ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ

7

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ

Published:
Updated:

ಬೆಳಗಾವಿ: ‘ಆರ್‌ಎಸ್‌ಎಸ್, ಬಜರಂಗ ದಳದವರು ಉಗ್ರಗಾಮಿಗಳು’ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಬಿಜೆಪಿಯ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು  ಪೊಲೀಸರು ಶುಕ್ರವಾರ ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

‘ನಾನೂ ಉಗ್ರ– ನನ್ನನ್ನೂ ಬಂಧಿಸಿ’ ಎಂಬ ಘೋಷಣೆಯಡಿ ಕನ್ನಡ ಸಾಹಿತ್ಯ ಭವನದಿಂದ ಕ್ಲಬ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಕಚೇರಿಯತ್ತ ಕಾರ್ಯಕರ್ತರು ಹೋಗುತ್ತಿದ್ದರು. ‘ಈ ರಾಜ್ಯದ ದುರಂತ ಸಿದ್ದರಾಮಯ್ಯ’ ಎಂದು ಘೋಷಣೆ ಕೂಗಿದರು. ಅವರನ್ನು ಮಿಲನ ಹೋಟೆಲ್‌ ಬಳಿ ತಡೆದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡರು.

ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ ಮಾತನಾಡಿ, ‘ದೇಶಾಭಿಮಾನ ಮೂಡಿಸುವ ಚಟುವಟಿಕೆಯಲ್ಲಿ ತೊಡಗಿರುವ ಆರ್‌ಎಸ್‌ಎಸ್‌, ಬಜರಂಗ ದಳದವರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಪಿಎಫ್‌ಐ ಸಂಘಟನೆ ಸಮರ್ಥಿಸಿಕೊಳ್ಳುವ ಭರದಲ್ಲಿ, ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಕೂಡಲೇ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.

ಮಾಜಿ ಶಾಸಕ ಅಭಯ ಪಾಟೀಲ ಮಾತನಾಡಿದರು. ಮುಖಂಡರಾದ ರಾಜಕುಮಾರ ಟೋಪಣ್ಣವರ, ಲೀನಾ ಟೋ‍ಪಣ್ಣವರ, ರಾಜು ಚಿಕ್ಕನಗೌಡರ, ಉಜ್ವಲಾ ಬಡವನಾಚೆ, ಬಾಬುಲಾಲ್‌ ರಾಜಪುರೋಹಿತ್‌, ಸರೋಜಿನಿ ನಡುವಿನಹಳ್ಳಿ ಭಾಗವಹಿಸಿದ್ದರು. ರಾಣಿ ಚನ್ನಮ್ಮ ವೃತ್ತದಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry