ಭೈರಪ್ಪನವರ ಬಾಲ್ಯ ಹುಡುಕುತ್ತಾ

7

ಭೈರಪ್ಪನವರ ಬಾಲ್ಯ ಹುಡುಕುತ್ತಾ

Published:
Updated:

ಭೈರಪ್ಪನವರ ಬಾಲ್ಯ ಹುಡುಕುತ್ತಾ

‘ನೋಡ್ರಪ್ಪ... ಉತ್ಸವ ದೇವರು ಊರಾಡಿದಷ್ಟು ಮೂಲ ದೇವರ ಮಹಿಮೆ ಕಡಿಮೆ ಆಗ್ತದೆ’ ಎನ್ನುವ ದೇವರ ಗುಡಿ ಜಗಲಿಯ ಸನ್ಯಾಸಿ ಮಹದೇವಯ್ಯನವರ ಮಾತುಗಳಂತೆ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ನೆನಪುಗಳೆಲ್ಲವೂ (ಮುಕ್ತಛಂದ, ಜನವರಿ 7) ಭಾರತೀಯ ಅವಧೂತ ಪ್ರಜ್ಞೆಯೊಳಗಿನ ಕಾಳುಗಳಂತಿವೆ. ಬಡತನವು ಬಿತ್ತಿ ಬೆಳೆದ ಸಿರಿಧಾನ್ಯಗಳಂತಿವೆ.

ಇದೇ ಲೇಖನದಲ್ಲಿನ ತೆಳುಹಳದಿ ಬಣ್ಣದಲ್ಲಿ ಬಣ್ಣಿಸಿರುವ ‘ಸಂವಾದದಲ್ಲಿ ಭೈರಪ್ಪನವರು ಹೇಳಿದ್ದು’ ಎಂಬ ಶೀರ್ಷಿಕೆಯಡಿ ಬಂದಿರುವ ವಿಚಾರಗಳು ಮನೋಜ್ಞವಾಗಿದ್ದವು.

–ಡಾ. ರಾಜೇಗೌಡ ಹೊಸಹಳ್ಳಿ, ಬೆಂಗಳೂರು

*

ಕಾಡುವ ಕಥೆ

ಮಂಜುನಾಥ ಅದ್ದೆ ಅವರ ‘ನೆರಳುವ್ವಿನ ಆಟ’ ಕಥೆ ತುಂಬಾ ಕಾಡುತ್ತದೆ. ತನ್ನ ಇಡೀ ಆಯಸ್ಸು, ಆರೋಗ್ಯ, ಶ್ರಮವನ್ನೆಲ್ಲ ಬಸಿದು ಕರಡಿಯಂತೆ ಗಂಡ, ಮನೆ, ಮಕ್ಕಳನ್ನು ಸಾಕಿದ ತಾಯಿ... ಆಕೆಯ ಕೊನೆಗಾಲದ ಅಸಹಾಯಕ ಸ್ಥಿತಿ... ಆ ಸ್ಥಿತಿಯಲ್ಲೂ ಆಕೆ ನೆರಳುವ್ವಿನ ಆಟದ ಮೂಲಕ ಮತ್ತೆ ಕನಸು ಕಟ್ಟುವುದು... ಇವು ವ್ಯಷ್ಟಿ, ಲಿಂಗ ಹಾಗೂ ಸಾಮುದಾಯಿಕ ನೆಲೆಗಳಲ್ಲಿ ಹಲವು ಅರ್ಥಗಳನ್ನು ಧ್ವನಿಸುತ್ತವೆ. ನೆರಳುವ್ವ ಎನ್ನುವುದು ದುಡಿಯುವ ಮಹಿಳೆಯರ ಬದುಕು ಹಾಗೂ ಕನಸುಗಳ ಶಕ್ತಿಶಾಲಿ ರೂಪಕವಾಗಿದೆ.

–ಬೆಳಚಿಕ್ಕನಹಳ್ಳಿ ಶ್ರೀನಾಥ್

*

ಧ್ವನಿಪೂರ್ಣ ಕಥೆ

‘ನೆರಳುವ್ವಿನ ಆಟ’ ಧ್ವನಿಪೂರ್ಣ ಕಥೆ. ಭಾವತೀವ್ರತೆ ಹಾಗೂ ವಿವರಗಳ ಸಾಂದ್ರತೆಯ ಸಂಯೋಜನೆಯಿಂದ ಹಲವು ಅರ್ಥ ಸ್ವರಗಳನ್ನು ಪಡೆದುಕೊಂಡ ರಚನೆಯಾಗಿದೆ. ಊಳಿಗಮಾನ್ಯ ಮನೆತನಗಳ ಹುಸಿ ಪ್ರತಿಷ್ಠೆಗಳಲ್ಲಿ ನರಳುವ ಹೆಣ್ಣು ಲೋಕದ ಚಿತ್ರಣ ಮನಸ್ಸನ್ನು ತಟ್ಟುತ್ತದೆ. ಕತೆಯ ಹೆಸರು ಹೆಣ್ಣಿನ ಸೃಷ್ಟಿಶೀಲತೆಯ ಹಂಬಲವನ್ನೂ ಆಕೆ ಸೆರೆಗೊಂಡಿರುವ ಸಾಮಾಜಿಕ ಸಂಬಂಧಗಳ ಶೋಷಕ ಜಾಲವನ್ನೂ ಸಮರ್ಥವಾಗಿ ಧ್ವನಿಸುತ್ತದೆ.

–ಕೆ.ವೈ. ನಾರಾಯಣಸ್ವಾಮಿ

*

ಮತ್ತೊಂದು ಬಗೆಯ ಅನುಭವ

ಭೈರಪ್ಪನವರ ಕಾದಂಬರಿಗಳನ್ನು ಮತ್ತೆ ಮತ್ತೆ ಓದುವವಳು ನಾನು. ಹೀಗಿರುವಾಗ, ಭಾನುವಾರದ ಓದಿಗೆ ‘ಮುಕ್ತಛಂದ’ದಲ್ಲಿ ಭೈರಪ್ಪನವರ ಬಾಲ್ಯದ ಬಗ್ಗೆ ಸೊಗಸಾದ ಬರಹವೊಂದನ್ನು ಕೊಟ್ಟಾಗ ಖುಷಿಯಾಗದೇ ಇದ್ದೀತೇ? ನನ್ನ ನೆಚ್ಚಿನ ಲೇಖಕನ ಬಾಲ್ಯದ ಕುರಿತ ಬರಹ ಇಷ್ಟವಾಯಿತು.

ನಮ್ಮ ಇಷ್ಟದ ಲೇಖಕರ ಜೊತೆಯಾಗಿ ಅವರ ಹುಟ್ಟೂರಿಗೆ ಹೋಗುವುದು, ಅಲ್ಲಿ ಅವರ ಜೊತೆ ಸಂವಾದ ನಡೆಸುವುದು... ಇವುಗಳ ಜೊತೆಯಲ್ಲೇ ಅವರ ಇನ್ನಷ್ಟು ಓದುಗರ ಜೊತೆ ಹರಟೆ ಹೊಡೆಯುವುದು ಯಾರಿಗೇ ಆದರೂ ಹೊಸ ಹೊಸ ಅನುಭವಗಳನ್ನು ಕೊಡುವಂತಹ ಚಟುವಟಿಕೆಗಳು. ಕಾದಂಬರಿಯ ಓದು ಕೊಡುವ ಅನುಭವ ಒಂದು ಬಗೆಯದ್ದಾದರೆ, ಇಂಥದ್ದೊಂದು ಚಟುವಟಿಕೆ ಕೊಡುವ ಅನುಭವ ಇನ್ನೊಂದು ಬಗೆಯದ್ದು. ಇಂಥ ಚಟುವಟಿಕೆಗಳು ಹೆಚ್ಚಲಿ.

–ವಿನುತಾ ಜೋಷಿ, ಮಂಗಳೂರು

*

ಕಥೆಯ ನೆಪದಲ್ಲಿ ಕಾವ್ಯ

ಆಳದಿಂದ ಭುಗಿಲೇಳುವ ನೋವಿನ ಅನುಭವವನ್ನು ಅದ್ದೆಯವರು ‘ನೆರಳುವ್ವಿನ ಆಟ’ದಲ್ಲಿ ಬಲು ಸಂಯಮದಲ್ಲಿ, ವಿಷಾದ ಪ್ರತಿಮೆಯಾಗಿ ಕೆತ್ತುವ ಕಸುಬಲ್ಲಿ ಒಂದು ನೀಳ್ಗವಿತೆ ಬರೆದಿದ್ದಾರೆ. ಕತೆಯ ನೆಪವಾಗಿ ಕಾವ್ಯ ಕಟ್ಟುವ ಇಂತಹ ಯತ್ನಗಳು ನನಗೆ ತುಂಬ ಇಷ್ಟವಾಗುತ್ತದೆ.

–ಕೆ. ಫಣಿರಾಜ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry