ಬೇಸಿಗೆ: ಮುಂಜಾಗ್ರತಾ ಕ್ರಮ ಕೈಗೊಳ್ಳಿ

7

ಬೇಸಿಗೆ: ಮುಂಜಾಗ್ರತಾ ಕ್ರಮ ಕೈಗೊಳ್ಳಿ

Published:
Updated:
ಬೇಸಿಗೆ: ಮುಂಜಾಗ್ರತಾ ಕ್ರಮ ಕೈಗೊಳ್ಳಿ

ಹಾವೇರಿ: ‘ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಹಳ್ಳಿಗಳ ವಿವರ ಸಂಗ್ರಹಿಸಿ, ಅಗತ್ಯ ಅನುದಾನದ ಪ್ರಾಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಸೂಚನೆ ನೀಡಿದರು. ಜಿಲ್ಲಾ ಪಂಚಾಯ್ತಿಯಲ್ಲಿ ಶುಕ್ರ ವಾರ ನಡೆದ ತಿಂಗಳ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂಗಾರಿನಲ್ಲಿ ಉತ್ತಮ ಮಳೆ ಯಾಗಿದ್ದು, ಅಂತರ್ಜಲ ಮಟ್ಟ ಸುಧಾರಣೆಯಾಗಿದೆ. ಅಲ್ಲದೇ, ಹಲವು ಕೆರೆಗಳನ್ನು ತುಂಬಿಸಲಾಗಿದೆ. ಆದರೂ, ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರುಗಳು ಬಂದಿವೆ. ಸವಣೂರ ತಾಲ್ಲೂಕಿನ 14 ಗ್ರಾಮಗಳಲ್ಲಿ ಅಂತರ್ಜಲ ಕಡಿಮೆಯಾಗಿದೆ ಎಂದು ಗ್ರಾಮಸ್ಥರೇ ದೂರಿದ್ದಾರೆ ಎಂದರು.

ಸರ್ಕಾರದ ವಿವಿಧ ಸೌಲಭ್ಯಗಳ ಅಡಿ ಮಂಜೂರಾದ ಕೊಳವೆಬಾವಿಗಳನ್ನು ತ್ವರಿತವಾಗಿ ಕೊರೆಯಿಸಬೇಕು. ಸಣ್ಣ ನೀರಾವರಿ ಇಲಾಖೆಯ ಕೊಳವೆ ಬಾವಿಗಳಿಗೆ ಪಂಪ್ ಮತ್ತು ಪೈಪ್‌ಗಳನ್ನು ಅಳವಡಿಸಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಿ ಎಂದರು.

‘ಪಶು ಭಾಗ್ಯ ಯೋಜನೆ’ಯ ಫಲಾನುಭವಿಗಳಿಗೆ ಸಾಲ ನೀಡಲು ಕೆಲ ಬ್ಯಾಂಕ್‌ ವ್ಯವಸ್ಥಾಪಕರು ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ. ಕುರುಬಗೊಂಡ, ಕಾಟೇನಹಳ್ಳಿ ಮತ್ತಿತರೆಡೆ ಈ ಸಮಸ್ಯೆ ಎದುರಾಗಿದ್ದು, ಪಶು ವೈದ್ಯಕೀಯ ಮತ್ತು ಪಶು ಪಾಲನಾ ಇಲಾಖೆಯ ಉಪನಿರ್ದೇಶಕರು ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸಮಾಲೋಚನೆ ನಡೆಸಿ, ಸಮಸ್ಯೆ ಪರಿಹರಿಸಬೇಕು ಎಂದು ಸೂಚನೆ ನೀಡಿದರು.

‘ಮಾತೃ ಪೂರ್ಣ ಯೋಜನೆ’ ಅಡಿ ಗರ್ಭಿಣಿಯರು ಹಾಗೂ ಬಾಣಂತಿಯರು ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಬಂದು ಪೌಷ್ಟಿಕ ಆಹಾರ ಸೇವಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಸೀಮೆ ಎಣ್ಣೆ ವಿತರಣೆಗೆ ಬಯೋಮೆಟ್ರಿಕ್ ಜಾರಿಗೊಂಡಿದೆ. ಕೆಲವೆಡೆ ಬಯೋಮೆಟ್ರಿಕ್‌ ಉಪಕರಣ ಇಲ್ಲದ ಕಾರಣ ಜನ ಕೆಲಸ ಬಿಟ್ಟು ಸರದಿ ನಿಲ್ಲುವ ಪರಿಸ್ಥಿತಿ ಇದೆ. ಅಗತ್ಯ ತಾಂತ್ರಿಕ ಉಪಕರಣಗಳನ್ನು ಒದಗಿಸಬೇಕು ಎಂದರು.

ಪ್ರಯೋಗಾಲಯ ತಂತ್ರಜ್ಞರನ್ನು ಹೊಂದಿದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ರಕ್ತ ಪರೀಕ್ಷೆ ಮಾಡಬೇಕು. ರೋಗಿಗಳನ್ನು ಯಾವುದೇ ಕಾರಣಕ್ಕೂ ಖಾಸಗಿ ಪ್ರಯೋಗಾಲಯಗಳಿಗೆ ಕಳುಹಿಸಬಾರದು. ಅಗತ್ಯ ಸೌಲಭ್ಯಗಳನ್ನು ಸರ್ಕಾರಿ ಆಸ್ಪತ್ರೆಯಲ್ಲೇ ದೊರಕಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿಲ್ಪಾ ನಾಗ್ ಸೂಚನೆ ನೀಡಿದರು.

ಆಡಳಿತದಲ್ಲಿ ಕನ್ನಡ ಬಳಕೆ ಕುರಿತು ವರದಿ ಸಲ್ಲಿಸಲು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಕಾಶ್‌ ಜೈನ್ ಆಕ್ಷೇಪ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಪ್ರಕಾಶ ಬನ್ನಿಕೋಡ, ರಾಘವೇಂದ್ರ ತಹಸೀಲ್ದಾರ್, ಅಬ್ದುಲ್ ಮುನಾಫ್ ಯಲಿಗಾರ ಇದ್ದರು.

* * 

ಅನುಮತಿ ಪಡೆಯದೇ ಸಭೆಗೆ ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡಿ

ಶಿಲ್ಪಾ ನಾಗ್ ಸಿಇಒ, ಜಿ.ಪಂ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry