ಇಂಗ್ಲಿಷ್‌ ಭಾಷೆಗೆ ಕವಿರಾಜಮಾರ್ಗ

7

ಇಂಗ್ಲಿಷ್‌ ಭಾಷೆಗೆ ಕವಿರಾಜಮಾರ್ಗ

Published:
Updated:
ಇಂಗ್ಲಿಷ್‌ ಭಾಷೆಗೆ ಕವಿರಾಜಮಾರ್ಗ

ವಿಶ್ವದ ಪ್ರಾಚೀನ ಕಾವ್ಯಮೀಮಾಂಸೆಯ ಗ್ರಂಥಗಳಲ್ಲಿ ಕನ್ನಡದ ಕವಿರಾಜ ಮಾರ್ಗವೂ ಒಂದು. ಸಂಸ್ಕೃತ, ಪ್ರಾಕೃತ, ಗ್ರೀಕ್, ಲ್ಯಾಟೀನ್ ಚೈನೀಸ್ ಈ ಭಾಷೆಗಳನ್ನು ಬಿಟ್ಟರೆ ಕಾವ್ಯದ ಲಕ್ಷಣಗಳನ್ನು ಹೇಳುವ ಇಂಥ ಕೃತಿ ದೊರೆಯುವುದು ಕನ್ನಡದಲ್ಲಿಯೇ. ಕವಿರಾಜಮಾರ್ಗಕ್ಕಿಂತ ಮೊದಲೇ ಕನ್ನಡದಲ್ಲಿ ಕೃತಿಗಳು ರಚನೆಯಾಗಿದ್ದವು ಎಂಬುದರ ಉಲ್ಲೇಖ ಕವಿರಾಜ ಮಾರ್ಗದಲ್ಲಿಯೇ ದೊರೆಯುತ್ತದಾದರೂ ಆ ಯಾವ ಕೃತಿಗಳೂ ದೊರೆಯದೆ ಇರುವುದರಿಂದ ಕನ್ನಡದ ಮೊದಲ ಉಪಲಬ್ಧ ಕೃತಿ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಕಾವ್ಯರಚನೆಯಲ್ಲಿ ದೋಷ ಅದೋಷಗಳ ವರ್ಣನ ನಿರ್ಣಯ, ಶಬ್ದಾಲಂಕಾರ, ಅರ್ಥಾಲಂಕಾರ ಈ ಕಾವ್ಯ ಲಕ್ಷಣಗಳ ಜೊತೆಗೆ ಕನ್ನಡದ ಪ್ರದೇಶವನ್ನು ಗುರುತಿಸುವ, ಕನ್ನಡಿಗರ ಔದಾರ್ಯ, ಗುಣಸ್ವಭಾವಗಳನ್ನು ಚಿತ್ರಿಸುವ, ಕನ್ನಡದ ಮೌಖಿಕ ಪರಂಪರೆಯನ್ನು ಪ್ರಸ್ತಾಪಿಸುವ, ಕನ್ನಡಕ್ಕೆ ವಿಶಿಷ್ಟವಾದ ಛಂದೋರೂಪಗಳನ್ನು ನಿರೂಪಿಸುವ ಸಾಂಸ್ಕೃತಿಕ ಪಠ್ಯವನ್ನಾಗಿಯೂ ವಿದ್ವತ್ವಲಯ ಈ ಕೃತಿಯನ್ನು ಪರಿಗಣಿಸಿ ಚರ್ಚಿಸುತ್ತಾ ಬಂದಿದೆ. ಇಂಥದ್ದೊಂದು ಕನ್ನಡದ ಅನನ್ಯಕೃತಿ. ಇಂಗ್ಲಿಷಿಗೆ ಅನುವಾದವಾಗಬೇಕು, ಈ ಕೃತಿಯ ಮಹತ್ವ ಜಗತ್ತಿಗೆ ಅರಿವಾಗಬೇಕು ಎಂಬ ಕನ್ನಡಿಗರ ಬಯಕೆ ಇದೀಗ ಈಡೇರಿದೆ.

ಒಂದು ಭಾಷೆಯ ಲಾಕ್ಷಣಿಕ ಗ್ರಂಥವನ್ನು ಇನ್ನೊಂದು ಭಾಷೆಗೆ ಕುಂದಿಲ್ಲದಂತೆ ಅನುವಾದಿಸುವುದು ತುಂಬ ಜಟಿಲ ಕೆಲಸ; ಅದು ಅನುವಾದಕರಿಗೊಂದು ದೊಡ್ಡ ಸವಾಲು. ಕವಿರಾಜಮಾರ್ಗದಂಥ ಲಾಕ್ಷಣಿಕ ಗ್ರಂಥವನ್ನು ಅನುವಾದಿಸಬೇಕಾದರೆ ಕನ್ನಡ- ಸಂಸ್ಕೃತ ಈ ಎರಡೂ ಭಾಷೆಗಳ ಪರಿಚಯ, ಕಾವ್ಯಲಕ್ಷಣಗಳ ತಲಸ್ಪರ್ಶಿ ಅಧ್ಯಯನ ಅಗತ್ಯವಾಗಿ ಇರಲೇಬೇಕು. ಉಪಮೆ, ರೂಪಕ, ದೀಪಕ, ಶ್ಲೇಷೆ ಮುಂತಾದ ಅಲಂಕಾರಗಳು, ಶಬ್ದಾಲಂಕಾರಗಳು, ಅವುಗಳ ಪ್ರಬೇಧಗಳು ಚೆನ್ನಾಗಿ ಗೊತ್ತಿರಬೇಕು. ಅವುಗಳಿಗೆ ಸಮಾನವಾದ ಇಂಗ್ಲಿಷ್‌ ಭಾಷೆಯ ಪದಗಳ ಪರಿಚಯವಿರಬೇಕು. ಲಾಕ್ಷಣಿಕನು ಹೇಳುವ ಸೂಕ್ಷ್ಮ ವಿಷಯವನ್ನು ಗ್ರಹಿಸುವ, ವಿಶ್ಲೇಷಿಸುವ, ಅನುವಾದಿಸುವ ಜಾಣ್ಮೆ ಬೇಕು. ಪ್ರತಿಭೆ- ಪಾಂಡಿತ್ಯ ಎರಡನ್ನೂ ಅಪೇಕ್ಷಿಸುವ ಇಂಥದ್ದೊಂದು ಅನುವಾದ ಕಾರ್ಯವನ್ನು ಕೈಗೆತ್ತಿಕೊಂಡು ತುಂಬ ಸಮರ್ಥವಾಗಿ ನಿರ್ವಹಿಸಿದವರು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರೂ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದ ಪ್ರೊ. ಆರ್.ವಿ. ಎಸ್. ಸುಂದರಮ್ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಸ್ಕೃತ ಹಾಗೂ ದಕ್ಷಿಣ ಏಷ್ಯಾ ಸಾಹಿತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ದೇವನ್ ಎಂ. ಪಟೇಲ ಅವರು.

ಕವಿರಾಜಮಾರ್ಗ ಕೃತಿ ಮೂರು ಪರಿಚ್ಛೇದಗಳನ್ನೊಳಗೊಂಡಿದ್ದು, ಒಟ್ಟು 231 ಪದ್ಯಗಳಲ್ಲಿ ಹರಡಿಕೊಂಡಿದೆ. ಓದುಗರಿಗೆ ಅನುಕೂಲವಾಗುವಂತೆ ಅನುವಾದಕರು ಪುಸ್ತಕದ ಎಡಪುಟದಲ್ಲಿ ಮೂಲಪಠ್ಯವನ್ನು ಬಲಪುಟದಲ್ಲಿ ತತ್ಸಂಬಂಧಿ ಅನುವಾದವನ್ನು ಪ್ರಕಟಿಸಿದ್ದಾರೆ. ಗ್ರಂಥದ ಕೊನೆಯಲ್ಲಿ ಪಠ್ಯಕ್ಕೆ ಹಾಗೂ ಅನುವಾದಕ್ಕೆ ಸಂಬಂಧಿಸಿದ ಟಿಪ್ಪಣಿಗಳನ್ನು ಒದಗಿಸಿರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದು, ಕನ್ನಡೇತರ ಓದುಗರಿಗೂ ಕಾವ್ಯ ಸಂದರ್ಭ ಸುಲಭವಾಗಿ ಅರ್ಥವಾಗುವಂತಿದೆ. ಉದಾಹರಣೆಗೆ ಕವಿರಾಜಮಾರ್ಗದ ಮೊದಲ ಪದ್ಯದಲ್ಲಿ ಬರುವ ನೀತಿ ನಿರಂತರನುದಾರನಾ ನೃಪತುಂಗಂ ಎನ್ನುವುದನ್ನು 'King Nrpatunga magnanimous and consistently prudent’ ಎಂದು ಅನುವಾದಿಸಿದ್ದು, ನಿರಂತರ ಎನ್ನುವುದು ರಾಷ್ಟ್ರಕೂಟ ದೊರೆ ನೃಪತುಂಗನ ಬಿರುದುಗಳಲ್ಲಿ ಒಂದಾಗಿತ್ತು ಎಂಬ ಟಿಪ್ಪಣಿಯನ್ನೂ ನೀಡುತ್ತಾರೆ.

ಒಂದು ವೇಳೆ ಕವಿರಾಜಮಾರ್ಗದ ಕನ್ನಡ ಪಠ್ಯ ಅರ್ಥವಾಗದೆ ಹೋದರೆ ಇಂಗ್ಲಿಷಿನ ಅನುವಾದಕ್ಕೆ ಮೊರೆಹೊಕ್ಕು ಮೂಲಪಠ್ಯವನ್ನು ಅರ್ಥಮಾಡಿಕೊಳ್ಳಬಹುದಾದಷ್ಟು ಅನುವಾದ ಪ್ರಬುದ್ಧವಾಗಿದೆ. ಉದಾಹರಣೆಗೆ ಶಬ್ದಾಲಂಕಾರದ ಅನುಪ್ರಾಸವನ್ನು ಹೇಳುವಾಗ ಕವಿರಾಜಮಾರ್ಗಕಾರ ನೀಡಿದ ಉದಾಹರಣೆ ಇಂತಿದೆ.

ಜನವಿನುತನನಘನನುಪಮ

ನನುನಯಪರನರಸನಿನಿಸು ನೆನೆನೆನೆದು ಮನೋ

ಜನಿತಮುದನನಿಲತಯನಯನ

ನನನೃತ ವಚನ ಪ್ರಪಂಚನಂತಿರೆ ನುಡಿದಂ.

ಎಂಬ ಪದ್ಯದ ಅರ್ಥ, ಮೊದಲ ಓದಿಗೆ ದಕ್ಕುವಂಥದ್ದಲ್ಲ. ಇದರ ಅನುವಾದ ಇಂತಿದೆ. Praised by the people, sinless, incomparable, and approachable the truthfull king Rama spoke joyfully to Hanuman- sun of the wind. ಈ ಅನುವಾದ ಓದಿದ ಮೇಲೆ ಪದಚ್ಛೇದ ಸುಲಭವಾಗುತ್ತದೆ. ಜನವಿನುತನ್, ಅನಘ್‌ನ, ಅನುಪಮನ್, ಅನುನಯ ಪರನ್, ಅರಸನ್ ಇನಿಸು ನೆನೆನೆನೆದು ಮನೋಜನಿತಮುದನ್ ಎಂದು ಮುಂತಾಗಿ ವಿಗ್ರಹಿಸಬೇಕು ಎಂಬ ಹೊಳಹು ಹೊಳೆಯುತ್ತದೆ. ಶ್ರೇಷ್ಠ ಅನುವಾದಕ್ಕೆ ಇದು ಒಂದು ಉದಾಹರಣೆ ಮಾತ್ರ.

ಕನ್ನಡದ ವಿದ್ವತ್ಪ್ರಪಂಚ ತುಂಬ ಗೌರವಿಸುವ ಕೃತಿಯೊಂದನ್ನು ಅತ್ಯಂತ ಸಮರ್ಥವಾಗಿ ಅನುವಾದಿಸಿದ ವಿದ್ವಾಂಸರಿಗೂ ಹಾಗೂ ಈ ಕೃತಿಯನ್ನು ಪ್ರಕಟಿಸಿದ ದೆಹಲಿ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠಕ್ಕೂ ಕನ್ನಡಿಗರು ಋಣಿಯಾಗಿರುವ ಹಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry