ಅಂಗನವಾಡಿ ಅವ್ಯವಹಾರ ಪೂರ್ಣ ತನಿಖೆ

7

ಅಂಗನವಾಡಿ ಅವ್ಯವಹಾರ ಪೂರ್ಣ ತನಿಖೆ

Published:
Updated:
ಅಂಗನವಾಡಿ ಅವ್ಯವಹಾರ ಪೂರ್ಣ ತನಿಖೆ

ಕೆಜಿಎಫ್‌: ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ನೀಡುವ ವಿಚಾರದಲ್ಲಿ ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ನಡೆಸಿರುವ ಅವ್ಯವಹಾರದ ಬಗ್ಗೆ ಪೂರ್ಣ ತನಿಖೆ ನಡೆಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದರು.

ರಾಬರ್ಟಸನ್‌ಪೇಟೆಯಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಮನೆ ಮಾಲೀಕರೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರವಸೆ ನೀಡಿದರು.

‘ಬಹುತೇಕ ಅಂಗನವಾಡಿ ಕೇಂದ್ರಗಳು ಬಾಡಿಗೆ ಮನೆಯಲ್ಲಿದೆ. ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಕೇಂದ್ರಗಳಿಗೆ ₹ 750 ಮತ್ತು ನಗರ ಪ್ರದೇಶದಲ್ಲಿರುವ ಕೇಂದ್ರಗಳಿಗೆ ₹ 3,000 ನಿಗದಿ ಮಾಡಿದೆ. ಆದರೆ ಸಿಡಿಪಿಒ, ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಸಂಘಟಿತರಾಗಿ ಮನೆ ಮಾಲೀಕರಿಗೆ ಕೇವಲ ₹ 500 ರೂಪಾಯಿ ನೀಡಿ, ಉಳಿದ ಹಣವನ್ನು ಲಪಟಾಯಿಸುತ್ತಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಕಣ್ಣನ್‌ ಎಂಬುವರು ದಾಖಲೆ ಸಮೇತ ದೂರು ನೀಡಿದರು.

‘ಕಿಶೋರಿ ಯೋಜನೆಯಡಿ 14 ರಿಂದ 18 ವರ್ಷದ ಬಾಲಕಿಯರಿಗೆ ಪೌಷ್ಠಿಕ ಆಹಾರವನ್ನು ನೀಡಬೇಕು. ಸರ್ಕಾರದಿಂದ ಸಿದ್ದಪಡಿಸಿದ ಪಾಕೆಟ್ ಬಂದರೂ, ಪಾಕೆಟ್‌ ಒಡೆದು ಅದರಲ್ಲಿನ ಪದಾರ್ಥಗಳನ್ನು ಗ್ಲಾಸ್ ನಲ್ಲಿ ಲೆಕ್ಕ ಹಾಕಿ ಕೊಡುತ್ತಿದ್ದಾರೆ. ಕೇಳಿದರೆ ಅಧಿಕಾರಿಗಳು ಅಷ್ಟೇ ಕೊಡು ಎಂದು ಹೇಳಿದ್ದಾರೆ ಎಂದು ಕಾರ್ಯಕರ್ತೆ ತಿಳಿಸುತ್ತಾರೆ’ ಎಂದು ಪೋಷಕ ಆರ್ಮುಗಂ ದೂರಿದರು.

‘ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಮಾನಸಿಕ ಖಿನ್ನತೆ ಹಿನ್ನಲೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಇದುವರೆವಿಗೂ ಬಾಲಕಿಯ ಪೋಷಕರಿಗೆ ಹಣ ನೀಡಿಲ್ಲ. ಕೂಡಲೇ ಪರಿಹಾರವನ್ನು ನೀಡುವ ಕಾರ್ಯವನ್ನು ಮಾಡಬೇಕು’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.

‘ಅಗ್ನಿಶಾಮಕದಳದ ಕಚೇರಿಯಲ್ಲಿ 11 ಸಿಬ್ಬಂದಿ ಮಾತ್ರ ಇದ್ದು, ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದೆ. 15 ಹುದ್ದೆಗಳು ಬಾಕಿ ಇದೆ. ದಳದ ಸಿಬ್ಬಂದಿಗೆ ವಸತಿಗೃಹ ಕೂಡ ಇನ್ನೂ ನಿರ್ಮಾಣ ಮಾಡಿಲ್ಲ’ ಎಂದು ಅಗ್ನಿಶಾಮಕದಳದ ಅಧಿಕಾರಿ ತಿಳಿಸಿದರು.

ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ಪವನ್‌ಕುಮಾರ್, ಸಿದ್ದಲಿಂಗಯ್ಯ, ವಿಶೇಷ ತಹಶೀಲ್ದಾರ ಶಂಕರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry