ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯದ ಬೇರು ಮರೆತರೆ ಗಂಡಾಂತರ

Last Updated 13 ಜನವರಿ 2018, 8:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ನಮ್ಮ ಮೌಲ್ಯವೇ ನಮ್ಮನ್ನು ರೂಪಿಸುವುದು ಎನ್ನುವುದು ನಮ್ಮ ಯುವ ಜನರು ಮರೆಯಬಾರದು. ಮೌಲ್ಯ ಬಿಟ್ಟು ಬರೀ ತಂತ್ರಜ್ಞಾನದ ಹಿಂದೆ ಹೋದರೆ ನಾವು ಹಾಳಾಗುತ್ತೇವೆ. ಮೌಲ್ಯ ಬೇರಾದರೆ, ತಂತ್ರಜ್ಞಾನ ಚಿಗುರು ಆಗಿ ಇರಬೇಕು. ಆಗ ಮಾತ್ರ ಸಮಾಜದಲ್ಲಿ ನಾವು ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ’ ಎಂದು ಅಮೆರಿಕದ ನ್ಯಾಷನಲ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಎಸ್‌.ಆರ್.ಸುಬ್ರಮಣ್ಯ ಪ್ರತಿಪಾದಿಸಿದರು.

ನಗರದ ಹೊರವಲಯದ ಶ್ರೀಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ತಾಂತ್ರಿಕ ಸಂಸ್ಥೆಯಲ್ಲಿ (ಎಸ್‌ಜೆಸಿಐಟಿ) ಆಯೋಜಿಸಿದ್ದ ‘ಎಂಜಿನಿಯರಿಂಗ್ ಕ್ಷೇತ್ರದ ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಇತ್ತೀಚಿನ ಪ್ರವೃತ್ತಿ’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಇವತ್ತು ಯುವ ಜನರಿಗೆ ಮೌಲ್ಯ ಮತ್ತು ತಂತ್ರಜ್ಞಾನ ಒಂದೇ ನಾಣ್ಯದ ಎರಡು ಮುಖಗಳಂತಿರಬೇಕು. ಸಮಾಜದ ಸ್ವಾಸ್ಥ್ಯಕ್ಕೆ ಮೌಲ್ಯಗಳನ್ನು ಬಳಸಿಕೊಂಡರೆ, ಅಭಿವೃದ್ಧಿಯ ವಿಚಾರದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಕೆಲಸವಾಗಬೇಕು. ಮೌಲ್ಯವನ್ನು ಮರೆತ ಸಮಾಜ ಅಧೋಗತಿಗೆ ಹೋಗುತ್ತದೆ ಎನ್ನುವ ಅರಿವು ನಮಗೆ ಸದಾ ಇರಬೇಕು’ ಎಂದು ಹೇಳಿದರು.

ನ್ಯೂಯಾರ್ಕ್ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕ ಪ್ರೊ.ವಿವೇಕ್ ವೀರಯ್ಯ ಅವರು ಮಾತನಾಡಿ, ‘ಯುವ ಜನರು ಜ್ಞಾನದಾಹಿಗಳಾಗಬೇಕು. ಎಲ್ಲ ಹಸಿವುಗಳಿಗಿಂತಲೂ ಇವತ್ತು ಜ್ಞಾನದ ಹಸಿವು ಮುಖ್ಯ. ಅದನ್ನು ಬೆನ್ನತ್ತಿದವರು ಎಂದಿಗೂ ಜೀವನದಲ್ಲಿ ಸೋಲು ಕಾಣುವುದಿಲ್ಲ. ಇದನ್ನು ಅರಿತು ವಿದ್ಯಾರ್ಥಿಗಳು ನವ ಇತಿಹಾಸ ಸೃಷ್ಟಿಸಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.

ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ‘ವೈಜ್ಞಾನಿಕ ಆವಿಷ್ಕಾರ ಒಂದೆರಡು ದಿನಗಳಲ್ಲಿ ನಡೆದ ಪ್ರಕ್ರಿಯೆಯಲ್ಲ. ಗುಹೆಯೊಳಗಿನ ಮಾನವ ಅಂತರಿಕ್ಷ ತಲುಪುವ ವರೆಗೆ ಸುಮಾರು 2000 ವರ್ಷಗಳು ಕಳೆದಿವೆ. ಇಷ್ಟೆಲ್ಲ ವರ್ಷಗಳ ನಡೆದ ಸಂಶೋಧನೆಗಳಿಗೆ ಸಮಾನವಾಗಿ ಕಳೆದ 20 ವರ್ಷಗಳಲ್ಲಿ ಸಂಶೋಧನೆಗಳು ನಡೆದಿವೆ. ಈ ಕ್ಷೀಪ್ರ ತಾಂತ್ರಿಕ ಬದಲಾವಣೆಯನ್ನು ಯುವ ಜನರು ಅರ್ಥ ಮಾಡಿಕೊಳ್ಳಬೇಕಿದೆ’ ಎಂದು ಹೇಳಿದರು.

‘ಇವತ್ತು ನಾವು ನಮ್ಮ ನೆಲಮೂಲದ ಬೇರುಗಳನ್ನು ಮರೆತು, ತಂತ್ರಜ್ಞಾನವೇ ಜೀವನ ಎಂದು ಹೋಗಿ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಮಟ್ಟಿಗೆ ಬಂದು ನಿಂತಿದ್ದೇವೆ. ಯುವ ಜನರಿಗೆ ಸಾಮಾಜಿಕ ಬಾಂಧವ್ಯ, ಬದ್ಧತೆ ಇಲ್ಲದಂತಾಗಿದೆ. ಈ ಚಿತ್ರಣ ಬದಲಾಗಬೇಕು. ಇವತ್ತು ನಾವು ಮೌಲ್ಯಾಧಾರಿತ ಸಮಾಜದಲ್ಲಿ ನಿಂತು ಎಷ್ಟು ಬೇಕು ಅಷ್ಟೇ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕೆಲಸ ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳಾನಂದನಾಥ ಸ್ವಾಮೀಜಿ, ಕರ್ನಾಟಕ ಕನ್ಸಲ್ಟೆಂಟ್ ಪ್ರಾಜೆಕ್ಟ್‌ನ ಮುಖ್ಯಸ್ಥ ಎಂ.ಎನ್‌.ವಿಶ್ವನಾಥ್‌, ಎಸ್‌ಜೆಸಿಐಟಿಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ನಿರ್ದೇಶಕ ಟಿ.ಮುನಿಕೆಂಚೇಗೌಡ, ಎಸ್‌ಜೆಸಿಐಟಿ ಕಾಲೇಜೀನ ಪ್ರಾಶುಪಾಲ ಕೆ.ಎಂ.ರವಿಕುಮಾರ್, ಎಸ್‌ಜೆಸಿಐಟಿ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಸತೀಶ್‌ ಚಂದ್ರ ರೆಡ್ಡಿ, ನಿರ್ದೇಶಕ ಟಿ. ಮುನಿಕೆಂಚೇಗೌಡ, ಎಸ್‌ಜೆಸಿಐಟಿ ಆಡಳಿತ ಮಂಡಳಿ ಸದಸ್ಯರಾದ ಡಿ.ದಾಸಪ್ಪಗೌಡ, ಪಿ.ಆರ್‌.ಶ್ರೀನಿವಾಸ್‌, ಜಿ.ವಿ.ಅನಿಲ್ ಉಪಸ್ಥಿತರಿದ್ದರು.

ಬೆರಗು ಮೂಡಿಸಿದ ಕುಬೋಕಿ ಕಾಜಮಾಸು

ಬೆಂಗಳೂರಿನ ಜೆಸಿಎಸ್‌ಎಸ್‌ ಕನ್ಸಲ್ಟಿಂಗ್ ಕಂಪನಿಯ ಜಪಾನ ವಿಭಾಗದ ಮುಖ್ಯಸ್ಥ ಕುಬೋಕಿ ಕಾಜಮಾಸು ಅವರು ಕನ್ನಡದಲ್ಲಿಯೇ ಭಾಷಣ ಮಾಡಿದ್ದು ನೆರೆದವರಲ್ಲಿ ಬೆರಗು ಮೂಡಿಸಿತು. ‘ಇವತ್ತು ಇಡೀ ವಿಶ್ವದ ಯುವ ಸಮುದಾಯ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಹೊಸ ಸಂಶೋಧನೆಗಳ ಮೇಲೆ ಗಮನ ಹರಿಸಬೇಕಾಗಿದೆ. ಅದರಿಂದ ಸಾಕಷ್ಟು ಹೊಸ ಹೊಳಹುಗಳು ಲಭ್ಯವಾಗುತ್ತವೆ. ಇವತ್ತು ಹತ್ತಾರು ಕ್ಷೇತ್ರಗಳಲ್ಲಿ ಜಪಾನ್–ಭಾರತ ಕೈಜೋಡಿಸಿವೆ. ಇದರಲ್ಲಿ ಯುವ ಜನರ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಆಸಕ್ತಿಯುಳ್ಳವರು ಮುಂದೆ ಬರಬೇಕಿದೆ’ ಎಂದರು.

ಇದೇ ವೇಳೆ ಅವರ ‘ಗಂಧದ ಗುಡಿ’ ಚಿತ್ರದ ‘ನಾವಾಡುವ ನುಡಿಯೇ ಕನ್ನಡ ನುಡಿ..’ ಹಾಡು ಸೇರಿದಂತೆ ಅನೇಕ ಕನ್ನಡ ಗೀತೆಗಳನ್ನು ಹಾಡಿದರು. ಈ ವೇಳೆ ನೆರೆದವರೆಲ್ಲ ಭಾರಿ ಕರತಾಡನದ ಮೂಲಕ ಹರ್ಷ ವ್ಯಕ್ತಪಡಿಸಿದರು.

* * 

ಕಂಪ್ಯೂಟರ್, ಲ್ಯಾಪ್‌ಟಾಪ್‌, ಮೊಬೈಲ್‌ಗಳ ನಡುವೆ ಕಳೆದು ಹೋಗುತ್ತಿರುವ ಯುವ ಸಮುದಾಯ ಸಮಾಜದೊಂದಿಗಿನ ಒಡನಾಟ ಮರೆತಿರುವುದು ಕಳವಳಕಾರಿ
ಎನ್.ಶಿವರಾಮರೆಡ್ಡಿ
ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT