ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಧರಣಿ

Last Updated 13 ಜನವರಿ 2018, 9:25 IST
ಅಕ್ಷರ ಗಾತ್ರ

ಕೊಪ್ಪಳ: ಆರ್‍ಎಸ್‍ಎಸ್‍, ಬಜರಂಗದಳ ಹಾಗೂ ಸಂಘ ಪರಿವಾರದವರು ಉಗ್ರಗಾಮಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ಖಂಡಿಸಿ ಬಿಜೆಪಿ ಮುಖಂಡರು, ಕಾರ್ಯಕರ್ತರು ನಗರದ ಕಾಂಗ್ರೆಸ್‌ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಪಕ್ಷದ ಮುಖ್ಯ ಕಾರ್ಯಕ್ರಮಗಳ ಸಂದರ್ಭ ಹೊರತಾಗಿ ನಗರದ ಕಾಂಗ್ರೆಸ್‌ ಕಚೇರಿ ತೆರೆದಿರುವುದಿಲ್ಲ. ಎಂದಿನಂತೆ ಮುಚ್ಚಿತ್ತು. ಮುಚ್ಚಿದ ಕಚೇರಿಯೆದುರು ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಮುಂಜಾಗ್ರತೆ ವಹಿಸಿದ್ದ ಪೊಲೀಸರು ಕಾರ್ಯಕರ್ತರನ್ನು ಮುಖ್ಯರಸ್ತೆಯಿಂದ ಕಚೇರಿ ಸಮೀಪಕ್ಕೂ ಸುಳಿಯಲು ಬಿಡಲಿಲ್ಲ. 'ಬಿಜೆಪಿ ಪ್ರತಿಭಟನೆಗೆ ಹೆದರಿ ಕಾಂಗ್ರೆಸ್‌ ಕಚೇರಿ ಮುಚ್ಚಲಾಗಿದೆ' ಎಂದು ಕಾರ್ಯಕರ್ತರು ಲೇವಡಿ ಮಾಡಿದರು.

ಕೆಲಕಾಲ ಘೋಷಣೆ ಕೂಗಿದ ಕಾರ್ಯಕರ್ತರು ತಮ್ಮನ್ನು ಬಂಧಿಸುವಂತೆ ಪೊಲೀಸರನ್ನು ಕೋರಿದರು. ಕೊನೆಗೂ ಪ್ರತಿಭಟನೆಗೆ ಅಂತ್ಯ ಹಾಡುವ ಸಲುವಾಗಿ ಕೆಲವು ಕಾರ್ಯಕರ್ತರನ್ನು ಪೊಲೀಸರು ತಮ್ಮ ವಾಹನದಲ್ಲಿ ಕರೆದೊಯ್ದರು. ವಾಹನ ಮುಂದೆ ಹೋಗುತ್ತಿದ್ದಂತೆಯೇ ಕಾರ್ಯಕರ್ತರು ಮಾಧ್ಯಮಗಳ ಕ್ಯಾಮೆರಾಗಳ ಮುಂದೆ ಜೋರಾಗಿ ಘೋಷಣೆ ಕೂಗಿದರು. ಬೆಳಿಗ್ಗೆ 11.45ಕ್ಕೆ ಆರಂಭವಾದ 'ಚಳವಳಿ' ಮಧ್ಯಾಹ್ನ 12.30ಕ್ಕೆ ಮುಕ್ತಾಯಗೊಂಡಿತು.

ಕಾರ್ಯಕರ್ತರ ಘೋಷಣೆ...

'ನಾನು ಹಿಂದೂ, ನಾನು ಆರ್‍ಎಸ್‍ಎಸ್‍,, ನಾನು ಬಜರಂಗದಳ, ನನ್ನನ್ನು ಬಂಧಿಸಿ' ಎಂದು ಘೋಷಣೆ ಕೂಗಿದರು. ಮುಖ್ಯಮಂತ್ರಿ ವಿರುದ್ಧ ಅವಾಚ್ಯ ಘೋಷಣೆಗಳೂ ಕೇಳಿಬಂದವು. ಮುಖಂಡ ನವೀನ್‍ ಗುಳಗಣ್ಣನವರ ಮಾತನಾಡಿ, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಬೇಜವಾಬ್ದಾರಿ ಹೇಳಿಕೆ ಖಂಡನೀಯ. ಅವರ ಸ್ಥಾನಕ್ಕೆ ಚ್ಯುತಿ ತರುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ದೇಶದ ಅಭಿವೃದ್ಧಿಗಾಗಿ ಆರ್‍ಎಸ್‍ಎಸ್‍ ಹುಟ್ಟಿಕೊಂಡಿದೆ.

ದೇಶಕ್ಕಾಗಿ ಪ್ರಾಣ ಕೊಡುತ್ತೇವೆ ಎಂದು ಪ್ರಮಾಣವಚನ ಸ್ವೀಕರಿಸಿದ್ದೇವೆ. ನಾವೇನು ಬಾಂಬ್‍ ಹಿಡಿದಿಲ್ಲ, ಯಾವುದೇ ವ್ಯಕ್ತಿಗೆ ಹಾನಿ ಮಾಡಿಲ್ಲ. ಉಗ್ರ ಚಟುವಟಿಕೆಗಳಲ್ಲಿ ತೊಡಗಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಗುಂಡೂರಾವ್‍ ಕೂಡ ಮುಖ್ಯಮಂತ್ರಿಯವರನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಸರಿಯಲ್ಲ' ಎಂದರು.

ಬಿಜೆಪಿ ಮುಖಂಡರಾದ ಹೇಮಲತಾ ನಾಯಕ್‍, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ರಾಷ್ಟ್ರೀಯ ಪರಿಷತ್‍ ಸದಸ್ಯ ಸಿ.ವಿ.ಚಂದ್ರಶೇಖರ್‍, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗವಿಸಿದ್ದಪ್ಪ ಕರಡಿ, ರಾಮಣ್ಣ ಚೌಡ್ಕಿ, ನಗರಸಭೆ ಸದಸ್ಯ ಪ್ರಾಣೇಶ್‍ ಮಾದಿನೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕವಲೂರು, ಶಿವಕುಮಾರ್‍ ಹಕ್ಕಪಕ್ಕಿ, ಹಾಲೇಶ್‍ ಕಂದಾರಿ, ಮಹಿಳಾ ಘಟಕದ ಅಧ್ಯಕ್ಷೆ ಮಧುರಾ ಕರಣಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT