ವಿಜ್ಞಾನ ಪ್ರಪಂಚ ಎಷ್ಟು ಪರಿಚಿತ?

7

ವಿಜ್ಞಾನ ಪ್ರಪಂಚ ಎಷ್ಟು ಪರಿಚಿತ?

Published:
Updated:
ವಿಜ್ಞಾನ ಪ್ರಪಂಚ ಎಷ್ಟು ಪರಿಚಿತ?

1. ಧರೆಯ ‘ಅತ್ಯಂತ ಬೃಹದ್ಗಾತ್ರದ ಪ್ರಾಣಿ’ ಎಂಬ ದಾಖಲೆಯ ‘ತಿಮಿಂಗಿಲ’ ಜೋಡಿಯೊಂದು ಚಿತ್ರ-1ರಲ್ಲಿದೆ. ಸಂಪೂರ್ಣ ಸಾಗರವಾಸಿಗಳೇ ಆಗಿದ್ದರೂ ತಿಮಿಂಗಿಲಗಳು ನೀರಿಂದ ಹೊರಕ್ಕೆ ತಲೆಯೆತ್ತಿ ನೇರವಾಗಿ ಗಾಳಿಯಿಂದಲೇ ಉಸಿರೆಳೆದುಕೊಳ್ಳುತ್ತವೆ. ಅವು ಯಾವ ಪ್ರಾಣಿ ವರ್ಗಕ್ಕೆ ಸೇರಿರುವುದು ಈ ಬಗೆಯ ಉಸಿರಾಟ ಕ್ರಮಕ್ಕೆ ಕಾರಣ?

ಅ. ಮತ್ಸ್ಯ ವರ್ಗ

ಬ. ಉಭಯವಾಸಿ ವರ್ಗ

ಕ. ಉರಗ ವರ್ಗ

ಡ. ಸಸ್ತನಿ ವರ್ಗ

2. ನೂರಾರು ಸೇವಕಿಯರಿಂದ ಸುತ್ತುವರೆದಿರುವ ಒಂದು ‘ರಾಣಿ ಗೆದ್ದಲು’ ಚಿತ್ರ-2ರಲ್ಲಿದೆ. ‘ಮೊಟ್ಟೆಯಿಡುವ ಯಂತ್ರ’ ಎಂದೇ ರಾಣಿ ಗೆದ್ದಲುಗಳು ಪ್ರಸಿದ್ಧ, ಹೌದಲ್ಲ? ರಾಣಿ ಗೆದ್ದಲು ಪ್ರತಿ ದಿನ ಇಡುವ ಮೊಟ್ಟೆಗಳ ಸಂಖ್ಯೆ ಇವುಗಳಲ್ಲಿ ಯಾವುದಕ್ಕೆ ತುಂಬ ಸಮೀಪ?

ಅ. ಹತ್ತು ಸಾವಿರ

ಬ. ಮೂವತ್ತು ಸಾವಿರ

ಕ. ಐವತ್ತು ಸಾವಿರ

ಡ. ಒಂದು ಲಕ್ಷ

3. ಪೃಥ್ವಿಯ ಅತ್ಯಂತ ಪ್ರಸಿದ್ಧ ಮರುಭೂಮಿಗಳಲ್ಲೊಂದಾದ, ದಕ್ಷಿಣ ಅಮೆರಿಕದ ‘ಅಟಕಾಮಾ’ ಮರುಭೂಮಿಯ ಒಂದು ದೃಶ್ಯ ಚಿತ್ರ-3ರಲ್ಲಿದೆ. ಧರೆಯಲ್ಲಿ ಅಟಕಾಮಾ ಮರುಭೂಮಿಯ ಅತ್ಯಂತ ವಿಶಿಷ್ಟ ಗುಣ ಇವುಗಳಲ್ಲಿ ಯಾವುದು ಗೊತ್ತೇ?

ಅ. ಅದು ಅತ್ಯಂತ ಶುಷ್ಕ ಮರುಭೂಮಿ

ಬ. ಅದು ಅತ್ಯಂತ ವಿಶಾಲ ಮರುಭೂಮಿ

ಕ. ಅದು ಅತ್ಯಂತ ಬಿಸಿಯ ಮರುಭೂಮಿ

ಡ. ಅದು ಅತ್ಯಂತ ಶೀತಲ ಮರುಭೂಮಿ

4. ಅತ್ಯಂತ ರುದ್ರ ಹವಾ ವಿದ್ಯಮಾನಗಳಲ್ಲೊಂದಾದ ‘ಚಂಡ ಮಾರುತ’ವೊಂದರ ಉಪಗ್ರಹ ಚಿತ್ರ-4ರಲ್ಲಿದೆ. ಚಂಡಮಾರುತಗಳಿಗೆ ಧರೆಯ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿವೆ. ಚಂಡಮಾರುತಗಳ ಅಂಥ ವಿಭಿನ್ನ ಹೆಸರುಗಳು ಈ ಪಟ್ಟಿಯಲ್ಲಿ ಯಾವುವು?

ಅ. ಸೈಕ್ಲೋನ್

ಬ. ಸುನಾಮಿ

ಕ. ಹರಿಕೇನ್

ಡ. ಟೈಫೂನ್

ಇ. ಟಾರ್ನೆಡೋ

5. ಜ್ವಾಲಾಮುಖಿಯಿಂದ ಉಕ್ಕಿದ ವಿಶಿಷ್ಟ ಸಂಯೋಜನೆಯ ಶಿಲಾಪಾಕ ನೆಲದ ಮೇಲೆ ಕ್ಷಿಪ್ರವಾಗಿ ತಣಿದು, ಒತ್ತಾಗಿ ಜೋಡಿಸಿದ ಸ್ತಂಭಗಳ ರೂಪದಲ್ಲಿ ನಿಂತಿರುವ ‘ಅಗ್ನಿ ಶಿಲೆ’ಯ ಒಂದು ವಿಧ ಚಿತ್ರ-5ರಲ್ಲಿದೆ. ಹೀಗೆ ರೂಪ ತಳೆವ ಅಗ್ನಿ ಶಿಲೆ ಯಾವುದು?

ಅ. ಗ್ರಾನೈಟ್

ಬ. ಆಬ್ಸೀಡಿಯಾನ್

ಕ. ಪೆಗ್ಮಟೈಟ್

ಡ. ಬಸಾಲ್ಟ್

6. ಕಡಲಿನ ‘ಹವಳದ ದಿಬ್ಬ’ಗಳು ಅತ್ಯಂತ ವರ್ಣಮಯ ಮತ್ತು ವೈವಿಧ್ಯಮಯ ಜೀವಿಭರಿತ (ಚಿತ್ರ-6). ಆದರೆ ಕಡಲಿನ ನೀರಿನಲ್ಲಾಗುವ ಒಂದು ವ್ಯತ್ಯಯದಿಂದ ಅದೇ ಹವಳ ಲೋಕ ನಿರ್ವರ್ಣವಾಗುತ್ತದೆ; ಜೀವಿರಹಿತವಾಗುತ್ತದೆ (ಚಿತ್ರ-7). ‘ಕಾರಲ್ ಬ್ಲೀಚಿಂಗ್’ ಎಂದೇ ಹೆಸರಾಗಿರುವ ಈ ವಿನಾಶಕರ ವಿದ್ಯಮಾನಕ್ಕೆ ಕಡಲ ಜಲದಲ್ಲಿ ಸಂಭವಿಸುವ ಈ ಕೆಳಗಿನ ಯಾವ ಅಂಶ ಪ್ರಮುಖ ಕಾರಣ?

ಅ. ಉಪ್ಪಿನಂಶದ ಇಳಿಕೆ

ಬ. ಉಷ್ಣತೆಯ ಹೆಚ್ಚಳ

ಕ. ನೀರಿನ ಆಮ್ಲೀಯತೆಯ ಏರಿಕೆ

ಡ. ಕಲ್ಮಶಗಳ ಅಧಿಕ ಸೇರ್ಪಡೆ

7. ಹಲವಾರು ವಿಶೇಷ ದೂರದರ್ಶಕಗಳು ಕೃತಕ ಭೂ ಉಪಗ್ರಹಗಳಂತೆ ಪೃಥ್ವಿಯನ್ನು ಪರಿಭ್ರಮಿಸುತ್ತ ಪ್ರಸ್ತುತ ಕ್ರಿಯಾಶೀಲವಾಗಿವೆ; ವಿಶ್ವದ ಅಧ್ಯಯನಕ್ಕೆ ಅದ್ಭುತ ನೆರವು ನೀಡುತ್ತಿವೆ. ಅಂಥದೊಂದು ಪ್ರಸಿದ್ಧ ನಿರ್ಮಿತಿ ಚಿತ್ರ-8ರಲ್ಲಿದೆ. ಈ ವಿಶ್ವ ವಿಖ್ಯಾತ ಸಾಧನದ ಹೆಸರೇನು ಗೊತ್ತೇ?

ಅ. ಚಂದ್ರಾ ಕ್ಷ-ಕಿರಣ ದೂರದರ್ಶಕ

ಬ. ಹಬಲ್ ಬಾಹ್ಯಾಕಾಶ ದೂರದರ್ಶಕ

ಕ. ಕೆಪ್ಲರ್ ವ್ಯೋಮ ದೂರದರ್ಶಕ

ಡ. ಸ್ಪಿಟ್ಜರ್ ಅಂತರಿಕ್ಷ ದೂರದರ್ಶಕ

8. ಹಲವಾರು ಪ್ರಾಣಿಗಳು ಆಹಾರ ಪಡೆಯಲು, ಬೇಟೆಯಾಡಲು ಮತ್ತು ಶತ್ರುಗಳಿಂದ ರಕ್ಷಿಸಿಕೊಳ್ಳಲೂ ಕೂಡ ತಮ್ಮ ಬುದ್ಧಿವಂತಿಕೆಯನ್ನು ಬಳಸಿ ಕಡ್ಡಿ, ಕಲ್ಲು ಇತ್ಯಾದಿ ಉಪಕರಣಗಳ ಬಳಕೆಯನ್ನು ರೂಢಿಸಿಕೊಂಡಿವೆ; ಅಂಥದೊಂದು ನಿದರ್ಶನ ಚಿತ್ರ-9ರಲ್ಲಿದೆ. ಚಿಂಪಾಂಜಿಯಂತೆಯೇ ಹಾಗೆ ಉಪಕರಣಗಳನ್ನು ಬಳಸುವ ಪ್ರಾಣಿಗಳು ಈ ಕೆಳಗಿನ ಪಟ್ಟಿಯಲ್ಲಿ ಯಾವುವು - ಗುರುತಿಸಬಲ್ಲಿರಾ?

ಅ. ಬಾವಲಿ

ಬ. ಕಾಗೆ

ಕ. ಒರಾಂಗುಟಾನ್

ಡ. ಹುಲಿ

ಇ. ನೀರು ನಾಯಿ

ಈ. ಆನೆ

ಉ. ಕಪ್ಪೆ

ಟ. ಡಾಲ್ಫಿನ್

ಣ. ಈಜಿಪ್ಷಿಯನ್ ರಣಹದ್ದು

9. ಬಿಲ್ಲಿನಂತೆ ಬಾಗಿರುವ ಜೀವಂತ ಮಹಾ ವೃಕ್ಷವೊಂದರ ದೃಶ್ಯ ಚಿತ್ರ-10ರಲ್ಲಿದೆ. ಈ ವೃಕ್ಷ ಹೀಗೆ ಬಾಗಿ ಬೆಳೆದಿರಲು ಕಾರಣ ಇವುಗಳಲ್ಲಿ ಯಾವುದು?

ಅ. ವಿಪರೀತ ಮಳೆ

ಬ. ಇಳಿಜಾರು ನೆಲ

ಕ. ನಿರಂತರ ಬಿರುಗಾಳಿ ತಾಡನ

ಡ. ಪಿಡುಗು ಕೀಟಗಳ ಹಾವಳಿ

ಈ. ಪೋಷಕಾಂಶಗಳ ಕೊರತೆ

10. ಧರೆಯ ‘ಅತ್ಯಂತ ದೈತ್ಯ ಹಲ್ಲಿ’ಯಾದ ‘ಕೊಮೊಡೋ ಡ್ರ್ಯಾಗನ್’ ಚಿತ್ರ-11ರಲ್ಲಿದೆ. ಹಲ್ಲಿಗಳಲ್ಲಿ ಸಾವಿರಾರು ಪ್ರಭೇದಗಳಿವೆ. ಕೆಲ ಪ್ರಸಿದ್ಧ ಹಲ್ಲಿಗಳ ಈ ಪಟ್ಟಿಯಲ್ಲಿ ಯಾವುದು ಹಲ್ಲಿ ಅಲ್ಲ? ಯೋಚಿಸಿ ತೀರ್ಮಾನಿಸಿ:

ಅ. ಗೆಕೋ

ಬ. ಇಗ್ವಾನಾ

ಕ. ಗೋಸುಂಬೆ

ಡ. ಸ್ಕಿಂಕ್

ಇ. ಮೊಸಳೆ

ಈ. ಗೀಲಾ ಮಾನ್‌ಸ್ಟರ್

ಉ. ಥಾರ್ನೀ ಡೆವಿಲ್

ಟ. ಅನೋಲೆ

11. ಕಡಲಿನಲ್ಲಿ ತೇಲುತ್ತಿರುವ ಒಂದು ಬೃಹತ್ ‘ಐಸ್ ಬರ್ಗ್’ನ ಅದ್ಭುತ ದೃಶ್ಯ ಚಿತ್ರ-12ರಲ್ಲಿದೆ. ಐಸ್ ಬರ್ಗ್‌ಗಳನ್ನು ಕುರಿತ ಈ ಹೇಳಿಕೆಗಳಲ್ಲಿ ಯಾವುವು ಸರಿಯಲ್ಲ?

ಅ. ಕಡಲ ನೀರಿನಿಂದಲೇ ಐಸ್ ಬರ್ಗ್‌ಗಳು ಮೈದಳೆಯುತ್ತವೆ.

ಬ. ಐಸ್ ಬರ್ಗ್‌ಗಳು ಲವಣ ರಹಿತವಾಗಿರುತ್ತವೆ.

ಕ. ಐಸ್ ಬರ್ಗ್‌ಗಳು ಬಗೆ ಬಗೆಯ ವರ್ಣ ಚಿತ್ತಾರಗಳನ್ನೂ ಪಡೆದಿರುವುದು ಸಾಧ್ಯ

ಡ. ಐಸ್ ಬರ್ಗ್‌ಗಳ ಬಹು ಭಾಗ ನೀರಿನಲ್ಲಿ ಮುಳುಗಿ ಅಗೋಚರವಾಗಿರುತ್ತವೆ

ಇ. ಐಸ್ ಬರ್ಗ್‌ಗಳ ಸಾಂದ್ರತೆ ನೀರಿನ ಸಾಂದ್ರತೆಗಿಂತ ಕಡಿಮೆ

ಈ. ಐಸ್ ಬರ್ಗ್‌ಗಳನ್ನು ಕರಗಿಸಿ ಪಡೆವ ನೀರು ಕುಡಿಯಲು ಯೋಗ್ಯವಲ್ಲ

12. ಪ್ರಸ್ತುತ ಭೂಮಿಯಲ್ಲಿ ಲಭಿಸುತ್ತಿರುವ ಕಲ್ಲಿದ್ದಿಲು ರೂಪುಗೊಳ್ಳಲು ಕಾರಣವಾದ, ಪ್ರಾಚೀನ ವೃಕ್ಷ ರಾಶಿಯ ಒಂದು ದೃಶ್ಯ ಚಿತ್ರ-13ರಲ್ಲಿದೆ. ಈಗ್ಗೆ 359 ದಶಲಕ್ಷ ವರ್ಷಗಳಿಂದ 299 ದಶಲಕ್ಷ ವರ್ಷಗಳ ಹಿಂದಿನ ಕಾಲಾವಧಿಯಲ್ಲಿ ಇಂಥ ಸಸ್ಯ-ವೃಕ್ಷರಾಶಿಗಳಿಂದ ಧರೆಯಲ್ಲಿ ಕಲ್ಲಿದ್ದಿಲಿನ ಭಾರೀ ನಿಕ್ಷೇಪಗಳು ರೂಪುಗೊಂಡ ‘ಭೂ ಯುಗ’ ಯಾವುದು ಗುರುತಿಸಬಲ್ಲಿರಾ?

ಅ. ಕಾರ್ಬಾನಿಫರಸ್ ಯುಗ

ಬ. ಜ್ಯೂರಾಸಿಕ್ ಯುಗ

ಕ. ಪರ್ಮಿಯನ್ ಯುಗ

ಡ. ಡಿವೋನಿಯನ್ ಯುಗ

ಇ. ಕೇಂಬ್ರಿಯನ್ ಯುಗ

13. ಮಹಾ ನಗರಗಳಿಂದ ಕಡಲಿಗೆ ಬೆರೆಯುತ್ತಿರುವ ಬಚ್ಚಲ ಹೊಲಸು ಮತ್ತು ಕೃಷಿ ಭೂಮಿಗಳಿಂದ ಬಸಿದು ಸೇರುತ್ತಿರುವ ರಸಗೊಬ್ಬರ ಶೇಷಾಂಶಗಳು ಮಿತಿಮೀರಿದ ಸಾಗರ ಪ್ರದೇಶಗಳಲ್ಲಿ ‘ಸಯನೋಬ್ಯಾಕ್ಟೀರಿಯಾ’ಗಳೆಂಬ ಸೂಕ್ಷ್ಮ ಜೀವಿಗಳು ಅಪಾರ ಸಂಖ್ಯೆಯಲ್ಲಿ ಬೆಳೆಯುತ್ತವೆ (ಚಿತ್ರ-14); ಕಡಲ ನೀರಿನ ಮೇಲೆ ಸಾವಿರಾರು ಚದರ ಕಿಲೋ ಮೀಟರ್ ವಿಸ್ತಾರವನ್ನು ಆವರಿಸುತ್ತವೆ; ಅಷ್ಟೂ ಪ್ರದೇಶದಲ್ಲಿ ಕಡಲ ಜೀವಿಗಳನ್ನು ಉಸಿರುಗಟ್ಟಿಸಿ ವಿನಾಶಗೊಳಿಸುತ್ತವೆ. ಈ ಮಾನವ ಮೂಲ ವಿದ್ಯಮಾನಕ್ಕೆ ಏನು ಹೆಸರು?

ಅ. ಹಸಿರು ಉಬ್ಬರ (ಗ್ರೀನ್ ಟೈಡ್)

ಬ. ಕೆಂಪು ಉಬ್ಬರ (ರೆಡ್ ಟೈಡ್)

ಕ. ಕಂದು ಉಬ್ಬರ (ಬ್ರೌನ್ ಟೈಡ್)

ಡ. ನೀಲಿ ಉಬ್ಬರ (ಬ್ಲೂ ಟೈಡ್)

14. ಅತ್ಯುನ್ನತ ಪರ್ವತ ಪ್ರದೇಶಗಳಲ್ಲೂ, ಶಾಶ್ವತ ಹಿಮ ಲೋಕಗಳಲ್ಲೂ ಮೈದಳೆದು, ನಿಧಾನವಾಗಿ ಕರಗುತ್ತ-ಜರುಗುತ್ತ, ನೆಲವನ್ನು ಬಗೆಯುತ್ತ ಮುನ್ನಡೆವ ನಿಸರ್ಗ ನಿರ್ಮಿತಿಯೊಂದರ ದೃಶ್ಯ ಚಿತ್ರ-15ರಲ್ಲಿದೆ. ಬಲಿಷ್ಠ ಶಿಥಿಲಕಾರಕವೂ ಆಗಿರುವ ಈ ನಿರ್ಮಿತಿ ಯಾವುದು?

ಅ. ಹಿಮ ಹಾಸು

ಬ. ಹಿಮ ಕಣಿವೆ

ಕ. ಹಿಮ ನದಿ

ಡ. ಹಿಮ ಪರ್ವತ

ಎನ್. ವಾಸುದೇವ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry