ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಯತ್ನ; ತಡೆ

Last Updated 13 ಜನವರಿ 2018, 8:23 IST
ಅಕ್ಷರ ಗಾತ್ರ

ಚಿಕ್ಕಮಗಳೂರು:‘ಆರ್‌ಎಸ್‌ಎಸ್‌ ಮತ್ತು ಬಜರಂಗದಳದವರು ಉಗ್ರಗಾಮಿಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಬಿಜೆಪಿ ಮುಖಂಡರು, ಕಾರ್ಯಕರ್ತರು ನಗರದ ಪ್ರಭುಬೀದಿಯ ಬಿಜೆಪಿ ಕಚೇರಿ ಆವರಣದಲ್ಲಿ ಜಮಾಯಿಸಿದರು. ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ, ಪ್ರತಿಭಟನಾಕಾರರು ಕಾಂಗ್ರೆಸ್‌ ಕಚೇರಿ ಕಡೆಗೆ ಹೊರಟರು. ಚರ್ಚ್‌ ಬಳಿ ಮತ್ತು ಮಾರ್ಗದ ಅಂತ್ಯದಲ್ಲಿ (ಕೆ.ಎಂ.ರಸ್ತೆ ಕಡೆ) ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಕಾಂಗ್ರೆಸ್‌ ಕಚೇರಿಯತ್ತ ತೆರಳದಂತೆ ಪೊಲೀಸರು ತಡೆಯೊಡ್ಡಿದರು.

ಪೊಲೀಸರು ಮತ್ತು ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ಪ್ರತಿಭಟನಾಕಾರರು ನುಗ್ಗಲು ಮುಂದಾದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತಳ್ಳಾಟ, ನೂಕಾಟ ನಡೆಯಿತು. ಸಿ.ಟಿ.ರವಿ, ಎಂ.ಕೆ.ಪ್ರಾಣೇಶ್‌ ಇತರ ಮುಖಂಡರು, ಪ್ರತಿಭಟನಾಕಾರರನ್ನು ವಶಕ್ಕ ಪಡೆದು ವಾಹನಗಳಲ್ಲಿ ಕರೆದೊಯ್ದರು.

ತಳ್ಳಾಟ ಸಂದರ್ಭದಲ್ಲಿ ಬಿಜೆಪಿ ಮುಖಂಡ ವರಸಿದ್ಧಿ ವೇಣುಗೋಪಾಲ್‌, ಇತರ ಕೆಲ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳ ನಡುವೆ ನುಸುಳಿಕೊಂಡು ಮುನ್ನುಗಿ ಕಾಂಗ್ರೆಸ್‌ ಕಚೇರಿ ಬಳಿಗೆ ತಲುಪಿದರು. ಆದರೆ, ಅಲ್ಲಿದ್ದ ಪೊಲೀಸರು ಅವರನ್ನು ಕಾಂಗ್ರೆಸ್‌ ಕಚೇರಿ ಕಟ್ಟಡ ಪ್ರವೇಶಿಸದಂತೆ ತಡೆದರು. ಅವರನ್ನು ವಶಕ್ಕೆ ಪಡೆದು ವಾಹನಗಳಲ್ಲಿ ಕೆರೆದೊಯ್ದರು.

ಬಿಜೆಪಿ ಮುಖಂಡರಾದ ಎಚ್.ಡಿ.ತಮ್ಮಯ್ಯ, ರಾಜಶೇಖರ್‌, ಬಿ.ಎಸ್‌.ಚೈತ್ರಶ್ರೀ, ಶಿಲ್ಪಾರಾಜಶೇಖರ್‌, ಕವಿತಾಲಿಂಗರಾಜು, ಜಸಂತಾ ಅನಿಲ್‌ಕುಮಾರ್‌, ದೀಪಕ್‌ದೊಡ್ಡಯ್ಯ, ರಾಜಪ್ಪ, ರವೀಂದ್ರ ಬೆಳವಾಡಿ, ಬಿ.ಜಿ.ಸೋಮಶೇಖರಪ್ಪ, ಕೋಟೆ ರಂಗನಾಥ್‌ ಪ್ರತಿಭಟನೆಯಲ್ಲಿದ್ದರು.

ಕಾಂಗ್ರೆಸ್‌ ಕಚೇರಿ ಕಟ್ಟಡದ ಮೊಗಸಾಲೆಯಲ್ಲಿ ನಿಂತಿದ್ದ ಕಾಂಗ್ರೆಸ್‌ನ ಡಾ.ಡಿ.ಎಲ್‌.ವಿಜಯಕುಮಾರ್‌, ಗಾಯತ್ರಿ ಶಾಂತೇಗೌಡ, ಬಿ.ಎಂ.ಸಂದೀಪ್‌ ಇತರ ಮುಖಂಡರು ಪ್ರತಿಭಟನಾಕಾರರಿಗೆ ಕಾಂಗ್ರೆಸ್‌ ಬಾವುಟ ತೋರಿಸಿದರು. ನಮ್ಮ ಕಚೇರಿಗೆ ಮುತ್ತಿಗೆ ಹಾಕಲು ಸಾಧ್ಯ ಇಲ್ಲ ಎಂದು ಕೈಸನ್ನೆ ಮಾಡಿದರು. ‘ಬಿಜೆಪಿಗರಿಗೆ ಧಿಕ್ಕಾರ’ ಬ್ಯಾನರ್‌ಗಳನ್ನು ಪ್ರದರ್ಶಿಸಿದರು.

77 ಪ್ರತಿಭಟನಾಕಾರರನ್ನು ಬಂಧಿಸಿ ಮೂರು ವಾಹನಗಳಲ್ಲಿ ಕರೆದೊಯ್ಯಲಾಗಿತ್ತು. ಡಿಎಆರ್‌ ಮೈದಾನದಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಇಟ್ಟುಕೊಂಡು ನಂತರ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಕಾಂಗ್ರೆಸ್‌ ಕಚೇರಿ, ಬಿಜೆಪಿ ಕಚೇರಿ ಮತ್ತು ನಗರದ ಮುಖ್ಯರಸ್ತೆಗಳಲ್ಲಿ ಪೊಲೀಸ್‌ ಬಿಗಿ ಭದ್ರತೆ ಹಾಕಲಾಗಿತ್ತು.

ಹೇಳಿಕೆ ಸಾಬೀತುಪಡಿಸಿ, ಇಲ್ಲವೇ ಕ್ಷಮೆಯಾಚಿಸಿ

‘ಬಿಜೆಪಿಗೆ ಸೈದ್ಧಾಂತಿಕ ಪ್ರೇರಣೆ ನೀಡಿದ ಆರ್‌ಎಸ್‌ಎಸ್‌ ಸಂಘಟನೆಯನ್ನು ಯಾವ ಆಧಾರದಲ್ಲಿ ಉಗ್ರಗಾಮಿ ಸಂಘಟನೆ ಎಂದು ಪರಿಗಣಿಸಿದರು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಬೀತುಪಡಿಸಬೇಕು’ ಬಿಜೆಪಿ ರಾಜ್ಯಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸವಾಲು ಹಾಕಿದರು.

‘ನಾವು ಉಗ್ರಗಾಮಿಗಳಾಗಿದ್ದರೆ ನಮ್ಮನ್ನು ಬಂಧಿಸಿ. ಇಲ್ಲದಿದ್ದರೆ ಸಾರ್ವಜನಿಕವಾಗಿ ಅವರು ಕ್ಷಮೆಯಾಚಿಸಬೇಕು. ಕ್ಷಮೆಯಾಚಿಸದಿದ್ದರೆ ವಿವಿಧ ರೀತಿಯಲ್ಲಿ ಹೋರಾಟ ಮಾಡುತ್ತೇವೆ’ ಎಂದರು.

‘ಎಸ್‌ಡಿಪಿಐ, ಕೆಎಫ್‌ಡಿ, ಪಿಎಫ್‌ಐ ಸಂಘಟನೆಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿದ್ದು ಯಾಕೆ ಎಂಬುದಕ್ಕೆ ಈವರೆಗೆ ಅವರು ಉತ್ತರ ನೀಡಿಲ್ಲ. ಅಲ್ಪಸಂಖ್ಯಾತ ವೋಟುಗಳು ವಿಭಜನೆಯಾಗುತ್ತವೆ ಎಂಬ ಕಾರಣಕ್ಕೆ ಪ್ರಕರಣಗಳನ್ನು ವಾಪಸ್‌ ಪಡೆದು, ಆ ಮೂಲಕ ರಾಜ್ಯದೊಳಗೆ ರಕ್ತಪಾತದ ರಾಜಕಾರಣಕ್ಕೆ ನಾಂದಿ ಹಾಡುವ ಕೆಲಸ ಮಾಡಿದರು. ಉಗ್ರಗಾಮಿ ಮನಸ್ಥಿತಿ ನಿಮ್ಮದೇ ಹೊರತು ನಮ್ಮದಲ್ಲ’ ಎಂದು ದೂಷಿಸಿದರು.

‘ತಾಲಿಬಾನಿಗಳನ್ನು ಬೆಂಬಲಿಸುವ ನೀತಿ ಅನುಸರಿಸುತ್ತಿದ್ದೀರಿ. ಎಲ್ಲ ಮುಸ್ಲಮರನ್ನು ನಾವು ದೂರುವುದಿಲ್ಲ. ಮುಸ್ಲಮರೆಲ್ಲಲ ತಾಲಿಬಾನಿಗಳಾಗಲು ಸಾಧ್ಯ ಇಲ್ಲ. ನಕ್ಸಲ್‌ರ ಬಗ್ಗೆ ಮೃದುನೀತಿ ಅನುಸರಿಸುತ್ತಿದ್ದೀರಿ. ರಾಜಕೀಯವಾಗಿ ಜನಮತದ ಮೂಲಕ ಬಿಜೆಪಿ ಎದುರಿಸಲು ಸಾಧ್ಯವಾಗದೆ ವಾಮಮಾರ್ಗದ ಮೂಲಕ ನಮ್ಮನ್ನು ಹೊರಟಿದ್ದರೆ, ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಎಂದು ಹೇಳಿದರು.

* * 

ಜನರ ಹಿತಕ್ಕಾಗಿ, ಸಮಸ್ಯೆಗಳನ್ನು ಪರಿಹರಿಸಲು ನಾವು ಸದಾ ಸಿದ್ಧರಿರುತ್ತೇವೆ. ಉಗ್ರಗಾಮಿಗಳು, ಉಗ್ರಸಂಘಟನೆಗಳು ಎಂದು ಕರೆದು ನಮ್ಮನ್ನು ಹತ್ತಿಕ್ಕಲು ಸಾಧ್ಯ ಇಲ್ಲ. ಸಿದ್ದರಾಮಯ್ಯ ಹೇಳಿಕೆಯನ್ನು ವಾಪಸ್‌ ಪಡೆಯಬೇಕು.
ಎಂ.ಕೆ.ಪ್ರಾಣೇಶ್‌
ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT