ಅತ್ಯಾಚಾರದ ಸಂತ್ರಸ್ತ ಅವನೇ, ಅವಳಲ್ಲ

7

ಅತ್ಯಾಚಾರದ ಸಂತ್ರಸ್ತ ಅವನೇ, ಅವಳಲ್ಲ

Published:
Updated:
ಅತ್ಯಾಚಾರದ ಸಂತ್ರಸ್ತ ಅವನೇ, ಅವಳಲ್ಲ

ಸೀಮಾಂಧ್ರದ ಅನಂತಪುರದಿಂದ ಕರ್ನೂಲಿಗೆ ತೆರಳುವ ಮಾರ್ಗದ ಮಧ್ಯೆ ಕಣ್ಣು ಹಾಯಿಸಿದಷ್ಟೂ ಬಯಲಿನ ಬೆಡಗು. ಇದರ ನಡುವೆಯೇ ಬೇಥಮ್‌ ಚೆರ್ಲಾದ ವರದಾಂಜನೇಯ ಸ್ವಾಮಿ ದೇಗುಲ. ಈ ದೇಗುಲದಲ್ಲಿ ಮೂರ್ನಾಲ್ಕು ತಲೆಮಾರಿನಿಂದ ಅರ್ಚಕ ವೃತ್ತಿ ನಡೆಸುತ್ತಿದ್ದ ಸತೀಂಧ್ರನ ಕುಟುಂಬ ತಾನಾಯಿತು, ತನ್ನ ಪಾಡಾಯಿತು ಎಂಬಂತಿತ್ತು.

ಆಂಧ್ರದ ಮುಜರಾಯಿ ಅಧೀನದಲ್ಲಿದ್ದ ವರದಾಂಜನೇಯ ದೇಗುಲಕ್ಕೆ ವರ್ಷಕ್ಕೊಮ್ಮೆ ನಡೆಯುವ ಪರಿಷೆ ಸಂದರ್ಭ ಬಿಟ್ಟರೆ ಭಕ್ತರ ಭೇಟಿ ಕಮ್ಮಿಯೇ. ಸರ್ಕಾರದ ಗೌರವಧನ ಒಂದೆರೆಡು ಸಾವಿರ ರೂಪಾಯಿ ಹೊರತುಪಡಿಸಿದರೆ ಆರತಿ ತಟ್ಟೆಗೆ ಬೀಳುತ್ತಿದ್ದ ಕಾಸೂ ಅಷ್ಟಕ್ಕಷ್ಟೇ. ಸತೀಂಧ್ರರ ಪತ್ನಿ ಲಕ್ಷ್ಮಿ ಇದ್ದುದರಲ್ಲೇ ನಾಜೂಕಿನಿಂದ ತಮ್ಮ ಮೂವರು ಮಕ್ಕಳನ್ನು ಚೆನ್ನಾಗಿಯೇ ಬೆಳೆಸಿದ್ದರು. ಮೊದಲನೆಯವನು ಸಾಯಿಪ್ರಕಾಶ. ಪಿ.ಯು.ಸಿಗೆ ಓದು ಸಾಕೆಂದು ಕುಟುಂಬವನ್ನು ಸಲಹುವ ಹಂಬಲದಿಂದ ನೇರವಾಗಿ ಬೆಂಗಳೂರಿಗೆ ಬಂದು ಸೇರಿದ್ದ.

ಸದಾ ಗಿಜಿಗುಡುವ ಸಂಪಿಗೆ ರಸ್ತೆಯ 18ನೇ ತಿರುವಿನ ಮೂಲೆಯಲ್ಲಿ ಸ್ಯಾಂಕಿ ಟ್ಯಾಂಕಿಗೆ ಮುಖಮಾಡಿರುವ ಕಾಫಿ ಡೇಯಲ್ಲಿ ಸರ್ವರ್ ಕೆಲಸ ಮಾಡುತ್ತಿದ್ದ. ಬಣ್ಣದ ಜಗತ್ತಿನಿಂದ ದೂರವಿದ್ದ ಅವನಿಗೆ 2010ರ ನವೆಂಬರ್ ಮೊದಲನೇ ವಾರ ತನ್ನೆಲ್ಲ ಬದುಕನ್ನೇ ಬಡಿದು ಹಾಕುತ್ತದೆ ಎಂಬ ಸಣ್ಣ ಸುಳಿವೂ ಇರಲಿಲ್ಲ. 20ರ ಹರೆಯದ ಬೆರುಗುಗಣ್ಣಿನ ಬೆಡಗಿಯೊಬ್ಬಳು ಸಲೀಸಾಗಿ ತನ್ನ ಬದುಕಿನಲ್ಲಿ ಪ್ರವೇಶಿಸುತ್ತಾಳೆ ಎಂದು ಅವನು ಕನಸಿನಲ್ಲಿಯೂ ಎಣಿಸಿರಲಿಲ್ಲ.

ಕೇರಳದ ಸ್ಯಾಮುಯಲ್ ವ್ಯಾಪಾರಕ್ಕಾಗಿದೆಹಲಿಯಲ್ಲಿದ್ದ ದಿನಗಳಲ್ಲಿ ಬಂಗಾಳದ ಹೂಗ್ಲಿಯ ಗೀತಾ ಚಟರ್ಜಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆ ನಂತರ ಬೆಂಗಳೂರಿಗೆ ಬಂದ ಅವರಿಗೆ ಇಲ್ಲಿನ ಆಹ್ಲಾದಕರ ವಾತಾವರಣ ಶಾಶ್ವತವಾಗಿ ನೆಲೆ ನಿಲ್ಲುವಂತೆ ಪ್ರೇರೇಪಿಸಿತು. ಕೆಲವೇ ವರ್ಷದಲ್ಲಿ ವಹಿವಾಟು ಅಧಿಕವಾಗಿ, ಲಾಭದ ಗಳಿಕೆ ಏರಿದಷ್ಟೇ ವೇಗದಲ್ಲಿ ಮಗಳು ಜೆಸ್ಸಿಂತಾ ಮತ್ತು ರೋಹಾನ ಕೂಡಾ ಎದೆಯುದ್ದಕ್ಕೆ ಬೆಳೆದು ನಿಂತರು.

ಅಂತರ್‌ಧರ್ಮೀಯ ವಿವಾಹದೊಂದಿಗೆ ಮುಕ್ತ ಬದುಕನ್ನು ಅಪ್ಪಿಕೊಂಡಿದ್ದ ಸ್ಯಾಮುಯಲ್ ಮತ್ತು ಗೀತಾ ಚಟರ್ಜಿ, ಮಕ್ಕಳು ಬೆಳೆದಂತೆಲ್ಲಾ ಹೆಚ್ಚು ಸೂಕ್ಷ್ಮವಾಗಿದ್ದರು. ಅವರ ನಡೆ ನುಡಿಯ ಮೇಲೆ ಇನ್ನಿಲ್ಲದ ಕಣ್ಗಾವಲಿರಿಸಿದ್ದರು.

ದಂಪತಿಯ ಬಹುತೇಕ ಸಮಯ ದುಡಿಮೆಗೆ ಮೀಸಲಾಗಿತ್ತು. ಹೀಗಾಗಿ ಮಕ್ಕಳನ್ನು ಸಲಹಲು ಗೀತಾ, ತನ್ನ ತಂಗಿ ಆಶಾ ಚಟರ್ಜಿಯನ್ನೂ ಊರಿನಿಂದ ಕರೆತಂದು ತಮ್ಮೊಂದಿಗೇ ಇರಿಸಿಕೊಂಡಿದ್ದರು. ಮಕ್ಕಳೋ, ಆಶಾಳ ಜೊತೆ ಇದ್ದಷ್ಟು ಸಲುಗೆಯನ್ನು ತಂದೆ– ತಾಯಿಯ ಜೊತೆ ಇಟ್ಟುಕೊಂಡಿರಲಿಲ್ಲ.

ಜೆಸ್ಸಿಂತಾಗಂತೂ ಕಾಲೇಜಿಗೆ ಹೋಗುವುದು ಎಂದರೆ ಸ್ವಾತಂತ್ರ್ಯ ಅನುಭವದ ಪರಾಕಾಷ್ಠೆ. ಮಲ್ಲೇಶ್ವರದ ಪ್ರತಿಷ್ಠಿತ ಮಿಷನರಿ ಶಾಲೆಯಲ್ಲಿ ಕಲಿತಿದ್ದ ಅವಳಿಗೆ ಬೆಂಗಳೂರಿನ ಯುವತಿಯರ ನಯ–ನಾಜೂಕುಗಳೆಲ್ಲಾ ಮೈಗೂಡಿದ್ದವು. ವಯೋಸಹಜ ಕೌತುಕ–ಕುತೂಹಲ ಗರಿಗೆದರುತ್ತಿದ್ದ ಜೆಸ್ಸಿಂತಾಗೆ; ತನ್ನೆಲ್ಲ ಬಯಕೆಗಳನ್ನು ಬೆಚ್ಚಗೆ ರಕ್ಷಿಸಿಡಬಲ್ಲ ನಿಷ್ಠನೊಬ್ಬ ಬೇಕೆನಿಸುತ್ತಿತ್ತು. ಅಂತಹವನ ಹುಡುಕಾಟದಲ್ಲಿದ್ದಾಗಲೇ ಆಕೆಯ ಮನಸ್ಸು ಬಯಸಿದ್ದು ಸಾಯಿಪ್ರಕಾಶನನ್ನು!

ತಂದೆಯ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಜೆಸ್ಸಿಂತಾ ಪ್ರಶಾಂತತೆಯ ತಾಣವಾಗಿದ್ದ ಕಾಫಿ ಡೇ ಆಯ್ಕೆ ಮಾಡಿಕೊಂಡಿದ್ದಳು. ಕಾಲೇಜಿನಿಂದ ನೇರವಾಗಿ ಮನೆಗೆ ತೆರಳದೆ ಕಾಫಿ ಡೇಗೆ ಬಂದು ಠಿಕಾಣಿ ಹೂಡುತ್ತಿದ್ದ ಆಕೆ ಕನಿಷ್ಠ ಮೂರ್ನಾಲ್ಕು ತಾಸು ಒಬ್ಬಂಟಿಯಾಗಿ ಕುಳಿತು ಕಾಫಿ ಹೀರುತ್ತಾ ಧ್ಯಾನಸ್ಥಳಾಗಿಬಿಡುತ್ತಿದ್ದಳು.

ಅದೊಂದು ದಿನ ಮಧ್ಯಾಹ್ನ ಎಂದಿನಂತೆ ಕಾಫಿ ಆರ್ಡರ್ ಮಾಡಿ ಕಾಲುಚಾಚಿ ಸೋಫಾದಲ್ಲಿ ಮೈ ಚೆಲ್ಲಿ ಕುಳಿದ್ದವಳು. ಕಾಫಿಯನ್ನು ತಂದಿರಿಸಿದ ಸಾಯಿಪ್ರಕಾಶನನ್ನೇ ಎವೆಯಿಕ್ಕದೆ ಆರ್ದ್ರತೆಯಿಂದ ದಿಟ್ಟಿಸಿದಳು! ಸಾಯಿಪ್ರಕಾಶ್, ‘ಮೇಡಮ್‌ ಕಾಫಿ ಪ್ಲೀಸ್’ ಎಂದ... ಅವನ ಮಾತನ್ನು ಕೇಳಿಸಿಕೊಳ್ಳದ ಜೆಸ್ಸಿಂತಾ ಮೊಬೈಲ್ ಹೊರತೆಗೆದು, ‘ಐ ವಾಂಟ್ ಯುವರ್ ನಂಬರ್’ ಎಂದಳು. ಏನು, ಯಾಕೆ ಎಂಬ ಕಿಂಚಿತ್ತೂ ವಿಚಾರ ಮಾಡದ ಸಾಯಿಪ್ರಕಾಶ್, ತನ್ನ ನಂಬರ್‌ ಹೇಳಿದ.

ಸಾಯಿಪ್ರಕಾಶನಿಂದ ಫೋನ್‌ ನಂಬರ್‌ ಪಡೆಯುವುದಕ್ಕೂ ಮೊದಲು ಕಾಫಿ ಡೇಗೆ ನಿತ್ಯ ಹಾಜರಿ ಹಾಕುತ್ತಿದ್ದ ಜೆಸ್ಸಿಂತಾ ಆನಂತರ ಅತ್ತ ಸುಳಿಯಲೇ ಇಲ್ಲ. ನಾಲ್ಕು ದಿನ ಬಿಟ್ಟು ಸಾಯಿಪ್ರಕಾಶನಿಗೆ ಫೋನಾಯಿಸಿ ‘ನಿನ್ನೊಡನೆ ಮಾತನಾಡಬೇಕು. ನಾಳೆ ಹೊರಗಡೆ ಎಲ್ಲಾದರೂ ಸಿಗು, ಪ್ಲೀಸ್‌’ ಎಂದು ವಿನಂತಿಸಿದಳು.

ಜೆಸ್ಸಿಂತಾ ಪೂರ್ವ ನಿಶ್ಚಯದಂತೆ ಸಾಯಿಪ್ರಕಾಶನಿಗೆ ತನ್ನ ಪ್ರೇಮ ನಿವೇದಿಸಿಕೊಂಡಳು. ಸಾಯಿಪ್ರಕಾಶನಿಗೆ ಪರಮಾಶ್ಚರ್ಯ! ಅನಾಯಾಸವಾಗಿ ಒಲಿದು ಬಂದ ಸುಂದರಿಯ ಆಸೆಯನ್ನು ನಿರಾಕರಿಸಲು ಅವನ ಮನಸ್ಸು ಒಪ್ಪಲಿಲ್ಲ. ಮೊದಲ ಭೇಟಿಯಲ್ಲೇ ಆಕೆ ಅವನನ್ನು ಬಿಗಿದಪ್ಪಿ ಆಲಂಗಿಸಿದಳು. ರೋಮರೋಮಗಳಲ್ಲಿ ಕುದಿಯುತ್ತಿದ್ದ ಜೆಸ್ಸಿಂತಾಳ ಯೌವ್ವನದ ಕಾವು ಸಾಯಿ ಪ್ರಕಾಶನ ಮೈಮನಗಳಲ್ಲಿ ಹುಚ್ಚುಹೊಳೆಯನ್ನೇ ಹರಿಸಿತು. ಆ ರಾತ್ರಿ ಅವನು ಕಣ್ಣು ಮುಚ್ಚಿ ನಿದ್ರಿಸಲೇ ಇಲ್ಲ!!

ಕುಟುಂಬದ ಜವಾಬ್ದಾರಿಯ ನಡುವೆ ಅನಿರೀಕ್ಷಿತವಾಗಿ ದಕ್ಕಿದ ಈ ಪ್ರೇಮವನ್ನು ಸಾಯಿಪ್ರಕಾಶ ತನ್ನ ಜೀವನದ ಬಹು ದೊಡ್ಡ ಗೆಲುವೆಂದು ಭಾವಿಸಿದ. ಒಳಗೊಳಗೆ ಹಿಗ್ಗಿದ. ಜೆಸ್ಸಿಂತಾಳನ್ನು ಮೆಚ್ಚಿಸಲು ಬೇಕಾದ ನಡೆ, ನುಡಿಗಳನ್ನೆಲ್ಲಾ ನಿಧಾನವಾಗಿ ರೂಢಿಸಿಕೊಳ್ಳತೊಡಗಿದ. ಕಣ್ಣಿಗೆ ಕಾಣುವ ಜಗತ್ತಿನ ಅಣುರೇಣು ತೃಣಕಾಷ್ಠಗಳಲ್ಲೆಲ್ಲಾ ಜೆಸ್ಸಿಂತಾಳೇ ನಕ್ಕು ನಲಿಯುತ್ತಿದ್ದಂತೆ ಭಾಸವಾಗುತ್ತಿತ್ತು ಅವನಿಗೆ.

ಸ್ವಚ್ಛಂದ ಬದುಕಿಗಾಗಿ ತವಕಿಸುತ್ತಿದ್ದ ಜೆಸ್ಸಿಂತಾಳಿಗೆ ಸಾಯಿ ಪ್ರಕಾಶನನ್ನು ಖಾಸಗಿಯಾಗಿ ಸಂಧಿಸಿ ಅವನ ತೆಕ್ಕೆಯಲ್ಲಿ ತಾಸುಗಟ್ಟಲೆ ಸುಖಿಸಬೇಕೆಂಬ ಹೆಬ್ಬಯಕೆ ದಿನೇ ದಿನೇ ಜಾಸ್ತಿಯಾಗತೊಡಗಿತು. ಇವನಿಗೋ ಕೆಲಸದ ವೇಳೆಯಲ್ಲಿ ಸಂಧಿಸಲು ಹೋದರೆ ಕೆಲಸಕ್ಕೆ ಸಂಚಕಾರ, ಕೆಲಸ ಮುಗಿದ ಮೇಲೆ ಭೇಟಿ ಮಾಡೋಣ ಎಂದರೆ ಆಕೆಯ ಮನೆಯಲ್ಲಿ ಬೈದಾರು ಎಂಬ ಆತಂಕ. ಇಬ್ಬರೂ ತಂತಮ್ಮ ಚಡಪಡಿಕೆಗಳಲ್ಲಿ ಹೀಗೆಯೇ ಒಂದಷ್ಟು ದಿನ ದೂಡಿದರು. ಕಡೆಗೆ ಸಾಯಿಪ್ರಕಾಶನ ಪುಟ್ಟ ರೂಮಿನಲ್ಲೇ ಸೇರುವ ತೀರ್ಮಾನಕ್ಕೆ ಬಂದರು.

ಗುಪ್ತವಾಗಿ ಕಾಲ ಕಳೆಯಲೆಂದೇ ಮಾನಸಿಕವಾಗಿ ಸಜ್ಜಾಗಿದ್ದ ಜೆಸ್ಸಿಂತಾ ಆ ದಿನ ಸಾಯಿಪ್ರಕಾಶನ ರೂಮಿಗೆ ಹೋಗುವ ಮಾರ್ಗಮಧ್ಯೆ ಆಭರಣದ ಅಂಗಡಿಯೊಂದಕ್ಕೆ ತೆರಳಿ ಆಲಂಕಾರಿಕ ತಾಳಿ ಖರೀದಿಸಿದಳು.

ಕಾತರದಿಂದ ಕಾಯುತ್ತಿದ್ದ ಸಾಯಿಪ್ರಕಾಶ ಜೆಸ್ಸಿಂತಾಳನ್ನು ಬರಮಾಡಿಕೊಂಡು ರೂಮಿನ ಬಾಗಿಲು ಭದ್ರಪಡಿಸಿದ. ಇಂತಹ ಏಕಾಂತಕ್ಕಾಗಿಯೇ ಹಪಹಪಿಸಿದ್ದ ಜೆಸ್ಸಿಂತಾ ಸಾಯಿಯನ್ನು ತನ್ನ ಬಾಹುಗಳಲ್ಲಿ ಬಿಗಿದಪ್ಪಿದಳು. ಸಮರ್ಪಣೆಗೆ ಸಿದ್ಧವಾಗಿಯೇ ಬಂದಿದ್ದ ಆಕೆ ಸಾಯಿಯ ಸವಾರಿಗೆ ಅಡ್ಡಿಪಡಿಸಲೇ ಇಲ್ಲ. ಅರಿವೆಗಳ ಕಿತ್ತೊಗೆದು ಜಗದ ಪರಿವೆ ಇಲ್ಲದೆ ಮಿಲನೋತ್ಸವಕ್ಕೆ ಸಜ್ಜಾಗುತ್ತಿದ್ದ ಸಾಯಿಯನ್ನು ಜೆಸ್ಸಿಂತಾ ಅರ್ಧದಲ್ಲೇ ತಡೆದು ತನ್ನ ಪ್ಯಾಂಟ್‌ ಜೇಬಿನಲ್ಲಿದ್ದ ತಾಳಿಯನ್ನು ಅವನಿಂದ ಕೊರಳಿಗೆ ಕಟ್ಟಿಸಿಕೊಂಡಳು!

ಆವತ್ತು ಸಂಜೆ ಜೆಸ್ಸಿಂತಾಗೆ ಮನೆಗೆ ವಾಪಸು ಹೋಗಬೇಕು ಎನಿಸಲೇ ಇಲ್ಲ. ಇತ್ತ ದಿಗಿಲಿಗೆ ಬಿದ್ದ ಪೋಷಕರು ರಾತ್ರಿ ಹತ್ತಾದರೂ ಮನೆಗೆ ಬಾರದ ಮಗಳ ಮೊಬೈಲಿಗೆ ಫೋನ್ ಮಾಡಿದರೆ ಸ್ವಿಚ್ಡ್‌ ಆಫ್. ಗಾಬರಿಗೊಂಡು ರಾತ್ರಿಯೆಲ್ಲ ಆಕೆಯ ಸಹಪಾಠಿಗಳ ಮನೆಗೆ ಹೋಗಿ ವಿಚಾರಿಸಿದರು. ಏನೊಂದೂ ಸುಳಿವು ಸಿಗದೆ ಮಾರನೇ ದಿನ ಬೆಳಿಗ್ಗೆಯೇ ಠಾಣೆಗೆ ತೆರಳಿ ಮಗಳು ಕಾಣೆಯಾಗಿದ್ದಾಳೆಂದು ದೂರು ನೀಡಿದರು.

ಜೆಸ್ಸಿಂತಾಳ ಫೋನ್ ಕರೆಗಳ ಜಾಡನ್ನು ಅನುಸರಿಸಿ ಹೊರಟ ಪೊಲೀಸರಿಗೆ ಆಕೆ ಕಡೆಯ ಬಾರಿಗೆ ರಾಜಾಜಿನಗರದ ರಾಮಮಂದಿರದ ಬಳಿಯಲ್ಲಿನ ಆಭರಣ ಅಂಗಡಿಗೆ ಹೋಗಿದ್ದ ಸುಳಿವು ಸಿಕ್ಕಿತು. ಅಂಗಡಿ ಮಾಲೀಕನಿಗೆ ಆಕೆಯ ಫೋಟೋ ತೋರಿಸಿ ಕೇಳಿದಾಗ, ‘ನಿನ್ನೆ ಈಕೆ ತಾಳಿ ಖರೀದಿಸಿದ್ದಳು’ ಎಂಬುದು ತಿಳಿದು ಬಂತು.

ಇತರರಿಗೆ ಮಾಡಿದ್ದ ಕರೆಗಳನ್ನು ಗುರುತಿಸಿ ಒಬ್ಬೊಬ್ಬರನ್ನೇ ವಿಚಾರಿಸುತ್ತಾ ಹೋದ ಪೊಲೀಸರಿಗೆ ಸಾಯಿಪ್ರಕಾಶನೊಂದಿಗಿನ ನಂಟು ಗೊತ್ತಾಯಿತು. ಫೋನ್ ಮಾಡಿ ಜೆಸ್ಸಿಂತಾಳ ಬಗ್ಗೆ ಕೇಳಿದಾಕ್ಷಣ ಉತ್ತರ ನೀಡದೆ ಸಾಯಿಪ್ರಕಾಶ್‌ ಕರೆ ಸ್ಥಗಿತಗೊಳಿಸಿಬಿಟ್ಟ.

ಅಪ್ಪ ಇನ್ನು ತನ್ನನ್ನು ಸುಮ್ಮನೇ ಬಿಡುವುದಿಲ್ಲ ಎಂದು ಎಣಿಸಿದ ಜೆಸ್ಸಿಂತಾ ಸಾಯಿಪ್ರಕಾಶನನ್ನು ಹುರಿದುಂಬಿಸಿ ಉಟ್ಟ ಬಟ್ಟೆಯಲ್ಲೇ ರೂಮಿನಿಂದ ಅವನನ್ನು ಕರೆದುಕೊಂಡು ಹೊರಬಿದ್ದಳು. ಮೆಜೆಸ್ಟಿಕ್‌ಗೆ ಬಂದವರೇ ಆಂಧ್ರ ಸಾರಿಗೆ ಬಸ್ಸು ಏರಿ ಕರ್ನೂಲಿಗೆ ತೆರಳಿದರು. ಕೈಲಿದ್ದ ಮೂರ್ನಾಲ್ಕು ಸಾವಿರ ರೂಪಾಯಿ ಕರಗುತ್ತಿದ್ದಂತೆ ಮುಖಮಾಡಿದ್ದು ಬೇಥಮ್‌ ಚೆರ್ಲಾ ಗ್ರಾಮಕ್ಕೆ. ದುಡಿಯಲು ಹೋದ ಮಗ ಹೀಗೆ ಕಣ್ಣುಕುಕ್ಕುವ ಬೆಡಗಿಯೊಂದಿಗೆ ದಿಢೀರ್‌ ಎಂದು ಬಂದದ್ದನ್ನು ನೋಡಿ ಸಾಯಿಪ್ರಕಾಶನ ತಾಯಿ–ತಂದೆ ಅವಾಕ್ಕಾದರು.

ಇತ್ತ ಸಾಯಿಪ್ರಕಾಶನ ಮೊಬೈಲ್ ಕರೆಗಳನ್ನು ಆಧರಿಸಿ ಪೊಲೀಸರು ಬೆಂಗಳೂರಿನಲ್ಲೇ ಇದ್ದ ಸಾಯಿಯ ಸೋದರ ಮಾವ ರತ್ನಾಕರನನ್ನು ಠಾಣೆಗೆ ಕರೆತಂದು ವಿಚಾರಿಸಿದರು. ಸ್ಯಾಮುಯಲ್, ಗೀತಾ ಚಟರ್ಜಿಯನ್ನು ಜೊತೆ ಮಾಡಿಕೊಂಡು ನೇರವಾಗಿ ಬೇಥಮ್‌ ಚೆರ್ಲಾಗೆ ಬಂದ ಪೊಲೀಸರು, ಸಾಯಿಪ್ರಕಾಶ ಕಣ್ಣಿಗೆ ಬೀಳುತ್ತಿದ್ದಂತೆಯೇ ಅವನ ಕನ್ನೆಗೊಂದು ಬಾರಿಸಿ ರೂಮಿನಲ್ಲಿದ್ದ ಜೆಸ್ಸಿಂತಾಳನ್ನು ಕರೆದುಕೊಂಡು ಇಬ್ಬರನ್ನೂ ಪ್ರತ್ಯೇಕವಾಗಿ ಬೆಂಗಳೂರಿಗೆ ಕರೆ ತಂದರು.

ಈ ಘಟನೆಯಿಂದ ಆಘಾತಕ್ಕೊಳಗಾದ ಸಾಯಿ ಪ್ರಕಾಶನ ತಂದೆ–ತಾಯಿ ಏನೊಂದು ತಿಳಿಯದೇ ಮುಂದಿನ ಆಗುಹೋಗುಗಳಿಗೆ ರತ್ನಾಕರನನ್ನೇ ನೆಚ್ಚಿಕೊಂಡರು.

ಸಾಯಿಪ್ರಕಾಶನನ್ನು ನಾಲ್ಕು ದಿನ ಠಾಣೆಯಲ್ಲಿರಿಸಿಕೊಂಡಿದ್ದ ಪೊಲೀಸರು 2010ರ ನವೆಂಬರ್ 27 ರಂದು ಜೆಸ್ಸಿಂತಾಳ ಹೇಳಿಕೆ ಆಧರಿಸಿ ಸಾಯಿಪ್ರಕಾಶನ ವಿರುದ್ಧ ಅಪಹರಣ, ಅಕ್ರಮ ಬಂಧನ, ಅತ್ಯಾಚಾರದ ಪ್ರಕರಣ ದಾಖಲಿಸಿ ಜೈಲಿಗಟ್ಟಿದರು. ಇದರ ಬೆನ್ನಲ್ಲೇ ಅವನ ಕುಟುಂಬ ಅವರ ಬಂಧುಗಳಿಂದ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಯಿತು.

ಈ ನಡುವೆ ಜೆಸ್ಸಿಂತಾ ತನ್ನ ಮರು ಹೇಳಿಕೆಯಲ್ಲಿ, ‘ಸಾಯಿಪ್ರಕಾಶನ ತಾಯಿ– ತಂದೆ ನನ್ನನ್ನು ಬೇಥಮ್ ಚೆರ್ಲಾದ ಮನೆಯಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದರು’ ಎಂಬ ಆರೋಪ ಮಾಡಿದಳು.

ಈ ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ಕುಟುಂಬ ದೋಷಾರೋಪ ಪಟ್ಟಿಯೊಂದಿಗೆ ನನ್ನ ಬಳಿ ಬಂತು. ಸಂತ್ರಸ್ತೆಯ ಹೇಳಿಕೆ, ವೈದ್ಯಕೀಯ ಪ್ರಮಾಣ ಪತ್ರ ಗಮನಿಸಿದ ನನಗೆ ಮೇಲ್ನೊಟಕ್ಕೆ ಇದೊಂದು ಒಪ್ಪಿತ ಲೈಂಗಿಕ ಕ್ರಿಯೆ (CONSENSUAL SEX) ಎಂದು ಭಾಸವಾಯಿತು.

ಮ್ಯಾಜಿಸ್ಟ್ರೇಟ್‌ ಕೋರ್ಟಿನಿಂದ ಸೆಷನ್ಸ್ ನ್ಯಾಯಾಲಯಕ್ಕೆ ಪ್ರಕರಣ ವರ್ಗವಾಯಿತು. ಅದು  2012ರ ಡಿಸೆಂಬರ್. ದೆಹಲಿಯ ನಿರ್ಭಯಾಳ ಪ್ರಕರಣ ರಾಷ್ಟ್ರವ್ಯಾಪಿ ಸದ್ದು ಮಾಡಿದ್ದ ಸಮಯ. ಲೈಂಗಿಕ ಪೀಡಕರಿಗೆ ಮರಣದಂಡನೆ ಅಥವಾ ಮರ್ಮಾಂಗವನ್ನು ಛೇದಿಸಬೇಕು ಎಂಬ ಕೂಗು ಅನುರಣಿಸುತ್ತಿದ್ದ ದಿನಗಳು..!

ಕೆಲವು ವಕೀಲರಂತೂ ಅತ್ಯಾಚಾರದ ಪ್ರಕರಣಗಳನ್ನೇ ನಾವು ನಡೆಸುವುದಿಲ್ಲ ಎಂದು ಮುಕ್ತವಾಗಿ ಹೇಳಿಕೊಂಡು ತಿರುಗಾಡುತ್ತಿದ್ದರು. ಕೆಲವು ಖ್ಯಾತ ಮಹಿಳಾ ಪರ ಹೋರಾಟಗಾರರು ಮತ್ತು ಅವರ ಬೆನ್ನಿಗೆ ನಿಂತ ಸಂಘಟನೆಗಳಂತೂ ‘ಅತ್ಯಾಚಾರಿ ಆರೋಪಿ ಪರವಾಗಿ ನ್ಯಾಯಾಲಯದಲ್ಲಿ ಯಾವ ವಕೀಲರೂ

ಪ್ರತಿನಿಧಿಸಬಾರದು. ನಿಮ್ಮ ಅಕ್ಕ–ತಂಗಿಯರಿಗೆ ಈ ಸ್ಥಿತಿ ಬಂದೊದಗಿದರೆ ಏನು ಮಾಡುತ್ತೀರಿ’ ಎಂದೆಲ್ಲಾ ಅವಹೇಳನಕಾರಿ ಮಾತನಾಡಿ ಸಂವಿಧಾನದ ಆಶಯಗಳನ್ನೇ ಗಾಳಿಗೆ ತೂರಿದ್ದರು.

ಈ ಸನ್ನಿವೇಶದಲ್ಲೇ ಸಾಯಿಪ್ರಕಾಶ್‌ ಪ್ರಕರಣದ ವಿಚಾರಣೆಯೂ ಆರಂಭಗೊಂಡಿತು. ಪ್ರತಿ ಮುದ್ದತಿನಲ್ಲೂ ಕೋರ್ಟ್‌ಗೆ ಬಂದು ಕೂರುತ್ತಿದ್ದ ಜೆಸ್ಸಿಂತಾಳನ್ನು ಗಮನಿಸಿದ್ದ ನ್ಯಾಯಾಧೀಶರು, ಆಕೆಗೆ ‘ನೀವ್ಯಾಕೆ ಪ್ರತ್ಯೇಕವಾಗಿ ಖಾಸಗಿ ವಕೀಲರನ್ನು ನೇಮಿಸಿಕೊಂಡು ಪ್ರಾಸಿಕ್ಯೂಷನ್‌ಗೆ ಸಹಾಯ ಮಾಡಬಾರದು’ ಎಂಬ ಸಲಹೆ ನೀಡಿದ್ದರು.

ಇದನ್ನು ಪಾಲಿಸಿದ ಜೆಸ್ಸಿಂತಾ ಮುಂದಿನ ವಿಚಾರಣೆಯಲ್ಲೇ ವಕೀಲರ ಜೊತೆ ಬಂದು, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 301ರ ಅಡಿಯಲ್ಲಿ ಅರ್ಜಿ ಸಲ್ಲಿಸಿ ವಕೀಲರನ್ನು ನೇಮಿಸಿಕೊಂಡಳು. ನ್ಯಾಯಾಲಯದಲ್ಲಿ ಆಕೆ ಅತಿಯಾದ ಆತ್ಮವಿಶ್ವಾಸದಿಂದ ಬೀಗುವುದನ್ನು ನೋಡುತ್ತಿದ್ದ ಆರೋಪಿಗಳು ಗಲಿಬಿಲಿಗೆ ಒಳಗಾಗಿದ್ದರು.

ಸಾಕ್ಷಿ ವಿಚಾರಣೆ ಆರಂಭಿಸಿದ ಪ್ರಾಸಿಕ್ಯೂಷನ್‌ ವಕೀಲರು, ‘ಜೆಸ್ಸಿಂತಾ ಅಪಹರಣಕ್ಕೆ ಒಳಗಾಗಿ ಅತ್ಯಾಚಾರಕ್ಕೆ ಈಡಾಗಿದ್ದಾಳೆ. ಅತ್ಯಾಚಾರ ಆರೋಪಿಯ ಫೋನ್‌ ಕರೆಗಳ ಜಾಡನ್ನು ಹಿಡಿದು ಪೊಲೀಸರು ಬೇಥಮ್‌ ಚೆರ್ಲಾದಲ್ಲಿದ್ದ ಆಕೆಯನ್ನು ರಕ್ಷಿಸಿ ಕರೆತಂದಿದ್ದಾರೆ. ನಂತರ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆರೋಪಿ ಸಾಯಿಪ್ರಕಾಶ ಬಲತ್ಕಾರದಿಂದ ಮೋಹಿಸಿದ್ದ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಪಾಟೀ ಸವಾಲಿಗೆ ನಿಂತ ನಾನು ಸ್ಯಾಮ್ಯುಯಲ್‌ಗೆ ಒಂದೊಂದೇ ವಿವರ ಪ್ರಶ್ನಿಸುತ್ತಾ ‘ನಿಮ್ಮ ಮಗಳೇ ಸಾಯಿ ಪ್ರಕಾಶನನ್ನು ಇಷ್ಟಪಟ್ಟಿದ್ದಳು. ಆಕೆ ನಿಮಗೆ ಹೆದರಿಯೇ ಬೆಂಗಳೂರಿನಿಂದ ಸಾಯಿಪ್ರಕಾಶನ ಜೊತೆಗೆ ಸ್ವಯಂ ಪ್ರೇರಣೆಯಿಂದ ಊರು ಬಿಟ್ಟು ಹೋಗಿದ್ದು’ ಎಂದು ಪ್ರತಿಪಾದಿಸಿದೆ. ಆದರೆ, ಇದನ್ನೆಲ್ಲಾ ಸ್ಯಾಮುಯಲ್ ಅಲ್ಲಗೆಳೆದರು.

ಏತನ್ಮಧ್ಯೆ 2010ರ ಡಿಸೆಂಬರ್ 16 ರಂದು ಸ್ಯಾಮುಯಲ್‌ ಮತ್ತು ಜೆಸ್ಸಿಂತಾ ಇಬ್ಬರೂ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದ ಸಾಯಿಪ್ರಕಾಶ್‌ನನ್ನು ಭೇಟಿ ಮಾಡಿ ಬಂದಿದ್ದರು. ಆ ವೇಳೆ, ‘ನಾವು ಸಾಯಿಪ್ರಕಾಶನ ಸಂಬಂಧಿಗಳು’ ಎಂದು ಜೈಲುಸೂಪರಿಂಟೆಂಡಂಟರಿಗೆ ಸ್ಯಾಮುಯಲ್‌ ತಮ್ಮ ಕೈ ಬರಹದ ಪತ್ರವನ್ನು ನೀಡಿದ್ದರು. ಇದನ್ನು ನಾನು ಕೋರ್ಟ್ ಗಮನಕ್ಕೆ ತಂದೆ.

ಪತ್ರದಲ್ಲಿನ ಒಕ್ಕಣೆ ತೋರಿಸಿ ‘ನೀವು ಸಾಯಿಪ್ರಕಾಶನ ಸಂಬಂಧಿಯೆಂದು ದಾಖಲಿಸಿದ್ದೀರಿ. ನಿಮ್ಮ ಮಗಳು ಅತ್ಯಾಚಾರದ ಆರೋಪ ಮಾಡಿದ 15 ದಿನಗಳಲ್ಲಿಯೇ ಕಾರಾಗೃಹಕ್ಕೆ ತೆರಳಿ ಆರೋಪಿಯನ್ನು ಸಂದರ್ಶಿಸಿದ ಕಾರಣವೇನು ಎಂಬುದಕ್ಕೆ ಉತ್ತರಿಸಬೇಕು’ ಎಂದೆ. ಈ ಪ್ರಶ್ನೆ ನಿರೀಕ್ಷೆ ಮಾಡಿರದೇ ಇದ್ದ ಸ್ಯಾಮುಯಲ್‌ ದಂಗು ಬಡಿದಂತಾದರು.

ಪೋಷಕರ ಭಾವನಾತ್ಮಕ ಮಾತುಗಳಿಗೆ ಕರಗಿದ್ದ ಜೆಸ್ಸಿಂತಾ, ತಾನು ಸಾಯಿಪ್ರಕಾಶನಿಗೆ ನೀಡಿದ್ದ ಭಾಷೆ, ಪ್ರಮಾಣಗಳನ್ನೆಲ್ಲ ಮಣ್ಣುಪಾಲು ಮಾಡಿ ಪೊಲೀಸರ ಮುಂದೆ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಿಕೆ ನೀಡಿದ್ದಳು.

ಅಪ್ಪಟ ವ್ಯಾಪಾರೀ ಧೋರಣೆಯ ಸ್ಯಾಮುಯಲ್ ಇದೇ ಅವಕಾಶ ಬಳಸಿಕೊಂಡು ಜೈಲಿನಲ್ಲಿದ್ದ ಸಾಯಿ ಪ್ರಕಾಶನನ್ನು ಭೇಟಿ ಮಾಡಿ ‘₹ 15 ಲಕ್ಷ ಕೊಟ್ಟರೆ ನಿನ್ನ ಮೇಲಿನ ಕೇಸು ವಾಪಸು ಪಡೆಯುತ್ತೇನೆ. ಇಲ್ಲದಿದ್ದರೆ ಮಗಳ ಮುಖಾಂತರ ನಿನ್ನ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದು ನಿನಗೆ ಶಿಕ್ಷೆ ಖಚಿತವಾಗುವಂತೆ ನೋಡಿಕೊಳ್ಳುತ್ತೇನೆ’ ಎಂದು ದಾಳ ಉರುಳಿಸಿದ್ದ!

ಸಾಯಿಪ್ರಕಾಶನನ್ನು ಜೈಲಿನಲ್ಲಿ ಭೇಟಿ ಮಾಡಿದ್ದ ಕಾರಣ ನೀಡದೆ ಸ್ಯಾಮುಯಲ್‌ ಮುಖಭಂಗಕ್ಕೆ ಒಳಗಾಗಿದ್ದ. ಇದಾದ ನಂತರ ಸಂತ್ರಸ್ತೆಯನ್ನು ವಿಚಾರಣೆಗೆ ಕರೆತರಲು ಪ್ರಾಸಿಕ್ಯೂಷನ್ ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾದವು. ಅತ್ಯಾಚಾರದ ಕುರಿತು ಪೊಲೀಸರು ಮತ್ತು ಮಾಧ್ಯಮದ ಮುಂದೆ ಮುಕ್ತವಾಗಿ ಮಾತನಾಡಿದ್ದ ಸಂತ್ರಸ್ತೆ ನಾಟಕೀಯ ರೀತಿಯಲ್ಲಿ ಕೋರ್ಟ್‌ಗೆ ಹಾಜರಾಗದೆ ತಪ್ಪಿಸಿಕೊಂಡಳು.

ಮೂರು ವರ್ಷಗಳ ಸತತ ಪ್ರಯತ್ನದ ನಂತರವೂ ಸಂತ್ರಸ್ತೆಯಾಗಲೀ, ಆಕೆಯನ್ನು ಪ್ರತಿನಿಧಿಸಿದ್ದ ಖಾಸಗಿ ವಕೀಲರಾಗಲೀ ನ್ಯಾಯಾಲಯದಲ್ಲಿ ಕಾಣಿಸಿಕೊಳ್ಳಲೇ ಇಲ್ಲ!

‘ಇದು ಒಪ್ಪಿತ ಲೈಂಗಿಕ ಕ್ರಿಯೆ. ಸ್ಯಾಮ್ಯುಯಲ್‌ ಮತ್ತು ಸಂತ್ರಸ್ತೆ ಜೈಲಿನಲ್ಲಿ ಆರೋಪಿಯನ್ನು ಏಕೆ ಭೇಟಿ ಮಾಡಿದ್ದು ಎಂಬುದಕ್ಕೆ ಉತ್ತರ ಸಿಕ್ಕಿಲ್ಲ’ ಎಂಬ ಕಾರಣ ನೀಡಿದ ನ್ಯಾಯಾಲಯ ಸಾಯಿಪ್ರಕಾಶನನ್ನು ನಿರಪರಾಧಿ ಎಂದು ಸಾರಿತು.

ಸಾಯಿಪ್ರಕಾಶನನ್ನು ಜೈಲಿನಲ್ಲಿ ಯಾರೆಲ್ಲಾ ಭೇಟಿ ಮಾಡಿದ್ದರು ಎಂಬ ವಿವರಗಳನ್ನು ಮಾಹಿತಿ ಹಕ್ಕಿನಡಿ ಹೆಕ್ಕಿ ತೆಗೆದಿದ್ದ ವಿವರಗಳು ನಮಗೆ ಆರೋಪಿಯನ್ನು ಖುಲಾಸೆಗೊಳಿಸಲು ನೆರವಾದವು.

(ಹೆಸರುಗಳನ್ನು ಬದಲಾಯಿಸಲಾಗಿದೆ ) ಲೇಖಕ ಹೈಕೋರ್ಟ್‌ ವಕೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry