ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತ ಸಂತೆ’ಗೆ ಮುಗಿಬಿದ್ದ ಗ್ರಾಹಕರು

Last Updated 13 ಜನವರಿ 2018, 9:16 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ ಆರಂಭವಾದ ರೈತ ಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮೊದಲ ಸಂತೆಗೆ ಅಪಾರ ಸಂಖ್ಯೆಯಲ್ಲಿ ಗ್ರಾಹಕರು ಹರಿದು ಬಂದರು. ಮಧ್ಯಾಹ್ನದ ವೇಳೆಗೇ ತರಕಾರಿ ಖಾಲಿ ಖಾಲಿ... ಮಾರುಕಟ್ಟೆಗೆ ಹೋಗುವ ಎಲ್ಲ ಗ್ರಾಹಕರು ಅತ್ತ ಮುಖಮಾಡಿದ್ದರು.

ಆವರಣದಲ್ಲಿ ಸುಮಾರು 30 ಮಳಿಗೆಗೆ ಅವಕಾಶ ಕಲ್ಪಿಸಲಾಗಿತ್ತು. ರೈತರು ತಮ್ಮ ತೋಟದಲ್ಲಿ ಬೆಳೆದ ತರಕಾರಿ, ಬಾಳೆಹಣ್ಣು ಮತ್ತಿತರ ಪದಾರ್ಥಗಳನ್ನು ನೇರವಾಗಿ ತಂದು ಮಾರಾಟ ನಡೆಸಿದರು.

ಯಾವುದೇ ದಲ್ಲಾಳಿಗಳ ಹಸ್ತಕ್ಷೇಪವಿಲ್ಲದೇ ತರಕಾರಿ ಮಾರಾಟ ನಡೆಯಿತು. ಒಂದಷ್ಟು ತರಕಾರಿ ಮಾರಾಟ ನಡೆಸಿದ ರೈತರು ಜೇಬು ತುಂಬಿಸಿಕೊಂಡು ನಗುಮೊಗದಿಂದ ಮನೆಯತ್ತ ಹೆಜ್ಜೆ ಹಾಕಿದರು.

ರೈತ ಸಂತೆಗೆ ಚಾಲನೆ: ಶಾಸಕ ಕೆ.ಜಿ. ಬೋಪಯ್ಯ ಅವರು ರೈತ ಸಂತೆಗೆ ಚಾಲನೆ ನೀಡಿ ಮಾತನಾಡಿ, ‘ಜಿಲ್ಲೆಯ ರೈತರು ಸ್ಥಳೀಯವಾಗಿ ಬೆಳೆದಿರುವ ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರಲು ಹಾಗೂ ಸ್ಪರ್ಧಾತ್ಮಕ ಬೆಲೆ ದೊರಕಿಸಿಕೊಡಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರೈತಸಂತೆ ಆರಂಭಿಸಿದೆ. ಇದು ಉತ್ತಮವಾದ ಕೆಲಸ ರೈತರಿಗೆ ಇದರಿಂದ ಅನುಕೂಲವೇ ಹೆಚ್ಚು’ ಎಂದು ಶ್ಲಾಘಿಸಿದರು.

‘ರೈತರು ಸ್ಥಳೀಯವಾಗಿ ಬೆಳೆದಿರುವ ತರಕಾರಿ ಮತ್ತಿತರರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಒದಗಿಸಲಾಗಿದ್ದು, ಹಣ್ಣುಗಳನ್ನು ಕೂಡ ಮಾರಾಟ ಮಾಡಬಹುದು’ ಎಂದರು.

₹ 8 ಲಕ್ಷ ವೆಚ್ಚದಲ್ಲಿ ಮಳಿಗೆ ನಿರ್ಮಾಣ ಮತ್ತಿತರ ಕೆಲಸ ಮಾಡಲಾಗಿದೆ. ವಾಹನಗಳಲ್ಲಿ ಸಂತೆಗೆ ಬಂದರೆ ಪಾರ್ಕಿಂಗ್‌ ವ್ಯವಸ್ಥೆ ಇದೆ. ಹರಾಜು ಕಟ್ಟೆಗಳು, ಶುದ್ಧ ನೀರಿನ ಘಟಕಗಳು ಸೇರಿ ಉತ್ತಮವಾಗಿ ಪ್ರಾಂಗಣವನ್ನು ಸಿದ್ಧಪಡಿಸಲಾಗಿದೆ. ಇಲ್ಲಿಗೆ ಬರುವ ರೈತರಿಗೆ ಸಮಿತಿ ಯಾವುದೇ ಶುಲ್ಕ ವಿಧಿಸುವುದಿಲ್ಲ. ನೆಮ್ಮದಿಯಿಂದ ವ್ಯಾಪಾರ ನಡೆಸಬಹುದು. ಮುಂದಿನ ದಿನಗಳಲ್ಲಿ ಕೋಲ್ಡ್‌ ಸ್ಟೋರೇಜ್‌ ಸಹ ಆರಂಭಿಸುವ ಆಲೋಚನೆಯಿದೆ’ ಎಂದು ಹೇಳಿದರು.

‘ರೈತರು ಬೆವರು ಸುರಿಸಿ ಬೆಳೆದ ಬೆಳೆಯನ್ನು ದಲ್ಲಾಳಿಗಳು ಕಡಿಮೆ ಬೆಲೆಗೆ ವಂಚಿಸಿ ಪಡಿದುಕೊಳ್ಳುವ ಸನ್ನಿವೇಶವಿತ್ತು. ಅದಕ್ಕೆ ರೈತ ಸಂತೆಯಿಂದ ಕಡಿವಾಣ ಬೀಳಲಿದೆ. ರೈತ ಸಂತೆ ಇನ್ನೂ ಹೆಚ್ಚು ಅಭಿವೃದ್ಧಿಯಾಗಲಿ’ ಎಂದು ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಹಾರೈಸಿದರು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ರೈತ ಸಂತೆಯ ಬಗ್ಗೆ ಮತ್ತಷ್ಟು ಪ್ರಚಾರ ನಡೆಸಬೇಕು ಎಂದು ಕರೆ ನೀಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕಾಂಗೀರ ಸತೀಶ್ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಅಪ್ಪಚ್ಚು ರಂಜನ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸುವಿನ್ ಗಣಪತಿ, ಕೆ.ವಿ. ಯೋಗಾನಂದ, ಸಮಿತಿ ಸದಸ್ಯ ಬೆಪ್ಪುರನ ಮೇದಪ್ಪ ಇತರರಿದ್ದರು.

* * 

‘ರೈತಸಂತೆ’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿತ್ಯ ಸಂತೆ ನಡೆಸಬೇಕೆನ್ನುವ ಆಲೋಚನೆಯಿದೆ. ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು
ಮೇದಪ್ಪ, ಸದಸ್ಯರು, ಆರ್‌ಎಂಸಿ, ಮಡಿಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT