ಗ್ರಾಮಸ್ಥರ ತ್ಯಾಗದಿಂದ ಶಾಲೆ ನಿರ್ಮಾಣ!

7

ಗ್ರಾಮಸ್ಥರ ತ್ಯಾಗದಿಂದ ಶಾಲೆ ನಿರ್ಮಾಣ!

Published:
Updated:
ಗ್ರಾಮಸ್ಥರ ತ್ಯಾಗದಿಂದ ಶಾಲೆ ನಿರ್ಮಾಣ!

ನರಸಿಂಹರಾಜಪುರ: ತಾಲ್ಲೂಕಿನ ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಇದೇ 13ರಂದು ನಡೆಯಲಿದೆ.

ಈ ಶಾಲೆಯ ಇತಿಹಾಸವನ್ನು ಕೆದಕುತ್ತಾ ಹೋದಂತೆ ಹಲವು ಅಂಶಗಳು ಬೆಳಕಿಗೆ ಬರುತ್ತವೆ. ಹಿಂದೆ ತಾಲ್ಲೂಕಿನಲ್ಲಿ ಕೇವಲ 5 ಶಾಲೆಗಳಿದ್ದವು. ಇದರಲ್ಲಿ ಈ ಶಾಲೆಯು ಸಹ ಒಂದಾಗಿತ್ತು. ಹೊಸಕರೆ ಗ್ರಾಮದಲ್ಲಿ ಶಾಲೆಯ ಕಟ್ಟಡವನ್ನು ನಿರ್ಮಿಸುವ ಮೊದಲು ಶಾಲೆಯು ನರಸೀಪುರ ಗ್ರಾಮದಲ್ಲಿರುವ ಪಾತಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿತ್ತು. ಎನ್.ಎಸ್.ಲಕ್ಷ್ಮೀನಾರಾಯಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಗ್ರಾಮಸ್ಥರ ಸಹಕಾರದಿಂದ ಹೊಸಕೆರೆಯಲ್ಲಿ ಶಾಲಾ ಕಟ್ಟಡ ನಿರ್ಮಿಸಲಾಗಿತ್ತು.

ಅಂದು ಎನ್.ಆರ್.ಪುರದವರಾದ ವೈ.ಎಸ್.ಸುಬ್ಬರಾವ್, ವಿಶ್ವೇಶ್ವರ, ಎನ್.ಹಿರಿಯಣ್ಣ,ಎಚ್.ಎಸ್.ರಾಮಭಟ್ ಎಂಬುವರು ಶಾಲೆಯನ್ನು ಅಭಿವೃದ್ಧಿ ಪಡಿಸಿದರು. ಆದರೆ, ಕಾಡ್ಗಿಚ್ಚು ಬಿದ್ದು ಶಾಲೆ ಬೆಂಕಿಗಾಹುತಿಯಾಯಿತು. ನಂತರ ಶಾಲೆಯನ್ನು ಮೂಡಬಾಗಿಲು ಗ್ರಾಮಕ್ಕೆ ವರ್ಗಾಯಿಸಲಾಯಿತು. ಇದರಿಂದ ಮನನೊಂದ ಬಾಳೆ ಮತ್ತು ನಾಗಲಾಪುರ ಗ್ರಾಮಸ್ಥರು ಹಲವರ ಸಹಕಾರ ಪಡೆದು ಹೊಸಕೆರೆಯಲ್ಲಿ ಮತ್ತೆ ಶಾಲೆಯನ್ನು ನಿರ್ಮಿಸಿದರು.

ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಶಾಲೆ 1961–62ರಲ್ಲಿ ಏಕ ಉಪಾಧ್ಯಾಯ ಕಿರಿಯ ಶಾಲೆಯಾಗಿ ಪ್ರಾರಂಭವಾಯಿತು. ಅಂದು ಒಂದು ಕೊಠಡಿ. ಒಬ್ಬ ಶಿಕ್ಷಕರ ಮಾತ್ರ ಇದ್ದರು. ಮಕ್ಕಳ ದಾಖಲಾತಿ ಹೆಚ್ಚಾಗಿ ಶೈಕ್ಷಣಿಕವಾಗಿ ಪ್ರಗತಿಯಾದಂತೆ 1986ರಲ್ಲಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಯಾಯಿತು.

ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ ತರಗತಿಗೊಬ್ಬ ಶಿಕ್ಷಕ ಎಂಬ ಯೋಜನೆ ಜಾರಿಗೆ ತಂದಿದ್ದರಿಂದ ಹೆಚ್ಚುವರಿಯಾಗಿ ಮೂರು ಶಿಕ್ಷಕರು ನೇಮಕವಾದರು. ಪ್ರಸ್ತುತ ಶಾಲೆಯಲ್ಲಿ 101 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 20 ವರ್ಷಗಳಿಂದ ಶಾಲೆಯು ಶೈಕ್ಷಣಿಕವಾಗಿ ಪ್ರಗತಿಯ ಹಂತದಲ್ಲಿದೆ. ಕಳೆದ ಹಲವಾರು ವರ್ಷಗಳಿಂದ ಮಕ್ಕಳ ಮೇಳ, ಪ್ರತಿಭಾ ಕಾರಂಜಿ, ಅಂಗವಿಕಲ ಮಕ್ಕಳ ಪ್ರತಿಭಾ ಕಾರಂಜಿ, ಕ್ರೀಡಾ ಕೂಟ ನಡೆಸಲಾಗಿದೆ. ಹಲವು ವರ್ಷಗಳಿಂದ ಚಿಂತನ ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಾಲ್ಲೂಕು, ಜಿಲ್ಲೆ ಮತ್ತು ರಾಷ್ಟ್ರಮಟ್ಟದಲ್ಲೂ ಸಾಧನೆ ಮಾಡಿದ್ದಾರೆ.

ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆಯಿಲ್ಲದಂತೆ ಇಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಪೋಷಕರ ಮತ್ತು ದಾನಿಗಳ ಸಹಾಯ ದಿಂದ ಬ್ಲೇಸರ್, ಟೀ ಶರ್ಟ್, ಶೂ, ಟೈ, ಬೆಲ್ಟ್ ಸೌಲಭ್ಯವನ್ನು ಒದಗಿಸಲಾಗಿದೆ. ಶಾಲೆಯ ವ್ಯಾಪ್ತಿಯಲ್ಲಿರುವ ಹಾವುಗೊಲ್ಲರ ಮಕ್ಕಳಿಗೂ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿ ತರುವ ಪ್ರಯತ್ನ ಮಾಡಲಾಗಿದೆ. ಹಲವು ದಾನಿಗಳು ಶಾಲೆಯ ಮಕ್ಕಳಿಗೆ ಸಮವಸ್ತ್ರ, ಪರಿಕರಗಳು, ಸಾಹಿತ್ಯ, ವಿಜ್ಞಾನಗಳ ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದಾರೆ.

ಪ್ರಸ್ತುತ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕೃಷ್ಣನಾಯಕ್, ಶಿಕ್ಷಕರಾಗಿ ಟಿ.ಶ್ರೀನಿವಾಸ್, ಜಿ.ಈಶ, ಕೆ.ಸಿ.ಲಿಸ್ಸಿ, ಜೆ.ಜೋಯಿಸ್, ಲತಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಶಾಲೆ ಇದಾಗಿದೆ. ದಾನಿಗಳು, ಶಾಲಾಭಿವೃದ್ಧಿ ಸಮಿತಿಯವರು, ಹಳೆ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಸಹಕಾರದಿಂದ ಶಾಲೆ ಅಭಿವೃದ್ಧಿ ಪತ್ತದತ್ತ ದಾಪು ಗಾಲಿಟ್ಟಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry