ಸಾಮಾಜಿಕ ಸಾಮರಸ್ಯ ಮುಖ್ಯ: ತರನಳ್ಳಿ

7

ಸಾಮಾಜಿಕ ಸಾಮರಸ್ಯ ಮುಖ್ಯ: ತರನಳ್ಳಿ

Published:
Updated:

ಸೇಡಂ: ‘ಪ್ರಸ್ತುತ ಸಮಾಜದಲ್ಲಿ ಮಾನವೀಯ ಸಂಬಂಧಗಳು ನಶಿಸುತ್ತಿವೆ. ಯಾಂತ್ರಿಕ ಜಗತ್ತಿಗೆ ಹೆಚ್ಚಿನ ಯುವಜನರು ಹೊಂದಾಣಿಕೆಯಾಗುತ್ತಿದ್ದು, ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಮಾನವೀಯ ಸಂಬಂಧಗಳು ಗಟ್ಟಿಗೊಳಿಸುವ ಕಾರ್ಯಕ್ರಮಗಳ ಆಯೋಜನೆ ಹೆಚ್ಚಬೇಕಿದೆ’ ಎಂದು ಸಾಹಿತಿ ಜಗನ್ನಾಥ ತರನಳ್ಳಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ರಿಬ್ಬನಪಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಅಕ್ಷರ ದಾಸೋಹ ಅಂಗಳದಲ್ಲಿ ‘ಮಾತೆಯ ಮಮತೆಯ ಕೈ ತುತ್ತು’ ಹಾಗೂ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಾಯಿಯ ಮೇಲೆ ಮಕ್ಕಳ ಪ್ರೀತಿ ಕಡಿಮೆಯಾಗುತ್ತಿದೆ. ಜನ್ಮನೀಡಿದ ತಾಯಿಯನ್ನೇ ಮಕ್ಕಳು ಕೀಳು ಮನೋಭಾವನೆಯಿಂದ ಕಾಣುವ ಪರಿಸ್ಥಿತಿ ಎದುರಾಗುತ್ತಿದೆ. ಇಂತಹ ಸ್ವಾರ್ಥ ಪ್ರಪಂಚದಲ್ಲಿ ಮನಷ್ಯ ಸಂಬಂಧಗಳನ್ನು ಗಾಳಿಗೆ ತೂರಿ ಒಂಟಿ ಜೀವನ ನಡೆಸುತ್ತಿರುವುದು ಅತ್ಯಂತ ದುರ್ದೈವದ ಸಂಗತಿ. ಸ್ವಾಮಿ ವಿವೇಕಾನಂದ ಮತ್ತು ಛತ್ರಪತಿ ಶಿವಾಜಿ ಬೆಳೆದದ್ದು ತಾಯಿಯ ಪ್ರೀತಿ ಮತ್ತು ಪ್ರೋತ್ಸಾಹದ ಮಾತುಗಳಿಂದ. ಆದರೆ, ಇಂದಿನ ಮಾತೆಯರಲ್ಲಿ ಇಂತಹ ಪ್ರೋತ್ಸಾಹದಾಯಕ ಮಾತುಗಳು ಕಡಿಮೆಯಾಗಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಯುವಕರು ಪಠ್ಯದ ಹುಳಗಳಾಗಿ ಬೆಳೆಯುವುದಕ್ಕಿಂತ ಪಠ್ಯೇತರ ಚಟುವಟಿಕೆಗಳತ್ತ ಹೆಚ್ಚಿನ ಗಮನಹರಿಸಬೇಕು. ಓದುವ ಮುನ್ನ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸ ಮತ್ತು ಸಾಧಿಸುವ ಛಲವಿದ್ದಲ್ಲಿ ಸಮಾಜದಲ್ಲಿ ಏನಾದರೂ ಸಾಧಿಸಬಲ್ಲೆ ಎನ್ನುವ ದೃಢ ನಂಬಿಕೆ ಹೆಚ್ಚುತ್ತದೆ. ಶಾಲೆಯಲ್ಲಿನ ಶಿಕ್ಷಕರ ಪಾಠದ ಜೊತೆ ಮನೆಯಲ್ಲಿ ಅದಕ್ಕೆ ನಿರಂತರ ಪ್ರಯತ್ನ ಮಾಡಿದ್ದಲ್ಲಿ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಶ್ರೀನಿವಾಸರೆಡ್ಡಿ ಪಾಟೀಲ ಕೋಲ್ಕುಂದಾ ಮಾತನಾಡಿ, ‘ಭಾರತ ದೇಶ ಹೆಚ್ಚು ಯುವಜನರಿಂದ ಕೂಡಿದೆ. ಆದರೆ, ಜನಸಂಖ್ಯೆಗೆ ಅನುಗುಣವಾಗಿ ದೇಶ ಪ್ರಗತಿ ಸಾಧಿಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇದಕ್ಕೆ ಯುವಜನರಲ್ಲಿನ ಕಾರ್ಯದಕ್ಷತೆ ಮತ್ತು ಕ್ರಿಯಾಶೀಲತೆ ಕಡಿಮೆಯಾಗಿರುವುದು ಕಾರಣವಾಗಿದೆ. ಯುವಕರು ಅಂತರ್ಜಾಲ ವಸ್ತುಗಳ ಬಳಕೆಯಿಂದ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ಅಂಬರಾಯ ಢಾಗೆ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ನೈತಿಕತೆ ಕಡಿಮೆಯಾಗುತ್ತಿದೆ. ಸಂಸ್ಕಾರಭರಿತ ಶಿಕ್ಷಣ ಮತ್ತು ಪಾಲಕರ ನಿರಂತರ ಪ್ರೋತ್ಸಾಹದಾಯಕತೆಯ ನಿರ್ಲಕ್ಷತೆಯೇ ಇದಕ್ಕೆ ಕಾರಣವಾಗಿದೆ’ ಎಂದರು.

ಅಮ್ಮಂದರಿಂದ ಕೈ ತುತ್ತು ಸವಿದ ಮಕ್ಕಳು: ‘ಕಾರ್ಯಕ್ರಮದಲ್ಲಿ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ತಾಯಂದಿರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ಮನೆಯಿಂದ ತರಲಾದ ಬುತ್ತಿಯನ್ನು ಶಾಲಾ ಆವರಣದಲ್ಲಿ ಬಿಚ್ಚಿ ತಮ್ಮ ತಮ್ಮ ಮಕ್ಕಳಿಗೆ ಊಟ ಮಾಡಿಸಿದರು. ಶಾಲೆಯ ಸುತ್ತಮುತ್ತಲಿನ ಗ್ರಾಮಗಳಾದ ಅನಂತಪುರ,

ನಾಡೆಪಲ್ಲಿ ಮತ್ತು ಖಂಡೆರಾಯನಪಲ್ಲಿ ಗ್ರಾಮದ ಮಾತೆಯರು ಸಹ ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಶಾಲೆಯಲ್ಲಿ ವಿವಿಧ ಸ್ಪರ್ಧೆಗಳು ನಡೆದವು.

ವಿದ್ಯಾರ್ಥಿಗಳಾದ ಮಧೂಸೂದನ, ಶಿವಕುಮಾರ ಮತ್ತು ಜಗನ್ನಾಥ ಅನಿಸಿಕೆ ವ್ಯಕ್ತಪಡಿಸಿದರು. ಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ತುರೆ ಅಧ್ಯಕ್ಷತೆ ವಹಿಸಿದ್ದರು. ರಿಬ್ಬನಪಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಕೆಂಭಾವಿ, ಭೂದಾನಿ ಪರ್ವತರೆಡ್ಡಿ ಕೋಲಂಪಲ್ಲಿ, ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಶಿಕ್ಷಕ ಮೊಘಲಪ್ಪ ಇದ್ದರು. ನರೇಶ ಸ್ವಾಗತಿಸಿದರು. ಅಖಿಲಾ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry