ಸಿ.ಸಿ.ಟಿವಿ ಕ್ಯಾಮರಾ ಸದುಪಯೋಗಕ್ಕೆ ನಿರ್ಲಕ್ಷ್ಯ?

7

ಸಿ.ಸಿ.ಟಿವಿ ಕ್ಯಾಮರಾ ಸದುಪಯೋಗಕ್ಕೆ ನಿರ್ಲಕ್ಷ್ಯ?

Published:
Updated:

ಬಳ್ಳಾರಿ: ನಗರದ ಕೋಟೆ ಪ್ರದೇಶದಲ್ಲಿರುವ ಕೋಟೆಯ ಪ್ರವೇಶದ್ವಾರದ ಸುತ್ತಮುತ್ತ ಭದ್ರತೆ ಸಲುವಾಗಿ ಕೆಲವು ತಿಂಗಳ ಹಿಂದೆ ಪುರಾತತ್ವ ಇಲಾಖೆಯು ಅಳವಡಿಸಿರುವ ನಾಲ್ಕು ಸಿ.ಸಿ.ಟಿ.ವಿ ಕ್ಯಾಮರಾಗಳು ಇನ್ನೂ ಬಳಕೆ ಆಗಿಲ್ಲ.

ಹಿಂದಿನ ವರ್ಷವೇ ಇಲಾಖೆಯು ಕ್ಯಾಮರಾಗಳನ್ನು ಅಳವಡಿಸಿದ್ದರೂ, ಅವುಗಳ ಬಳಕೆಗೆ ಅಗತ್ಯವಿರುವ ತಾಂತ್ರಿಕ ಉಪಕರಣಗಳನ್ನು ಇನ್ನೂ ಪೂರೈಸಿಲ್ಲ. ಈ ವಿಳಂಬಕ್ಕೆ ಕಾರಣ ತಿಳಿದುಬಂದಿಲ್ಲ.

ಅಲ್ಲಿಗೆ ಭೇಟಿ ನೀಡಿದ್ದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಟಿಕೆಟ್‌ ಕೌಂಟರಿನ ಸಿಬ್ಬಂದಿ, ‘ಕ್ಯಾಮರಾಗಳಿಗೆ ವಿದ್ಯುತ್‌ ಸಂಪರ್ಕ ನೀಡಿಲ್ಲ. ಕೆಲವೇ ದಿನಗಳ ಹಿಂದೆಯಷ್ಟೇ ಯುಪಿಎಸ್ ಸಲಕರಣೆಗಳನ್ನು ಇಲಾಖೆಯು ಪೂರೈಸಿದೆ’ ಎಂದು ಕೌಂಟರಿನ ಮೂಲೆಯತ್ತ ಕೈ ತೋರಿದರು.

ಚಿಪ್‌ ಇಲ್ಲ: ‘ಕಂಪ್ಯೂಟರ್‌ ಇದ್ದರೂ ಅದನ್ನು ಕ್ಯಾಮರಾಗಳಿಗೆ ಸಂಪರ್ಕ ನೀಡಿಲ್ಲ. ಕ್ಯಾಮರಾಗಳು ಚಿತ್ರೀಕರಿಸುವ ದೃಶ್ಯಗಳನ್ನು ಸಂಗ್ರಹಿಸಿಡುವ ಮೆಮೊರಿ ಕಾರ್ಡ್‌ ಚಿಪ್‌ಗಳನ್ನು ಕೂಡ ಇನ್ನೂ ನೀಡಿಲ್ಲ. ಹೀಗಾಗಿ ಕೋಟೆಗೆ ಪ್ರವೇಶಿಸುವ ಸಾರ್ವಜನಿಕರ ನಡಾವಳಿಯ ದಾಖಲೀಕರಣ ಆರಂಭವಾಗಿಲ್ಲ’ ಎಂದು ತಿಳಿಸಿದರು.

ವಿಳಂಬವೇಕೆ?: ಕ್ಯಾಮರಾಗಳನ್ನು ಅಳವಡಿಸಿದ್ದರೂ ಅದರ ಬಳಕೆಗೆ ತಕ್ಕ ವ್ಯವಸ್ಥೆ ಮಾಡುವಲ್ಲಿ ಏಕೆ ವಿಳಂಬವಾಗಿದೆ ಎಂಬ ಪ್ರಶ್ನೆಗೆ ಸಿಬ್ಬಂದಿ ‘ನಮಗೆ ಗೊತ್ತಿಲ್ಲ’ ಎಂದು ಉತ್ತರಿಸಿದರು. ಈ ಸಿಬ್ಬಂದಿ ನಾಲ್ಕು ತಿಂಗಳಿಂದ ಇಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭದ್ರತಾ ಸಿಬ್ಬಂದಿ ಅತಂತ್ರ: ಕೋಟೆಯ ಪ್ರವೇಶ ದ್ವಾರದಲ್ಲಿರುವ ಟಿಕೆಟ್‌ ಕೌಂಟರ್‌ ಹೊರತುಪಡಿಸಿದರೆ ಬೇರೆ ಕಟ್ಟಡಗಳು ಇಲ್ಲ. ಹೀಗಾಗಿ ಭದ್ರತೆಗೆ ನಿಯೋಜಿತರಾದ ಸಿಬ್ಬಂದಿ ರಾತ್ರಿವೇಳೆ, ಮಳೆ, ಚಳಿಗಾಲದಲ್ಲಿ ಬಯಲಿನ ಪ್ರದೇಶದಲ್ಲೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ.

‘ಕೌಂಟರಿನ ಎದುರಿನ ಧ್ವಜಸ್ತಂಭದ ಕಟ್ಟೆಯೇ ನಮಗೆ ಆಶ್ರಯ. ಸಂಜೆಯಾಗುತ್ತಿದ್ದಂತೆಯೇ ಈ ಪ್ರದೇಶದಲ್ಲಿ ಹಾವುಗಳು ನಿರ್ಭೀತಿಯಿಂದ ಸಂಚರಿಸುತ್ತವೆ. ನಾವು ಪ್ರಾಣವನ್ನು ಕೈಲಿ ಹಿಡಿದು ಕಾಲ ದೂಡುತ್ತೇವೆ’ ಎಂದು ಭದ್ರತಾ ಸಿಬ್ಬಂದಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry