ಲ್ಯಾಪ್‌ಟಾಪ್‌ ವಿತರಣೆಗೆ ರಾಜಕೀಯ ಬಣ್ಣ

7

ಲ್ಯಾಪ್‌ಟಾಪ್‌ ವಿತರಣೆಗೆ ರಾಜಕೀಯ ಬಣ್ಣ

Published:
Updated:
ಲ್ಯಾಪ್‌ಟಾಪ್‌ ವಿತರಣೆಗೆ ರಾಜಕೀಯ ಬಣ್ಣ

ಕೋಲಾರ: ‘ಸರ್ಕಾರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸುತ್ತಿರುವುದಕ್ಕೆ ಕೆಲವರು ರಾಜಕೀಯ ಬಣ್ಣ ಕಟ್ಟುತ್ತಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಲ್ಯಾಪ್‌ಟಾಪ್‌ ಕೊಡಲಾಗುತ್ತಿದೆ ಎನ್ನುತ್ತಾರೆ. ಇಂತಹ ಟೀಕೆಗೆ ಕಿವಿಗೊಡುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.

ಜಿಲ್ಲಾಡಳಿತವು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿರೋಧ ಪಕ್ಷದವರು ಬಾಯಿ ಚಪಲಕ್ಕೆ ಏನಾದರೂ ಮಾತನಾಡಿಕೊಳ್ಳಲಿ. ಸರ್ಕಾರದ ಅಭ್ಯಂತರವಿಲ್ಲ. ಲ್ಯಾಪ್‌ಟಾಪ್‌ನಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತಿದೆ ಎನ್ನುವುದೇ ದೊಡ್ಡ ಖುಷಿ ಎಂದರು.

ಸರ್ಕಾರಕ್ಕೆ ಲ್ಯಾಪ್‌ಟಾಪ್‌ ವಿತರಿಸಲೇಬೇಕೆಂಬ ಹಟವಿಲ್ಲ. ಸರ್ಕಾರ ಕೊಡದಿದ್ದರೂ ವಿದ್ಯಾರ್ಥಿಗಳೇ ತೆಗೆದುಕೊಳ್ಳುತ್ತಾರೆ. ಇದು ಸಾಮಾನ್ಯ ವಿಚಾರ. ಅಧಿಕಾರಕ್ಕೆ ಬರುವವರು ತಮ್ಮ ಜೀವನದಲ್ಲಿ ಕಷ್ಟ ಅನುಭವಿಸಿದ್ದರೆ ಮಾತ್ರ ಜನರ ಸಂಕಷ್ಟದ ಅರಿವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ಕಷ್ಟ ಎದುರಿಸಿದ್ದಾರೆ. ಹೀಗಾಗಿ ಈಗಿನ ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸುವ ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.

ಮನರಂಜನೆ ಇಲ್ಲ: ಶಿಕ್ಷಣ ವ್ಯವಸ್ಥೆಯ ಚಿತ್ರಣ ಸಂಪೂರ್ಣ ಬದಲಾಗಿದ್ದು, ಮನರಂಜನೆ ಇಲ್ಲವಾಗಿದೆ. ಎಲ್ಲರೂ ಕೂತು ಕಲಿಯುವ ಸನ್ನಿವೇಶವೂ ಇಲ್ಲ, ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹವೂ ಇಲ್ಲ. ಮೂಟೆಯಂತೆ ಬ್ಯಾಗ್ ಹಾಕಿಕೊಂಡು ಬಿಗಿಯಾಗಿ ಬಟ್ಟೆ ಧರಿಸುತ್ತಿದ್ದು, ಮೌಲ್ಯಗಳು ಯಾವ ಮಟ್ಟಕ್ಕೆ ಇಳಿದಿವೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಬದುಕಿನ ಗಮ್ಮತ್ತಿಗೆ ಅರ್ಥವಿಲ್ಲವಾಗಿದೆ. ಏನು ಬೇಕಾದರೂ ವಾಪಸ್‌ ಬರುತ್ತದೆ. ಆದರೆ, ವಯಸ್ಸು ಬರುವುದಿಲ್ಲ. ಅದಕ್ಕಾಗಿ ಜೀವನಕ್ಕೆ ನಾಂದಿ ಹಾಡುವಂತಹ ಸಾಧನೆ ಮಾಡುವುದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಬೇಕು. ಲ್ಯಾಪ್‌ಟಾಪ್‌ ವಿದ್ಯಾರ್ಥಿಗಳಿಗೆ ಅವಶ್ಯವಿದ್ದು, ಎಲ್ಲಾ ಜ್ಞಾನ ಸಂಪಾದನೆಗೆ ಸಹಕಾರಿ ಎಂದರು.

ಪೋಷಕರೇ ಕಾರಣ: ‘ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲು ಏರಲು ಪೋಷಕರೇ ಕಾರಣ. ಪೋಷಕರು ಆರ್ಥಿಕ ಸಂಕಷ್ಟದ ನಡುವೆಯೂ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಕಷ್ಟು ಶ್ರಮಪಡುತ್ತಾರೆ. ವಿದ್ಯಾರ್ಥಿಗಳು ಪೋಷಕರ ಶ್ರಮ ಅರಿತು ಚೆನ್ನಾಗಿ ಓದಬೇಕು. ಪೋಷಕರು ಹಾಗೂ ಗುರು ಹಿರಿಯರನ್ನು ಗೌರವಿಸಬೇಕು’ ಎಂದು ಶಾಸಕಿ ವೈ.ರಾಮಕ್ಕ ಕಿವಿಮಾತು ಹೇಳಿದರು.

ಬೇಸರದ ಸಂಗತಿ: ‘ಮತದಾರರ ಪಟ್ಟಿ ಪರಿಷ್ಕರಣೆಗೆ ಜ.12 ಕಡೆದ ದಿನವಾದರೂ ಯುವ ಮತದಾರರು ಈವರೆಗೂ ನೋಂದಣಿ ಮಾಡಿಸದಿರುವುದು ಬೇಸರದ ಸಂಗತಿ. ಮತದಾರರ ನೋಂದಣಿ ಸಂಬಂಧ ಸಭೆ ನಡೆಸಲಾಗಿದ್ದರೂ ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ. 18 ವರ್ಷ ತುಂಬಿದ ಯುವಕ ಯುವತಿಯರು ಶೀಘ್ರವೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಸಲಹೆ ನೀಡಿದರು.

‘ಪ್ರತಿ ಕ್ಷೇತ್ರಕ್ಕೂ ಕಂಪ್ಯೂಟರ್ ಜ್ಞಾನ ಅತ್ಯಗತ್ಯ. ಪರಿಶಿಷ್ಟ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳಾಗಿಸುವ ನಿಟ್ಟಿನಲ್ಲಿ ಸರ್ಕಾರ ಲ್ಯಾಪ್‌ಟಾಪ್‌ ವಿತರಿಸುತ್ತದೆ. ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ಗಳನ್ನು ಸದ್ಬಳಕೆ ಮಾಡಬೇಕು’ ಎಂದು ಸರ್ಕಾರಿ ಬಾಲಕಿಯರ ಕಾಲೇಜಿನ ಉಪನ್ಯಾಸಕ ಪ್ರೊ.ಮುನಿರತ್ನಪ್ಪ ಸಲಹೆ ನೀಡಿದರು.

ಸರ್ಕಾರಿ ಪದವಿ ಕಾಲೇಜು, ಕಾನೂನು ಮತ್ತು ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು. ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ರಮೇಶ್‌ಬಾಬು, ತಹಶೀಲ್ದಾರ್ ವಿಜಯಣ್ಣ, ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಜಯರಾಮರೆಡ್ಡಿ, ಸರ್ಕಾರಿ ಕಾನೂನು ಕಾಲೇಜು ಪ್ರಾಂಶುಪಾಲೆ ಅನಿತಾ ಪಾಲ್ಗೊಂಡಿದ್ದರು.

* * 

ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ₹ 226 ಕೋಟಿ ವೆಚ್ಚದಲ್ಲಿ ಲ್ಯಾಪ್‌ಟಾಪ್‌ ವಿತರಿಸುವ ಗುರಿ ಇದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಸಾಧ್ಯವಾಗುವುದಿಲ್ಲ.

ಕೆ.ಆರ್‌.ರಮೇಶ್‌ಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry