ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದರೆ ರೈತರಿಗೆ ಪ್ರಯೋಜನವಿಲ್ಲ

7
ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ ಹೇಳಿಕೆ

ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದರೆ ರೈತರಿಗೆ ಪ್ರಯೋಜನವಿಲ್ಲ

Published:
Updated:
ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದರೆ ರೈತರಿಗೆ ಪ್ರಯೋಜನವಿಲ್ಲ

ಬೆಳಗಾವಿ: ‘ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಎಷ್ಟೇ ಹೆಚ್ಚಿಸಿದರೂ ರೈತರಿಗೆ ಲಾಭವಾಗುವುದಿಲ್ಲ. ಕೃಷಿಗೆ ಸಂಬಂಧಿಸಿದ ಉಪಕಸುಬುಗಳನ್ನು ಹೆಚ್ಚಿಸಿದರೆ ಮಾತ್ರ ರೈತರ ಆದಾಯ ದ್ವಿಗುಣಗೊಳ್ಳಲು ಸಾಧ್ಯ’ ಎಂದು ಗೃಹ ಸಚಿವ ರಾಜನಾಥ್‌ಸಿಂಗ್‌ ಹೇಳಿದರು.

ನಗರದಲ್ಲಿ ಭಾರತೀಯ ಕೃಷಿಕ ಸಮಾಜವು ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಪರಿಷತ್‌ನಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ಜೇನು ಕೃಷಿ ಹಾಗೂ ತೋಟಗಾರಿಕೆಯಿಂದ ಮಾತ್ರ ರೈತರ ಆರ್ಥಿಕ ಸ್ಥಿತಿ ಸುಧಾರಣೆಯಾಗಲು ಸಾಧ್ಯ. ಈ ಮಾರ್ಗಗಳನ್ನು ಬಿಟ್ಟರೆ ಬೇರಾವುದೇ ದಾರಿ ಕಾಣುತ್ತಿಲ್ಲ. 21ನೇ ಶತಮಾನದಲ್ಲಿ ಕೃಷಿ ಕ್ಷೇತ್ರವು ಉತ್ತುಂಗ ಸ್ಥಿತಿಗೆ ತಲುಪಲಿದೆ’ ಎಂದು ನುಡಿದರು.

ರೈತರ ಒತ್ತಾಯ ಕೇಳಿಸಿಕೊಳ್ಳದ ಸಚಿವ:

ರಾಜನಾಥ್‌ ಸಿಂಗ್‌ ಅವರು ಭಾಷಣ ಮಾಡಲು ವೇದಿಕೆಯ ಬಳಿ ಬಂದಾಗ ರೈತರು, ‘ಸಾಲ ಮನ್ನಾ ಮಾಡಬೇಕು, ಮಹದಾಯಿ ಬಗ್ಗೆ ಘೋಷಣೆ ಮಾಡಬೇಕು’ ಎಂದು ಕೂಗಿದರು. ರೈತರ ಕೂಗು ಕೇಳಿಸಿಕೊಳ್ಳದ ಸಚಿವ ಸಿಂಗ್‌ ಅವರು, ಭಾಷಣ ಆರಂಭಿಸಿದರು.

ಸಂಸದರಾದ ಸುರೇಶ ಅಂಗಡಿ, ಪ್ರಹ್ಲಾದ ಜೋಶಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಭಾರತೀಯ ಕೃಷಿಕ ಸಮಾಜದ ರಾಷ್ಟ್ರೀಯ ಘಟಕದ ಅಧ್ಯಕ್ಷ ಕಿಷನ್‌ಬೀರ್‌ ಚೌಧರಿ, ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ ಉಪಸ್ಥಿತರಿದ್ದರು.

ಮನವಿ ಎಸೆದದ್ದಕ್ಕೆ ಪ್ರತಿಭಟನೆ

ಬೆಳಗಾವಿ: ಸಾಲ ಮನ್ನಾ ಮಾಡಬೇಕು. ಕಬ್ಬಿನ ಬಾಕಿ ಹಣ ಪಾವತಿಸಲು ಕ್ರಮಕೈಗೊಳ್ಳಬೇಕು ಹಾಗೂ ಮಹದಾಯಿ ಯೋಜನೆ ಅನುಷ್ಠಾನಗೊಳಿಸಲು ಸಹಕರಿಸುವಂತೆ ಗೋವಾ ಸರ್ಕಾರಕ್ಕೆ ಸೂಚಿಸಬೇಕೆಂದು ನೀಡಿದ ಮನವಿಯನ್ನು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರು ಅಲ್ಲಿಯೇ ಕೆಳಗೆ ಎಸೆದು ಹೋದರು’ ಎಂದು ಆರೋಪಿಸಿ ಕೆಲವು ರೈತರು ಸಮಾರಂಭ ಮುಗಿದ ನಂತರ ಪ್ರತಿಭಟನೆ ನಡೆಸಿದರು.

‘ಕಾರ್ಯಕ್ರಮ ನಂತರ ವೇದಿಕೆಯಿಂದ ಹೊರ ಬಂದ ಸಚಿವರಿಗೆ ಮನವಿ ಸಲ್ಲಿಸಿದೆವು. ಆದರೆ, ಅವರು ಮನವಿಯನ್ನು ತೆರೆದೂ ನೋಡಲಿಲ್ಲ. ಅಲ್ಲಿಯೇ ಎಸೆದು ಹೋದರು’ ಎಂದು ರೈತ ಮುಖಂಡ ಅಶೋಕ ಯಮಕನಮರಡಿ ಆರೋಪಿಸಿದರು.

‘ಸಚಿವರ ಈ ನಡೆ ನಮಗೆ ತೀವ್ರ ನೋವು ತಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿರುವ ಅಚ್ಛೇ ದಿನ್‌ ಅಂದರೆ ಇದೇನಾ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry