ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಗೆ

Last Updated 13 ಜನವರಿ 2018, 19:30 IST
ಅಕ್ಷರ ಗಾತ್ರ

ಅದು ಹಳೆಯ ಕಾಲದ ಬಂದುಕಟ್ಟಿನ ಒಲೆ,
ಬೆಂಕಿ ಒಟ್ಟಿದರೆ ಊರೆಲ್ಲ ಹೊಗೆ ತುಂಬುತಿತ್ತು.
ಒಂದು ಹೊಗೆ ನಳಿಗೆ ಬೇಕು ಬಯಕೆ, ಬಾಯ್ಬಿಟ್ಟಿಲ್ಲ,
ಹೊಗೆ ನಳಿಗೆ ಬಂತು! ಆಗಸಕೆ ಬಾಯ್ತೆರೆಯಿತು.
ಹಸಿಸೌದೆ ಬೆಂಕಿಯಾಗದೆ ಹೊಗೆ ಗೆಮೆದರೂ
ಒಣಸೌದೆ ಉರಿದೆದ್ದು ಹೊಗೆಯುಗಿದರೂ
ಹೊಗೆಯು ಹೊಗೆಯೇ ಎನುತ ಭೇದ ಮಾಡದೆ ನಳಿಗೆ,
ಎತ್ತೊಯ್ದು ಧೂಮ ಸಂದೇಶ ರವಾನಿಸಿತು

***

ದಿನ ಅರಳಿ ದಿನ ಬಾಡಿ ದಿನವು ದಿನವೂ ಬೆಂಕಿ
ಹೊಗೆಯಾಡಿ ಓಡಾಡಿ ನಳಿಗೆಯುದ್ದಕೂ ಸತತ
ಕರಿ ಕಿಟ್ಟ ಕಟ್ಟಿ ಒಂದಾನೊಂದು ದಿನ
ಅದರುಸಿರು ಬಂದಾಗಲು
ಮೇಲೇರಲಾರದೆ ಹೊಗೆ ಒಲೆಯಿಂದ ನೇರ
ಹೊರಬಿದ್ದು ಊರ‍್ತುಂಬ ಹೊಗೇ ಹೊಗೆ
ಹೊಗೆ ಕವಿದು ಊರು ಕಪ್ಪಾಯಿತು,
ಕಣ್ಣುರಿದು ಕೆಂಪು ಕುರುಡಾಯಿತು.
ನಳಿಗೆಯೊಳು ತೆಮೆಕೋಲು ಕುಟ್ಟಿ ಬರಬರನೆ
ಕರಿ ಕಿಟ್ಟ ಉದುರಿಸಬೇಕು,
ಉಸಿರ ನಾಳವು ಸುರಳೀತಗೊಂಡು ನಾಳ ಸುರಳೀತಕ್ಕೆ ಗಾಳಿಯೊಲಿದು,
ಮೇಲ್ಮುಖನೆ ಹೊಗೆಯನೊಯ್ಯಬೇಕು
ಎಲ್ಲಿ? ಜನ ಎಲ್ಲಿ?
ದನಿ ಏಳುವುದರಲ್ಲಿ, ಜನ ಬಂದಿತು.
ಕರಿ ಉದುರಿಸುವವನಾತ, ಹೆಸರು, ಕರಿಯ
ಜೊತೆಗೆ ಹೆಂಡತಿ, ಹೆಸರು ಬೆಳ್ಳಿ.
ಕರದಲ್ಲಿ ಸರಳ ತೆಮೆ, ವೀರನೇರಿದ ನಳಿಗೆ
ಚಿಮಿಣಿಯಲಿ ತೆಮೆಯಾಡಿ ಕರಿಯ ಕರಿ ಉದುರಿಸಿದ,
ಒಲೆ ಊದಿದಳು ಬೆಳ್ಳಿ ಭಗ್ಗಂತು ಬೆಂಕಿ. ಗಾಳಿ ಹೊಗೆ ಎತ್ತಿ,
ಸಗ್ಗಕೋ ಎಂಬಂತೆ ಆಗಸಕೆ ಕಳಿಸಿ
ಸಕಲವೂ ಸ್ವತಂತ್ರ ಸುಖವಾಯಿತು

***

ಕರಿಕಿಟ್ಟ ನೆನಪೀಗ ಬೀಳ್ಕೊಟ್ಟ ಯುಗ ನೆನಪು
ಬೆಂಕಿ ಮತ್ತು ಹೊಗೆ-ದುಷ್ಟ ಗಾದೆ ಹುಟ್ಟಿದ ನೆನಪು,
ಉಸಿರು ಬಂದಾಗಿಸುವ ಊರ ಕುರುಡಾಗಿಸುವ
ಧೂಮಾವರಣ ನೆನಪು, ಹಚ್ಚ ಹಗಲಿನಲೂ
ಬಚ್ಚಲಿನ ಕಿಚ್ಚನಿನ ಹೊಗೆಮುಗ್ಗುಲು, ಕತ್ತಲೆಯ ಭೀತಿ ನೆನಪು
ಕರಿಯನೆಂಬವನ ಮತ್ತು ಬೆಳ್ಳಿ ಎಂಬವಳ
ಕಣ್ಣು ಮಂಜಾಗಿಸುವ ಪ್ರೀತಿಯಾಕ್ರತಿ
ಬೆಳ್ಳಿಯಂಚಿನ ಕರಿಮೋಡ ನೆನಪು
ಯಾವ ಹಕ್ಕಲು, ಹಾಡಿ, ಕಾಡಮೇಡನ್ನಗಲಿ
ಯಾರದೋ ಒಲೆ ಉರಿಗೆ ತವರ ತೊರೆದು ಬಂದ
ಅರಿವಿಲ್ಲದುರುವಲಿನ ಬಲಿಯ ನೆನಪು
ಹಿಂಡನಗಲಿದ ಮುಗ್ಧ ತೆಮೆಯ ನೆನಪು.

***

ಈಗಿಲ್ಲ ಅಂಥ ಒಲೆ, ಬೆಂಕಿ ಇದೆ ಹೊಗೆಯಿಲ್ಲ
ಉರುವಲಿನ ಸ್ವರೂಪ ಸೌದೆಯೇ ಅಂತಿಲ್ಲ
ಕರಿಯರೂ ಬೆಳ್ಳಿಯರೂ ಮರಳಿ ಮಣ್ಣಿಗೆ ಮರಳಿ
ಹಿರಿಯರೆಲ್ಲರು ತಂದದ್ದು ಮುಗಿಸಿ ತೆರಳಿ
ಸ್ವಿಚ್‌ಆನ್ ಸ್ವಿಚ್‌ಆಫ್‌ಗಳ ವ್ಯಕ್ತಮಧ್ಯೆಯಲಿ
ಅನ್ನ, ರಾಗೀಮುದ್ದೆ, ಸಾರು ಸ್ನಾನಕೆ ನೀರು,

***

ಹೊಗೆ ರಹಿತ ಒಲೆ, ಸರಿಯೆ, ನಾಲ್ದೆಸೆಯೂ ಹೊಗೆ ಹೇಗೆ?
ಹೊಗೆಯು ಹಗೆವಾಸನೆ ಉಗಿಯುತಿದೆ ಹೇಗೆ?
ಹಗೆಯು ಹಗೇವಾಗಿ ಸುಡುಗೆಮೆಯುತಿದೆ ಹೇಗೆ
ಕರಿ ಕಿಟ್ಟ ಕಟ್ಟುವುದು ಉಸಿರು ಬಂದಾಗುವುದು
ಸಾಯುವುದು, ಸತ್ತಂಥ ಬದುಕು ಬದುಕುವುದು
ಕಂಡರೂ ಕೇಳಿದರೂ ನಿಸ್ತಂತು ಸ್ಥಿತಿ ಮತಿ
ಅಂತಂತೆ ಏಗುತಿದೆ ಸಾಗುತಿದೆ ಹೇಗೆ?
ಬೆಂದು ನೊಂದಿದೆ ಜೀವ ಬೇ-ಸತ್ತಿದೆ.
ಘಾತಗೊಂಡಿದೆ ಆತ್ಮ ಹೃದಯ ಥತ್ತರ ನಡುಗಿ
ಮದ್ದು ಬೇಕೀಗ -ಬೊಬ್ಬಿಟ್ಟರೂ
ಬೊಬ್ಬೆ ಮಾರ್ದನಿಯಾಗಿದೆ

**

ಇಲ್ಲೆ ಎಲ್ಲೋ ಒಂದು ಮುಚ್ಚಾಲೆ ಒಲೆ ಇದೆಯೆ
ಖಂಡಿತಕೂ? ಖಂಡಿತಕು. ಅಗೊ ಅಗೋಚರದಲ್ಲಿ
ತಿರುವುತಿದೆ ಮಗುಚುತಿದೆ ಕುದಿಸುತಿದೆ ಬೇಸುತಿದೆ
ಅನ್ನ ರಾಗೀಮುದ್ದೆ ಸಾರು ನೀರನ್ನಲ್ಲ
ಮತ್ತೆ ಮತ್ತೆ ಮತ್ತೆ -ಏನನ್ನು ಯಾವುದನು?
ಪ್ರಶ್ನೆ ಬಾಯ್ಬಿಡುದರಲಿ ಅಪ್ಪಳಿಸಿದೆ ಅಬ್ಬರ

ನಿನ್ನನ್ನು ನಿಮ್ಮನ್ನು ನಿಮ್ಮನೆಲ್ಲರನೂ
ನಾನು ನಾವು ಮತ್ತು ನಾವೆಲ್ಲರೂ
ಯಾರು? ಯಾರಲ್ಲಿ? ಎದುರು ಬನ್ನೀ! -
ಗಡಚಿಕ್ಕಿ ಪ್ರಶ್ನಿಸಿದೆ ಮರಳುಧ್ವನಿ
- ಯಾರು ಯಾರಲ್ಲಿ ಎದುರು ಬನ್ನೀ !!
. . .ನೆಲದ ಎದೆ ಗದಗುಡುತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT