ನಾಯಕನಹಟ್ಟಿ: ₹ 1.35 ಕೋಟಿ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ

7

ನಾಯಕನಹಟ್ಟಿ: ₹ 1.35 ಕೋಟಿ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ

Published:
Updated:

ನಾಯಕನಹಟ್ಟಿ: ತಾಲ್ಲೂಕಿನ ತಳಕು ಹೋಬಳಿಯ ಹಲವು ಗ್ರಾಮಗಳಲ್ಲಿ ₹ 1.35ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಿ.ಸಿ ರಸ್ತೆಗಳ ನಿರ್ಮಾಣಕ್ಕೆ ಶಾಸಕ ಎಸ್.ತಿಪ್ಪೇಸ್ವಾಮಿ ಭೂಮಿ ಪೂಜೆ ನೆರವೇರಿಸಿದರು.

ಇದೇ ವೇಳೆ ಮಾತನಾಡಿ, ‘ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿಯೂ ಮೂಲ ಸೌಕರ್ಯಗಳಾದ ಸುಸಜ್ಜಿತ ರಸ್ತೆಗಳು, ಚರಂಡಿಗಳು, ಬೀದಿದೀಪಗಳು, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ತಳಕು ಹೋಬಳಿಯ ಗಿರಿಯಮ್ಮನಹಳ್ಳಿ, ₹ 50 ಲಕ್ಷ, ಹಿರೇಹಳ್ಳಿ ₹ 17 ಲಕ್ಷ, ತಿಪ್ಪಯ್ಯನಕೋಟೆ ₹ 12 ಲಕ್ಷ, ಕೋಡಿಹಳ್ಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೊನಿ, ತಿಮ್ಮಣ್ಣನಹಳ್ಳಿ, ಮರೇನಹಳ್ಳಿ, ಕೆರೆಮುಂದಲಹಟ್ಟಿ, ತಲಾ ₹ 10 ಲಕ್ಷ ನೀಡಲಾಗಿದೆ’ ಎಂದು ತಿಳಿಸಿದರು.

‘ಪುರಿ ಚನ್ನಯ್ಯನಹಟ್ಟಿ ₹ 6 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಎಲ್ಲಾ ಕಾಮಗಾರಿಗಳ ನಿರ್ಮಾಣದಲ್ಲಿ ಗುತ್ತಿಗೆದಾರರು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಾಗೇ ಕ್ಷೇತ್ರದ ಹಲವು ಗ್ರಾಮಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಇದೇ ವೇಳೆ ತಾಲ್ಲೂಕು ಪಂಚಾಯ್ತಿ ಸದಸ್ಯ ತಿಪ್ಪೇಸ್ವಾಮಿ, ಮನ್ನೇಕೋಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೋಭಾ ತಿಪ್ಪೇಸ್ವಾಮಿ, ಮುಖಂಡರಾದ ದೊಡ್ಡೋಬಯ್ಯ, ಮಲ್ಲಣ್ಣ, ಲಿಂಗಾರೆಡ್ಡಿ, ರಾಜಣ್ಣ, ಗುತ್ತಿಗೆದಾರ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ಆರೋಗ್ಯ ವಿಸ್ತರಣಾ ಚಿಕಿತ್ಸಾಲಯಗಳ ಮಂಜೂರು

ತಳಕು ಹೋಬಳಿಯ ಹಿರೇಹಳ್ಳಿ ಮತ್ತು ಓಬಳಾಪುರ ಗ್ರಾಮದಲ್ಲಿ ಆರೋಗ್ಯ ವಿಸ್ತರಣಾ ಚಿಕಿತ್ಸಾ ಘಟಕಗಳನ್ನು ಮಂಜೂರು ಮಾಡಿಸಲಾಗಿದೆ. ಈ ಗ್ರಾಮಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಂಜೂರಾತಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿತ್ತು. ಮನವಿಗೆ ಸ್ಪಂದಿಸಿ ಶೀಘ್ರವಾಗಿ ಆರೋಗ್ಯ ವಿಸ್ತರಣಾ ಚಿಕಿತ್ಸಾ ಘಟಕಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ಹಿರೇಹಳ್ಳಿ ಮತ್ತು ಓಬಳಾಪುರ ಗ್ರಾಮಗಳು ಪ್ರಾಥಮಿಕ ಕೇಂದ್ರ ಹಾಗೂ ತಾಲ್ಲೂಕು ಆರೋಗ್ಯ ಕೇಂದ್ರದಿಂದ 30ರಿಂದ 40 ಕಿ.ಮೀ ದೂರದಲ್ಲಿವೆ. ತುರ್ತು ಚಿಕಿತ್ಸೆಗೆ ತೊಂದರೆಯಾಗುತ್ತಿತ್ತು. ಈ ಆರೋಗ್ಯ ವಿಸ್ತರಣಾ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಶುಶ್ರೂಷಕರು, ಫಾರ್ಮಸಿಸ್ಟ್, ಸಹಾಯಕರು ಒಳಗೊಂಡಂತೆ ಕಾರ್ಯ ನಿರ್ವಹಿಸಲಿದ್ದಾರೆ. ಇದರಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸಮಸ್ಯೆಗೆ ಅಲ್ಪ ಪ್ರಮಾಣದ ಪರಿಹಾರ ದೊರಕಿದಂತಾಗುತ್ತದೆ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry