ಜೀವಕೋಶ ಕಾರ್ಯ ಪತ್ತೆಗೆ ಆಧುನಿಕ ತಂತ್ರಜ್ಞಾನ

7

ಜೀವಕೋಶ ಕಾರ್ಯ ಪತ್ತೆಗೆ ಆಧುನಿಕ ತಂತ್ರಜ್ಞಾನ

Published:
Updated:
ಜೀವಕೋಶ ಕಾರ್ಯ ಪತ್ತೆಗೆ ಆಧುನಿಕ ತಂತ್ರಜ್ಞಾನ

ಬೆಳಗಾವಿ: ಜೀವಕೋಶಗಳ ಕಾರ್ಯವಿಧಾನವನ್ನು ವಿವರವಾಗಿ ಪತ್ತೆ ಮಾಡುವುದಕ್ಕಾಗಿ ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಎರಡು ಯಂತ್ರಗಳನ್ನು ಅಳವಡಿಸಲಾಗಿದ್ದು, ಇದೇ 13ರಂದು ಮಧ್ಯಾಹ್ನ 3ಕ್ಕೆ ಕೇಂದ್ರ ಸಚಿವ ರಾಜನಾಥ ಸಿಂಗ್‌ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.

‘ಉತ್ತರ ಕರ್ನಾಟಕದ ಆಸ್ಪತ್ರೆಗಳ ಪೈಕಿ, ಈ ಸುಧಾರಿತ ತಂತ್ರಜ್ಞಾನ ಹೊಂದಿರುವ ಆಸ್ಪತ್ರೆ ನಮ್ಮದಾಗಿದೆ’ ಎಂದು ವೈದ್ಯಕೀಯ ನಿರ್ದೇಶಕ ಮತ್ತು ಸಿಇಒ ಡಾ.ಎಂ.ವಿ. ಜಾಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು. ‘ಎಸ್‌ಪಿಇಸಿಟಿ (ಮಾಲಿಕ್ಯುಲರ್‌ ಇಮೇಜಿಂಗ್‌ ಇನ್‌ ದಿ ನ್ಯೂಕ್ಲಿಯರ್‌ ಮೆಡಿಷನ್‌ ಸ್ಷೆಷಾಲಿಟಿ ವಿಥ್‌ ಫೋಟಾನ್‌ ಎಮಿಸನ್‌ ಕಂಪ್ಯೂಟರೈಸ್ಡ್‌ ಟೊಮೊಗ್ರಫಿ) ಮತ್ತು (ಪಿಇಟಿ–ಸಿಟಿ) ಪಾಸಿಟ್ರಾನ್‌ ಎಮಿಷನ್‌ ಟೊಮೊಗ್ರಫಿ ಮತ್ತು ರೇಡಿಯೊ ನ್ಯೂಕ್ಲಿಯರ್‌ ಥೆರಪಿ ಘಟಕವನ್ನು ತಿಂಗಳ ಹಿಂದೆ ಕಾರ್ಯಾರಂಭ ಮಾಡಲಾಗಿದೆ. ₹ 15 ಕೋಟಿ ವೆಚ್ಚದಲ್ಲಿ ಸುಧಾರಿತ ಯಂತ್ರಗಳನ್ನು ಅಳವಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತ್ವರಿತ ಪತ್ತೆಗೆ ಅನುಕೂಲ: ‘ಈ ಆರೋಗ್ಯ ಸೇವೆಗಾಗಿ ರೋಗಿಗಳು ಮುಂಬೈ, ಬೆಂಗಳೂರು ಅಥವಾ ಹೈದರಾಬಾದ್‌ಗೆ ಹೋಗಬೇಕಾಗಿತ್ತು. ಇನ್ಮುಂದೆ ಇಲ್ಲಿಯೇ ಸೇವೆ ಸಿಗುತ್ತದೆ. ಇದರಿಂದ, ಬೇರೆ ನಗರಗಳಿಗೆ ಹೋಗುವುದು ತ‍ಪ್ಪಲಿದೆ. ಖರ್ಚು ಕೂಡ ಕಡಿಮೆಯಾಗಲಿದೆ. ಬೇರೆಡೆಗೆ ಹೋಲಿಸಿದರೆ ಶೇ 50ರಷ್ಟು ಕಡಿಮೆ ಶುಲ್ಕದಲ್ಲಿ ಚಿಕಿತ್ಸೆ ಒದಗಿಸಲಾಗುವುದು’ ಎಂದು ಹೇಳಿದರು.

‘ದೇಹದ ಯಾವ ಅಂಗ ಹೇಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದನ್ನು ಸಮಗ್ರವಾಗಿ ಪತ್ತೆ ಹಚ್ಚಬಹುದು. ಯಾವ ಭಾಗದಲ್ಲಿ ಕ್ಯಾನ್ಸರ್‌ ಗಡ್ಡೆ ಇದೆ ಎನ್ನುವುದನ್ನು ತ್ವರಿತವಾಗಿ ಕಂಡುಹಿಡಿಯಬಹುದು. ಈ ಯಂತ್ರಗಳನ್ನು ಬಳಸಿ ರೋಗಪತ್ತೆ ಮಾಡುವುದಷ್ಟೇ ಅಲ್ಲದೇ, ಚಿಕಿತ್ಸೆಗೂ ಅವಕಾಶವಿದೆ. ಹೃದಯದ ಮಾಂಸಖಂಡಗಳಲ್ಲಿ ರಕ್ತಪರಿಚಲನೆಯನ್ನು ವಿವರವಾಗಿ ತಿಳಿಯುವ ಮೂಲಕ, ಹೃದ್ರೋಗಗಳನ್ನು ಗುರುತಿಸಬಹುದು.

ಶಸ್ತ್ರಚಿಕಿತ್ಸೆಗೆ ಮೊದಲು ಹಾಗೂ ನಂತರ ರಕ್ತಪರಿಚಲನೆ ಸುಧಾರಿಸಿ ದೆಯೋ, ಇಲ್ಲವೋ ಎನ್ನುವುದನ್ನು ದೃಢಪಡಿಸಿಕೊಳ್ಳಬಹುದು. ಮಕ್ಕಳನ್ನೂ ಪ‍ರೀಕ್ಷೆಗೆ ಒಳಪಡಿಸಬಹುದು’ ಎಂದು ವಿಭಾಗದ ಮುಖ್ಯಸ್ಥೆ ಡಾ.ರಶ್ಮಿ ಅಂಗಡಿ ವಿವರಿಸಿದರು.

ಪ್ರತ್ಯೇಕವಾಗಿ ಕ್ಯಾನ್ಸರ್‌ ಆಸ್ಪತ್ರೆ: ‘ಥೈರಾಯ್ಡ್‌, ಮೂಳೆ, ಶ್ವಾಸಕೋಶ, ಕಿಡ್ನಿ, ಗಂಟಲು, ಗರ್ಭಕೋಶ ಮತ್ತಿತರ ಕ್ಯಾನ್ಸರ್‌ ಪತ್ತೆ ಹಚ್ಚಲು ಈ ತಂತ್ರಜ್ಞಾನ ನೆರವಾಗುತ್ತದೆ. ಶೀಘ್ರ ಪತ್ತೆಯಿಂದ, ತ್ವರಿತ ಚಿಕಿತ್ಸೆ ನೀಡಬಹುದಾಗಿದೆ. ಹೆಚ್ಚಿನ ತೊಂದರೆ ಗಳನ್ನು ತಪ್ಪಿಸಿಕೊಳ್ಳ ಬಹುದಾಗಿದೆ. ಸಂಪೂರ್ಣ ದೇಹವನ್ನು ಸ್ಕ್ಯಾನ್‌ ಮಾಡುವುದರಿಂದ, ಕ್ಯಾನ್ಸರ್‌ಗೆ ಸಂಬಂಧಿಸಿದ ಎಲ್ಲ ತೊಂದರೆಗಳನ್ನೂ ಕಂಡುಹಿಡಿಯಬಹುದು.

ನಿತ್ಯ 10 ಮಂದಿಯನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಬಹುದು. ನ್ಯೂಕ್ಲಿಯರ್‌ ಥೆರಪಿ ಚಿಕಿತ್ಸೆಗಾಗಿ ಮುಂಬೈನ ಎಆರ್‌ಬಿ (ಆಟೊಮಿಕ್‌ ಎನರ್ಜಿ ರೆಗ್ಯಲೇಟರಿ ಬೋರ್ಡ್‌)ಯಿಂದ ಅನುಮತಿ ಪಡೆಯಲಾಗಿದೆ’ ಎಂದರು.

‘ಆಸ್ಪತ್ರೆಯ ಹಿಂದಿರುವ ಎರಡು ಎಕರೆ ಜಾಗದಲ್ಲಿ ಪ್ರತ್ಯೇಕವಾಗಿ ಮಲ್ಟಿಸ್ಪೆಷಾಲಿಟಿ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು, ಈ ಎಲ್ಲ ಕಾರ್ಯ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾರ್ಗದರ್ಶನದಲ್ಲಿ ನಡೆಯುತ್ತಿವೆ’ ಎಂದು ಜಾಲಿ ಹೇಳಿದರು. ಡಾ.ರಾಜಶೇಖರ ಸೋಮರೆಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry