ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರ್ನಾಟಕದ ರೈತರು ಪ್ರತಿಭಟಿಸಿದರೆ ನಮಗೇನು?’

ಮಹದಾಯಿ ವಿವಾದ: ಪತ್ರಕರ್ತರ ಪ್ರಶ್ನೆಗೆ ಗೋವಾ ಜಲಸಂಪನ್ಮೂಲ ಸಚಿವ ಮರುಪ್ರಶ್ನೆ
Last Updated 13 ಜನವರಿ 2018, 19:30 IST
ಅಕ್ಷರ ಗಾತ್ರ

ಖಾನಾಪುರ (ಬೆಳಗಾವಿ): ‘ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಅವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬರೆದ ಪತ್ರ ನ್ಯಾಯಾಲಯದ ಆದೇಶ ಅಲ್ಲ’ ಎಂದು ಗೋವಾದ ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್ ಹೇಳಿದರು.

ತಾಲ್ಲೂಕಿನ ಕಣಕುಂಬಿ ಗ್ರಾಮದ ಬಳಿಯ ಕಳಸಾ ನಾಲಾ ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನೀರು ಹಂಚಿಕೆಯ ಬಿಕ್ಕಟ್ಟು ನ್ಯಾಯ ಮಂಡಳಿ ಮುಂದೆಯೇ ಇತ್ಯರ್ಥಗೊಳ್ಳಬೇಕು ಎನ್ನುವುದು ಗೋವಾ ಸರ್ಕಾರದ ನಿಲುವು. ಅಲ್ಲಿ ಪ್ರಕರಣ ಇತ್ಯರ್ಥ ಆಗುವವರೆಗೆ ನೀರು ಕೊಡುವ ಪ್ರಶ್ನೆಯೇ ಇಲ್ಲ’ ಎಂದರು.

ನೀರಿನ ಹಂಚಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ‘ಮಹದಾಯಿ ನಮ್ಮ ತಾಯಿ. ಕರ್ನಾಟಕದಲ್ಲಿ ರೈತರು ಪ್ರತಿಭಟನೆ ಮಾಡಿದರೆ ನಮಗೇನು’ ಎಂದು ಸುದ್ದಿಗಾರರನ್ನೇ ಮರು ಪ್ರಶ್ನಿಸಿದರು.

‘ಗೋವಾ ಸರ್ಕಾರದ ವಿರೋಧದ ನಡುವೆಯೂ ಕರ್ನಾಟಕ ಸರ್ಕಾರ ಕಾಮಗಾರಿ ಮುಂದುವರಿಸಿದೆ. ಇದು ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆಯೂ ಆಗಿದೆ. ಈ ಕ್ರಮವನ್ನು ನ್ಯಾಯಮಂಡಳಿ ಮುಂದೆ ಪ್ರಶ್ನಿಸುತ್ತೇವೆ’ ಎಂದರು.

‘ಕಳಸಾ ನಾಲಾ ನೀರನ್ನು ಮಲಪ್ರಭಾಗೆ ಜೋಡಿಸುವ ಕಾಮಗಾರಿಯನ್ನು ಮುಂದುವರಿಸಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಬಂದಿದ್ದರಿಂದ ಭೇಟಿ ನೀಡಿದ್ದೇನೆ’ ಎಂದರು. ಗೋವಾ ರಾಜ್ಯದ ಮುಖ್ಯ ಎಂಜಿನಿಯರ್ ಸಂದೀಪ ನಾಡಕರ್ಣಿ, ಜಲಸಂಪನ್ಮೂಲ ಇಲಾಖೆ ಮತ್ತು ನೀರಾವರಿ ನಿಗಮದ ಅಧಿಕಾರಿಗಳು ಇದ್ದರು.

‘ನಮ್ಮ ಬಳಿ ಸಾಕ್ಷ್ಯಗಳಿವೆ’

ಪಣಜಿ (ಪಿಟಿಐ): ಕಣಕಂಬಿಯಲ್ಲಿ ಕರ್ನಾಟಕವು ಕಾಲುವೆ ಕಾಮಗಾರಿಯನ್ನು ಮತ್ತೆ ಆರಂಭಿಸಿರುವುದಕ್ಕೆ ಸಾಕ್ಷ್ಯವಾಗಿ ನಮ್ಮ ಬಳಿ ಚಿತ್ರಗಳಿವೆ ಎಂದು ಗೋವಾ ಸರ್ಕಾರ ಹೇಳಿದೆ.

ಕಳಸಾ ನಾಲೆಯ ಕಾಮಗಾರಿಯನ್ನು ಮತ್ತೆ ಆರಂಭಿಸಿದೆ ಎಂದು ಗೋವಾ ಸರ್ಕಾರ ಆರೋಪಿಸುತ್ತಿದೆ. ಹೀಗಾಗಿ ಶುಕ್ರವಾರ ಗೋವಾದ ತಜ್ಞರ ಸಮಿತಿ ಕಣಕಂಬಿಗೆ ಭೇಟಿ ನೀಡಿತ್ತು. ಅದರ ಬೆನ್ನಲ್ಲೇ ಜಲಸಂಪನ್ಮೂಲ ಸಚಿವರೂ ಭೇಟಿ ಶನಿವಾರ ನೀಡಿದ್ದಾರೆ.

‘ಕಾಮಗಾರಿಯನ್ನು ನಿಲ್ಲಿಸಿ’ ಎಂದು ಕರ್ನಾಟಕ ಮುಖ್ಯಮಂತ್ರಿಗೆ ಪತ್ರ ಬರೆಯಿರಿ ಎಂದು ಗೋವಾ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಮನೋಹರ್ ಪರ‍್ರೀಕರ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT