ರೈತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು

7

ರೈತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು

Published:
Updated:
ರೈತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು

ಕೋಲಾರ: ‘ಒಕ್ಕೂಟವು ಅವಿಭಜಿತ ಕೋಲಾರ ಜಿಲ್ಲೆಯ ರೈತರ ಅಭಿವೃದ್ಧಿಯ ಜತೆಗೆ ಅವರ ಮಕ್ಕಳ ಶೈಕ್ಷಣಿಕ ಒತ್ತು ನೀಡುತ್ತಿದೆ’ ಎಂದು ಕೋಚಿಮುಲ್ ಅಧ್ಯಕ್ಷ ಎನ್‌.ಜಿ.ಬ್ಯಾಟಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಕೋಚಿಮುಲ್‌ನ ‘ನಂದಿನಿ’ ಪ್ರತಿಭಾನ್ವೇಷಣೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಒಕ್ಕೂಟವು ಗಳಿಸಿದ ಲಾಭದ ಹಣವನ್ನು ಟ್ರಸ್ಟ್‌ನಲ್ಲಿ ಇರಿಸಿ ಹಾಲು ಉತ್ಪಾದಕರ ಮಕ್ಕಳಿಗೆ ವಿದ್ಯಾರ್ಥಿವೇತನ, ವಿಮೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಅಮೃತಕ್ಕೆ ಸಮನಾಗಿರುವ ಹಾಲನ್ನು ಖಾಸಗಿ ಕಂಪೆನಿಯವರು ಕಲುಷಿತಗೊಳಿಸಿ ಮಾರುತ್ತಿರುವ ಬಗ್ಗೆ ರೈತರು ಹಾಗೂ ಗ್ರಾಹಕರು ಎಚ್ಚರಿಕೆ ವಹಿಸಬೇಕು. ಕಲುಷಿತ ಹಾಲಿನ ಸೇವನೆಯಿಂದ ಆರೋಗ್ಯ ಕೆಡುತ್ತದೆ. ಹಾಲಿನ ಕಲಬೆರಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಮಕ್ಕಳ ಪ್ರತಿಭೆ ಗುರುತಿಸುವ ಸಲುವಾಗಿ ಅವಿಭಜಿತ ಜಿಲ್ಲೆಯಲ್ಲಿ ರಸಪ್ರಶ್ನೆ ಮತ್ತು ಸಂಗೀತ ಸ್ಪರ್ಧೆ ಆಯೋಜಿಸಲಾಗಿತ್ತು ಎಂದರು.

‘ರೈತರ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿರುವ ಒಕ್ಕೂಟವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಒತ್ತು ನೀಡುತ್ತಿರುವುದು ಶ್ಲಾಘನೀಯ. ಹಣ ಅಥವಾ ಆಸ್ತಿಯನ್ನು ಬೇರೆಯವರು ಕಬಳಿಸಬಹುದು. ಆದರೆ, ವಿದ್ಯೆ ಕದಿಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಕೋಚಿಮುಲ್ ನಿರ್ದೇಶಕ ಆರ್.ರಾಮಕೃಷ್ಣೇಗೌಡ ಕಿವಿಮಾತು ಹೇಳಿದರು.

ಒಕ್ಕೂಟವು ಪ್ರಗತಿ ರೈತರ ಕಡೆಗೆ ಆಶಯದೊಂದಿಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಪಡೆಯುವವರಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದು ವಿವರಿಸಿದರು.

ಕೋಲಾರ ವಿಜೇತರು: ರಸಪ್ರಶ್ನೆ ಸ್ಪರ್ಧೆಯಲ್ಲಿ ಕೋಲಾರದ ಚಿನ್ಮಯ ವಿದ್ಯಾಲಯದ ಪಿ.ವಿ.ಹಿತೈಶಿ ಪ್ರಥಮ, ಕೆಜಿಎಫ್‌ನ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಿ.ಬೃಂದಾ ದ್ವಿತೀಯ ಮತ್ತು ಜೈನ್ ಶಾಲೆಯ ಎನ್.ಸುಂದರೇಶ್ ತೃತೀಯ, ವಿಲಿಯಂ ರಿಚರ್ಡ್ಸ್‌ ಶಾಲೆಯ ಬಿ.ಯೋಗೇಶ್ ಹಾಗೂ ಮಹಾವೀರ್ ಜೈನ್ ಶಾಲೆಯ ಕೆ.ಎಂ.ಸ್ನೇಹಾ ಸಮಾಧಾನಕರ ಬಹುಮಾನ ಗಳಿಸಿದರು.

ಸಂಗೀತ ಸ್ಪರ್ಧೆಯಲ್ಲಿ ಬಂಗಾರಪೇಟೆಯ ದಿ ಜೈನ್ ಇಂಟರ್ ನ್ಯಾಷನಲ್ ಶಾಲೆಯ ಜಿ.ಲಹರಿ ಪ್ರಥಮ, ಬ್ರಾಹ್ಮಿ ದ್ವಿತೀಯ, ಬೇತಮಂಗಲ ಸರ್ಕಾರಿ ಪ್ರೌಢ ಶಾಲೆಯ ವಿ.ರಮ್ಯಾ ತೃತೀಯ, ಕೋಲಾರದ ಸುವರ್ಣ ಸೆಂಟ್ರಲ್ ಶಾಲೆಯ ಸಿಂಚನಾ ಮತ್ತು ಸೇಂಟ್ ಆನ್ಸ್ ಶಾಲೆಯ ಹರ್ಷಿತ್ ಅಗಸ್ತ್ಯ ಸಮಾಧಾನಕರ ಬಹುಮಾನ ಪಡೆದರು.

ಚಿಕ್ಕಬಳ್ಳಾಪುರ ವಿಜೇತರು: ರಸಪ್ರಶ್ನೆ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರದ ಅಂಗರೇಖನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಆರ್.ಎಂ.ಕಾವ್ಯಶ್ರೀ ಪ್ರಥಮ, ಚಿಂತಾಮಣಿಯ ಕಿಶೋರ್ ವಿದ್ಯಾಭವನದ ಬಿ.ಆರ್.ಅರುಣ್‌ಕುಮಾರ್‌ ದ್ವಿತೀಯ, ಮಂಚನಪಲ್ಲಿಯ ಬಿಜಿಎಸ್ ವಿದ್ಯಾನಿಕೇತನ್ ಶಾಲೆಯ ಎ.ಸಂಧ್ಯಾ ತೃತೀಯ, ಗೌರಿಬಿದನೂರಿನ ಆದರ್ಶ ವಿದ್ಯಾಲಯದ ಎಸ್.ಅಮೃತವರ್ಷಿಣಿ ಹಾಗೂ ಗುಂಡಿಬಂಡೆ ತಾಲ್ಲೂಕಿನ ಹಂಪಸಂದ್ರ ಸರ್ಕಾರಿ ಪ್ರೌಢ ಶಾಲೆಯ ವೇಣುಗೋಪಾಲ್‌ ಸಮಾಧಾನಕರ ಬಹುಮಾನ ಗಳಿಸಿದರು.

ಸಂಗೀತ ಸ್ಪರ್ಧೆಯಲ್ಲಿ ಆಲಿಪುರದ ಜೈನಬಿಯಾ ಪ್ರೌಢ ಶಾಲೆಯ ಫಾತಿಮಾ ಪ್ರಥಮ, ಚಿಕ್ಕಬಳ್ಳಾಪುರ ಸರ್ಕಾರಿ ಪ್ರೌಢ ಶಾಲೆಯ ಗ್ರೆಸಿಯಾ ದ್ವಿತೀಯ, ಬಾಗೇಪಲ್ಲಿಯ ಆದರ್ಶ ವಿದ್ಯಾಲಯದ ಜಿ.ಎಸ್.ಶಿರೀಷಾ ತೃತೀಯ, ಜೈನ್ ಪಬ್ಲಿಕ್ ಶಾಲೆಯ ಶ್ರೀಸಾಯಿ ಲಿಖಿತಾ ಹಾಗೂ ಆಲಿಪುರದ ಜೈನಬೀಯಾ ಪ್ರೌಢ ಶಾಲೆಯ ನಜಾದ್ ಫಾತಿಮಾ ಸಮಾಧಾನಕರ ಬಹುಮಾನ ಪಡೆದರು.

ದೇವರಾಜ ಅರಸು ಉನ್ನತ ವೈದ್ಯಕೀಯ ಮಹಾವಿದ್ಯಾಲಯದ ಉಪ ಕುಲಪತಿ ಪ್ರೊ.ಸಿ.ವಿ.ರಘುವೀರ್, ನಿರ್ದೇಶಕರಾದ ರಾಜೇಂದ್ರಗೌಡ, ಎಂ.ಬೈರಾರೆಡ್ಡಿ, ಪಾರ್ವತಮ್ಮ, ಸುನಂದಮ್ಮ, ಪಶುಪಾಲನೆ ಮತ್ತು ಪಶು ವೈದ್ಯ ಇಲಾಖೆ ಉಪನಿರ್ದೇಶಕ ಚನ್ನಕೇಶವಯ್ಯ ಪಾಲ್ಗೊಂಡಿದ್ದರು.

* * 

ದೇಶದ ಸೈನಿಕರಿಗೂ ಒಕ್ಕೂಟದಿಂದ ಹಾಲು ಸರಬರಾಜು ಮಾಡಲಾಗುತ್ತಿದೆ. ನಂದಿನಿ ಹಾಲಿನ ಉತ್ಪನ್ನಗಳನ್ನು ಪ್ರತಿಯೊಬ್ಬರೂ ಬಳಸಬೇಕು.

ಎನ್‌.ಜಿ.ಬ್ಯಾಟಪ್ಪ,ಕೋಚಿಮುಲ್‌ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry