ಕಟಾವಾಗದ ಕಬ್ಬು: ಆತಂಕದಲ್ಲಿ ರೈತರು

7

ಕಟಾವಾಗದ ಕಬ್ಬು: ಆತಂಕದಲ್ಲಿ ರೈತರು

Published:
Updated:
ಕಟಾವಾಗದ ಕಬ್ಬು: ಆತಂಕದಲ್ಲಿ ರೈತರು

ಕಮಲಾಪುರ: ಆಳಂದ ಸಮೀಪದ ಎನ್‌ಎಸ್‌ಎಲ್‌ ಭೂಸನೂರ ಸಕ್ಕರೆ ಕಾರ್ಖಾನೆಯವರ ನಿರ್ಲಕ್ಷ, ಅವ್ಯವಹಾರ ಹಾಗೂ ಬೇಜವಾಬ್ದಾರಿ ತನದಿಂದ ಸಾವಿರಾರು ಎಕರೆ ಪ್ರದೇಶ ದಲ್ಲಿ ಸೊಗಸಾಗಿ ಬೆಳದ ಕಬ್ಬು ನೆಲಸಮವಾಗುತ್ತಿದ್ದು, ಲಕ್ಷಗಟ್ಟಲೆ ನಷ್ಟ ಅನುಭವಿಸುವ ಸ್ಥಿತಿ ಬಂದೊದಗಿದೆ ಎಂದು ರೈತರು ಆತಂಕಪಡುತ್ತಿದ್ದಾರೆ.

‘ಕಾರ್ಖಾನೆಯವರನ್ನು ನಂಬಿ ವರ್ಷ ಪೂರ್ತಿ ಶ್ರಮವಹಿಸಿ ಕಬ್ಬು ಬೆಳೆದಿದ್ದೇವೆ. ನೀರು, ಗೊಬ್ಬರ ಸೇರಿದಂತೆ ಅತ್ಯಾಧುನಿಕ ರಾಸಾಯನಿಕಗಳನ್ನು ಒದಗಿಸಿ ಲಕ್ಷಗಟ್ಟಲೆ ಖರ್ಚುಮಾಡಿ ಬೆಳೆ ನಿರ್ವಹಣೆ ಮಾಡಿದ್ದೇವೆ’.

‘ಈಗ ಸುಮಾರು 15ರಿಂದ 20 ಅಡಿಗಳವರೆಗೆ ಸೊಗಸಾಗಿ ಕಬ್ಬು ಬೆಳೆದು ನಿಂತಿದೆ. 2ತಿಂಗಳಿಂದ ಕಾರ್ಖಾನೆಯವರಿಗೆ, ಸಂಬಂಧಪಟ್ಟ ವಿಭಾಗದ ಉಸ್ತುವಾರಿಗೆ ಹಾಗೂ ಫೀಲ್ಡ್‌ ಮಾನೇಜರ್‌ಗಳಿಗೆ ದುಂಬಾಲು ಬಿದ್ದಿದ್ದೇವೆ. ಇದುವರೆಗೂ ಕಟಾವು ಮಾಡಲು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಕಮಲಾಪುರ, ಬೆಳಕೋಟಾ, ಅಂತಪನಾಳ, ದಿನಸಿ, ದಸ್ತಾಪುರ ಸೇರಿದಂತೆ ಸುತ್ತಮುತ್ತಲಿನ ರೈತರು ಕಳವಳ ವ್ಯಕ್ತಪಡಿಸಿದ್ದಾರೆ.

‘ಈಗ ದಿನ ಭರ್ತಿಯಾಗಿದ್ದು, ಕೊನೆಯ ಹಂತ ತಲುಪಿ ಕಬ್ಬು ನೆಲಕ್ಕುರುಳುತ್ತಿದೆ. ನೀರು ಒದಗಿಸಿದರೆ ಬೆಂಡಾಗುತ್ತದೆ. ಒದಗಿಸದಿದ್ದರೆ ಒಣಗು ತ್ತದೆ. ಭಾರ ಕಡಿಮೆಯಾಗುತ್ತದೆ. ಈ ವಾರದಲ್ಲಿ ಕಟಾವು ಮಾಡದಿದ್ದರೆ ಬೆಳೆದ ಕಬ್ಬು ಸತ್ವ ಕಳೆದುಕೊಂಡು ವ್ಯರ್ಥವಾಗಲಿದ್ದು, ಇದರಿಂದ ಕಬ್ಬು ಬೆಳೆಗಾರರು ಅಪಾರ ಪ್ರಮಾಣದ ನಷ್ಟ ಅನುಭವಿಸಬೇಕಾಗುತ್ತದೆ’ ಎಂಬ ಆತಂಕ ರೈತರಲ್ಲಿ ಮನೆಮಾಡಿದೆ.

‘ಹೇಗಾದರೂ ಮಾಡಿ ಕಬ್ಬು ಕಟಾವು ಮಾಡಿಸಬೇಕೆಂದು ಪ್ರತಿದಿನ ಕಾರ್ಖಾನೆ, ಫೀಲ್ಡ್‌ ಆಫೀಸರ್‌ ಅಂತ ಹೊಟ್ಟೆಗೆ ಅನ್ನ ತಿನ್ನದೆ ಊರೂರು ಅಲೆಯುತ್ತಿದ್ದೇವೆ. ಇದನ್ನೇ ನೆಪ ಮಾಡಿಕೊಂಡು ವಿಭಾಗದ ಉಸ್ತುವಾರಿಗಳು ರೈತರಿಗೆ ವಂಚಿಸಿ ಸಾವಿರಾರು ರೂಪಾಯಿ ದೋಚುತ್ತಿದ್ದಾರೆಯೇ ಹೊರತು ಕಟಾವಿಗೆ ಮುಂದಾಗುತ್ತಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

ಈ ಕಾರ್ಖಾನೆ ವ್ಯಾಪ್ತಿಯಲ್ಲಿ ಆಳಂದ, ಅಫಜಲಪುರ, ಕಲಬುರ್ಗಿ ತಾಲ್ಲೂಕುಗಳು ಒಳಪಟ್ಟಿದ್ದು, ಇದ ರಲ್ಲಿ 7ವಿಭಾಗ ಮಾಡಲಾಗಿದೆ. ಆಳಂದ, ಅಫಜಲಪುರದಲ್ಲಿ ತಲಾ 3 ವಿಭಾಗಗಳಿದ್ದು, ಕಲಬುರ್ಗಿ ತಾಲ್ಲೂಕಿನಲ್ಲಿ ಮಾತ್ರ ಕೇವಲ ಒಂದೇ ವಿಭಾಗವನ್ನಾಗಿಸಿದ್ದಾರೆ.

ಈ ವಿಭಾಗದ ಕಬ್ಬು ಕಟಾವು ಮಾಡಲು 20 ತಂಡ ನೇಮಿಸಿರುವುದಾಗಿ ಹೇಳುತ್ತಾರೆ. ಈ ತಂಡಗಳು ಎಲ್ಲಿವೆ ಎಂಬುದೇ ಗೊತ್ತಿಲ್ಲ. ಒಂದು ಹೊಲಕ್ಕೆ ಕಟಾವಿಗೆ ಬರಬೇಕಾದರೆ ₹10 ಸಾವಿರ ಪಡೆಯುತ್ತಿದ್ದಾರೆ. ಹತ್ತಾರು ಬಾಧೆಗಳಿಂದ ರಕ್ಷಣೆ ಮಾಡಿ ಕಬ್ಬು ಬೆಳೆಯುವುದು ಒಂದೆಡೆಯಾದರೆ; ಕಾರ್ಖಾನೆಗೆ ತಲುಪಿಸುವುದು ಹರಸಾಹಸ ವಾಗುತ್ತಿದೆ’ ಎಂದು ಕಮಲಾ ಪುರ ರೈತ ನಬಿಸಾಬ್‌ ಖರ್ಬಾ, ಬೆಳಕೋಟಾದ ರೈತ ಹಸನ ಪಟೇಲ ಬೇಸರ ವ್ಯಕ್ತಪಡಿಸಿದ್ದಾರೆ. ಕೂಡಲೆ ಕಬ್ಬು ಕಟಾವಿಗೆ ಸೂಕ್ತಕ್ರಮ ಕೈಗೊಳ್ಳದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆ ಹಾಗೂ ಕಾರ್ಖಾನೆಗೆ ಮುತ್ತಿಗೆ ಹಾಕುವುದಾಗಿ ಅವರು ಎಚ್ಚರಿಸಿದ್ದಾರೆ.

2,500 ಟನ್‌ ಮಾತ್ರ ಅರೆಯುತ್ತಿದೆ

ರೈತರ ಹೊಲಗಳಲ್ಲಿ ಸಾಕಷ್ಟು ಕಬ್ಬು ಬೆಳೆದಿದ್ದರೂ ಕಾರ್ಖಾನೆಯಲ್ಲಿ ಪ್ರತಿದಿನ 7,500 ಟನ್‌ ಅರೆಯಬೇಕಿದ್ದ ಯಂತ್ರಗಳು ಕೇವಲ 2,500 ಟನ್‌ ಕಬ್ಬು ಅರೆಯುತ್ತಿವೆ. ಕಾರ್ಖಾನೆಯವರು ಸೂಕ್ತ ಸಮಯದಲ್ಲಿ ಕಾರ್ಮಿಕರನ್ನು ಭೇಟಿ ಮಾಡಿ ಮುಂಗಡ ಹಣ ಕೊಟ್ಟು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಭೂಸನೂರ ಕಾರ್ಖಾನೆಯವರು ವಿಳಂಬ ಮಾಡಿದ್ದರಿಂದ ಈಗಾಗಲೆ ಬೇರೆ ಕಾರ್ಖಾನೆಯವರು ಎಲ್ಲ ಕಾರ್ಮಿಕರ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ, ಕಟಾವು ಮಾಡುವ ಕಾರ್ಮಿಕರ ಕೊರತೆಯುಂಟಾಗಿದೆ ಎನ್ನಲಾಗಿದೆ.

‘ಇದಕ್ಕೆ ಕಾರ್ಖಾನೆಯ ಆಡಳಿತ ಮಂಡಳಿ ಹೊಣೆಯಾಗಿದ್ದು, ಇವರ ಬೇಜವಾಬ್ದಾರಿತನದಿಂದ ಕಾರ್ಖಾನೆ ಜೊತೆಗೆ ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಅಪಾರ ಪ್ರಮಾಣದ ನಷ್ಟ ರೈತರ ಅನುಭವಿಸುವ ಪರಿಸ್ಥಿತಿ ಬಂದೊದಗಿದೆ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಫೀಲ್ಡ್‌ ಮ್ಯಾನೇಜರ್‌

* * 

ಕಾರ್ಮಿಕರಿಗಾಗಿ ಕೆಲ ತಂಡ ಗಳ ಜತೆ ಮಾತನಾ ಡಿದ್ದು, ಸಂಕ್ರಾಂತಿ ನಂತರ ಆಗಮಿಸುವುದಾಗಿ ತಿಳಿಸಿದ್ದಾರೆ. ಕೂಡಲೇ ಕಟಾವಿಗೆ ವ್ಯವಸ್ಥೆ ಮಾಡಲಾಗುವುದು.

ಪ್ರಭಾಕರ್‌ ರೆಡ್ಡಿ, ಡಿಜಿಎಂ, ಎನ್‌ಎಸ್‌ಎಲ್‌ ಕಾರ್ಖಾನೆ

ತೀರ್ಥಕುಮಾರ ಬೆಳಕೋಟಾ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry