ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಮೂರ್ತಿ ನಿರ್ಮಾತೃವಿಗೆ ಧರ್ಮ ಬೇಧವಿಲ್ಲ

Last Updated 13 ಜನವರಿ 2018, 20:06 IST
ಅಕ್ಷರ ಗಾತ್ರ

ಕೊಪ್ಪಳ: 'ನನಗಿವು ಕೆಲಸ ನೀಡಿದ ದೇವರುಗಳು ಅಷ್ಟೆ. ಅದಕ್ಕೆ ಯಾವ ಧರ್ಮ, ಹೆಸರು ಬೇಕೋ ನೀವು ಕೊಡಿ. ಅದಕ್ಕೂ ನನ್ನ ಧರ್ಮ, ಜಾತಿಗೂ ಸಂಬಂಧ ಇಲ್ಲ... ಅಂಥ ವಿಷಯದಲ್ಲಿ ಕಿತ್ತಾಡುವುದೂ ಸರಿಯಲ್ಲ. ನಾನು ಮೂರ್ತಿ ರಚನೆಕಾರ, ಒಬ್ಬ ಭಾರತೀಯ ಅಷ್ಟೆ'

ತಾಲ್ಲೂಕಿನ ಬಹದ್ದೂರ್‌ಬಂಡಿ ಗ್ರಾಮದಲ್ಲಿ ದೇವರುಗಳ ಮೂರ್ತಿ ಸಿದ್ಧಪಡಿಸುತ್ತಿದ್ದ ಮರ್ದಾನ್ ಸಾಬ್‌ ಹೇಳಿದ ಮಾತಿದು. ಸದ್ಯ ಜಿಲ್ಲೆಯಲ್ಲಿ ದೇವಸ್ಥಾನಗಳ ದೇವರ ವಿಗ್ರಹ ತಯಾರಿಸುತ್ತಿರುವ ಏಕೈಕ ಮುಸ್ಲಿಂ ವ್ಯಕ್ತಿ ಇವರು.

ಮರ್ದಾನ್‌ ಸಾಬ್‌ ಕೈಯಲ್ಲಿ ಹುಲಿಗಿ ದ್ಯಾಮವ್ವನ ದೇವಸ್ಥಾನದ ದ್ವಾರಪಾಲಕ ವಿಗ್ರಹಗಳಾದ ದ್ವಾರಪಾಲಕ ಜಯ ವಿಜಯರು ಸಿಮೆಂಟ್‌ ಕೋಟಿಂಗ್‌ ಪಡೆಯುತ್ತಿದ್ದವು. ಕೊಪ್ಪಳದ ಕೊರವರ ಓಣಿಯ ಬಳ್ಳಾರಿ ದುರ್ಗಮ್ಮ, ಈರಣ್ಣ ದೇವರು ಮಾಸ್ತಿ ಶಾಲೆಯ ಸರಸ್ವತಿ, ಬಹದ್ದೂರ್‌ ಬಂಡಿಯ ಗಂಗಾಧರ ದೇವಸ್ಥಾನದ ಸಿಮೆಂಟ್ ವಿಗ್ರಹಗಳು, ಚಿಕ್ಕಬಗನಾಳ ಗಂಗಮ್ಮ ದೇವಸ್ಥಾನದ ಸಿಮೆಂಟ್‌ ಮೂರ್ತಿಗಳು, ಕಲಾಕೃತಿ ರಚನೆ... ಹೀಗೆ ಸಾಲು ಸಾಲು ಪಟ್ಟಿಯನ್ನೇ ಇಡುತ್ತಾರೆ. ಈಗ ಅವರಿಗೆ ಹೈದರಾಬಾದ್‌ - ಕರ್ನಾಟಕ ಪ್ರದೇಶ ಮಾತ್ರವಲ್ಲದೆ ದೂರದ ಆಂಧ್ರಪ್ರದೇಶದಿಂದಲೂ ಬೇಡಿಕೆ ಇದೆ.

‘ರಚನೆಗಳ ಮೇಲೆ ಎಲ್ಲಿಯೂ ನನ್ನ ಹೆಸರು ಹಾಕುವುದಿಲ್ಲ. ವಿಸಿಟಿಂಗ್‌ ಕಾರ್ಡ್‌, ಪ್ರಚಾರ ಪತ್ರಗಳನ್ನು ಮುದ್ರಿಸಿಲ್ಲ. ಹಾಗೆ ಮಾಡುವುದೂ ಇಲ್ಲ. ವರ್ಷಪೂರ್ತಿ ಕೈತುಂಬಾ ಕೆಲಸ ಇರುತ್ತದೆ. ಒಮ್ಮೊಮ್ಮೆ ಕೆಲಸ ಇಲ್ಲವಾದಾಗ ಮತ್ತೆ ಹಳೆಯ ಕಸುಬಾದ ಗಾರೆ ಕೆಲಸಕ್ಕೆ ಗೆಳೆಯರ ಜತೆ ಹೋಗುತ್ತೇನೆ. ಆರ್ಥಿಕ ಸಂಕಟ ಎದುರಾದಾಗ ಅವರೆಲ್ಲಾ ಕೈಲಾದ ನೆರವು ನೀಡಿದ್ದಾರೆ. ಕೆಲಸಕ್ಕೂ ಕರೆದಿದ್ದಾರೆ’ ಎನ್ನುತ್ತಾರೆ ಅವರು.

ಕ್ಷುಲ್ಲಕ ಜಗಳ ತಂದ ಪರಿವರ್ತನೆ:

'8 ವರ್ಷಗಳ ಹಿಂದಿನ ಮಾತು. ಆಗ ಕಟ್ಟಡಗಳ ಗಾರೆ ಕೆಲಸಕ್ಕೆ ಹೋಗುತ್ತಿದ್ದೆ. ನಮ್ಮ ಮೇಸ್ತ್ರಿಗೂ ಕಟ್ಟಡದ ಮಾಲೀಕರಿಗೂ ಏನೋ ಭಿನ್ನಾಭಿಪ್ರಾಯ ಬಂದಿತು. ಅದು ಕೊನೆಗೆ ನನ್ನತ್ತ ಬಂದು ಸುತ್ತಿಕೊಂಡಿತು. ವಿನಾಕಾರಣ ಘಟನೆಯಲ್ಲಿ ನನ್ನನ್ನು ಎಳೆದು ತಂದರು. ತುಂಬಾ ಬೇಸರವಾಯಿತು. ಇದೇ ಕೊನೆ ನಾನೇನಾದರೂ ಹೊಸತನ್ನು, ಒಳ್ಳೆಯದನ್ನು ಮಾಡಿ ಸಾಧಿಸಬೇಕು ಅಂದುಕೊಂಡೆ’ ಎಂದು ಅವರು ತಿಳಿಸಿದರು.

‘ಆ ಕಾಲದಲ್ಲಿ ನನಗೆ ಪ್ರತಿ ದಿನ ₹ 150 ಕೂಲಿ ಸಿಗುತ್ತಿತ್ತು. ಅಂದಿಗೆ ಅದು ದೊಡ್ಡ ಮೊತ್ತವೇ ಸರಿ. ಸಾಧನೆಯ ಹಾದಿ ಹಿಡಿದವನಿಗೆ ಅದೇನೂ ದೊಡ್ಡದಲ್ಲ ಅನ್ನಿಸಿತು. ಅಷ್ಟರಲ್ಲಿ ಭಾಗ್ಯನಗರದ ನಿಮಿಷಾಂಬಾ ದೇವಸ್ಥಾನದಲ್ಲಿ ಇದೇ ಮೂರ್ತಿ ರಚನೆಗೆ ಬಂದಿದ್ದ ಶಿವಮೊಗ್ಗದ ರಾಜು ಶಿಲ್ಪಿ ಅವರ ಪರಿಚಯವಾಯಿತು. ಅವರ ಜತೆ ಶಿವಮೊಗ್ಗಕ್ಕೆ ಹೋಗಿ ಕೆಲಸಕ್ಕೆ ಸೇರಿದೆ. ಪ್ರತಿ ದಿನ ₹ 80 ಕೂಲಿ ಸಿಗುತ್ತಿತ್ತು. ಒಂದು ವರ್ಷ ಸಿಮೆಂಟ್‌ ಶಿಲ್ಪರಚನೆ ಕಲಿತೆ. ಈಗ ರಾಜಣ್ಣನಿಗೆ ನಾನು ನೆರವಾಗುತ್ತೇನೆ. ನನಗೇನಾದರೂ ದೂರದ ಕೆಲಸ ಬಂದರೆ ಅವರಿಗೆ ಹೇಳುತ್ತೇನೆ. ಶಿಲ್ಪ ಕೃತಿ ರಚನೆ ಸಂಬಂಧಿಸಿದಂತೆ ಗೊಂದಲವಾದರೆ, ವಾಟ್ಸ್‌ಆ್ಯಪ್ ಮೂಲಕ ಅವರನ್ನು ಸಂಪರ್ಕಿಸಿ ಸಲಹೆ ಪಡೆಯುತ್ತೇನೆ’ ಎಂದರು.

‘ಎಲ್ಲ ದೇವರುಗಳ ಹೆಸರು, ಚರಿತ್ರೆ ಪೂರ್ಣ ಗೊತ್ತಿಲ್ಲ. ಆದರೆ ಅವು ದೇವರು ಅಂತ ಗೊತ್ತು ಅಷ್ಟೆ. ಅಷ್ಟೇ ಸಾಕು. ಮೂರ್ತಿ ರಚನೆಗೆ ಯಾವುದೇ ಅಚ್ಚು ಬಳಸುವುದಿಲ್ಲ. ಎಲ್ಲವೂ ಕೈ ರಚನೆಗಳೇ ಆಗಿವೆ. ಇತ್ತೀಚೆಗೆ ಕೊಪ್ಪಳದ ಮಸೀದಿಯೊಂದರ ಕಮಾನು ಸಿದ್ಧಪಡಿಸಿದೆ. ಹೀಗೆ ಕಾಯಕವೇ ದೇವರಾಗಿದೆ. ದೇವರ ಮೂರ್ತಿ ರಚಿಸುವುದೇ ಕಾಯಕವಾಗಿದೆ. ಸಂತೃಪ್ತಿಯಿದೆ. ಇದಕ್ಕೆ ನಮ್ಮ ಧರ್ಮದವರೂ ಪ್ರೋತ್ಸಾಹಿಸಿದ್ದಾರೆ. ಬದುಕಿನಲ್ಲಿ ಸಂತೃಪ್ತಿಯಿದೆ’ ಎಂದರು.

ಇಷ್ಟೆಲ್ಲಾ ಉದಾತ್ತವಾಗಿ ಚಿಂತಿಸುವ, ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡ ಮರ್ದಾನ್‌ಸಾಬ್‌ ಓದಿದ್ದು ಕೇವಲ ಎರಡನೇ ತರಗತಿ.

***

ದೇವರು, ಧರ್ಮದ ಹೆಸರಿನಲ್ಲಿ ಏಕೆ ಹೊಡೆದಾಡಬೇಕು? ಜಾತಿ ಧರ್ಮದ ವಿಷಯಕ್ಕೆ ಹಿಂಸೆ ನಡೆಯುವುದನ್ನು ಟಿವಿಗಳಲ್ಲಿ ಕಂಡಾಗ ಬೇಸರವೆನಿಸುತ್ತದೆ.
– ಮರ್ದಾನ್‌ಸಾಬ್‌, ಸಿಮೆಂಟ್‌ ಮೂರ್ತಿ ರಚನೆಕಾರ, ಬಹದ್ದೂರ್‌ಬಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT