಾನ್ಯವಾಗಿದ್ದು, ಪೊಲೀಸ್ ಜೀಪ್‌ಗಳು ಸಹ ಓಡಾಡಲು ತ್ರಾಸ ಪಡುವಂತಾಗಿದೆ. ಈಚೆಗೆ ಸರಗಳವು ಪ್ರಕರಣದಲ್ಲಿ ಕೆಲವರನ್ನು ಬಂಧಿಸಲಾಗಿದೆ. ವಾಣಿಜ್ಯ ಮಳಿಗೆಗಳ ಮುಂಭಾಗ ಮಾಲೀಕರ ವಾಹನ ಹಾಗೂ ಫಲಕ ಹಾಕುವ ಮೂಲಕ ರಸ್ತೆಯನ್ನು ಬಳಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ನಗರಸಭಾ ಸದಸ್ಯರು ರಸ್ತೆಯ ಗಸ್ತು ತಿರುಗಿ, ನಗರಸಭೆ ವತಿಯಿಂದ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬಹುದಾಗಿದೆ. ನಗರಸಭೆ ಹಾಗೂ ಪೊಲೀಸ್ ಇಲಾಖೆ ಜೊತೆಯಾಗಿ ದಂಡ ವಿಧಿಸಿ ಎಚ್ಚರಿಕೆ ನೀಡಿದರೆ ನಿಯಂತ್ರಣಕ್ಕೆ ಬರುವುದರೊಂದಿಗೆ ನಾಗರಿಕರಿಗೆ ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಮೇಲೆ ಗೌರವ ಮೂಡುತ್ತದೆ ಎಂದರು.

ನಗರಸಭೆ ಸದಸ್ಯೆ ಸೌಭಾಗ್ಯಮ್ಮ ಮಾತನಾಡಿ, ಇತ್ತೀಚೆಗೆ ನಗರದ ರಂಗಪ್ಪ ಸರ್ಕಲ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಬೆಳಗಿನ ಹಾಗೂ ಸಂಜೆ ವೇಳೆಯಾದರೂ ಪೊಲೀಸರನ್ನು ನಿಯೋಜಿಸಬೇಕು ಎಂದರು.

ಸದಸ್ಯ ಶಿವಕುಮಾರ್ ಮಾತನಾಡಿ, ಮಾರುಕಟ್ಟೆ ರಸ್ತೆಯಲ್ಲಿ ರಸ್ತೆ ಮಧ್ಯದಲ್ಲಿಯೇ ಅಂಗಡಿ ಇಟ್ಟಿದ್ದಾರೆ. ಹೇಮಾವತಿ ಪೇಟೆಯಲ್ಲಿ ಆಟೊಗಳ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ನಗರದಲ್ಲಿ ದಟ್ಟಣೆ ಹೆಚ್ಚಿರುವ ಕಡೆ ಏಕಮುಖ ಸಂಚಾರ ಮಾಡಬೇಕಿದೆ ಎಂದರು.

ಸದಸ್ಯ ಆರ್‌.ಕೆಂಪರಾಜು ಮಾತನಾಡಿ, ಪೊಲೀಸ್ ಗಸ್ತು ತಿರುಗುವುದು ಕಡಿಮೆಯಾಗುತ್ತಿರುವುದರಿಂದ ಕಳ್ಳರಿಗೆ ಭಯ ಇಲ್ಲಂದಂತಾಗಿದೆ. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ, ಪುಂಡರು ವೀಲಿಂಗ್ ಮಾಡುತ್ತ ಅತಿರೇಕ ವರ್ತನೆ ಮಾಡುತ್ತಿರುವುದು ಹೆಣ್ಣು ಮಕ್ಕಳಿಗೆ ಮುಜುಗರ ತರುತ್ತಿದೆ. ಪ್ರಮುಖ ವೃತ್ತದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರೂ ಸರಿಯಾಗಿ ಕಾರ್ಯ ನಿರ್ವಹಿಸದೆ ನಿಷ್ಪ್ರಯೋಜಕವಾಗಿದೆ. ಈ ಬಗ್ಗೆ ಗಮನ ಹರಿಸಬೇಕು ಎಂದರು.

ಸದಸ್ಯೆ ಸುಶೀಲಾ ಮಾತನಾಡಿ, 6ತಿಂಗಳ ಹಿಂದೆ ಪೊಲೀಸ್ ಗಸ್ತು ಸಭೆ ನಡೆದು ಇಲ್ಲಿಯವರೆಗೆ ಗಸ್ತು ಕಾರ್ಯ ಚುರುಕುಗೊಂಡಿಲ್ಲ. ವಾರ್ಡ್ ಬೀಟ್ ಬರುತ್ತಿಲ್ಲ ಎಂದರು. ನಗರದ ಹಲವಾರು ಕಡೆ, ಸರಕು ಸಾಗಣಿಕೆ ವಾಹನ ಸಾಲುಗಟ್ಟಿ ನಿಂತಿರುವುದು, ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್‌ ಸಮಸ್ಯೆಗಳನ್ನು ಸದಸ್ಯರು ಪ್ರಸ್ತಾಪಿಸಿದರು.

ಡಿ.ವೈ.ಎಸ್.ಪಿ ವೈ.ನಾಗರಾಜು ಮಾತನಾಡಿ, ಸಿಸಿಟಿವಿ ಕ್ಯಾಮರಾಗಳನ್ನು ಆಧುನಿಕ ತಂತ್ರಜ್ಞಾನದಲ್ಲಿ ಅಳವಡಿಸಿ, ಪೊಲೀಸ್ ಠಾಣೆಯಲ್ಲಿಯೇ ಅದನ್ನು ನಿಯಂತ್ರಣ ಮಾಡುವ ಕುರಿತು ಚಿಂತನೆ ನಡೆದಿದೆ. ಸದಸ್ಯರು ಮುಂದಿಟ್ಟಿರುವ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ನಗರಸಭೆ ಸಹಕಾರ ಅಗತ್ಯ ಎಂದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ, ಪೌರಾಯುಕ್ತ ಶೇಖ್ ಫಿರೋಜ್ ಹಾಗೂ ನಗರಸಭಾ ಸದಸ್ಯರು ಭಾಗವಹಿಸಿದ್ದರು.

ಪೊಲೀಸರಿಗೆ ಸಹಕಾರ

ನಗರದಲ್ಲಿ ಕೊಳಾಯಿ ಸಂಪರ್ಕಕ್ಕಾಗಿ ರಸ್ತ ಅಗೆದಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಡಿಪೊಗೆ ತೆರಳುವ, ಸಾರಿಗೆ ಸಂಸ್ಥೆ ಬಸ್‌ಗಳು ತಾಲ್ಲೂಕು ಕಚೇರಿ ಮುಂಭಾಗ ಬರುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ನಗರದ ಹಳೇ ಬಸ್ ನಿಲ್ದಾಣದಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದ್ದು, ಪುರಭವನ ಹಾಗೂ ಸೌಂದರ್ಯ ಮಹಲ್ ಹಿಂಬಾಗ ದ್ವಿಚಕ್ರವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸಹಕಾರ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಈ ಸಂದರ್ಭದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT