‘ಹೆಣ್ಣು ಭ್ರೂಣ ಹತ್ಯೆ ನಿಂತರೆ ಸಾಮಾಜಿಕ ಅಸಮತೋಲನಕ್ಕೆ ಕಡಿವಾಣ’

7

‘ಹೆಣ್ಣು ಭ್ರೂಣ ಹತ್ಯೆ ನಿಂತರೆ ಸಾಮಾಜಿಕ ಅಸಮತೋಲನಕ್ಕೆ ಕಡಿವಾಣ’

Published:
Updated:

ಕುಮಟಾ: ‘ ಹೆಣ್ಣು ಭ್ರೂಣ ಹತ್ಯೆ ಮಾಡುವುದನ್ನು ನಿಲ್ಲಿಸಿದರೆ ಸಮಾಜದಲ್ಲಿ ಸಾಮಾಜಿಕ ಅಸಮತೋಲನ ನಿಂತು ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತವೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪೂರ್ಣಿಮಾ ಪೈ ಹೇಳಿದರು.

ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಕುಮಟಾದ ಡಾ. ಎ.ವಿ. ಬಾಳಿಗಾ ಕಲಾ–ವಿಜ್ಞಾನ ಮಹಾವಿದ್ಯಲಯದಲ್ಲಿ ಶುಕ್ರವಾರ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಯುವ ಜನತೆ ಮುಂದೆ ಏನಾಗುತ್ತಾರೆ ಎನ್ನುವುದರ ಮೇಲೆ ಭಾರತದ ಭವಿಷ್ಯ ನಿಂತಿದೆ. ಇಡೀ ಜಗತ್ತಿನಲ್ಲಿ ಹೆಚ್ಚಿನ ಪ್ರಮಾಣದ ಯುವಜನರು ಇರುವುದು ಭಾರತದಲ್ಲಿ ಮಾತ್ರ. ಯುವ ಸಮೂಹ ದೇಶದ ಆಸ್ತಿಯಾದರೆ ಅವರಲ್ಲಿ ಕೆಲವರು ದಾರಿ ತಪ್ಪುತ್ತಿದ್ದಾರೆ. ವರದಕ್ಷಿಣಿ ನೀಡಲಾರೆ, ಅದನ್ನು ಕೇಳುವವರಿಗೆ ಮದುವೆಯೂ ಆಗಲಾರೆ ಎನ್ನುವ ಶಪಥವನ್ನು ಹೆಣ್ಣುಮಕ್ಕಳು ಕೈಕೊಂಡರೆ ಅಲ್ಲಿಂದಲೇ ಸಮಾಜ ಸುಧಾರಣೆಯ ಮೊದಲ ಹೆಜ್ಜೆ ಆರಂಭವಾಗುತ್ತದೆ. ಸಣ್ಣ ಮಕ್ಕಳ ಮೂಲಕ ಕೊಲೆ ಸುಲಿಗೆ ಮಾಡಿಸಿದರೆ ಅವರಿಗೆ ಶಿಕ್ಷೆಯಾಗುದಿಲ್ಲ ಎಂದು ಕೆಲವರು ತಿಳಿದಿದ್ದರೆ ಅದು ತಪ್ಪು’ ಎಂದರು.

‘ನಿರ್ಭಯಾ ಪ್ರಕರಣದ ನಂತರ ಆ ಕಾನೂನಿಗೂ ತಿದ್ದುಪಡಿ ತರಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಕ್ಕೆ ಬರುವ ಅಪರಿಚಿತರನ್ನು ನಂಬಿ ಪ್ರೀತಿ–ಪ್ರೇಮ ಎಂದು ಮನೆ ಬಿಟ್ಟು ಓಡಿ ಹೋಗುವ ಯುವತಿಯರು ಜೀವನ ಹಾಳು ಮಾಡಿಕೊಂಡು ನ್ಯಾಯಾಲಯಕ್ಕೆ ಬರುವ ಅನೇಕ ಪ್ರರಣಗಳು ನಿತ್ಯ ನಡೆಯುತ್ತಿವೆ. ಓದು, ಮದುವೆ, ಸಂಸಾರ ಎಲ್ಲಕ್ಕೂ ಅದರದೇ ಆದ ಕಾಲವೊಂದಿದೆ. ಕೇವಲ 38 ವರ್ಷ ಮಾತ್ರ ಬದುಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಸ್ವಾಮಿ ವಿವೇಕಾನಂದ ಅವರು ಯುವ ಜನತೆಗೆ ಎಲ್ಲ ರೀತಿಯಲ್ಲಿ ಆದರ್ಶಪ್ರಾಯ’ ಎಂದರು.

’ದೇಶ ಕಟ್ಟವಲ್ಲಿ ಯುವ ಜನರ ಪಾತ್ರ’ ಕುರಿತು ಮಾತನಾಡಿದ ವಕೀಲೆ ಮಮತಾ ನಾಯ್ಕ, ‘ ರಾಜಕೀಯ ಸ್ಥಿತಿ ಕೆಟ್ಟು ಹೋಗಿರುವ ಈ ದೇಶದಲ್ಲಿ ನನ್ನಿಂದ ಏನು ಮಾಡಲು ಸಾಧ್ಯ ಎನ್ನುವ ತಾತ್ಸಾರವನ್ನು ಯುವಜನರು ತಳೆಯಬಾರದು. ಆತ್ಮ ವಿಶ್ವಾಸ, ಛಲ ಇದ್ದರೆ ಬಡತನ ಮುಂತಾದ ಕಷ್ಟವನ್ನು ಮೀರಿ ಸಾಧನೆ ಮಾಡಬಹುದು ಎನ್ನುವುದ ವಿವೇಕಾನಂದರು ತೋರಿಸಿದ್ದಾರೆ’ ಎಂದರು. ಪ್ರಾಭಾರಿ ಪ್ರಾಚಾರಯ ಡಾ. ವಿ.ಎಂ. ಪೈ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಆರ್.ಎ. ಹೆಗಡೆ, ಸಹಾಯಕ ಸರ್ಕಾರಿ ಅಭಿಯೋಜಕ ಮಂಜುನಾಥ ನಾಯ್ಕ ವೇದಿಕೆಯಲ್ಲಿದ್ದರು. ವಕೀಲ ಮಧು ಹೆಗಡೆ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry