ರೈಲು ನಿಲ್ದಾಣಕ್ಕೆ ಸಂಸದರ ದಿಢೀರ್ ಭೇಟಿ

7

ರೈಲು ನಿಲ್ದಾಣಕ್ಕೆ ಸಂಸದರ ದಿಢೀರ್ ಭೇಟಿ

Published:
Updated:

ದಾವಣಗೆರೆ: ಕಾರು ಇಳಿದವರು ಸೀದಾ ಫ್ಲಾಟ್‌ಫಾರಂಗೆ ತೆರಳಿದರು. ಅಲ್ಲಿ ನೆಲದಲ್ಲಿ ಮಲಗಿದ್ದವರನ್ನು ಮಾತನಾಡಿಸಿದರು. ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಶೌಚಾಲಯ, ಸ್ಟೇಷನ್ ಮಾಸ್ಟರ್ ಕಚೇರಿಯನ್ನೂ ಒಳಹೊಕ್ಕು ಹೊರ ಬಂದರು. ಕ್ಯಾಂಟೀನ್‌ಗೆ ತೆರಳಿ ಅಲ್ಲಿ ತಿಂಡಿ ರುಚಿ ನೋಡಿದರು. ಅಲ್ಲಿ ಕುಳಿತದ್ದವರನ್ನ ಮಾತಿಗೆ ಎಳೆದರು. ಕೊನೆಗೆ ಲಗೇಜ್ ರೂಂಗೂ ತೆರಳಿ ಪರಿಶೀಲಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಶುಕ್ರವಾರ ರೈಲು ನಿಲ್ದಾಣಕ್ಕೆ ದಿಢೀರ್‌ ಭೇಟಿ ನೀಡಿದರು. ಫ್ಲಾಟ್‌ಫಾರಂನಲ್ಲಿದ್ದ ಆಸನಗಳು ಸಾಲದೆ ನೆಲದಲ್ಲಿ ಕುಳಿತವರು, ಮಲಗಿದವರನ್ನು ಕಂಡರು. ಇನ್ನಷ್ಟು ಆಸನ ವ್ಯವಸ್ಥೆ ಮಾಡಿ ಎಂದು ಸ್ಟೇಷನ್‌ ಮಾಸ್ಟರ್‌ಗೆ ಸೂಚಿಸಿದರು. ಕ್ಯಾಂಟೀನ್‌ನಲ್ಲಿ ತಿಂಡಿ, ಊಟಕ್ಕೆ ದುಬಾರಿ ದರ ನಿಗದಿಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ರುಚಿ ಇನ್ನಷ್ಟು ಸುಧಾರಿಸಬೇಕು. ದರ ಕಡಿಮೆ ಮಾಡ ಬೇಕು ಎಂದು ಕ್ಯಾಂಟೀನ್‌ ಮಾಲೀಕರಿಗೆ ಸೂಚಿಸಿದರು ಲಗೇಜ್‌ ರೂಂನಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಹಾಗೂ ಕಟ್ಟಡ ಶಿಥಿಲಗೊಂಡಿರುವುದಕ್ಕೆ ರೈಲ್ವೆ ಎಂಜಿನಿಯರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಮಾಧ್ಯಮಗಳೊಂದಿಗೆ ಮಾತ ನಾಡಿದ ಸಂಸದರು, ‘ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕಿದೆ. ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಿದೆ. ಲಗೇಜ್‌ ರೂಂನಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಪಾರ್ಕಿಂಗ್‌ ಜಾಗ ಸಾಕಾಗುತ್ತಿಲ್ಲ. ಹೆಚ್ಚಿನ ಟಿಕೆಟ್‌ ಕೌಂಟರ್‌ ಇಲ್ಲ. ಈ ಬಗ್ಗೆ ಹಲವು ದೂರುಗಳಿದ್ದವು. ಆದರೆ, ಈ ರೈಲು ನಿಲ್ದಾಣದಲ್ಲಿ ಉತ್ತಮ ಸೌಲಭ್ಯಗಳಿವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ನನಗೆ ಪತ್ರ ಬರೆದ  ಹಿನ್ನೆಲೆಯಲ್ಲಿ ಪರಿಶೀಲಿಸಲು ದಿಢೀರ್ ಭೇಟಿ ನೀಡಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry