ಆಳಂದದಲ್ಲಿ 9ನೇ ಕನ್ನಡ ನುಡಿ ಜಾತ್ರೆ ಇಂದು

7

ಆಳಂದದಲ್ಲಿ 9ನೇ ಕನ್ನಡ ನುಡಿ ಜಾತ್ರೆ ಇಂದು

Published:
Updated:

ಆಳಂದ: ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಶನಿವಾರ ಆಳಂದ ಪಟ್ಟಣದ ಗುರುಭವನದಲ್ಲಿ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲು ಅಗತ್ಯ ಸಿದ್ಧತೆ ನಡೆದಿದೆ.

ತಾಲ್ಲೂಕಿನ ಕನ್ನಡ ಅಭಿಮಾನಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ 5 ಸಾವಿರಕ್ಕೂ ಅಧಿಕ ಸಂಖ್ಯೆಯ ಜನರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಗುರುಭವ ನದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎ.ವಿ.ಪಾಟೀಲ ವೇದಿಕೆಯಲ್ಲಿ ಸುಂದರ ಶಾಮಿಯಾನ ಹಾಕಲಾಗಿದೆ. ಸಾಹಿತ್ಯಾಸಕ್ತರಿಗೆ ಊಟದ ವ್ಯವಸ್ಥೆ, ಬ್ಯಾನರ್‌, ಕನ್ನಡಧ್ವಜ ಸೇರಿದಂತೆ ಅಗತ್ಯ ಸಿದ್ಧತೆಯು ಕಸಾಪ ಅಧ್ಯಕ್ಷ ವಿಶ್ವನಾಥ ಭಕರೆ ನೇತೃತ್ವದಲ್ಲಿ ಭರದಿಂದ ಸಾಗಿದೆ.

‘ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ, ಹೋರಾಟಗಾರ ಎಸ್.ಪಿ.ಸುಳ್ಳದ ಅವರನ್ನು ಸಾರೋಟದಲ್ಲಿ ಸಂಭ್ರಮದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ. ತಾಲ್ಲೂಕಿನ ಮಾದನ ಹಿಪ್ಪರಗಾ, ಆಳಂದದ ಡೋಳ್ಳು ತಂಡ, ಮೈಂದರ್ಗಿಯ ಲೇಜಿಮ್‌ ತಂಡ, ಹಲಗೆ, ಸಿಂಗ್‌ ಮತ್ತಿತರ ಸಾಂಸ್ಕೃತಿಕ ಕಲೆಗಳ ತಂಡಗಳು ಪಾಲ್ಗೊಳ್ಳಲಿವೆ. ಇದರೊಂದಿಗೆ ಸ್ಕೌಟ್ ಮತ್ತು ಗೈಡ್ಸ್‌ ತಂಡ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಮ್ಮೇಳನಾಧ್ಯಕ್ಷ ಉತ್ಸವದ ಮೆರಗು ಹೆಚ್ಚಿಸಲಿದ್ದಾರೆ’ ಎಂದು ಕಸಾಪ ನಗರಾಧ್ಯಕ್ಷ ನರಸಪ್ಪ ಬಿರಾದಾರ ತಿಳಿಸಿದರು.

ಬೆಳಿಗ್ಗೆ 8ಕ್ಕೆ ರಾಷ್ಟ್ರ ಧ್ವಜಾರೋಹಣವನ್ನು ಪುರಸಭೆ ಅಧ್ಯಕ್ಷ ಅಂಬಾದಾಸ ಪವಾರ ನೆರವೇರಿಸುವ ಮೂಲಕ ಸಮ್ಮೇಳನದ ಕಾರ್ಯ ಚಟುವಟಿಕೆ ಆರಂಭಗೊಳ್ಳಲಿವೆ. ಸಮ್ಮೇಳನವನ್ನು ಬೆಳಗಾವಿ ವಿ.ವಿ ಕುಲಪತಿ ಡಾ.ರಂಗರಾಜ ವನದುರ್ಗ ಉದ್ಘಾಟಿಸುವರು. ಶಾಸಕ ಬಿ.ಆರ್.ಪಾಟೀಲ, ಖಜೂರಿ ಮುರುಘೇಂದ್ರ ಸ್ವಾಮೀಜಿ, ಡಾ.ಡಿ.ಜಿ,ಸಾಗರ್, ಡಾ.ಎಚ್.ಟಿ.ಪೋತೆ, ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಜಿ.ಪಂ ಅಧ್ಯಕ್ಷೆ ಸುವರ್ಣಾ ಮಲಾಜಿ ಪಾಲ್ಗೊಳ್ಳುವರು.

ಮಧ್ಯಾಹ್ನ ಸಾಹಿತಿಗಳಿಂದ ವಿವಿಧ ವಿಷಯದ ಮೇಲೆ ಮೂರು ಗೋಷ್ಠಿ, ತಾಲ್ಲೂಕಿನ 30 ಜನ ಯುವ ಕವಿಗಳಿಂದ ಕವನವಾಚನ ಜರುಗಲಿದೆ. ನಂತರ ಸಂಜೆ 4ಕ್ಕೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 22 ಜನರನ್ನು ಸತ್ಕರಿಸಲಾಗುವುದು. ಇದರೊಂದಿಗೆ ಪುಸ್ತಕ ಬಿಡುಗಡೆ, ಧ್ವನಿಸುರಳಿ ಬಿಡುಗಡೆ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳು ಗುರು ಭವನದ ಆವರಣದಲ್ಲಿ ದಿನವಿಡೀ ನಡೆಯಲಿವೆ.

9ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ರಾಗಿ ನಿಯೋಜಿತ ಗೊಂಡಿರುವ ಎಸ್.ಪಿ.ಸುಳ್ಳದ ಅವರು ಆಳಂದ ತಾಲ್ಲೂಕಿನ ಕೆರೂರು ಗ್ರಾಮದವರು. ದಲಿತ ಬಡಕುಟುಂಬದಲ್ಲಿ ಜನಸಿದ ಸಿದ್ದಪ್ಪ ಸುಳ್ಳದ ಅವರು ಪರಿಶ್ರಮದಿಂದಲೇ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕ, ಮುಖ್ಯ ಶಿಕ್ಷಕ, ಸಂಪನ್ಮೂಲ ವ್ಯಕ್ತಿ, ವಿಷಯ ಪರೀಕ್ಷಕರಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡವರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರಭಾವಿತರಾದ ಇವರು, ದಲಿತಪರ ಹೋರಾಟವನ್ನು ಕಟ್ಟಿದವರಲ್ಲಿ ಒಬ್ಬರು. ಸಾಹಿತ್ಯ ಕ್ಷೇತ್ರದಲ್ಲಿ ರೊಚ್ಚು(ಕವನ ಸಂಕಲನ) ಮೂಲಕ ಪರಿಚಿತರಾದ ಇವರು, ನೊಂದು ನಲಿದವರು, ಗರ್ಧಿ ಗಮ್ಮತ್ತು, ಕಾವ್ಯತೀರ್ಥ, ನನ್ನ ಹಾಡು, ಅಸ್ಪೃಶ್ಯನ ಭಾವಾನುಭವ –ಹೀಗೆ 10ಕ್ಕೂ ಹೆಚ್ಚು ಗ್ರಂಥಗ ಳನ್ನು ರಚಿಸಿದ್ದಾರೆ.

ಇದಲ್ಲದೆ ಕ್ರಾಂತಿಗೀತೆ, ಬೀದಿ ನಾಟಕದ ಜೊತೆಗೆ ದಲಿತಪರ ಹೋರಾಟವನ್ನು ಸಂಘಟಿಸುವಲ್ಲಿ ಯಶಸ್ವಿಯಾದವರು. ಶಿಕ್ಷಣ ಇಲಾಖೆ, ಸಾಮಾಜಿಕ ಕ್ಷೇತ್ರದ ಸೇವೆಗೆ ಅನೇಕ ಗೌರವ ಸನ್ಮಾನ ಲಭಿಸಿವೆ. ಪ್ರಸಕ್ತ ಆಳಂದ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವು ಇವರ ಶಿಕ್ಷಣ, ಸಾಹಿತ್ಯ ಮತ್ತು ಸಂಘಟನೆ ಸಾಮರ್ಥ್ಯಕ್ಕೆ ಸಂದ ಗೌರವವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry