ರೂಪದಲ್ಲಿ ಚೀನಿ, ಮನಸ್ಸಿನಲ್ಲಿ ಭಾರತೀಯ

7

ರೂಪದಲ್ಲಿ ಚೀನಿ, ಮನಸ್ಸಿನಲ್ಲಿ ಭಾರತೀಯ

Published:
Updated:
ರೂಪದಲ್ಲಿ ಚೀನಿ, ಮನಸ್ಸಿನಲ್ಲಿ ಭಾರತೀಯ

ದಾವಣಗೆರೆ: ‘ನಮ್ಮ ರೂಪ ಚೀನಿಯರಂತೆ ಇರಬಹುದು. ಆದರೆ, ಮನಸ್ಸಿನಲ್ಲಿ ಭಾರತೀಯತೆ ತುಂಬಿದೆ. ರೂಪದಲ್ಲಿ ಭಿನ್ನವಾಗಿದ್ದರೂ ಸಂಸ್ಕೃತಿ ಹಿಂದೂಸ್ತಾನದ್ದೇ...’ ಹೀಗೆ ಮನದಾಳ ಹಂಚಿಕೊಂಡಿದ್ದು, ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು.

ಅಖಿಲ ಭಾರತೀಯ ವಿದ್ಯಾರ್ಥಿ ‍ಪರಿಷತ್‌ (ಎಬಿವಿಪಿ) ಆಯೋಜಿಸಿದ್ದ ಅಂತರರಾಜ್ಯ ಜೀವನಾನುಭವ ಕಾರ್ಯಕ್ರಮದಡಿ ದಾವಣಗೆರೆಗೆ ಬಂದಿದ್ದ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿನ ದೃಶ್ಯಕಲಾ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಪರಿಚಯಿಸಿಕೊಂಡರು. ಅವರ ಪ್ರಾದೇಶಿಕ ಪರಂಪರೆಯ ಮಹತ್ವವನ್ನೂ ಬಿಚ್ಚಿಟ್ಟರು.

ಗುರುವಾರ ಸಂಜೆ ದಾವಣಗೆರೆಗೆ ಬಂದಿದ್ದ 30 ವಿದ್ಯಾರ್ಥಿಗಳಿಗೆ ಎಬಿವಿಪಿ ಕಾರ್ಯಕರ್ತರ ಮನೆಗಳಲ್ಲಿ ಆತಿಥ್ಯ ನೀಡಲಾಗಿತ್ತು. ಇಲ್ಲಿನ ಆಹಾರ ಪದ್ಧತಿ, ಸಂಸ್ಕೃತಿ ಪರಿಚಯಿಸಿಕೊಡುವ ಪ್ರಯತ್ನ ನಡೆಸಲಾಗಿತ್ತು.

ಅರುಣಾಚಲಪ್ರದೇಶದ ವಿದ್ಯಾರ್ಥಿ ಸ್ರಿಂಗ್‌ ದೋರ್ಜಿ ಸೋಯ್‌ಸೊ ಮಾತನಾಡಿ, ‘ನಮ್ಮ ರಾಜ್ಯ ಚೀನಾಗೆ ತುಂಬಾ ಹತ್ತಿರದಲ್ಲಿದೆ. ನಾವು ನೋಡಲು ಚೀನಿಯರಂತೆ ಕಾಣುತ್ತೇವೆ. ನಾವು ಕರ್ನಾಟಕಕ್ಕೆ ಬರುವಾಗ ಜನರು ನಮ್ನನ್ನೂ ಚೀನಿಯರು ಎಂದುಕೊಂಡೇ ಮಾತನಾಡಿಸಿದರು. ನಾವು ಹಿಂದಿಯಲ್ಲಿ ಮಾತನಾಡಿದಾಗಲೇ ನಾವೂ ಹಿಂದೂಸ್ತಾನದವರು ಎಂದು ಅವರಿಗೆ ತಿಳಿಯಿತು. ನಮ್ಮದು ವಿಭಿನ್ನ ಸಂಸ್ಕೃತಿಯರಾದರೂ ನಾವು ಅಪ್ಪಟ ಭಾರತೀಯರು’ ಎಂದು ಹೇಳಿದರು.

ಅರುಣಾಚಲ ಪ್ರದೇಶದ ವಾತಾವರಣ ತುಂಬಾ ತಂಪು. ದಾವಣಗೆರೆ ಬೆಚ್ಚಗೆ ಇದೆ. ಕರ್ನಾಟಕದ ಜನ ತುಂಬಾ ಒಳ್ಳೆಯವರು ಪ್ರೀತಿಯಿಂದ ಸತ್ಕರಿಸುತ್ತಾರೆ. ಇಡ್ಲಿ, ದೋಸೆ ರುಚಿ ಸವಿದೆ, ಅದ್ಭುತವಾಗಿತ್ತು. ಇಲ್ಲಿನ ಮಹಿಳೆಯರು ತುಂಬಾ ಸುಂದರವಾಗಿದ್ದಾರೆ ಎಂದರು.

ಅಸ್ಸಾಂನ ಎಜುಜಲಿ, ಮಣಿಪುರದ ದಯಾಲ್‌ ಬಾ ದಾವಣಗೆರೆಯ ಆತಿಥ್ಯವನ್ನು ಮನಸಾರೆ ಹೊಗಳಿದರು. ನಂತರ ಈಶಾನ್ಯ ರಾಜ್ಯಗಳ ಜಾನಪದ ಕಲೆಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

ಎಬಿವಿಪಿ ಮುಖಂಡ ಜಿತೇಂದ್ರ ದತ್ತಾ ಮಾತನಾಡಿ, ‘ಗುವಾಹಟಿ ಬಿಟ್ಟರೆ ಈಶಾನ್ಯ ರಾಜ್ಯಗಳ ಪ್ರದೇಶಗಳ ಪರಿಚಯವೇ ಅಷ್ಟಾಗಿ ಇರಲಿಲ್ಲ. ಹೀಗಾಗಿ ಈಶಾನ್ಯ ರಾಜ್ಯಗಳ ಸಂಸ್ಕೃತಿಯನ್ನು ಪರಿಚಯಿಸುವ, ದೇಶವನ್ನು ಒಗ್ಗೂಡಿಸುವ ಉದ್ದೇಶದಿಂದ ಎಬಿವಿಪಿ 50 ವರ್ಷಗಳಿಂದ ಅಂತರರಾಜ್ಯ ಜೀವನಾನುಭವ ಶಿಬಿರವನ್ನು ಆಯೋಜಿಸುತ್ತಿದೆ’ ಎಂದು ಹೇಳಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಡಾ.ಎಸ್‌.ವಿ.ಹಲಸೆ, ವೈದ್ಯ ಡಾ.ಸುಬೋದ್‌ಶೆಟ್ಟಿ, ಎಬಿವಿಪಿ ಸಹ ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ್‌ ಮಾತನಾಡಿದರು. ಕೆ.ವಿ.ಶಂಕರನಾರಾಯಣ, ಸ್ವಾಮಿ ಮಳ್ಳಾಪುರ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry