’ದೇಶಕ್ಕೆ ದೊಡ್ಡ ರೋಗ ಅಂಟಿದೆ‘

7

’ದೇಶಕ್ಕೆ ದೊಡ್ಡ ರೋಗ ಅಂಟಿದೆ‘

Published:
Updated:
’ದೇಶಕ್ಕೆ ದೊಡ್ಡ ರೋಗ ಅಂಟಿದೆ‘

ಶಿರಸಿ: ‘ದೇಶಕ್ಕೆ ದೊಡ್ಡ ರೋಗ ಅಂಟಿದೆ. ಸಂವಿಧಾನದ ಮೇಲೆ ಗೌರವವಿರುವ ಪ್ರತಿಯೊಬ್ಬರೂ ಅದನ್ನು ತೊಲಗಿಸುವ ಕೆಲಸ ಮಾಡಬೇಕು’ ಎಂದು ಚಿತ್ರನಟ ಪ್ರಕಾಶ್ ರೈ ಹೇಳಿದರು.

‘ಪ್ರೀತಿ ಪದಗಳ ಪಯಣ’ ಆಯೋಜನಾ ಸಮಿತಿ ಶನಿವಾರ ರಾಘವೇಂದ್ರ ಮಠದಲ್ಲಿ ಹಮ್ಮಿಕೊಂಡಿದ್ದ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಹೆಣಗಳ ಮೇಲೆ ರಾಜಕೀಯ ಮಾಡುತ್ತಾ ಕೋಮುವಾದ ಹರಡುತ್ತಿರುವವರು ನಿಜವಾದ ಹಿಂದೂಗಳಲ್ಲ. ಅವರ ಬಣ್ಣವೂ ಕೇಸರಿಯಲ್ಲ. ಶೀಘ್ರದಲ್ಲಿ ಎಲ್ಲವೂ ಬಯಲಾಗಲಿದೆ’ ಎಂದು ಅವರು ಹೇಳಿದರು.

‌‘ಜನರ ಮುಗ್ಧತೆ ಹಾಗೂ ಮೌಢ್ಯವನ್ನು ದುರ್ಬಳಕೆ ಮಾಡಿಳ್ಳುವ ರಾಜಕೀಯ ಪಕ್ಷಗಳು, ಚುನಾವಣೆ ಮುಗಿಯುವವರೆಗೂ ಸೌಹಾರ್ದ ಹಾಳು ಮಾಡಲು ಯತ್ನಿಸುತ್ತಿರುತ್ತವೆ. ಅಂಥ ಪಕ್ಷಗಳನ್ನು ಜನರು ತೀವ್ರ ವಿರೋಧಿಸಬೇಕು’ ಎಂದರು.

‘ನಮಗೆ ನೋವಷ್ಟೇ ಅಲ್ಲ; ಸಿಟ್ಟು ಕೂಡ ಬರುತ್ತದೆ ಎಂಬುದನ್ನು ತೋರಿಸಬೇಕು. ಮೌನವೇ ನಮ್ಮನ್ನು ಕೊಲ್ಲುತ್ತಿದ್ದು, ಪ್ರತಿ ಬಾರಿಯೂ ಧೈರ್ಯವಾಗಿ ಮಾತನಾಡಬೇಕು. ವಿವೇಚನೆ, ಹಾಸ್ಯಪ್ರಜ್ಞೆಯಿಂದ ಅಣಕಿಸುತ್ತ, ಪ್ರಶ್ನಿಸುತ್ತ ಸಾಗಬೇಕು’ ಎಂದು ಅವರು ಹೇಳಿದರು.

‘ಭೂಮಿಯ ಮೇಲೆ ಒಂದು ಸಮುದಾಯಕ್ಕೆ ಜೀವಿಸಲು ಅವಕಾಶವಿಲ್ಲದೇ ಅಳಿಸಿ ಹಾಕುವವರು ಹಿಂದೂಗಳೇ, ಪ್ರತಿಭಟನೆ ಮಾಡಿ ಟೈರ್‌ಗಳಿಗೆ ಬೆಂಕಿ ಹಚ್ಚುವಂತೆ ಹೇಳಿಕೊಡುವುದು ಹಿಂದುತ್ವವೇ’ ಎಂದು ರೈ ಖಾರವಾಗಿ ಪ್ರಶ್ನಿಸಿದರು.

‘ಖಾವಿ ಕಂಡರೆ ವಿವೇಕಾನಂದರು ನೆನಪಾಗುತ್ತಾರೆ. ಆದರೆ, ಇಂದು ಖಾವಿ ರೂಪದಲ್ಲಿ ಕೆಲವರು ವಿಕಾರಾನಂದರಿದ್ದಾರೆ. ಇಂಥವರಿಂದಲೇ ಧರ್ಮದ ಹೆಸರಿನಲ್ಲಿ ರಾಜಕಾರಣ ವಿಜೃಂಭಿಸುತ್ತಿದೆ. ನಮ್ಮ ನೆಲದ ನಿಜವಾದ ಹಿಂದೂಗಳು ಕೋಮು ಸೌಹಾರ್ದತೆ ಹದಗೆಡಿಸುವ ಕಾರ್ಯವನ್ನು ಎಂದಿಗೂ ಮಾಡುವುದಿಲ್ಲ’ ಎಂದು ಹೇಳಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಬರಹಗಾರ ರಹಮತ್ ತರೀಕೆರೆ, ‘ಕೋಮುಗಳ ಮಧ್ಯೆ ಸಂಘರ್ಷಗಳು ಹೆಚ್ಚುತ್ತಿರುವುದು ಮಾನವೀಯತೆ ಕುಸಿಯುತ್ತಿರುವುದರ ಸಂಕೇತವಾಗಿದೆ. ಅಧಿಕಾರದ ಆಸೆಯಿಂದ ಮನುಷ್ಯ ಸಂಬಂಧಗಳಿಗೆ ಬೆಂಕಿಯಿಡುವ ಕೆಲಸ ಆಗುತ್ತಿದೆ. ವಿವೇಕವಿರುವ ಪ್ರತಿಯೊಬ್ಬರೂ ಇದನ್ನು ಅರಿಯುವ ಅನಿವಾರ್ಯತೆ ಇದೆ. ಮಾನವ ಸಂಬಂಧ ಉಳಿಯಲು ಪ್ರೀತಿ, ಸೌಹಾರ್ದವೇ ಉತ್ತರವಾಗುತ್ತದೆಯೇ ವಿನಃ ಬೆಂಕಿಗೆ ಬೆಂಕಿ ಉತ್ತರವಾಗದು. ಸ್ವಾಮಿ ವಿವೇಕಾನಂದ ಹಾಗೂ ಮಹಾತ್ಮ ಗಾಂಧೀಜಿ ಚಿಂತನೆಯಂತೆ ದೇಶ ರೂಪುಗೊಳ್ಳಬೇಕು’ ಎಂದು ಹೇಳಿದರು.

ಜನವಾದಿ ಮಹಿಳಾ ಸಂಟನೆಯ ಕೆ.ಎಸ್.ವಿಮಲಾ, ಸಾಹಿತಿಗಳಾದ ರಂಜಾನ್ ದರ್ಗಾ, ವಿನಯಾ ಒಕ್ಕುಂದ, ರಾಜೇಂದ್ರ ಚೆನ್ನಿ, ಪತ್ರಕರ್ತ ಶಶಿಧರ ಭಟ್ಟ, ನಿರ್ದೇಶಕ ಬಿ.ಸುರೇಶ, ಮುನೀರ್ ಕಾಟಿಪಳ್ಳ, ಮಾನವ ಹಕ್ಕುಗಳ ಹೋರಾಟಗಾರ ಅಲಹಾಬಾದ್‌ನ ಮಾರ್ಟಿನ್ ಮಾಕ್ವಾನ್ ಇದ್ದರು.

‘ಇವರೇನು ದೊಣ್ಣೆ ನಾಯಕರೇ?’

'ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕ್ರಿಕೆಟ್ ಆಡಲು ಹೋಗಿ ಫುಟ್‌ಬಾಲ್ ಆಡುತ್ತಿದ್ದಾರೆ. ಈ ಪ್ರಯತ್ನದಲ್ಲಿ ಅವರ ಮುಖ ಒಡೆಯುವ ಸಾಧ್ಯತೆಯೇ ಹೆಚ್ಚು. ಅವರಿಗೆ ಸಂವಿಧಾನದ ಮೂಲ ಆಶಯವೇ ಗೊತ್ತಿಲ್ಲ. ಸಂವಿಧಾನ ಬದಲಿಸಲು ಇವರೇನು ದೊಣ್ಣೆ ನಾಯಕರೇ? ಇವರು ನಿಜವಾದ ಹಿಂದೂಗಳೇ? ಇವರ ಬಣ್ಣ ಬೇರೆಯದೇ ಇದೆ' ಎಂದು ಪ್ರಕಾಶ್ ರೈ ವಾಗ್ದಾಳಿ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry