ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ಗೆ ‘ಭಾರತ ರತ್ನ’ ನೀಡದೆ ಅವಮಾನಿಸಿದ್ದ ಕಾಂಗ್ರೆಸ್‌ಗೆ ದಲಿತರು ಮತ ಹಾಕಬೇಡಿ: ಯಡಿಯೂರಪ್ಪ

Last Updated 13 ಜನವರಿ 2018, 11:15 IST
ಅಕ್ಷರ ಗಾತ್ರ

ಕೋಲಾರ: ‘ಬಾಯಿ ಬಿಟ್ಟರೆ ದಲಿತಪರ ಎನ್ನುವ ಕಾಂಗ್ರೆಸಿಗರು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ 'ಭಾರತ ರತ್ನ' ನೀಡದೆ ರಾಜಕೀಯವಾಗಿ ಅವಮಾನಿಸಿದರು. ಅಲ್ಲದೇ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡಲಿಲ್ಲ. ಕಾಂಗ್ರೆಸಿಗರು ದಲಿತ ವಿರೋಧಿಗಳು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದರು.

ಜಿಲ್ಲೆಯ ಶ್ರೀನಿವಾಸಪುರದಲ್ಲಿ ಶನಿವಾರ ನಡೆದ ಪಕ್ಷದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿ, ಕಾಂಗ್ರೆಸ್‌ ಬಾಬು ಜಗಜೀವನ್‌ ರಾಮ್‌ಗೆ ಪ್ರಧಾನಿಯಾಗದಂತೆ ಅಡ್ಡಗಾಲು ಹಾಕಿತು. ಆ ಪಕ್ಷಕ್ಕೆ ದಲಿತರು ಮತ ಹಾಕುವುದು ಘೋರ ಅಪರಾಧ ಎಂದರು.

ರಾಜ್ಯದ ಜನ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಮೋಸ ಹೋಗಿ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಈ ರೀತಿಯ ತಪ್ಪು ಆಗಬಾರದು. ದಲಿತರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಮತ ಹಾಕಬಾರದು ಎಂದು ಹೇಳಿದರು.

ಕೊಲೆಗಡುಕರ ಸರ್ಕಾರ

‘ರಾಜ್ಯದಲ್ಲಿ ಕೊಲೆಗಡುಕರ ಸರ್ಕಾರವಿದೆ. ಎಲ್ಲೆಡೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಹೆಣ್ಣು ಮಕ್ಕಳು ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದರು.

‘ಕರಾವಳಿ ಭಾಗದ ಜನರ ವಿರೋಧದ ನಡುವೆಯೂ ಎತ್ತಿನಹೊಳೆ ಯೋಜನೆಗೆ ಒತ್ತು ನೀಡಿದ್ದೇವೆ. ರಾಜ್ಯದಲ್ಲಿ ಬಿಜೆಪಿಯು ಮತ್ತೆ ಅಧಿಕಾರಕ್ಕೆ ಬರಲಿದ್ದು, ನಮ್ಮ ಸರ್ಕಾರವೇ ಎತ್ತಿನಹೊಳೆ ಯೋಜನೆಯನ್ನು ಲೋಕಾರ್ಪಣೆ ಮಾಡುತ್ತದೆ. ಕಾಂಗ್ರೆಸ್‌ನವರು ನೀರಾವರಿ ಯೋಜನೆ ಹೆಸರಿನಲ್ಲಿ ಕೋಲಾರ ಜಿಲ್ಲೆಯ ಜನರಿಗೆ ವಿಷಪೂರಿತ ನೀರು ಕುಡಿಸಲು ಹೊರಟಿದ್ದಾರೆ’ ಎಂದು ಟೀಕಿಸಿದರು.

ಬೆಂಕಿ ರಾಮಯ್ಯ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚಿದ್ದಾರೆ. ಅವರು ಸಿದ್ದರಾಮಯ್ಯ ಅಲ್ಲ, ಬೆಂಕಿ ರಾಮಯ್ಯ. ಸಿದ್ದರಾಮಯ್ಯ ಧರ್ಮದ ಬೆಂಕಿ ಇಟ್ಟು ಮನಸ್ಸುಗಳನ್ನು ಬೇರೆ ಬೇರೆ ಮಾಡುತ್ತಾರೆ. ಆದ್ದರಿಂದ ಅವರನ್ನು ಮನೆಗೆ ಕರೆಯಬೇಡಿ’ ಎಂದು ಶಾಸಕ ಆರ್‌.ಅಶೋಕ ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದ್ದ ₹ 3 ಲಕ್ಷ ಕೋಟಿಯು ಕಾಂಗ್ರೆಸ್‌ ಮುಖಂಡರ ಮನೆ ಸೇರಿದೆ. ಆ ಹಣ ಏನಾಯ್ತು ಎಂದು ಜನ ಕಾಂಗ್ರೆಸ್‌ ಮುಖಂಡರನ್ನು ಪ್ರಶ್ನಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT