ಜಕ್ರಿ ಬ್ಯಾರಿಯ ದೇಹದಾನ ಪತ್ರ

7

ಜಕ್ರಿ ಬ್ಯಾರಿಯ ದೇಹದಾನ ಪತ್ರ

Published:
Updated:
ಜಕ್ರಿ ಬ್ಯಾರಿಯ ದೇಹದಾನ ಪತ್ರ

‘ಜಕ್ರಿ ಬ್ಯಾರಿ ವಿಧಿವಶರಾದರಂತೆ’ ಎಂದು ದುಃಖ- ದುಮ್ಮಾನದೊಂದಿಗೆ ಪತ್ನಿ ಬಂದು ಹೇಳಿದಾಗ, ನಾನು ನನ್ನಷ್ಟಕ್ಕೆ ‘ಇನ್ನಾಲಿಲ್ಲಾಹಿ ವಇನ್ನಾಇಲಾಹಿ ರಾಜಿವೂನ್’ ಎಂದು ಹೇಳಿಕೊಂಡು ಒಂದು ಕ್ಷಣ ವಿಚಲಿತನಾದೆ.

ಮರಣ ನಿಶ್ಚಿತ, ಆದರೆ, ಇಷ್ಟು ಬೇಗ ಅವರ ಮರಣ ಸಂಭವಿಸೀತು ಎಂದು ನಾನು ಅಂದುಕೊಂಡಿರಲಿಲ್ಲ. ಅವರ ನಿಧನದ ಸುದ್ದಿಯ ಗುಂಗಿನಿಂದ ಹೊರಬರಲಾಗದೆ ಚಡಪಡಿಸು ತ್ತಿದ್ದಂತೆಯೇ, ‘ಮುಂಜಾನೆ ಎದ್ದು ನಿತ್ಯಕರ್ಮ ಮುಗಿಸಿ ಅತ್ಯಂತ ಲವಲವಿಕೆಯಿಂದ ಚಹಾ-ನಾಷ್ಟ ಮಾಡಿ ದಿನಪತ್ರಿಕೆಯನ್ನು ಕೈಗೆತ್ತಿಕೊಂಡು ಅಂಗಳಕ್ಕೆ ಇಳಿಯುತ್ತಿದ್ದಂತೆಯೆ ದೊಪ್ಪನೆ ಕುಸಿದು ಬಿದ್ದು ಪ್ರಜ್ಞೆ ತಪ್ಪಿಬಿದ್ದರಂತೆ. ತಕ್ಷಣ ಮನೆಯವರು ಯೆನಪೊಯ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲವಂತೆ. ಇನ್ನೊಂದು ಅರ್ಧ ಗಂಟೆಯಲ್ಲಿ ಮೃತದೇಹವನ್ನು ಮನೆಗೆ ತರುತ್ತಾರಂತೆ’ ಎಂದು ಪತ್ನಿ ವರದಿ ಒಪ್ಪಿಸಿದಳು.

ಪತ್ನಿ ಫೌಝಿಯಾಳ ಮಾತು ಕೂಡ ನನಗೆ ಯಾಂತ್ರಿಕ ಎಂಬಂತೆ ಕಂಡುಬಂತು. ನನ್ನ ಮೌನ ಕಂಡು ಚಕಿತಳಾದ ಆಕೆ, ‘‘ಮರಣ ಜನ್ಮಸಿದ್ಧ ಹಕ್ಕು’ ಎಂಬ ನಿಮ್ಮ ಹೇಳಿಕೆಯನ್ನು ನೀವು ಮರೆತುಬಿಟ್ಟಿರಾ?’’ ಎಂದು ಜ್ಞಾಪಿಸಿದಳು.

‘ಹಾಗಲ್ಲ...’ ಎಂದು ವಾಸ್ತವಕ್ಕಿಳಿದ ನಾನು ಜಕ್ರಿಬ್ಯಾರಿಯ ಅಂತಿಮದರ್ಶನಕ್ಕಾಗಿ ಅವರ ಮನೆಯತ್ತ ಹೊರಡಲು ಮುಂದಾದೆ.

***

ಜಮೀನುಗಳಿಗೆ ಉರುಟುರುಟಾದ ಕಪ್ಪುಕಲ್ಲಿನಿಂದ ಆವರಣ ಗೋಡೆ ಕಟ್ಟುವುದರಲ್ಲಿ ನಿಸ್ಸೀಮರಾಗಿದ್ದ ಜಕ್ರಿ ಬ್ಯಾರಿ ಊರವರ ಆಪದ್ಭಾಂಧವ ಎಂದರೂ ತಪ್ಪಿಲ್ಲ. ಅವರು ಕಲಿತದ್ದು, ಆ ಕಾಲದ ಒಂದೂವರೆ ತರಗತಿ ಅಥವಾ ಒಂದೂವರೆ ವರ್ಷ. ಕಡುಬಡತನದಲ್ಲಿ ಹುಟ್ಟಿದರೂ ಕೂಡ ಸ್ವಾಭಿಮಾನಿ, ಸತ್ಯವಂತ. ಮೇಲಾಗಿ ಇಮಾನ್ದಾರಿ (ಧರ್ಮನಿಷ್ಠೆಯುಳ್ಳ ವ್ಯಕ್ತಿ). ಎಲ್ಲಕ್ಕಿಂತ ಮುಖ್ಯವಾಗಿ ಜಾತ್ಯತೀತ ಮನುಷ್ಯ.

ಸಾಲಾಗಿ ಹುಟ್ಟಿದ ಒಂಬತ್ತು ಮಕ್ಕಳನ್ನು ಸಾಕಲು ಅಸಾಧ್ಯ ಎಂದು ಬಗೆದ ಅಬ್ದುರ್ರಹ್ಮಾನ್ ತನ್ನ ಪತ್ನಿ-ಮಕ್ಕಳನ್ನು ತೊರೆದು ನಿಗೂಢವಾಗಿ ಹೋಗಿದ್ದರು. ಹಾಗೇ ಹೋದವರ ಪತ್ತೆಯೇ ಇರಲಿಲ್ಲ. ಗಂಡ, ಇಂದು ಬಂದಾರು, ನಾಳೆ ಬಂದಾರು ಎಂದು ಪತ್ನಿ ಐಸಮ್ಮ ಕಾದು ಕುಳಿತದ್ದೇ ಬಂತು.

ವರ್ಷ ಐದು ಕಳೆದರೂ ಗಂಡ ಬಾರದಿರುವುದನ್ನು ಕಂಡ ಐಸಮ್ಮ ಎಲ್ಲಾ ಕಡೆಯೂ ಗಂಡನಿಗಾಗಿ ಹುಡುಕಾಡಿ ಸೋತು ಸುಣ್ಣವಾದರು. ಕೊನೆಗೆ ಅವರು ಬರಲಾರರು ಎಂದು ಭಾವಿಸಿ ಮಕ್ಕಳನ್ನು ಸ್ವತಃ ತಾನೇ ಸಾಕುವ ಹೊಣೆ ಹೊತ್ತರು. ಹಿರಿಯ ಮಗ ಝಕರಿಯಾ ಮನೆಯ ಸ್ಥಿತಿಗತಿಯನ್ನು ಅರಿತುಕೊಂಡು ಶಾಲೆ ಕೈದು ಮಾಡಿ ಜಬ್ಬಾರ್ ಹಾಜಿಯ ತೋಟದಲ್ಲಿ ಗೇರು-ಅಡಿಕೆ ಹೆಕ್ಕುವ ಕೆಲಸಕ್ಕೆ ಸೇರಿಕೊಂಡ. ಹುಡುಗನ ಪ್ರಾಮಾಣಿಕ ದುಡಿಮೆಯನ್ನು ಕಂಡು ಮೆಚ್ಚಿದ ಜಬ್ಬಾರ್ ಹಾಜಿ ತನ್ನ ಸೋದರತ್ತೆಯ ಮಗಳನ್ನು ಝಕರಿಯಾನಿಗೆ ಮದುವೆ ಮಾಡಿಕೊಟ್ಟು ಧನ್ಯರಾದರು.

18ನೇ ಹರೆಯಕ್ಕೆ ವಿವಾಹವಾಗಿ 20 ವರ್ಷ ಪ್ರಾಯವಾಗುವಾಗ ಎರಡು ಮಕ್ಕಳ ತಂದೆಯಾದ ಝಕರಿಯಾ ತನ್ನ ತಾಯಿ- ತಮ್ಮ- ತಂಗಿಯರಿಗಾಗಿ ಬದುಕನ್ನು ಒತ್ತೆ ಇಟ್ಟವರೆಂಬಂತೆ ಕೆಲಸ ಮಾಡುತ್ತಿದ್ದರು.

ಉರುಟುರುಟಾದ ಕಪ್ಪು ಕಲ್ಲನ್ನು ಒತ್ತೊತ್ತಾಗಿ ಜೋಡಿಸಿ ಆವರಣ ಗೋಡೆ ಕಟ್ಟುವ ಸೀದಿಯಬ್ಬರ ಬಳಿ ಜಬ್ಬಾರ್ ಹಾಜಿಯ ಸೂಚನೆ ಮೇರೆಗೆ ಸಹಾಯಕ್ಕಾಗಿ ಕೆಲಸಕ್ಕೆ ಸೇರಿಕೊಂಡ ಝಕರಿಯಾ, ಒಂದೇ ವರ್ಷದಲ್ಲಿ ಆ ಕೆಲಸದಲ್ಲಿ ಹಿಡಿತ ಸಾಧಿಸಿದ.

ಸೀದಿಯಬ್ಬರ ನಿಧನದ ಬಳಿಕ ಆಸುಪಾಸಿನ ನಾಲ್ಕೈದು ಗ್ರಾಮಗಳಿಗೆ ತನ್ನ ಕೆಲಸದ ವ್ಯಾಪ್ತಿ ವಿಸ್ತರಿಸಿದ. ಈಗ ಝಕರಿಯಾರ ಬಳಿ ಮೂರು ನಾಲ್ಕು ಮಂದಿ ಕೆಲಸಕ್ಕಿದ್ದಾರೆ. ಒಳ್ಳೆಯ ಆದಾಯವೂ ಇದೆ. ಮಾಡಿ ಮುಗಿಸದಷ್ಟು ಕೆಲಸಕ್ಕೆ ಕರೆಗಳು ಬರುತ್ತಿವೆ. ದಿನಗೂಲಿಯ ಬದಲು ಕೆಲಸದ ಗುತ್ತಿಗೆ ವಹಿಸಿದ ಬಳಿಕವಂತೂ ಆದಾಯ ಹೆಚ್ಚತೊಡಗಿತ್ತು.

ಹಾಗಂತ ಝಕರಿಯಾ ಬೀಗಲಿಲ್ಲ. ತನ್ನ ಬಡತನವನ್ನು ಮರೆಯಲಿಲ್ಲ. ಊರಿನ ಮಟ್ಟಿಗೆ ಸ್ಥಿತಿವಂತರ ಸಾಲಿನಲ್ಲಿ ಝಕರಿಯಾ ಸೇರಿಕೊಂಡರು. ಆದರೂ ಆರಾಮ ಕುರ್ಚಿಯಲ್ಲಿ ಕುಳಿತು ಕಾಲ ಕಳೆಯುವ ಮನಸ್ಸನ್ನು ಮಾಡಲಿಲ್ಲ. ಒಂದೆಡೆ ಮೈಮುರಿದು ಕೆಲಸ ಮಾಡುತ್ತಲೇ, ಬಿಡುವಿದ್ದಾಗಲೆಲ್ಲಾ ಊರವರಿಗೆ ರೇಶನ್ ಕಾರ್ಡ್, ವಿಧವಾ ವೇತನ, ವಿದ್ಯಾರ್ಥಿ ವೇತನ, ಮತದಾರರ ಗುರುತಿನ ಚೀಟಿಯನ್ನು ಉಚಿತವಾಗಿ ಮಾಡಿಸಿಕೊಡುತ್ತಿದ್ದರು. ಕಷ್ಟಕಾಲದಲ್ಲಿ ಬಂದು ಕೇಳಿದವರಿಗೆ ಇಲ್ಲ ಎನ್ನದೆ ತನ್ನಲ್ಲಿದ್ದಷ್ಟು ಹಣವನ್ನು ನೀಡಿ ಸಹಕರಿಸುತ್ತಿದ್ದರು.

ಬಾಲ್ಯದ ಝಕರಿಯಾ, ಯೌವ್ವನದಲ್ಲಿ ಜಕ್ರಿ, ಮಧ್ಯವಯಸಿನಲ್ಲಿ ಜಕ್ರಿಯಾಕ ಆಗಿ, ಇಳಿವಯಸ್ಸಿನಲ್ಲಿ ಜಕ್ರಿಬ್ಯಾರಿಯಾಗಿ ಗುರುತಿಸಿಕೊಂಡರು. ಊರಲ್ಲಿ ವರ್ಷಂಪ್ರತಿ ರಕ್ತದಾನ-ವೈದ್ಯಕೀಯ ಶಿಬಿರ, ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ರಂಜಾನ್‌ನಲ್ಲಿ ಅಕ್ಕಿ ಸಾಮಗ್ರಿ ವಿತರಣೆ, ಶ್ರಮದಾನದ ಮೂಲಕ ರಸ್ತೆ ದುರಸ್ತಿ, ಬಸ್ ತಂಗುದಾಣ ಶುಚಿಗೊಳಿಸುವುದು, ಬೇಸಿಗೆ ಕಾಲದಲ್ಲಿ ನೀರು ಪೂರೈಕೆ ಇಂತಹ ಕಾರ್ಯಕ್ರಮಗಳಿಗೆ ನೇತೃತ್ವ ನೀಡುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ವರ್ಷಂಪ್ರತಿ ಕೋಮುಸೌಹಾರ್ದ ಸಮಾರಂಭ ಏರ್ಪಡಿಸುವ ಮೂಲಕ ಎಲ್ಲ ಧರ್ಮೀಯರ ಉಚಿತ ಸಾಮೂಹಿಕ ವಿವಾಹ ನೆರವೇರಿಸುತ್ತಿದ್ದರು. ಊರಲ್ಲಿ ಕೋಮುಗಲಭೆಗೆ ಆಸ್ಪದ ನೀಡದಂತೆ ಸದಾ ಎಚ್ಚೆತ್ತುಕೊಳ್ಳುತ್ತಿದ್ದರು.

ಯುವಕರು ದಾರಿ ತಪ್ಪಿದಾಗ ಬುದ್ಧಿವಾದ ಹೇಳುತ್ತಿದ್ದರು. ಆವೇಶದಲ್ಲಿ ಆಡುವ ಮಾತು, ವರ್ತನೆಯಿಂದ ಕೋಮುಗಲಭೆಗೆ ಹೇತುವಾಗುವಂತಹ ಪ್ರಸಂಗಗಳನ್ನು ಚಿವುಟಿ ಹಾಕುತ್ತಿದ್ದರು. ಹಾಗಾಗಿ ಜಕ್ರಿ ಬ್ಯಾರಿ ಎಲ್ಲರಿಗೂ ಬೇಕು. ಎಲ್ಲರೂ ಅವರನ್ನು ಪ್ರೀತಿಸುತ್ತಿದ್ದರು. ಗೌರವಿಸುತ್ತಿದ್ದರು. ಅವರ ಮಾತಿಗೊಂದು ಬೆಲೆ ಇತ್ತು.

ತನ್ನ 55ರ ಹರೆಯದವರೆಗೂ ಮಸೀದಿ- ಮದರಸದ ವಠಾರದಲ್ಲಿ ನಡೆಯುವ ಉರುಸ್, ಮೌಲೂದ್, ರಾತೀಬ್, ಮಿಲಾದುನ್ನೆಬಿ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದ ಜಕ್ರಿ ಬ್ಯಾರಿ ಮೆಲ್ಲನೆ ಆ ಸಂಪ್ರದಾಯದಿಂದ ದೂರ ಸರಿಯತೊಡಗಿದರು. ಇತರ ಎಲ್ಲದರಲ್ಲೂ ಮುಂಚೂಣಿಯಲ್ಲಿದ್ದ ಜಕ್ರಿ ಬ್ಯಾರಿ ಈ ವಿಷಯದಲ್ಲಿ ದೂರ ಸರಿಯುತ್ತಿರುವುದನ್ನು ಮನಗಂಡ ಕೆಲವರು ಅವರಿಗೆ ‘ಮುಕ್ಕಾಗಂಟೆ’ ಎಂಬ ಹಣೆಪಟ್ಟಿ ಕಟ್ಟಿದರು.

ಮಜೀದಾಕರ ಲಕ್ಕಿಸ್ಟಾರ್ ಹೋಟೆಲಿನಲ್ಲಿ ಕುಳಿತು ಕಾಲೇಜು ಹುಡುಗರ ಮುಂದೆ ಉರೂಸ್, ಮೌಲೂದ್, ರಾತೀಬ್, ಮಿಲಾದುನ್ನೆಬಿಗೆ ಇಸ್ಲಾಮಿನಲ್ಲಿ ಯಾವುದೇ ಮಹತ್ವವಿಲ್ಲ ಎಂದು ಹೇಳಿದ್ದನ್ನೇ ನೆಪ ಮಾಡಿಕೊಂಡ ಒಂದು ಗುಂಪು ಊರಿನ ಮೈಮೂನ ಪಳ್ಳಿಯ ಆಡಳಿತ ಕಮಿಟಿಯಿಂದ ವಜಾ ಮಾಡಿಸುವಲ್ಲಿ ಯಶಸ್ವಿಯಾದರು. ಇದರಿಂದ ಜಕ್ರಿ ಬ್ಯಾರಿ ಅಧೀರನಾಗಲಿಲ್ಲ. ತನ್ನ ಧಾರ್ಮಿಕ ನಿಲುವನ್ನು ಸ್ಪಷ್ಟ ಮಾತಿನಲ್ಲಿ ಹೇಳತೊಡಗಿದರು.

ಕಾಲೇಜು ಮೆಟ್ಟಿಲು ಹತ್ತಿದ ಕೆಲವು ಮಕ್ಕಳಿಗೆ ಜಕ್ರಿ ಬ್ಯಾರಿಯ ಮಾತುಗಳು ಇಷ್ಟವಾದವು. ಅವರು ಗುಪ್ತವಾಗಿ ಜಕ್ರಿ ಬ್ಯಾರಿಯ ಬಳಿ ಸುಳಿದಾಡಿ ಧಾರ್ಮಿಕ ವಿಚಾರಗಳನ್ನು ಕೇಳಿ ತಿಳಿದುಕೊಳ್ಳತೊಡಗಿದರು. ಮದರಸದ ಮೆಟ್ಟಿಲನ್ನೇ ಹತ್ತದ ಜಕ್ರಿಬ್ಯಾರಿ ಜೀವನಾನುಭವವನ್ನು ಬಂಡವಾಳವಾಗಿಸಿಕೊಂಡು ತನ್ನ ಬುದ್ಧಿಮತ್ತೆಯ ಮೂಲಕ ಕಾಲಕ್ಕೆ ತಕ್ಕಂತೆ ಬದಲಾಗಿ ಬದುಕಿನ ವಾಸ್ತವ ಅರಿತುಕೊಂಡ ಸಂತೃಪ್ತಿಯಲ್ಲಿದ್ದರು.

ಊರಲ್ಲಿ ತನ್ನ ಧಾರ್ಮಿಕ ವಿಚಾರಧಾರೆಗೆ ಮನಸೋತ 10–12 ಯುವಕರಿದ್ದರು ಕೂಡ ಜಕ್ರಿ ಬ್ಯಾರಿ ತನಗೆ ಕಟ್ಟಲ್ಪಟ್ಟ ‘ಮುಕ್ಕಾಗಂಟೆ’ ಎಂಬ ಹಣೆಪಟ್ಟಿಯಿಂದ ಮುಕ್ತರಾಗಲು ಬಯಸಿದ್ದರು. ಮಸೀದಿಯ ಪದಾಧಿಕಾರಿ ಸ್ಥಾನದಿಂದ ವಜಾಗೊಂಡರೂ, ನಮಾಝ್‌ಗಾಗಿ ಮಸೀದಿಗೆ ಹೋಗುವುದನ್ನು ನಿಲ್ಲಿಸಿರಲಿಲ್ಲ. ಅದು ಹಲವರಿಗೆ ಇಷ್ಟವಾಗದ ವಿಚಾರವಾಗಿತ್ತು. ಹೇಗಾದರು ಮಾಡಿ ಜಕ್ರಿ ಬ್ಯಾರಿ ಮಸೀದಿಗೆ ಕಾಲಿಡದಂತೆ ತಡೆಯಬೇಕು ಎಂದು ಪ್ರಯತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ. ‘ಯುವಕರ ತಲೆಹಾಳು ಮಾಡುವುದಾದರೆ ಜಕ್ರಿ ಬ್ಯಾರಿ ಮಸೀದಿಗೆ ಬರಬಾರದು’ ಎಂಬ ಒಕ್ಕಣೆಯ ಬೋರ್ಡ್ ಹಾಕಿದ್ದನ್ನು ಕಂಡು ಜಕ್ರಿ ಬ್ಯಾರಿ ಅಧೀರರಾದರು. ಈ ಮಸೀದಿಯ ನಿರ್ಮಾಣಕ್ಕಾಗಿ ತಾನು ಪಟ್ಟ ಪಾಡನ್ನು ನೆನೆದು ಕಣ್ಣೀರರಾದರು.

ಎಲ್ಲಕ್ಕಿಂತ ಮುಖ್ಯವಾಗಿ ತಾನು ಕಷ್ಟಪಟ್ಟು ಸಾಕಿ- ಸಲಹಿದ ಒಡಹುಟ್ಟಿದ ಸಹೋದರ-ಸಹೋದರಿಯರು, ಇಬ್ಬರು ಮಕ್ಕಳು ಕೂಡ ತನ್ನನ್ನು ಅಸ್ಪೃಶ್ಯನಂತೆ ಕಂಡುದು ಜಕ್ರಿ ಬ್ಯಾರಿಯ ಸ್ವಾಭಿಮಾನಕ್ಕೆ ಹೊಡೆತ ನೀಡಿದಂತಿತ್ತು. ಪತ್ನಿ ಆಯಿಶಾ ಆಸರೆಯಾಗಿ ನಿಲ್ಲದಿದ್ದರೆ ತಾನು ಯಾವತ್ತೋ ಮಾನಸಿಕವಾಗಿ ಕೊರಗಿ ಮಣ್ಣಾಗುತ್ತಿದ್ದೆ ಎಂದು ಜಕ್ರಿಬ್ಯಾರಿ ಹಿಂದೊಮ್ಮೆ ನನ್ನಲ್ಲಿ ಹೇಳಿದ ನೆನಪು.

ಅಂದಹಾಗೆ, ನನ್ನ ಮನೆ ಪಕ್ಕವೇ ಜಕ್ರಿ ಬ್ಯಾರಿಯ ಮನೆಯಿತ್ತು. ನಾನವರನ್ನು ಹತ್ತಾರು ವರ್ಷದಿಂದ ಬಲ್ಲೆ. ನಾಲ್ಕೈದು ವರ್ಷದಿಂದ ಆತ್ಮೀಯನೂ ಆಗಿದ್ದೆ. ಬಿಡುವಿದ್ದಾಗಲೆಲ್ಲಾ ನಾನವರ ಮನೆಗೆ ತೆರಳಿ ಮಾತುಕತೆ ನಡೆಸುತ್ತಿದ್ದೆ. ಪ್ರಚಲಿತ ರಾಜಕೀಯ, ಸಾಮಾಜಿಕ, ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಿದ್ದರು. ಒಂದೆರೆಡು ಬಾರಿ ಧಾರ್ಮಿಕ ವಿಚಾರಗಳ ಬಗ್ಗೆ ಮಾತೆತ್ತಿದರೂ ನಾನು ಆ ಬಗ್ಗೆ ಚರ್ಚಿಸಲು ಆಸಕ್ತಿ ತೋರಿಸದಿದ್ದುದನ್ನು ಕಂಡು ಮತ್ತೆಂದೂ ಅವರು ನನ್ನಲ್ಲಿ ಧಾರ್ಮಿಕ ವಿಷಯಗಳ ಬಗ್ಗೆ ಚರ್ಚಿಸುತ್ತಿರಲಿಲ್ಲ. ನಾನು ಒಂದೆರೆಡು ದಿನ ಅವರ ಬಳಿ ಸುಳಿದಾಡದಿದ್ದರೆ ನನ್ನ ಹೆಸರೆತ್ತಿ ಕೂಗಿ ಕರೆಸಿಕೊಳ್ಳುತ್ತಿದ್ದರು.

ಕಳೆದ ಮೂರು ವರ್ಷದಿಂದ ಜಕ್ರಿ ಬ್ಯಾರಿಯ ಆರೋಗ್ಯ ಕೈಕೊಟ್ಟಿತ್ತು. ಕಿಡ್ನಿ, ಹೃದ್ರೋಗ ಬಾಧಿಸಿತ್ತು. ತಿಂಗಳಿಗೊಮ್ಮೆ ವೈದ್ಯರನ್ನು ಕಾಣುವುದು, ಆಸ್ಪತ್ರೆಯ ಬೆಡ್ ಮೇಲೆ ನಾಲ್ಕೈದು ದಿನ ಇದ್ದು ಬರುವುದು ಸಹಜವಾಗಿತ್ತು. ಇತ್ತೀಚೆಗಂತೂ ಮಲಗಿದಲ್ಲೇ ಕ್ಷಣಗಣನೆ ಎದುರಿಸುತ್ತಿದ್ದರು. ಮಲಮೂತ್ರ ಕೂಡ ತೊಟ್ಟ ಬಟ್ಟೆಯಲ್ಲೇ ಆಗುತ್ತಿತ್ತು. ಪತ್ನಿ ಆಯಿಶಾ ತನಗೆ ಕಾಡುವ ವಯಸ್ಸಿನ ತೊಂದರೆಯನ್ನು ಮರೆತು ಗಂಡನ ಆರೈಕೆಯಲ್ಲಿ ಸಂತೃಪ್ತಿ ಕಾಣುತ್ತಿದ್ದರು. ತುರ್ತಾಗಿ ಆಸ್ಪತ್ರೆಗೆ ಗಂಡನನ್ನು ಕರೆದೊಯ್ಯಲು ನನ್ನ ಸಹಾಯ ಯಾಚಿಸುತ್ತಿದ್ದರು. ನಾನು ಅದನ್ನು ಪ್ರೀತಿಯಿಂದಲೇ ಸ್ವೀಕರಿಸಿ ಸಹಾಯ ಮಾಡುತ್ತಿದ್ದೆ.

ವಾರದ ಹಿಂದೆ ಊರಲ್ಲಿ ಯುವಕರ ಮಧ್ಯೆ ನಡೆದ ಗಲಾಟೆ ಕೋಮುಬಣ್ಣಕ್ಕೆ ತಿರುಗಿದ ವಿಷಯ ತಿಳಿದ ಜಕ್ರಿ ಬ್ಯಾರಿ ಖಿನ್ನರಾಗಿದ್ದರು. ತನ್ನೂರಿಗೂ ಇಂತಹ ಕಪ್ಪುಚುಕ್ಕೆ ಬಿತ್ತೇ ಎಂದು ಹಲುಬತೊಡಗಿದರು.

‘ನಿಮ್ಮ ತಂದೆ ಅಂತಿಮ ದಿನದ ಕ್ಷಣಗಣನೆ ಎದುರಿಸುತ್ತಿದ್ದಾರೆ. ನಿಮಗಾಗಿ ಬದುಕನ್ನೇ ಅವರು ತೇದಿದ್ದಾರೆ. ಹೆಣ್ಣಾದ ನಾನೆಷ್ಟು ಓಡಾಡಲಿ? ಅವರ ಆರೈಕೆ ನಾನೇ ಮಾಡುವೆ. ಆದರೆ ನೀವೆಲ್ಲ ಕೊನೆಯ ಕ್ಷಣದಲ್ಲಿ ಅವರ ಬಳಿ ಇದ್ದುಬಿಡಿ’ ಎಂದು ಆಯಿಶಾ ತನ್ನ ಮಕ್ಕಳಿಬ್ಬರಲ್ಲಿ ಹೇಳಿಕೊಂಡರೂ ಅವರ ಮನಸ್ಸು ಕರಗಲಿಲ್ಲ. ಅವರು ಪಿಳ್ಳೆ ನೆಪ ಹೇಳಿ ತಪ್ಪಿಸುತ್ತಿದ್ದರು. ಅಪರೂಪಕ್ಕೊಮ್ಮೆ ನೆಂಟರಂತೆ ಬಂದು ಹೋಗುತ್ತಿದ್ದರು.

ಈ ವಿಚಾರವನ್ನು ಜಕ್ರಿ ಬ್ಯಾರಿ- ಆಯಿಶಾ ನನ್ನಲ್ಲಿ ಹೇಳಿ ದುಃಖಿಸುತ್ತಿದ್ದರು. ಮಕ್ಕಳಿಗೆ ಭಾರವಾಗುವಂತದ್ದು ನಾನೇನು ತಪ್ಪು ಮಾಡಿದೆ ಎಂದು ಆಗಾಗ ನನ್ನಲ್ಲಿ ಪ್ರಶ್ನಿಸುತ್ತಿದ್ದರು.

ಅದೊಂದು ರಂಜಾನ್‌ನ ಮುಂಜಾನೆ ನಾನು ಎದ್ದು ಮಸೀದಿಯತ್ತ ದಾಪುಗಾಲು ಹಾಕುತ್ತಿದ್ದಾಗ ಆಯಿಶಾ ತನ್ನ ಇಂಪಾದ ಧ್ವನಿಯಲ್ಲಿ ಕುರಾನ್ ವಾಚಿಸುತ್ತಿದ್ದರೆ, ಜಕ್ರಿ ಬ್ಯಾರಿ ಅದನ್ನು ಕನ್ನಡಕ್ಕೆ ಅನುವಾದಿಸಿ ಅದರ ಅರ್ಥ ಹೇಳಿಕೊಡುತ್ತಿದ್ದರು. ಮನಸ್ಸಿಗೆ ನಾಟುವಂತೆ ಓದುತ್ತಿದ್ದ ಅವರಿಬ್ಬರ ಆ ಕಂಠ- ಕುರಾನನ್ನು ಅರ್ಥ ಮಾಡುವ ತವಕ ಕಂಡು ನಾನು ಆಶ್ಚರ್ಯ ಚಕಿತನಾಗಿದ್ದೆ.

ಪರಲೋಕ ಚಿತ್ರಣವನ್ನು ಅವರು ರಸವತ್ತಾಗಿ ವಿವರಿಸುತ್ತಿದ್ದರು. ಒಂದು ಕ್ಷಣ ಅವರ ವಾಚನ ಶೈಲಿ ನನ್ನ ಮನಸ್ಸನ್ನು ತಟ್ಟಿತ್ತು. ಅದೇ ನಮಾಝ್ ಮುಗಿಸಿ ಹೊರ ಬಂದಾಗ ಕೆಲವು ಮಂದಿ ತಮ್ಮ ಪರಿಚಯಸ್ಥರ ಅನೈತಿಕ ಸಂಬಂಧದ ಬಗ್ಗೆ ಚರ್ಚಿಸಿದ್ದು, ಪತ್ರಕರ್ತ ಮಿತ್ರರೊಬ್ಬರು ‘ಕಾಫಿರ್ ಅಂದರೆ ಯಾರು ಗೊತ್ತಾ?’ ಎಂಬ ಪ್ರಶ್ನೆಗೆ ಉತ್ತರಿಸಲಾಗದೆ ಚಡಪಡಿಸಿದ್ದು, ದಿನಂಪ್ರತಿ ಐದು ಬಾರಿ ನಮಾಝ್ ಮಾಡಿದರೆ ಮಾತ್ರ ಮುಸಲ್ಮಾನನಾಗಲಾರ, ಅಕ್ರಮ- ಅನೀತಿಯಲ್ಲಿ ಯಾರು ಬದುಕು ಸಾಗಿಸುತ್ತಾರೋ ಅವರು ಕಾಫಿರ್ ಗೊತ್ತಾ? ಎಂದು ಸ್ವತಃ ಪತ್ರಕರ್ತ ಮಿತ್ರನೇ ಉತ್ತರಿಸಿದ್ದೆಲ್ಲವೂ ನನಗೆ ಜಕ್ರಿ ಬ್ಯಾರಿಯ ಕುರಾನ್ ವಾಚನದ ಸಂದರ್ಭ ನೆನಪಿಗೆ ಬಂದಿತ್ತು. ಅದನ್ನು ಅವರ ಬಳಿ ಹೇಳಿಕೊಂಡಾಗ ಅವರು ಗೊಳ್ಳನೆ ನಕ್ಕಿದ್ದರು.

***

ಆಂಬುಲೆನ್ಸ್‌ನಿಂದ ಮಯ್ಯಿತ್‌ ಅನ್ನು ಕೆಳಗೆ ಇಳಿಸುವಾಗ ನಾನೂ ಕೈ ಜೋಡಿಸಿದೆ. ಆಸುಪಾಸಿನ ಹಲವರು ಆಗಲೇ ಮನೆ-ಅಂಗಳಕ್ಕೆ ಕಾಲಿಟ್ಟಿದ್ದರು. ಮರಣದ ಕ್ಷಣದವರೆಗೂ ಮುಕ್ತವಾಗಿ ಮಾತನಾಡುತ್ತಿದ್ದ ಆಯಿಶಾ ಈ ಕ್ಷಣದಿಂದ ನನಗೆ ಅನ್ಯಸ್ತ್ರೀ. ಇನ್ನು ನಾಲ್ಕು ತಿಂಗಳು 10 ದಿನ ಅವರನ್ನು ನಾನು ನೋಡುವಂತಿಲ್ಲ, ಮಾತನಾಡುವಂತಿಲ್ಲ. ನಾವೀಗ ಪರಸ್ಪರ ಅಪರಿಚಿತರು.

ಕ್ಷಣಾರ್ಧದಲ್ಲಿ ಜಕ್ರಿ ಬ್ಯಾರಿ ಮಕ್ಕಳು- ಸಹೋದರ- ಸಹೋದರಿಯರು, ಕೂಡು-ಕುಟುಂಬದವರು ಸಾಲುಗಟ್ಟಿ ಬಂದರು. ಏನಾಯಿತು, ಹೇಗಾಯಿತು? ಎಂದೆಲ್ಲಾ ಪ್ರಶ್ನಿಸತೊಡಗಿದರು.

ಅಲ್ಲಿದ್ದವರು ಅಂತೆ ಕಂತೆಗಳ ಮೂಲಕ ಉತ್ತರಿಸುತ್ತಿದ್ದರು.

ಮಯ್ಯಿತ್‌ನ ಅಂತಿಮ ವಿಧಿ-ವಿಧಾನಗಳು ‘ಮುಕ್ಕಾಗಂಟೆಯವರ ಹಾಗೆ ಆಗಬಾರದು, ಅದೇನಿದ್ದರೂ ನಮ್ಮ ಆಶಯದಂತೆ ನಡೆಯಬೇಕು’ ಎಂದು ಸಹೋದರರು ಹೇಳಿದರೆ, ‘3ನೇ ದಿನದ ದುಆದ ವ್ಯವಸ್ಥೆ ನಾನು ಮಾಡುವೆ’ ಎಂದು ಹಿರಿಯ ಮಗ ಹೇಳಿದ. 7ನೇ ದಿನದ ಫಾತಿಹಾದ ವ್ಯವಸ್ಥೆ ನಾನು ಮಾಡುವೆ’ ಎಂದು ಮಗಳು ನುಡಿದಳು.

ಜಕ್ರಿ ಬ್ಯಾರಿಯ ವಿಚಾರಧಾರೆಗೆ ಮನಸೋತಿದ್ದ ಕೆಲವು ಯುವಕರೂ ಅಂತಿಮ ದರ್ಶನಕ್ಕೆ ಧಾವಿಸಿ ಬಂದಿದ್ದರು. ಅವರನ್ನು ಕಂಡ ತಕ್ಷಣ ಕುಟುಂಬದ ಕೆಲವು ಮಂದಿ ಹಾವು ತುಳಿದವರಂತೆ ವರ್ತಿಸತೊಡಗಿದರು.

ನಾನು ಏನೂ ಅರಿಯದವನಂತೆ ಅಲ್ಲೇ ನಿಂತು ಎಲ್ಲವನ್ನೂ ಅವಲೋಕಿಸುತ್ತಿದ್ದೆ. ಆಸ್ಪತ್ರೆಗಾಗಲೀ, ಮನೆಗಾಗಲೀ ಅವರ‍್ಯಾರೂ ಬಂದ ನೆನಪು ಆಗುತ್ತಿಲ್ಲ. ಕಷ್ಟಗಾಲದಲ್ಲಿ ಸ್ಪಂದಿಸದವರು ಈಗ ಮರಣದ ಬಳಿಕ ಧಾರ್ಮಿಕ ಕ್ರಿಯೆಗಳಿಗೆ ನಾ- ಮುಂದು, ತಾ-ಮುಂದು ಎಂಬಂತೆ ವರ್ತಿಸುತ್ತಿದ್ದರು. ನನಗೆ ಇದೆಲ್ಲಾ ವಿಚಿತ್ರವೆನಿಸಿತ್ತು. ಯಾರಿಗೂ ಜಕ್ರಿ ಬ್ಯಾರಿಯ ಪತ್ನಿ ಆಯಿಶಾರ ನಿರ್ಧಾರ ಮುಖ್ಯವಾಗಲಿಲ್ಲ. ಏಕಮುಖ ತೀರ್ಮಾನದ ಹಿನ್ನೆಲೆಯಲ್ಲಿ ಅಲ್ಲಿ ಹೆಚ್ಚಿನ ಚರ್ಚೆಗೆ ಅವಕಾಶವೂ ಇರಲಿಲ್ಲ.

ಆಯಿಶಾ ತನ್ನ ಮಕ್ಕಳನ್ನು ತಾನಿರುವ ಕೋಣೆಯೊಳಗೆ ಕರೆದು ‘ನಿಮ್ಮ ತಂದೆ ಕೆಲವು ತಿಂಗಳ ಹಿಂದೆ ಈ ಕವರ್ ಕೊಟ್ಟು ತನ್ನ ಮರಣಾನಂತರ ಓದಬೇಕು ಎಂದು ಸೂಚಿಸಿದ್ದರು. ಏನಿದೆ, ನೋಡಿ ಹೇಳಿ’ ಎಂದರು. ಆಸ್ತಿ ವಿಚಾರದಲ್ಲಿ ಏನಾದರು ಬರೆದಿಯೋ ಎಂಬ ಕಾತರದಿಂದ ಇಬ್ಬರೂ ಕಾಗದ ಬಿಚ್ಚಿ ಓದಲು ಮುಂದಾದರು. ಕ್ಷಣಾರ್ಧದಲ್ಲಿ ಅವರ ಮುಖ ಬಿಳಿಚಿಗೊಂಡಿತ್ತು.

‘ನನ್ನ ಮೃತದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆಗಾಗಿ ದಾನ ಮಾಡಿ’ ಎಂದಷ್ಟೇ ಬರೆದಿದ್ದರು. ತಾರೀಕು, ದಿನಾಂಕ, ತನ್ನ ಹೆಸರು, ತನ್ನ ಸಹಿಯಲ್ಲದೆ, ಇಬ್ಬರು ಸಾಕ್ಷಿದಾರರ ಹೆಸರಿನೊಂದಿಗೆ ಸಹಿಯನ್ನೂ ಕಂಡು ಅವಕ್ಕಾದರು.

ವಿಷಯ ಊರಿಡೀ ಹಬ್ಬಿತ್ತು. ‘ಏನು, ಮಯ್ಯತ್ ದಫನ ಮಾಡದೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹಸ್ತಾಂತರಿಸುವುದೇ? ಸಾಧ್ಯವಿಲ್ಲ. ಅವರು ಯಾವ ಮನಸ್ಥಿತಿಯಲ್ಲಿ ಹಾಗೇ ಬರೆದಿದ್ದಾರೋ ಏನೋ?. ಮರಣದ ಬಳಿಕ ಮೃತದೇಹವನ್ನು ದಫನ್‌ ಮಾಡಲೇಬೇಕು. ಅದು ಇಸ್ಲಾಮೀ ಕ್ರಮ. ಯಾವ ಕಾರಣಕ್ಕೂ ಮೃತದೇಹವನ್ನು ವಿದ್ಯಾರ್ಥಿಗಳ ಕಲಿಕೆಗಾಗಿ ಬಳಸಲು ನಾನು ಅವಕಾಶ ಕಲ್ಪಿಸುವುದಿಲ್ಲ’ ಎಂದು ಕುಟುಂಬದ ಸದಸ್ಯರು ಪಟ್ಟುಹಿಡಿದರು.

‘ಜಕ್ರಿ ಬ್ಯಾರಿ ಮೃತಪಟ್ಟವರಂತೆ ನಟಿಸಿ, ಇವನ್ನೆಲ್ಲಾ ಆಲಿಸುತ್ತಿದ್ದಾರೋ ಏನೋ?’ ಎಂದು ನಾನು ನನ್ನಲ್ಲೇ ಕೇಳಿಕೊಂಡೆ. ಆದರೂ ಅವರ ಅಭಿಲಾಶೆಯಂತೆ ಮೃತದೇಹವನ್ನು ಹಸ್ತಾಂತರಿಸಿ ಈ ನೆಲದ ಕಾನೂನನ್ನು ಎತ್ತಿ ಹಿಡಿಯಲಿ ಎಂದು ಹೇಳಬೇಕು ಎನ್ನುವಷ್ಟರಲ್ಲಿ ಆಯಿಶಾ, ‘ಪತ್ರದಲ್ಲಿ ಅವರು ತಿಳಿಸಿದಂತೆ ಮಾಡಿ’ ಎಂದು ಒಳಕೋಣೆಯಿಂದಲೇ ಆಜ್ಞೆಯ ದಾಟಿಯಲ್ಲಿ ಸೂಚಿಸಿದರು.

‘ಇಲ್ಲ... ಇಲ್ಲ... ಅವರು ಬರೆದಂತೆ, ನೀವು ಹೇಳಿದಂತೆ ಮಾಡಲಿಕ್ಕೆ ಆಗುವುದಿಲ್ಲ. ಏನಿದ್ದರೂ ನಾನೊಮ್ಮೆ ಮಸೀದಿಯ ಇಮಾಮರನ್ನು ಕಂಡು ಬರುವೆ’ ಎಂದು ಮಗ ಅಂಗಳ ಇಳಿದ.

‘‘ಯಾವ ಮಸೀದಿ, ಯಾವ ಖತೀಬ್? ‘ಮುಕ್ಕಾಗಂಟೆ’ ಎಂದು ಹಣೆಪಟ್ಟಿ ನೀಡಿದವರ ‘ಫತ್ವಾ‍’ ಜಕ್ರಿ ಬ್ಯಾರಿಗೆ ಅನ್ವಯಿಸುವುದೇ? ಹಲವು ಆಶಯ- ಹಲವು ಭಿನ್ನತೆಯ ನಡುವೆ ಯಾರದ್ದು ಸರಿ? ಯಾರದ್ದು ತಪ್ಪು? ಗೊಂದಲಕ್ಕೆ ತೆರೆ ಎಳೆಯುವವರು ಯಾರು?’- ಮೃತದೇಹವನ್ನು ಅಂತಿಮವಾಗಿ ಸ್ಪರ್ಶಿಸಿದ ನನಗೆ ಅಲ್ಲಿ ನಿಲ್ಲಲೂ ಆಗದೆ, ಹೊರಡಲೂ ಆಗದೆ ನನ್ನ ಮನಸ್ಸು ಸಂದಿಗ್ಧತೆಗೆ ಸಿಲುಕಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry